ADVERTISEMENT

ಮನಸ್ಸನ್ನೇ ‘ಮಗು’ವಾಗಿಸಿಕೊಳ್ಳಿ

ಡಾ.ಕೆ.ಎಸ್.ಪವಿತ್ರ
Published 12 ಸೆಪ್ಟೆಂಬರ್ 2022, 19:30 IST
Last Updated 12 ಸೆಪ್ಟೆಂಬರ್ 2022, 19:30 IST
   

ವಾಲ್ಬ್ ಡಿಸ್ನಿ ತನ್ನ ಸಿನಿಮಾಗಳನ್ನು ಪ್ರಶ್ನಿಸಿದ ಹಿರಿಯನೊಬ್ಬನಿಗೆ ಹೇಳಿದನಂತೆ: ‘ಬೆಳೆಯುವುದು ಎರಡು ರೀತಿಯಲ್ಲಿ ಆಗುತ್ತದೆ. ವಯಸ್ಸಾಗಿ ಬೆಳೆಯುವುದು ಅನಿವಾರ್ಯ. ಆದರೆ ಮನಸ್ಸನ್ನು ಆನಂದದಿಂದ ಬೆಳೆಸಿಕೊಳ್ಳುವುದು ಆಯ್ಕೆ!’

ಹೌದಲ್ಲ! ದೇಹ ಬೆಳೆಯುವುದನ್ನು, ತಲೆಗೆ ಚಿಂತೆಗಳು ಮುತ್ತಿಕೊಂಡು ಕಾಡುವುದನ್ನು ನಾವು ತಡೆಯಲು ಸಾಧ್ಯವಿಲ್ಲ. ಆದರೆ ‘ಮನಸ್ಸು’ ಮಗುವಿನಂತೆ ಯೋಚಿಸುವುದನ್ನು ನಾವು ಕೆಲಮಟ್ಟಿಗಾದರೂ ಕಾಪಾಡಿಕೊಂಡರೆ?

ಮಕ್ಕಳಿಗೆ ಸಂಬಂಧಿಸಿದ ಶಿಕ್ಷಣ, ಸಾಹಿತ್ಯ, ಸಿನಿಮಾ, ಉಡುಗೆ, ಅವರನ್ನು ಹೇಗೆ ಬೆಳೆಸಬೇಕು ಎಲ್ಲವನ್ನೂ ನಾವು ಚರ್ಚೆ ಮಾಡುತ್ತೇವೆ; ಹೆಚ್ಚಿನವನ್ನು ಅನುಷ್ಠಾನಕ್ಕೆ ತರಲು ಸೋಲುತ್ತೇವೆ. ಇವುಗಳ ಬದಲು ನಮ್ಮ ಮನಸ್ಸನ್ನೇ ‘ಮಗು’ವಾಗಿ ನೋಡುವ ಕೌಶಲದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ?

ADVERTISEMENT

ಮನೋಲೋಕದಲ್ಲಿ ತುಂಬಾ ಹಿಂದೆ ಪ್ರಯಾಣಿಸಿದರೆ ಮನಸ್ಸಿಗೆ ಮೂರು ಭಾಗಗಳಿವೆ ಎಂದು ಫ್ರಾಯ್ಡ್ ಹೇಳಿದ್ದಾನಷ್ಟೆ. ಅದರಲ್ಲಿ ಒಂದು ಮಗುವಿನಂತೆ ವರ್ತಿಸುತ್ತದೆ, ಮತ್ತೊಂದು ಹಿರಿಯನಂತೆ, ಇನ್ನೊಂದು ಇವೆರಡರ ನಡುವೆ ಸೇತುವೆಯಾಗಿ ಸ್ವಲ್ಪ ಸಮಾಧಾನದಿಂದ ವರ್ತಿಸುತ್ತದೆ ಎಂಬುದು ಫ್ರಾಯ್ಡ್‌ ಸಿದ್ಧಾಂತ. ಈ ಸಿದ್ಧಾಂತವೇ ಹಂತ ಹಂತವಾಗಿ ಬೆಳೆಯುತ್ತಾ, ಬದಲಾಗುತ್ತಾ, ಮನಸ್ಸು ಇಂದು ಮಿದುಳಿನದೇ ಭಾಗ ಎಂದು ನಿರೂಪಿತವಾಗಿದೆ. ಆದರೂ ‘ಮನಸ್ಸು ಮಗುವಿನಂತೆ ವರ್ತಿಸುತ್ತದೆ’ ಎಂಬ ಅಂಶವನ್ನೇ ಗಮನದಲ್ಲಿಟ್ಟುಕೊಳ್ಳೋಣ.

