‘ಬಾಂಬೆ’, ‘1942 ಲವ್ ಸ್ಟೋರಿ’ಯಂಥ ಸಿನಿಮಾಗಳ ಮೂಲಕ ಹಲವರ ಹೃದಯದ ರಾಣಿಯಾಗಿದ್ದ ತಾರಾನಟಿ ಮನೀಷಾ ಕೊಯಿರಾಲಾ ನಮಗೆಲ್ಲರಿಗೂ ಗೊತ್ತು. ಆದರೆ, ಕ್ಯಾನ್ಸರ್‌ಗೆ ತುತ್ತಾಗಿ ಸಾವಿನ ಮನೆಯ ಹೊಸ್ತಿಲ ಮುಟ್ಟಿ ಬದುಕಿನೆಡೆಗೆ ಮುಟ್ಟಿಬಂದ ಹುಡುಗಿಯ ಹೋರಾಟದ ಕಥೆ ಎಷ್ಟು ಜನರಿಗೆ ಗೊತ್ತು? ಕ್ಯಾನ್ಸರ್ ಮಾರಿಯನ್ನು ತಾನು ಎದುರಿಸಿದ ಬಗೆ ಉಳಿದವರಿಗೂ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಅವರು ‘ಹೀಲ್ಡ್: ಹೌ ಕ್ಯಾನ್ಸರ್ ಗೇವ್ ಮೀ ಎ ನ್ಯೂ ಲೈಫ್’ ಎಂಬ ಪುಸ್ತಕವನ್ನು ನೀಲಂಕುಮಾರ್ ಅವರೊಂದಿಗೆ ಬರೆದಿದ್ದಾರೆ. ‘ಜೈಪುರ ಸಾಹಿತ್ಯೋತ್ಸವ 2019’ರಲ್ಲಿ ‘ಸುಧಾ’ ಜೊತೆಗೆ ತಮ್ಮ ಸ್ಫೂರ್ತಿಕಥನ ಹಂಚಿಕೊಂಡಿದ್ದಾರೆ.
* ‘ಹೀಲ್ಡ್’ ಪುಸ್ತಕದ ಬಗ್ಗೆ ಹೇಳಿ.
ಶೀರ್ಷಿಕೆಯೇ ಈ ಪುಸ್ತಕದ ಹೂರಣದ ಬಗ್ಗೆ ಹೇಳುತ್ತದೆ. ಇದು ಕಳೆದ ಆರು ವರ್ಷಗಳ ನನ್ನ ಬದುಕಿನ ಪಯಣದ ಕುರಿತಾದುದು. ಯಾವೆಲ್ಲ ಸನ್ನಿವೇಶದ ಮೂಲಕ ನಾನು ಹಾದು ಬಂದಿದ್ದೇನೆ; ಅವುಗಳನ್ನು ಎದುರಿಸಲು ಏನೆಲ್ಲ ಮಾಡಿದೆ ಎಂಬುದನ್ನು ಪುಸ್ತಕದಲ್ಲಿ ಬರೆದಿದ್ದೇನೆ. ಇದು ಮೂಲಭೂತವಾಗಿ ಆರೋಗ್ಯ ಮತ್ತು ಗುಣಮುಖರಾಗಿ ಬದುಕಿಗೆ ಮರಳುವ ಕಥನ.
* ಇಂಥದ್ದೊಂದು ಮಾರಣಾಂತಿಕ ಕಾಯಿಲೆ ನಿಮಗೆ ಇದೆ ಎಂದು ಗೊತ್ತಾದಾಗ ಮೊದಲು ನಿಮ್ಮ ಮನಸ್ಸಿಗೆ ಬಂದ ಆಲೋಚನೆ ಯಾವುದು?
