ವಿದೇಶಗಳಲ್ಲಿ ಕಣ್ಣು ಉರಿ ಮತ್ತು 'ಮದ್ರಾಸ್ ಐ' ತೊಂದರೆಗೆ ಚಿಕಿತ್ಸೆ ಪಡೆಯಲು ಬಂದ ಅನೇಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಕಣ್ಣಿನ ಆರೋಗ್ಯದ ಬಗ್ಗೆಯೂ ಹೆಚ್ಚು ಮುತುವರ್ಜಿವಹಿಸಬೇಕು ಎಂಬುದು ವೈದ್ಯರ ಸಲಹೆಯಾಗಿದೆ.
’ಮದ್ರಾಸ್ ಐ’ ಎನ್ನುವುದು ಒಂದು ಸಣ್ಣ ಸೋಂಕು. ಒಂದು ವೇಳೆ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಈ ಸೋಂಕು ಕ್ರಮೇಣ ಗಂಭೀರ ಸಮಸ್ಯೆಯಾಗಿ ಪರಿಣಮಿಸಲಿದೆ. ಇಂಥ ಕಣ್ಣಿನ ತೊಂದರೆ ಎದುರಾದಾಗ ಜನರು ಸ್ವಯಂ ಔಷಧ ಮಾಡಿಕೊಳ್ಳಬಾರದು. ಇದಕ್ಕೆ ಬದಲಾಗಿ ತಜ್ಞ ನೇತ್ರ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎನ್ನುತ್ತಾರೆ ಬೆಂಗಳೂರಿನ ಡಾ.ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯೆ ಡಾ.ಅರ್ಚನಾ ಎಸ್.
ಮದ್ರಾಸ್ ಐ ಲಕ್ಷಣಗಳು
ಕಣ್ಣಿನಲ್ಲಿ ತುರಿಕೆ,ನೀರು ಸುರಿಯುವುದು, ಕೆಂಪಾಗುವುದು, ಕಣ್ಣಿನಲ್ಲಿ ಪೊರೆ, ನೋವು, ಉರಿ.
ದೂಳು, ಹೊಗೆಯಿಂದಲೂ ಕಣ್ಣಿನಲ್ಲಿ ಈ ಸಮಸ್ಯೆ ಕಾಣಿಸಬಹುದು. ಬ್ಯಾಕ್ಟೀರಿಯಾ, ವೈರಸ್ ಕಾರಣದಿಂದ ಈ ಸೋಂಕು ಬಂದಿದ್ದಲ್ಲಿ ಇದು ಮತ್ತೊಬ್ಬರಿಗೂ ಹರಡುವ ಸಾಧ್ಯತೆ ಇರುತ್ತದೆ. ಕಣ್ಣಿನ ಕಪ್ಪು ಭಾಗದ ಮೇಲಿನ ಪದರವಾದ ಕಾರ್ನಿಯಾಗೆ ಸೋಂಕು ತಗುಲಿದ್ದರೆ, ದೃಷ್ಟಿ ಮಸುಕಾಗುವ ಸಾಧ್ಯತೆಯಿರುತ್ತದೆ. ಅಪರೂಪದ ಪ್ರಕರಣಗಳಲ್ಲಿ ಊತವಾದ ಕಣ್ಣುಗಳಿಂದ ರಕ್ತ ಸೋರುವಿಕೆಯೂ ಆಗುತ್ತದೆ.
ಏನು ಮಾಡಬೇಕು?
ಈ ಅವಧಿಯಲ್ಲಿ ಯಾವ ರೀತಿ ಮುತುವರ್ಜಿ ವಹಿಸಬೇಕು ಎಂದುಡಾ.ಅರ್ಚನಾ ಎಸ್ ಕೆಲ ಸಲಹೆ ನೀಡಿದ್ದಾರೆ.
* ಇದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವುದರಿಂದ ಸೋಂಕಿತ ವ್ಯಕ್ತಿ ಬಳಸಿದ ಟವೆಲ್, ಪಿಲ್ಲೋ ಕವರ್, ಮೇಕಪ್ ಐಟಂಗಳನ್ನು ಮತ್ತೊಬ್ಬರು ಬಳಸಬಾರದು
* ಈಗ ಕೊರೊನಾ ಸೋಂಕು ಭಯವೂ ಇರುವುದರಿಂದ ಕಡ್ಡಾಯವಾಗಿ ಮನೆಯಲ್ಲಿ ಕ್ವಾರಂಟೈನ್ ಒಳಗಾಗಬೇಕು. ಜೊತೆಗೆ ಶೀತ, ಗಂಟಲುನೋವು ಲಕ್ಷಣಗಳಿದ್ದಲ್ಲಿ, ಒಂದು ವೇಳೆ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು.
* ರೋಗಿಗಳ ಕಣ್ಣುಗಳಿಂದ ಸೋರುವ ನೀರು ಮತ್ತು ಇತರೆ ಬಿಳಿಪೊರೆಯನ್ನು ತೆಗೆಯಲು ಪೇಪರ್ ನ್ಯಾಪ್‍ಕಿನ್‍ಗಳನ್ನು ಬಳಸಿದರೆ, ಅವುಗಳನ್ನು ಕಸದ ಬುಟ್ಟಿಗಳಿಗೇ ಹಾಕಬೇಕು.
* ವೈದ್ಯರಿಂದ ಸಲಹೆ ಪಡೆದು ಹೊಸ ಲೆನ್ಸ್‌ಗಳನ್ನು ಬಳಸಬೇಕು
* ನೋವು ಕಡಿಮೆಯಾಗುವವರೆಗೂ ಸೋಂಕಿತರು ಶಾಲೆ, ಕಚೇರಿಗೆ ಹೋಗಬಾರದು. ಜನ ಸಂದಣಿ ಇರುವ ಪ್ರದೇಶಗಳಿಗೆ ಹೋಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.