ಮನಸ್ಸಿನಲ್ಲಿಯೇ ಮಾತನಾಡಿಕೊಳ್ಳುವ ಅಭ್ಯಾಸ ನಿಮಗಿದೆಯಷ್ಟೆ. ಬೆಳಗಿನ ಜಾವ ‘ವಾಕಿಂಗ್’ ಹೋಗಲು ಏಳಬೇಕು. ಮನಸ್ಸು ಒಪ್ಪುತ್ತಿಲ್ಲ, ನಿದ್ರೆ ಮಾಡಲೇಬೇಕು ಎಂದು ಅನಿಸುತ್ತಿದೆ, ಅಂದರೆ ಮನಸ್ಸು ಹಠ ಮಾಡುತ್ತಿದೆ. ನಿಮ್ಮ ಮಗ/ಮಗಳು ನಿದ್ರೆಯಿಂದ ನೀವು ಬೆಳಿಗ್ಗೆ ಟ್ಯೂಷನ್‍ಗೆ/ಓದಿಗೆ ಏಳೆಂದು ಎಬ್ಬಿಸಿದಾಗ ಏಳುವುದಿಲ್ಲ. ಆಗ ನೀವು ಏನು ಮಾಡುತ್ತೀರಿ? ಹಿರಿಯರಾಗಿ, ಮುಂದಿನ ಭವಿಷ್ಯವನ್ನೆಲ್ಲಾ ಆ ಕ್ಷಣದಲ್ಲಿ ನೆನೆದು, ನಿಮ್ಮ ಮಗುವಿಗೆ ಗದರಿಸುತ್ತೀರಿ, ಅನುನಯಿಸುತ್ತೀರಿ, ತಣ್ಣೀರು ಹಾಕಿಯಾದರೂ ಎಬ್ಬಿಸುತ್ತೀರಿ ಅಲ್ಲವೆ? ಈಗ ನಿಮ್ಮ ಮಗುವಿನ ಜಾಗದಲ್ಲಿ ಮಲಗಿರುವುದು, ಏಳಲು ಹಠ ಮಾಡುತ್ತಿರುವುದು ನಿಮ್ಮದೇ ಮನಸ್ಸು. ಏನು ಮಾಡಬೇಕು? ನಿಮ್ಮ ಮುಂದಿನ ಆರೋಗ್ಯವನ್ನು ನೆನೆದು, ವೈದ್ಯರ ಸಲಹೆ ನೆನಪಿಸಿಕೊಂಡು, ಆಗಬಹುದಾದ ಪರಿಣಾಮಗಳನ್ನೂ ಊಹಿಸಿ ಮನಸ್ಸೆಂಬ ಮಗುವನ್ನು ಗದರಿಸಿ, ಅನುನಯಿಸಿ ಎಚ್ಚರಿಸಬೇಕು. ವಾಕಿಂಗ್ ಹೋಗಲು ಒಡಂಬಡಿಸಬೇಕು. ಓದಿಗೆಂದು / ಟ್ಯೂಷನ್‍ಗೆಂದು ಎಬ್ಬಿಸಿದ ನಿಮ್ಮ ಮಗ/ಮಗಳು

ಒಮ್ಮೆ ಎದ್ದಾಕ್ಷಣ ಆರಾಮವಾಗಿ ಶಾಲೆ/ ಓದು/ ಟ್ಯೂಷನ್ ಎಂದು ಸ್ನೇಹಿತರೊಂದಿಗೆ ಕಾಲ ಕಳೆಯುವುದು ಸಾಧ್ಯವಾದಂತೆ ನಿಮ್ಮದೇ ಮನಸ್ಸಿಗೂ ಸಾಧ್ಯವಾಗುತ್ತದೆ.