ನನಗೆ ಕ್ಯಾನ್ಸರ್ ಇದೆ ಎಂದು ತಿಳಿದಾಗ ನಾನು ಏನನ್ನೂ ಯೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ. ತಲೆಮೇಲೆ ಆಕಾಶವೇ ಕಳಚಿಬಿದ್ದಂತಾಗಿತ್ತು. ನಂತರ ಒಂದೇ ಒಂದು ಆಲೋಚನೆ ನನ್ನ ಮನಸಲ್ಲಿದ್ದಿದ್ದು ‘ನನ್ನನ್ನು ನಾನು ಗುಣಪಡಿಸಿಕೊಳ್ಳಬೇಕು. ಅದಕ್ಕಾಗಿ ಸತತವಾಗಿ ಪ್ರಯತ್ನಿಸಬೇಕು’ ಎನ್ನುವುದು. ಎಲ್ಲಿಯವರೆಗೆ ನನ್ನ ಈ ಪ್ರಯತ್ನ ಫಲ ನೀಡುತ್ತದೆ ಎಂದು ಗೊತ್ತಿರಲಿಲ್ಲ. ಚಿಕಿತ್ಸೆಯ ಪ್ರತಿ ಹಂತದಲ್ಲಿಯೂ ವೈದ್ಯರ ಬಳಿ ‘ಡಾಕ್ಟರ್ ಹುಷಾರಾದೆನಾ?’ ಎಂದು ಕೇಳುತ್ತಿದ್ದೆ. ಖಚಿತ ಉತ್ತರ ಸಿಗುತ್ತಿರಲಿಲ್ಲ. ನಿರಾಶೆಯಾಗುತ್ತಿತ್ತು. ಮತ್ತೊಂದಿಷ್ಟು ಪ್ರಯತ್ನಿಸೋಣ ಎಂದು ನನ್ನನ್ನು ನಾನೇ ಸಂತೈಸಿಕೊಳ್ಳುತ್ತಿದ್ದೆ.
* ನೀವು ಬಾಲಿವುಡ್ ನಟಿಯಾಗಿ ಪ್ರಸಿದ್ಧರಾದವರು. ನಿಮಗೆ ಕ್ಯಾನ್ಸರ್ ಇದೆ ಎಂದಾಗ ಬಾಲಿವುಡ್ ಬೆಂಬಲ ಹೇಗಿತ್ತು?
ಕಷ್ಟಕಾಲ ಬಂದಾಗ ಎಲ್ಲ ಜನರೂ ಜೊತೆಗಿರುವುದಿಲ್ಲ. ಅದರರ್ಥ ಅವರಿಗೆ ನನ್ನ ಬಗ್ಗೆ ಕಾಳಜಿ ಇಲ್ಲ ಎಂದಲ್ಲ. ನನ್ನನ್ನು ಪ್ರೀತಿಸುವುದಿಲ್ಲ ಎಂದೂ ಅರ್ಥವಲ್ಲ. ತುಂಬ ಜನರಿಗೆ ಇಂಥ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಗೊಂದಲ ಇರುತ್ತದೆ. ನಾನು ಕ್ಯಾನ್ಸರ್ ಎದುರಿಸುವಾಗ ನನ್ನ ಕುಟುಂಬ ಜೊತೆಗಿತ್ತು. ನನಗಷ್ಟೇ ಸಾಕು.
ಕೆಲವೇ ವರ್ಷಗಳ ಹಿಂದೆ ಯಾರಿಗಾದರೂ ಕ್ಯಾನ್ಸರ್ ಆದರೆ, ಆ ಸಂಗತಿಯನ್ನು ಸಮಾಜದಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದರು. ಇತ್ತೀಚೆಗೆ ಇರ್ಫಾನ್ ಖಾನ್ ತಮಗೆ ಕ್ಯಾನ್ಸರ್ ಆದ ಸಂಗತಿಯ ಕುರಿತು ಬಹಿರಂಗವಾಗಿ ಹೇಳಿಕೊಂಡರು. ಸೋನಾಲಿ ಬೇಂದ್ರೆ ಕೂಡ ಕ್ಯಾನ್ಸರ್ ಆಗಿರುವುದನ್ನು ಜಾಹೀರುಪಡಿಸಿದರು. ನೀವು ಪುಸ್ತಕವನ್ನೇ ಬರೆದಿದ್ದೀರಿ. ಇದರಿಂದ ಜನರಲ್ಲಿ ಅರಿವು ಮೂಡಬಹುದೇ?
