ADVERTISEMENT

ಕಂದಮ್ಮನ ಕಾಡುವ ದಡಾರ

ಡಾ.ಕರವೀರಪ್ರಭು ಕ್ಯಾಲಕೊಂಡ
Published 26 ಏಪ್ರಿಲ್ 2019, 19:30 IST
Last Updated 26 ಏಪ್ರಿಲ್ 2019, 19:30 IST
   

ದಡಾರವು ಮಕ್ಕಳಿಗೆ ಕಾಡಿಸುವ ತೀವ್ರ ಸ್ವರೂಪದ ಸಾಂಕ್ರಾಮಿಕ ರೋಗ. ಮೊದ ಮೊದಲು ಇದರ ಹಾವಳಿ ಪ್ರಪಂಚದ ಪ್ರತಿಯೊಂದೂ ದೇಶದಲ್ಲಿತ್ತು. ಇಂದು ಮುಂದುವರೆದ ರಾಷ್ಟ್ರಗಳಲ್ಲಿ ಲಭ್ಯವಿರುವ ಚಿಕಿತ್ಸಾಕ್ರಮ, ಸಾಕ್ಷರತೆ, ರೋಗ ನಿರೋಧಕ ಚುಚ್ಚು ಮದ್ದು ಮತ್ತು ವೈಜ್ಞಾನಿಕ ತಿಳಿವಳಿಕೆ, ಮುಂತಾದವುಗಳಿಂದಾಗಿ ಈ ರೋಗದ ಬಲೆಗೆ ಬೀಳುವ ಮಕ್ಕಳ ಸಂಖ್ಯೆ ಪ್ರತಿ ವರ್ಷಕ್ಕೆ ಪ್ರತಿ ಹತ್ತು ಸಾವಿರಕ್ಕೆ ಎರಡು ಮಾತ್ರ. ಆದರೆ ಅಪೌಷ್ಟಿಕತೆ, ಅಜ್ಞಾನ, ಮೂಢನಂಬಿಕೆಗಳ ಮುಷ್ಠಿಯಲ್ಲಿ ಸಿಲುಕಿರುವ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇದರ ಸೆಳವಿಗೆ ಸಿಕ್ಕು ಸಾಯುವ ಶಿಶುಗಳ ಸಂಖ್ಯೆ ನೂರಕ್ಕೆ ಐದಕ್ಕಿಂತ ಹೆಚ್ಚು ಎಂಬುದನ್ನು ನೋಡಿದಾಗ ಈ ರೋಗ ಎಷ್ಟೊಂದು ಮಾರಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ರೋಗದ ಪ್ರಮಾಣ
ಇದು ಒಂದೇ ಒಂದು ತಳಿಯ ವಿಷಾಣುವಿನಿಂದ ಬರುತ್ತದೆ. ಈ ವಿಷಾಣು ಮಾನವ ಶರೀರದ ಹೊರಗಡೆ ಬಹಳ ಕಾಲದವರೆಗೆ ಬದುಕುವುದಿಲ್ಲವಾದರೂ ಶೂನ್ಯದೊಳಗಡೆಯ ಉಷ್ಣತೆಯಲ್ಲಿ ಸಂಗ್ರಹಿಸಿಟ್ಟರೆ ಸೋಂಕುಗುಣದ ಮಟ್ಟಕ್ಕೇನೂ ಧಕ್ಕೆಯಾಗುವುದಿಲ್ಲ. ಸಮಶೀತೋಷ್ಣ ಪ್ರದೇಶಗಳಲ್ಲಿ ಇದರ ಹಾವಳಿ ಹೆಚ್ಚು. ಈ ರೋಗವು ಸ್ಥಳ ಜನ್ಯವಾಗಿ ಇಲ್ಲವೆ ಸಾಂಕ್ರಾಮಿಕ ಸ್ವರೂಪಗಳಲ್ಲಿ ತಲೆದೋರಬಹುದು. ಇದು ವರ್ಷದುದ್ದಕ್ಕೂ ಕಾಣಿಸಿಕೊಳ್ಳಬಹುದಾದರೂ ಸೆಪ್ಟೆಂಬರ್‌ದಿಂದ ಮೇ ವೇಳೆಯಲ್ಲಿ ಪರಮಾವಧಿಯನ್ನು ಮುಟ್ಟುತ್ತದೆ. ಮುಂದೆ ಮಳೆ ಬೀಳುತ್ತಾ ಬಂದಂತೆ ಇದರ ಅಬ್ಬರ ಕಡಿಮೆ ಆಗುತ್ತ ಬರುತ್ತದೆ. ತಾಯಿಯಿಂದ ಬಳುವಳಿಯಾಗಿ ಪಡೆದ ರೋಗ ನಿರೋಧಕ ಶಕ್ತಿ ಮಗುವಿನಲ್ಲಿ ಇರುವುದರಿಂದ ಮೊದಲು ಆರು ತಿಂಗಳುಗಳಾಗುವವರೆಗೂ ಇದು ಮಕ್ಕಳ ಸಮೀಪ ಸುಳಿಯುವುದಿಲ್ಲ. ಎಲ್ಲ ವಯಸ್ಸಿನವರಲ್ಲಿ ಕಾಣಬಹುದಾದರೂ ಆರು ತಿಂಗಳಿಂದ ಎರಡು ವರ್ಷದೊಳಗಿನ ಮಕ್ಕಳಲ್ಲಿ ಇದರ ಉಪಟಳ ಜಾಸ್ತಿ. ಲಿಂಗ ಭೇದವಿಲ್ಲದೇ ಸಮ ಪ್ರಮಾಣದಲ್ಲಿ ಮಕ್ಕಳಿಗೆ ಮುತ್ತಿಗೆ ಹಾಕುತ್ತದೆ.

