ಮೀರಾ ಮಿಮೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಗಂಡ ಕಾನೂನು ಸಲಹೆ ಸಂಸ್ಥೆಯಲ್ಲಿದ್ದ. ಮಗಳು ವಿಜ್ಞಾನ ಓದುತ್ತಿದ್ದಳು. ಮೀರಾ ಹೆಸರಲ್ಲಿ ಒಂದು ಫ್ಲಾಟ್ ಇತ್ತು, ಕಾರು ಇತ್ತು. ಆಕೆ ಕೆಲಸದ ಜೊತೆಗೆ ವಯಸ್ಸಾದ ಅತ್ತೆ–ಮಾವನನ್ನು ನೋಡಿಕೊಳ್ಳುತ್ತಿದ್ದಳು. ತಾನು ಹೇಗೆ ಇರಬೇಕು ಎಂದು ಬಯಸಿದ್ದಳೋ ಹಾಗೆ ಇರಲಿಲ್ಲ ಆಕೆ. ಆತ್ಮವಿಶ್ವಾಸದ ಕೊರತೆ ಜೊತೆಗೆ ಹೆಚ್ಚಿನ ಸಮಯದಲ್ಲಿ ಉತ್ಸಾಹವೇ ಕುಂದಿದಂತೆ ಇರುತ್ತಿದ್ದಳು. ತನ್ನ ಈ ಎಲ್ಲಾ ಕೆಲಸಗಳಲ್ಲಿ ಎಷ್ಟು ಮುಳುಗಿದ್ದಳು ಎಂದರೆ, ತನ್ನ ಪೋಷಕರು, ಸ್ನೇಹಿತರು ಎಲ್ಲರಿಂದಲೂ ದೂರವಾಗಿದ್ದಳು. ಭಾವನೆಗಳನ್ನು ಹಂಚಿಕೊಳ್ಳಲು ಆಕೆಯೊಂದಿಗೆ ಯಾರೂ ಇರಲಿಲ್ಲ.
ಮೀರಾಳಂತೆ ಹಲವರಿಗೆ ತನ್ನವರಿಂದ ದೂರ ಇರುವುದು ಮತ್ತು ಹೊಸ ಸಂಬಂಧಗಳೊಂದಿಗೆ ಹೊಂದಿಕೊಳ್ಳುವುದು ಕಷ್ಟ; ಇದರೊಂದಿಗೆ ದೈಹಿಕ ಅನಾರೋಗ್ಯ– ಇವು ನಮ್ಮ ಭಾವನೆಗಳನ್ನು ಕೆರಳಿಸುತ್ತವೆ. ಇಂಥ ಸಂದರ್ಭದಲ್ಲಿ ಅತ್ತು ಬಿಟ್ಟರೆ ನಮ್ಮನ್ನು ಎಲ್ಲಿ ದುರ್ಬಲರು ಎಂದುಬಿಟ್ಟಾರೋ ಎನ್ನುವ ಕಾರಣಕ್ಕೆ ಅಳುವನ್ನು ಅದುಮಿಟ್ಟುಕೊಳ್ಳುತ್ತೇವೆ.
ನಮ್ಮೊಳಗಿನ ದುಗುಡ, ಹೊರ ಪರಿಸರದಿಂದ ಉಂಟಾಗುವ ಮಾನಸಿಕ ಒತ್ತಡ– ಇವು ನಮ್ಮ ನಾಳೆಗಳು ಹೇಗೋ ಎಂದು ಚಿಂತೆಗೀಡು ಮಾಡುತ್ತವೆ. ವ್ಯಾಯಾಮ ಮಾಡುತ್ತೇವೆ, ಆಟವಾಡುತ್ತೇವೆ, ನಮಗೆ ಇಷ್ಟದ ಹವ್ಯಾಸದಲ್ಲಿ ತೊಡಗಿಕೊಂಡು ನಮ್ಮ ಒತ್ತಡವನ್ನು ಮರೆಯುವ ಅಥವಾ ಅದರಿಂದ ದೂರ ಓಡುವ ಪ್ರಯತ್ನ ಮಾಡುತ್ತೇವೆ. ಯಾವುದೋ ಒಂದು ಬಾಹ್ಯಒತ್ತಡ ನಮ್ಮ ಗಮನವನ್ನು ಬೇಡುತ್ತದೆ ಮತ್ತು ನಾವು ಅದರ ಹಿಂದೆ ಓಡುತ್ತೇವೆ. ಇದು ನಮ್ಮ ಆಧುನಿಕ ಜೀವನಶೈಲಿ.
ದುರಾದೃಷ್ಟವಶಾತ್, ನಮ್ಮ ಭಾವನೆಗಳನ್ನು ಹೊರ ಹಾಕದೇ ನಮ್ಮೊಳಗೇ ಇಟ್ಟುಕೊಳ್ಳಬೇಕು ಎಂದು ನಮಗೆ ಹೇಳಿಕೊಡಲಾಗುತ್ತದೆ. ಆದರೆ, ಹೀಗೆ ಭಾವನೆಗಳನ್ನು ಅದುಮಿಟ್ಟುಕೊಳ್ಳುವುದರಿಂದ ಭಯ, ಆತಂಕ, ನಿರಾಶೆ ಮತ್ತು ತಪ್ಪಿತಸ್ಥ ಭಾವ ನಮ್ಮನ್ನು ಆವರಿಸಿಬಿಡುತ್ತವೆ. ಇದು ನಮ್ಮಲ್ಲಿ ಆಕ್ರಮಣಕಾರಿ ಕ್ರಿಯೆಗಳಿಗೆ (ಸಿಟ್ಟು) ಪ್ರಚೋದನೆ ಕೊಡುತ್ತದೆ. ಇದರಿಂದ ಸಂಬಂಧಗಳು ಹಳಸುತ್ತವೆ.
ಹಾಗಾದರೆ, ಏನು ಮಾಡಬೇಕು?
l ಭಾವನೆಗಳನ್ನು ಹೊರಹಾಕಿ, ಇತರರೊಂದಿಗೆ ಹಂಚಿಕೊಳ್ಳಿ– ಇದು ದುಗುಡದಿಂದ ಹೊರಬರಲು ಹೆಚ್ಚು ಸಹಕಾರಿಯಾದುದು. ಭಾವನೆಗಳನ್ನು ಹೊರ ಹಾಕಿ, ಅದರೊಂದಿಗೆ ಮುಖಾಮುಖಿ ಆದಾಗ ದುಗುಡದ ಮೂಲ ತಿಳಿಯುತ್ತದೆ. ನೀವೂ ನಿರಾಳರಾಗಬಹುದು.
l ದುಃಖಕ್ಕೆ ಏನು ಕಾರಣ ಎಂಬುದನ್ನು ಕಂಡುಹಿಡಿಯಬಹುದು. ಅದು ಬಾಹ್ಯ ಕಾರಣಗಳಿಂದ ಆಗಿರಬಹುದು– ಜನ, ಸಂದರ್ಭ ಹೀಗೆ. ಇಲ್ಲ, ನಮ್ಮೊಳಗಿನ ಕಾರಣವೂ ಇರಬಹುದು– ನಿರೀಕ್ಷೆ, ಅವಲಂಬನೆ, ಇಷ್ಟ ಮುಂತಾದವುಗಳು. ಹಿಂದಿನದನ್ನೇ ಯೋಚಿಸುತ್ತಾ ಕೂರುವುದಕ್ಕಿಂತ ಭವಿಷ್ಯದ ಬಗ್ಗೆ ಹೆಚ್ಚು ಗಮನಹರಿಸಿ.
l ಬದುಕಿನ ಕ್ರೌರ್ಯದಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು. ನಮ್ಮ ಸಂತೋಷವನ್ನು ಕಿತ್ತುಕೊಳ್ಳುವ ದುಗುಡದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.
l ಎಷ್ಟೊ ಬಾರಿ ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಾಗ ನಮ್ಮಿಂದಾದ ತಪ್ಪಿನ ಬಗೆಗೆ
ಅರಿವಾಗುತ್ತದೆ. ನಮ್ಮ ತಪ್ಪಿನ ಜವಾಬ್ದಾರಿಯನ್ನು ನಾವು ಹೊತ್ತುಕೊಳ್ಳುತ್ತೇವೆ ಮತ್ತು ಹಲವು ಬಾರಿ ಅದರಿಂದ ನಾವು ಪಾಠವನ್ನೂ ಕಲಿಯುತ್ತೇವೆ. ನಮ್ಮನ್ನು ನಾವು ಕ್ಷಮಿಸಿಕೊಳ್ಳುತ್ತೇವೆ ಕೂಡ.
l ಅಳು ಎನ್ನುವ ಭಾವನೆ ನಮ್ಮೊಳಗೆ ಇರುವಂತಹದ್ದು. ನಮ್ಮೊಳಗಿನ ದುಗುಡವನ್ನು ಸೂಚಿಸಲು ಅಳು ಬರುತ್ತದೆ. ಅಳುವನ್ನು ನಿರ್ಲಕ್ಷಿಸದೇ, ಅಳುವಿನ ಕಾರಣವನ್ನು ಅರಿತು ಅದನ್ನು ಸರಿಪಡಿಸಿಕೊಳ್ಳುವುದರ ಕಡೆ ಗಮನಹರಿಸಬೇಕು. ಅಳುವು ಅಹಿತ ಎಂದು ಅನ್ನಿಸಬಹುದು. ಆದರೆ, ಅದು ತುಂಬಾ ಸಾಮಾನ್ಯ ಮತ್ತು ಆರೋಗ್ಯಕರವಾದುದು. ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಕು. ಅಳುವನ್ನು ತಡೆಹಿಡಿದುಕೊಳ್ಳಬಾರದು. ಅತ್ತು ಸಮಾಧಾನ ಮಾಡಿಕೊಂಡು ಮುಂದೆ ಸಾಗಬೇಕು.
(ಲೇಖಕ: ಆಪ್ತ ಸಮಾಲೋಚಕ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.