ಎಲ್ಲರಿಗೂ ಅವರವರದ್ದೇ ಕಾರಣಗಳಿರುತ್ತವೆ. ನನಗೆ ಕಾಯಿಲೆ ಇದ್ದಾಗ ನಾನು ಕ್ಯಾನ್ಸರ್‌ನಿಂದ ಗುಣಮುಖರಾಗಿ ಬಂದವರ ಸ್ಫೂರ್ತಿಕಥನಗಳಿಗೆ ಹುಡುಕುತ್ತಿದ್ದೆ. ಸಿಕ್ಕಿದ್ದು ಬೆರಳೆಣಿಕೆಯಷ್ಟು ಕಥೆಗಳು ಮಾತ್ರ. ನಿರಾಶೆಯಾಯ್ತು, ಹೆದರಿಕೆಯೂ ಆಯ್ತು. ಆ ಸಮಯದಲ್ಲೇ ಕ್ರಿಕೆಟಿಗ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಗುಣಮುಖರಾಗಿ ಬಂದ ಕಥೆ ಕೇಳಿದೆ. ‘ಅವರ ಕಥೆಗಳನ್ನು ಕೇಳಿ ನನಗೆ ಆತ್ಮವಿಶ್ವಾಸ ಸಿಕ್ಕಿದೆ. ನಾನು ಯಾವಾಗ ಈ ಕಾಯಿಲೆಯಿಂದ ಗುಣಮುಖಳಾಗುತ್ತೇನೆಯೋ ಜಗತ್ತಿಗೇ ನನ್ನ ಕಥೆಯನ್ನು ಸಾರುತ್ತೇನೆ’ ಎಂದು ನಿರ್ಧರಿಸಿದೆ. ದುಃಖವನ್ನು ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗುತ್ತದೆ. ನನ್ನ ಕುಟುಂಬ, ಸ್ನೇಹಿತರ ಜತೆಗೆ ನಾನು ಹಾದುಬಂದ ಸ್ಥಿತಿಗಳನ್ನು ಹಂಚಿಕೊಂಡೆ. ಹಾಗೆಯೇ ನನ್ನ ಕಥೆಯನ್ನು ಪ್ರಾಮಾಣಿಕವಾಗಿ ಜಗತ್ತಿನ ಮುಂದೆಯೂ ಹೇಳಿಕೊಳ್ಳಲು ಸಾಧ್ಯವಾಯ್ತು.
* ಕ್ಯಾನ್ಸರ್‌ನಂಥ ಕಾಯಿಲೆ ತಡೆಗಟ್ಟಲು ಜಾಗೃತಿಯ ಕೊರತೆಯೂ ಕಾರಣವಲ್ಲವೇ?
ಜಗತ್ತು ಸಾಕಷ್ಟು ಬದಲಾಗಿದೆ. ಜನರು ಮುಕ್ತ ಮನಸ್ಸಿನವರಾಗಿದ್ದಾರೆ. ಆದರೆ, ಕ್ಯಾನ್ಸರ್‌ನಂಥ ಕಾಯಿಲೆಯ ಕುರಿತು ನಮ್ಮಲ್ಲಿ ಸಾಕಷ್ಟು ಜಾಗೃತಿ ಮೂಡಿಲ್ಲ. ಅಮೆರಿಕದಂಥ ದೇಶಗಳಲ್ಲಿ ಆರೋಗ್ಯದ ಕುರಿತು ಸಾಕಷ್ಟು ಜಾಗೃತಿ ಇದೆ. ಅವರು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಕ್ಯಾನ್ಸರ್‌ನಂಥ ಕಾಯಿಲೆ ಇದ್ದರೂ ಆರಂಭಿಕ ಹಂತಗಳಲ್ಲಿಯೇ ಪತ್ತೆಯಾಗುತ್ತದೆ. ಸುಲಭವಾಗಿ ವಾಸಿಯೂ ಆಗುತ್ತದೆ. ಭಾರತದಂಥ ಮುಂದುವರಿಯುತ್ತಿರುವ ದೇಶಗಳಲ್ಲಿ ಆರೋಗ್ಯಜಾಗೃತಿಯ ಕುರಿತು ಮುಕ್ತವಾಗಿ ಮಾತನಾಡುವ, ಚರ್ಚಿಸುವ ಅಗತ್ಯ ಇದೆ. ಸರಿಯಾದ ಸಮಯಕ್ಕೆ ಸರಿಯಾದ ವೈದ್ಯರ ಬಳಿ ಹೋಗಿ, ಚಿಕಿತ್ಸೆ ಪಡೆಯುವುದು ಮುಖ್ಯ.