ರೋಗ ಪ್ರಸಾರ
ರೋಗ ವಾಹಕ ಇರುವುದಿಲ್ಲವಾದ್ದರಿಂದ ರೋಗದಿಂದ ಬಳಲುತ್ತಿರುವ ರೋಗಿಯೇ ರೋಗ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ರೋಗಾಣುಗಳು ಮೂಗು ಗಂಟಲುಗಳ ಸ್ರವಿಕೆಗಳ ಮುಖಾಂತರ ಸೀನಿದಾಗ, ಕೆಮ್ಮಿದಾಗ ಹೊರಗಿನ ಪರಿಸರಕ್ಕೆ ಪಾದಾರ್ಪಣೆ ಮಾಡುತ್ತವೆ. ಇವು ನಿರೋಗಿಯ ದೇಹವನ್ನು ಉಸಿರಾಟದ ಮೂಲಕ ಪ್ರವೇಶಿಸಿ ರೋಗದ ಲಕ್ಷಣಗಳನ್ನು ಹೊರಹೊಮ್ಮಿಸುತ್ತವೆ. ರೋಗಿಯ ಎಂಜಲು ಪಾತ್ರೆ ಪಗಡಿಗಳು ಪೆನ್ಸಿಲ್, ಆಟದ ಸಾಮಗ್ರಿಗಳು ರೋಗ ಪ್ರಸಾರದಲ್ಲಿ ಕೆಲಮಟ್ಟಿಗೆ ಸಹಾಯಕವಾಗುತ್ತವೆ. ಸೋಂಕು ಗುಣ ಉಗ್ರ ಸ್ವರೂಪದಲ್ಲಿರುವುದರಿಂದ ಗುಳ್ಳೆಗಳು ಏಳುವುದಕ್ಕಿಂತ ಮುಂಚೆ ನಾಲ್ಕು ದಿವಸ, ಎದ್ದ ನಂತರ ಐದು ದಿವಸ ಬೇರೆ ಮಕ್ಕಳಿಂದ ಬೇರ್ಪಡಿಸುವುದು ರೋಗ ಪ್ರಸಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಒಳ್ಳೆಯದು.

ADVERTISEMENT

ರೋಗದ ಲಕ್ಷಣಗಳು
ಈ ರೋಗದ ಅವಧಿ 7–14 ದಿವಸಗಳಿದ್ದು, ಬಲಗುಂದಿದ ದಡಾರದಲ್ಲಿ ಮಾತ್ರ 14– 20 ದಿನಗಳಿರುತ್ತದೆ. ಸರ್ವೇ ಸಾಮಾನ್ಯವಾಗಿ ನೆಗಡಿ ಶೀತದಂತೆ ಆರಂಭವಾಗಿ ನಸಿ ನಸಿ ಜ್ವರ ಬರುತ್ತದೆ. ನೆಗಡಿ ಹೆಚ್ಚಾಗಿ ಸೀನುಗಳ ಸುರಿಮಳೆ, ಸಿಂಬಳ ಸೋರುವುದು ಪ್ರಾರಂಭವಾಗುತ್ತದೆ. ಕಣ್ಣು ಕೆಂಪಾಗಿ ಕಣ್ಣಿವೆಗಳು ಊದಿಕೊಂಡು ಕಣ್ಣೀರು ಹರಿಯತೊಡಗುತ್ತದೆ. ದವಡೆ ಹಲ್ಲಿನ ಸಮೀಪ ಗಲ್ಲದ ಲೋಳ್ಪೊರೆಯ ಮೇಲೆ ಕಾಪ್ಲಿಕ್‌ನ್ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇವು ನೋಡಲು ಸಣ್ಣ ಸಣ್ಣ ಉಪ್ಪಿನ ಕಣ ಗಾತ್ರದ ಬಿಳಿಯ ಗುಳ್ಳೆಗಳಂತಿದ್ದು ಅವುಗಳ ಸುತ್ತಲೂ ಕೆಂಪಾಗಿರುತ್ತದೆ. ಇವುಗಳ ಇರುವಿಕೆ ದಡಾರ ರೋಗ ಸೂಚಕವಾಗಿರುತ್ತದೆ.