ಯಾರೋ ಬೈದಿದ್ದಾರೆ, ಮನಸ್ಸಿಗೆ ತುಂಬಾ ಬೇಸರವಾಗಿದೆ. ಯಾವುದೋ ಕೆಲಸವಾಗಿಲ್ಲ, ಮನಸ್ಸು ಪ್ರಕ್ಷುಬ್ಧವಾಗಿದೆ. ಹೊರಬರುವುದು ಹೇಗೆ? ಹಿಂದಿನ ದಿನ ನಿಮ್ಮ ಮಗ/ಮಗಳು ಸ್ನೇಹಿತರೊಡನೆ ಜಗಳವಾಡಿ ಬಂದು ಕುಳಿತಿದ್ದಾಗ ನೀವೇನು ಮಾಡಿದ್ದಿರೀ? ಸ್ವಲ್ಪ ನೆನಪಿಸಿಕೊಳ್ಳಿ ಅಳುತ್ತಿದ್ದ ಹುಡುಗ/ ಹುಡುಗಿಗೆ ಸಮಾಧಾನ ಮಾಡಿದ್ದಿರಿ, ‘ಇವೆಲ್ಲವೂ ಸಹಜ, ಆಟದಲ್ಲಿ ಇದ್ದದ್ದೆ’ ಎಂದು ಸಂತೈಸಿದ್ದಿರಿ. ಇನ್ನೂ ಹೊರಬರದಾಗ, ‘ಈಗ ಹೋಗು ಆಟಕ್ಕೆ, ಇಲ್ಲವೇ ಬಾ ಗಣಿತ ಹೇಳಿಕೊಡ್ತೀನಿ, ಓದೋಣ’ ಎಂದು ಗದರಿಸಿದ್ದಿರಿ. ಮನಸ್ಸಿಲ್ಲದ ಮನಸ್ಸಿನಿಂದಲೇ ಆಟಕ್ಕೆ ಓಡಿದ ಮಗ/ಮಗಳು ಆರಾಮವಾಗಿ ಹಿಂತಿರುಗಿ ಮತ್ತೆ ಎಂದಿನಂತಾಗಲು ನೀವು ಕಾರಣವಾಗಿದ್ದಿರಿ. ಈಗ ಇದೇ ತಂತ್ರವನ್ನು ನಿಮ್ಮ ಮನಸ್ಸೆಂಬ ಮಗುವಿಗೆ ಸ್ವಲ್ಪ ಪ್ರಯೋಗಿಸಲು ಪ್ರಯತ್ನಿಸಿ ಸಂತೈಸಿ, ಸಾಂತ್ವನ ಹೇಳಿಕೊಳ್ಳಿ, ಮನಸ್ಸು ಕೇಳುತ್ತಿಲ್ಲವೇ? ಗದರಿಸಿ, ಎಳೆದುಕೊಂಡು ಹೋಗಿ ಬೇರೆ ಕೆಲಸ ಮಾಡಲು ಬಿಡಿ; ಮನಸ್ಸು ಆಟವಾಡಿ ಆರಾಮವಾಗಿ ಮರಳಿದ ಮಗುವಿನಂತೆ ತಾನೂ ಆರಾಮಕ್ಕೆ ಮರಳುತ್ತದೆ ಗಾಯ-ನೋವಿನಿಂದ ಸುಲಭವಾಗಿ ಚೇತರಿಸಿಕೊಳ್ಳುತ್ತದೆ.

ಮನಸ್ಸನ್ನು ಮಗುವಿನಂತೆ ಸಂತೈಸಿ-ಹೆದರಿಸಿ ಬೇಕಾದ ಹಾಗೆ ದುಡಿಸಿಕೊಳ್ಳುವುದು ಮಾತ್ರವಲ್ಲ, ಆಗಾಗ್ಗೆ ಮನಸ್ಸೆಂಬ ಮಗುವಿನ ಮೇಲೆ ದಬ್ಬಾಳಿಕೆ ನಡೆಸದಿರುವುದನ್ನೂ ನಾವು ಕಲಿಯಲೇಬೇಕು. ಏಕೆಂದರೆ ಹಿರಿಯರಾಗಿ ಮಕ್ಕಳ ಮೇಲೆ ಹಾಗೂ ಮಾಡುವುದು ಅಭ್ಯಾಸವಾಗಿಬಿಟ್ಟಿರುತ್ತದಲ್ಲ! ಪ್ರತಿದಿನ ವಾಕಿಂಗ್ ಹೋಗುತ್ತಲೇ ಇದ್ದೀರಿ ಒಂದು ದಿನ ಜೋರಾಗಿ ಮಳೆ ಬರುತ್ತಿದೆ, ಆದರೂ ಛತ್ರಿ ಹಿಡಿದಾದರೂ ಹೋಗಲೇಬೇಕು ಎಂದು ಮನಸ್ಸು ಹಠ ಮಾಡುತ್ತಿದೆ ಆಗ? ಮಕ್ಕಳೊಡನೆ ಇಂಥ ಸಂದರ್ಭದಲ್ಲಿ ಹೇಗೆ ವರ್ತಿಸುತ್ತೇವೆ? ‘ಇದೊಂದು ದಿನ ಬೇಡ ನಾನು ಹೇಳಿದ ಹಾಗೆ ಕೇಳು’ ಎಂದು ಮಗು ಸಿಟ್ಟು ಮಾಡಿದರೂ ತಡೆಯುತ್ತೇವಷ್ಟೆ ಅದೇ ಉಪಾಯವನ್ನೇ ಇಲ್ಲಿಯೂ ಅನುಸರಿಸುವುದು ಅಗತ್ಯ.