ನಾನು ಆರೋಗ್ಯದ ಕುರಿತೂ ನಿರ್ಲಕ್ಷ್ಯ ವಹಿಸಿದ್ದೆ. ನನ್ನ ದೇಹ ಕಾಯಿಲೆಯ ಬಗ್ಗೆ ಸಾಕಷ್ಟು ಸುಳಿವು ನೀಡುತ್ತಿತ್ತು. ಸುಸ್ತಾಗುತ್ತಿತ್ತು. ಆದರೆ, ಯಾಕೆ ಹಾಗೆ ಆಗುತ್ತಿದ್ದೆ ಎಂದೇ ತಿಳಿಯುತ್ತಿರಲಿಲ್ಲ. ನನಗೆ ಆರೋಗ್ಯದ ಬಗ್ಗೆ ಕೊಂಚ ಅರಿವು ಇದ್ದಿದ್ದರೆ ಮೊದಲೇ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾಗಿ ಚಿಕಿತ್ಸೆಯೂ ಸುಲಭವಾಗುತ್ತಿತ್ತು. ಆದರೆ, ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಅದು ಕೊನೆಯ ಹಂತದಲ್ಲಿತ್ತು.
* ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಹಣ ಗಳಿಕೆಯೇ ಯಶಸ್ಸಿನ ಮಾನದಂಡ ಎಂದು ಪರಿಗಣಿಸಲಾಗುತ್ತದೆ. ಕ್ಯಾನ್ಸರ್‌ನಂಥ ಕಾಯಿಲೆಯನ್ನು ಗೆದ್ದು ಬಂದ ಮೇಲೆ ಯಶಸ್ಸಿನ ಬಗ್ಗೆ ನಿಮ್ಮ ವ್ಯಾಖ್ಯಾನ ಬದಲಾಗಿದೆಯೇ?
ನಮ್ಮೆಲ್ಲರಲ್ಲಿಯೂ ಹೇಗೆ ಹಲವು ಸಾಮ್ಯತೆಗಳಿವೆಯೋ ಪ್ರತಿಯೊಬ್ಬ ಮನುಷ್ಯನೂ ಉಳಿದೆಲ್ಲವರಿಗಿಂತ ಭಿನ್ನ ಎನ್ನುವುದೂ ಅಷ್ಟೇ ಸತ್ಯ. ಹಾಗಾಗಿ, ಪ್ರತಿಯೊಬ್ಬರಿಗೂ ಬದುಕಿನ ಬಗ್ಗೆ ಅವರದ್ದೇ ಆದ ವ್ಯಾಖ್ಯಾನ ದೃಷ್ಟಿಕೋನಗಳಿರುತ್ತವೆ.
ಸಾವನ್ನು ಎದುರಿಸಿ ತಿರುಗಿ ಬಂದ ನನ್ನ ಪಾಲಿಗೆ ಈ ಬದುಕಿನ ಎಲ್ಲ ಆಯಾಮಗಳನ್ನು ಎಂಜಾಯ್ ಮಾಡಲು ಸಾಧ್ಯವಾಗುವುದೇ ದೊಡ್ಡ ಯಶಸ್ಸು ಎನಿಸಿದೆ. ಎಲ್ಲವನ್ನೂ ಮುಕ್ತಮನಸ್ಸಿನಿಂದ ಒಪ್ಪಿಕೊಂಡಿದ್ದೇನೆ. ಬದುಕಿನಲ್ಲಿ ಎಲ್ಲವೂ ಸುಗಮವಾಗಿಯೇ ಇರುವುದಿಲ್ಲ. ರಮ್ಯವಾಗಿಯೂ ಇರುವುದಿಲ್ಲ. ಅಲ್ಲಿಯೂ ಏರಿಳಿತಗಳಿರುತ್ತವೆ. ಇಂದೇನೋ ಕಷ್ಟ ಬಂದಿದೆ; ಬರಲಿ ಬಿಡಿ, ನಾಳೆ ಒಳ್ಳೆಯದೂ ಬರುತ್ತದೆ ಎಂದುಕೊಳ್ಳುತ್ತೇನೆ. ಬದುಕಿನ ಸಂಕಷ್ಟಕರ ಆಯಾಮಗಳನ್ನು ವೈಫಲ್ಯವಾಗಿ ಬದಲಾಗಲು ನಾನು ಬಿಡುವುದಿಲ್ಲ. ಒಳ್ಳೆಯ ಸ್ನೇಹಿತರಿಂದ ಎಷ್ಟು ಪಾಠ ಕಲಿತಿರುತ್ತೇವೆಯೋ ಕೆಟ್ಟ ಸ್ನೇಹಿತರಿಂದಲೂ ಅಷ್ಟೇ ಪಾಠ ಕಲಿತಿರುತ್ತೇವೆ. ಬದುಕಿನಲ್ಲಿ ಬರುವ ಸಂಕಷ್ಟಗಳೂ ಹಾಗೆಯೇ. ಅವು ಪಾಠ ಕಲಿಯುವ ಅವಕಾಶಗಳು ಎಂದು ಅಂದುಕೊಂಡಾಗಿ ಎಲ್ಲವೂ ಬೇರೆಯದೇ ರೀತಿ ಕಾಣಿಸತೊಡಗುತ್ತವೆ. ಬದುಕಿನಲ್ಲಿ ಸಂತೋಷದಷ್ಟೇ ಸಂಕಷ್ಟವೂ ಮುಖ್ಯ. ಬದುಕನ್ನು ಅದರ ಎಲ್ಲ ಓರೆಕೋರೆಗಳ ಜತೆಗೇ ಒಪ್ಪಿಕೊಂಡು ಸ್ವೀಕರಿಸಬೇಕು ಎನ್ನುವುದು ನನ್ನ ಅನಿಸಿಕೆ.
* ಕಿಮೋಥೆರಪಿ ಚಿಕಿತ್ಸೆಯಿಂದ ದೇಹದಲ್ಲಿ ಹಲವು ಬದಲಾವಣೆಯಾಗುತ್ತದೆ. ತಲೆಗೂದಲು ಉದುರಲಾರಂಭಿಸುತ್ತವೆ. ನೀವೊಬ್ಬ ನಟಿಯಾಗಿ ಹೀಗೆ ದೇಹಸೌಂದರ್ಯ ಹಾಳಾಗುತ್ತಿರುವ ಸನ್ನಿವೇಶವನ್ನು ಹೇಗೆ ಸ್ವೀಕರಿಸಿದಿರಿ?
ಕಿಮೋಥೆರಪಿ ಮಾಡುತ್ತಿದ್ದಾಗ ನನ್ನ ಕೂದಲು ಉದುರುತ್ತಿದ್ದವು. ಹುಬ್ಬು ಇಲ್ಲವಾಗಿತ್ತು. ನನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯೊಬ್ಬರು ‘ನಿನ್ನ ಮನಸ್ಸನ್ನು ಸಕಾರಾತ್ಮಕ ಯೋಚನೆಯಲ್ಲಿ ನೆಡು. ಗುಣಮುಖಳಾಗಲು ಅದು ಅತ್ಯಂತ ಅಗತ್ಯ’ ಎಂದಿದ್ದರು. ಹಾಗಾಗಿ, ದೇಹಸೌಂದರ್ಯದ ಕುರಿತು ತಲೆಕೆಡಿಸಿಕೊಳ್ಳಲಿಲ್ಲ.
* ನಿಮ್ಮ ಆರೋಗ್ಯವನ್ನು, ಬದುಕನ್ನು ಟೇಕನ್ ಫಾರ್ ಗ್ರಾಂಟೆಡ್ ಮಾಡಿಕೊಂಡಿದ್ದೆ ಎಂದು ನಿಮಗೆ ಅನಿಸಿದೆಯೇ?
ನನ್ನ ಬದುಕು, ಆರೋಗ್ಯ ಎಲ್ಲವನ್ನೂ ನಾನು ನಿರ್ಲಕ್ಷಿಸಿದ್ದೆ. ಹಾಗಾಗಿಯೇ ಕ್ಯಾನ್ಸರ್ ನನಗೆ ಒಂದು ಪಾಠದ ರೂಪದಲ್ಲಿ ಬಂತು. ಕ್ಯಾನ್ಸರ್ ನನ್ನ ಬದುಕನ್ನು ಮೌಲ್ಯಮಾಪನ ಮಾಡುವ, ನನ್ನ ಕುಟುಂಬದವರ ಬಾಂಧವ್ಯವನ್ನು ಅರ್ಥೈಸುವ, ಆರೋಗ್ಯದ ಕುರಿತು ಅರಿವು ಮೂಡಿಸುವ ಗುರುವಿನ ರೂಪದಲ್ಲಿ ಬಂದಿದೆ ಎಂದೇ ನಾನು ಈಗಲೂ ಭಾವಿಸಿದ್ದೇನೆ. ಆರೋಗ್ಯ ಸರಿ ಇಲ್ಲದಿದ್ದರೆ ಬದುಕಿನ ಯಾವ ಮುಖಗಳನ್ನೂ ನಾವು ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ.
* ಇದರಿಂದ ಬದುಕನ್ನು ನೋಡುವ ನಿಮ್ಮ ದೃಷ್ಟಿಕೋನವೇನಾದರೂ ಬದಲಾಗಿದೆಯೇ?
ಬೇರೆಯವರಿಗೆ ಅನಾರೋಗ್ಯ ಆದಾಗ ಅವರನ್ನು ಅನುಕಂಪದಿಂದ ನೋಡುತ್ತೇವೆಯೇ ಹೊರತು ನಮಗೇ ಅದು ಆಗಬಹುದು ಎಂದು ಯೋಚಿಸುವುದಿಲ್ಲ. ಆರೋಗ್ಯವಾಗಿ ಇದ್ದಾಗ ಬದುಕು ಎಷ್ಟು ಸುಂದರವಾಗಿತ್ತು ಎನಿಸಲು ಶುರುವಾಯ್ತು. ಸೂರ್ಯನ ಕಿರಣ, ಗಿಡಮರಗಳು, ಹಕ್ಕಿಗಳು, ತಂಗಾಳಿ ಎಲ್ಲವೂ ಹೊಸತಾಗಿ ಕಾಣಿಸತೊಡಗಿತು. ಮನುಷ್ಯರು ಇಷ್ಟವಾಗತೊಡಗಿದರು. ಯಾರಾದರೂ ಕಂಡರೆ ‘ಅರೆ ನೀವು ಎಷ್ಟು ಆರೋಗ್ಯವಂತರಾಗಿದ್ದೀರಾ. ಇದು ನಿಮಗೆ ಸಿಕ್ಕ ವರ. ಈ ಬದುಕನ್ನು ಪೂರ್ತಿ ಅನುಭವಿಸಿ’ ಎಂದು ಹೇಳಬೇಕು ಅನಿಸುತ್ತಿತ್ತು. ಜೊತೆಗೇ ಸಣ್ಣ ಸಣ್ಣ ಸಂಗತಿಗಳು ತೀವ್ರ ದುಃಖಕ್ಕೆ ದೂಡುತ್ತಿದ್ದವು. ಖಿನ್ನತೆಗೆ ನೂಕುತ್ತಿದ್ದವು.
* ನಮ್ಮ ದೇಶದಲ್ಲಿ ಬಹುತೇಕರು ಮಧ್ಯಮವರ್ಗದವರು ಮತ್ತು ಬಡವರು. ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಸಾಕಷ್ಟಿದೆ. ಆದರೆ, ಕ್ಯಾನ್ಸರ್ ಚಿಕಿತ್ಸೆ ದುಬಾರಿ. ಬಹಳ ಜನರಿಗೆ ಚಿಕಿತ್ಸೆ ಪಡೆಯುವುದೇ ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ವ್ಯವಸ್ಥೆ ಬದಲಾಗಬೇಕು ಅನಿಸುವುದಿಲ್ಲವೇ?