ನಮ್ಮದೇ ಮನಸ್ಸನ್ನು ‘ಮಗು’ವಾಗಿ ಭಾವಿಸುವುದರಲ್ಲಿ ಮತ್ತೊಂದು ಪ್ರಯೋಜನವೂ ಇದೆ. ನಮ್ಮ ‘ಮನಸ್ಸ’ನ್ನು ನಾವು ಬಹು ನಿರ್ದಯೆಯಿಂದ ನೋಡಲಾರೆವಷ್ಟೆ. ಕ್ರಮೇಣ ನಾವು ನಮ್ಮದೇ ‘ಮನಸ್ಸ’ನ್ನು ಮಗುವಾಗಿ ಪಾಲಿಸುವುದಕ್ಕೂ, ನಮ್ಮ ಮಕ್ಕಳನ್ನು ಹಿರಿಯರಾಗಿ ಪಾಲಿಸುವುದಕ್ಕೂ ಅಂತರಗಳು ಸ್ಪಷ್ಟವಾಗಿಬಿಡುತ್ತೇವೆ. ಆಗ ನಮ್ಮ ಕೈಯ್ಯಲ್ಲಿ ‘ಸಿಕ್ಕಿ’ಹಾಕಿಕೊಂಡಿರುವ ಮಕ್ಕಳ ಬಗ್ಗೆ ಕಿಂಚಿತ್ ಸಹಾನುಭೂತಿ ಸಾಧ್ಯವಾಗುತ್ತದೆ. ಮನೋವೈದ್ಯಕೀಯ ಮತ್ತೆ ಮತ್ತೆ ಹೇಳುವ ಇನ್ನೊಬ್ಬರ ಸ್ಥಾನದಲ್ಲಿ ನಿಂತು ನೋಡುವ ಕೌಶಲ - ‘ಅನುಭವದ ಆತ್ಮಾನುಭೂತಿ’ ‘ಎಂಪಥಿ’ ನಮ್ಮ ಸಾಮರ್ಥ್ಯವಾಗುತ್ತದೆ. ಇದರಿಂದ ನಮ್ಮ ಮನಸ್ಸಿನ ಪಾಲನೆಯಷ್ಟೇ ಅಲ್ಲ; ನಮ್ಮ ಮಕ್ಕಳ ಪಾಲನೆಯಲ್ಲಿಯೂ ನಾವು ಯಶಸ್ವಿಗಳಾಗುತ್ತೇವೆ. ಮಕ್ಕಳ ಶಿಕ್ಷಣದ ‘ಮಾಂಟೆಸರಿ’ ಪದ್ಧತಿಯನ್ನು ಸ್ಥಾಪಿಸಿದ ಮಾರಿಯಾ ಮಾಂಟೆಸರಿ ಹೇಳಿದ ಮಾತು: ‘ಮಕ್ಕಳಿಗೆ ಜ್ಞಾನವನ್ನು ಹೀರಿಕೊಳ್ಳುವ ಮನಸ್ಸುಗಳಿವೆ. ಆ ಮನಸ್ಸುಗಳಿಗೆ ತನ್ನಿಂತಾನೇ ಕಲಿಸಿಕೊಳ್ಳಬಲ್ಲ ಶಕ್ತಿಯಿದೆ’. ಈ ಮಾತು ಮನಸ್ಸೆಂಬ ಮಗುವಿಗೂ ಅನ್ವಯಿಸುತ್ತದೆ ಎಂದು ಮರೆಯದಿರೋಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.