ಕ್ಯಾನ್ಸರ್‌ನಂಥ ರೋಗಗಳಿಗೆ ಉಚಿತ ಚಿಕಿತ್ಸೆ ಸಿಗುವಂತಾಗಬೇಕು. ಈ ವಿಚಾರಕ್ಕೆ ನನ್ನ ಸಂಪೂರ್ಣ ಸಹಮತ ಇದೆ. ಆದರೆ ಪರಿಸ್ಥಿತಿ ಹಾಗಿಲ್ಲ. ನಮಗೆ ಖಂಡಿತ ಇನ್ನಷ್ಟು ನುರಿತ ವೈದ್ಯರ ಅವಶ್ಯಕತೆ ಇದೆ. ಬಲಿಷ್ಠ ಆರೋಗ್ಯ ವ್ಯವಸ್ಥೆಯ ಅಗತ್ಯವೂ ಇದೆ.
ಉಪವಾಸ ವ್ರತದಿಂದ ಕಾಯಿಲೆ ವಾಸಿಮಾಡಿಕೊಳ್ಳಬಹುದು ಎಂಬಂಥ ನಂಬಿಕೆಗಳೂ ನಮ್ಮಲ್ಲಿವೆಯಲ್ಲ...
ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ. ಅದರಿಂದ ಕ್ಯಾನ್ಸರ್ ಗುಣ ಮಾಡಿಕೊಳ್ಳಬಹುದು ಎಂಬುದನ್ನು ನಾನು ಎಲ್ಲಿಯೂ ಕೇಳಿಲ್ಲ. ಕ್ಯಾನ್ಸರ್ ಜೊತೆ ಪ್ರಯೋಗ ಮಾಡುವುದು ಖಂಡಿತ ಒಳ್ಳೆಯದಲ್ಲ.
* ನಿಮ್ಮ ಮುಂದಿನ ಬದುಕು ಹೇಗಿರುತ್ತದೆ?
ಬರವಣಿಗೆಯನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ಮುಂದೆಯೂ ಪುಸ್ತಕಗಳನ್ನು ಬರೆಯುವ ಆಸೆ ಇದೆ. ಇನ್ನಷ್ಟು ಕಥೆಗಳ ಮೂಲಕ ಜನರನ್ನು ಪ್ರಭಾವಿಸಬೇಕು ಅಂದುಕೊಂಡಿದ್ದೇನೆ. ನಟನೆಯಂತೂ ನನ್ನ ಜೀವಾಳ. ಅದನ್ನು ಖಂಡಿತ ಮುಂದುವರಿಸುತ್ತೇನೆ. ನಾನು ನಟಿಸಿದ ಒಂದು ಸಿನಿಮಾ ಈ ವರ್ಷ ಬಿಡುಗಡೆಯಾಗುತ್ತಿದೆ. ಇನ್ನೆರಡು ಕಥೆಗಳು ಚರ್ಚೆಯಲ್ಲಿವೆ. ನಾವೇನೋ ಅಂದುಕೊಳ್ಳುತ್ತೇವೆ. ಆದರೆ ಬದುಕು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಯಾರಿಗೆ ಗೊತ್ತು?
* ಮಹಿಳಾಹಕ್ಕುಗಳ ಕುರಿತೂ ಹೋರಾಟ ಮಾಡುತ್ತಿದ್ದೀರಿ. ಈ ವಿಷಯದಲ್ಲಿ ನಾವು ಸಾಧಿಸಬೇಕಾಗಿರುವುದು ಏನು?
ಮುಕ್ತವಾಗಿ ಮಾತನಾಡುವುದು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾಹಕ್ಕುಗಳ ಕುರಿತು ಚರ್ಚಿಸುವುದು ತುಂಬ ಅಗತ್ಯ. ಇದರಿಂದ ಜನರಿಗೆ ಮಹಿಳಾಹಕ್ಕುಗಳ ಕುರಿತು ಅರಿವು ಮೂಡುತ್ತದೆ. ಖಂಡಿತ ಇದು ಪುರುಷ ಪ್ರಧಾನ ಸಮಾಜ. ಆದರೆ, ನಾವು ಮಹಿಳೆಯರು ಬಲಿಪಶುಗಳಾಗಬಾರದು. ಹೋರಾಡಬೇಕು, ಗೆಲ್ಲಬೇಕು. ಬೇರೆ ಯಾರೋ ನಮಗೆ ಅವಕಾಶ ಕೊಡುತ್ತಾರೆ ಎಂದು ಕೂಡದೇ ನಾವೇ ಮುಂದಾಗಿ ಹೋಗಿ ಸಾಧನೆ ಮಾಡಿ ತೋರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.