ಈ ಚುಕ್ಕೆಗಳು ದಡಾರದ ಬೆವರು ಸಾಲೆಯಂತಹ ಗುಳ್ಳೆಗಳು ಏಳುವುದಕ್ಕೆ 72 ಗಂಟೆಗಳಿಗೆ ಮೊದಲು ಕಾಣಿಸಿಕೊಳ್ಳುತ್ತವೆ. ದಡಾರ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಕಾಪ್ಲಿಕ್‌ನ್‌ ಚುಕ್ಕೆಗಳು ಮಾಯವಾಗುತ್ತವೆ. ಗುಳ್ಳೆಗಳು ಮೊಟ್ಟ ಮೊದಲು ತಲೆಗೂದಲಿನ ಅಂಚಿನಲ್ಲಿ, ಕಿವಿಯ ಹಿಂಬದಿಯಲ್ಲಿ ಮತ್ತು ಕೆಳಗಡೆ ಅಲ್ಲದೆ ಬಾಯಿಯ ಸುತ್ತ ಮುತ್ತ ಕಾಣಿಸಿಕೊಳ್ಳುತ್ತವೆ. ನಂತರ ತ್ವರಿತಗತಿಯಲ್ಲಿ ಮುಖ, ಕತ್ತು, ಮುಂಡ ಮತ್ತು ಕೈ ಕಾಲುಗಳ ಮೇಲೆ ಹರಡುತ್ತವೆ. ಗುಳ್ಳೆಗಳು ಕಾಣಿಸಿಕೊಂಡ ರೀತಿಯಲ್ಲಿಯೇ ಅಡಗಿ ಹೋಗುತ್ತವೆ. ಎರಡು ಅಥವಾ ಮೂರು ದಿವಸಗಳಲ್ಲಿ ಸಂಪೂರ್ಣವಾಗಿ ಅಳಿದು ಹೋಗುತ್ತವೆ. ಆದರೆ ಕಂದು ಬಣ್ಣದ ಕಲೆ ಕೆಲವು ಕಾಲ ಹಾಗೆಯೇ ಉಳಿಯಬಹುದು. ಗುಳ್ಳೆಗಳು ಕಂದಲು ಪ್ರಾರಂಭಿಸಿದೊಡನೆ ಜ್ವರ ಇದ್ದಕ್ಕಿದ್ದಂತೆ ಇಳಿದು ಹೋಗುತ್ತದೆ.

ಪ್ರತಿಬಂಧಕೋಪಾಯಗಳು
ದಡಾರದ ಲಸಿಕೆಯನ್ನು ಮಗುವಿನ ವಯಸ್ಸು 9–12 ತಿಂಗಳಿದ್ದಾಗ ಚುಚ್ಚುಮದ್ದಿನ ರೂಪದಲ್ಲಿ ಮೊದಲನೇ ಡೋಜನ್ನು ಕೊಡಿಸುವುದು. ಮಗುವಿಗೆ 18 ತಿಂಗಳಾದಾಗ 2ನೇ ಡೋಜನ್ನು ಕೊಡಿಸುವುದು. ರೋಗಿಯನ್ನು ಇತರರಿಂದ ಪ್ರತ್ಯೇಕಿಸುವುದು ಮತ್ತು ಸಂಪೂರ್ಣ ಗುಣವಾಗುವಂತೆ ಔಷಧೋಪಚಾರ ಮಾಡುವುದು.

ಚಿಕಿತ್ಸೆ
ದಡಾರದಿಂದ ಬಳಲುವ ಎಲ್ಲ ಮಕ್ಕಳನ್ನೂ ಆಸ್ಪತ್ರೆಯ ಆವರಣದಲ್ಲಿ ಉಪಚರಿಸಬೇಕೆಂದೇನೂ ಇಲ್ಲ. ದುಷ್ಪರಿಣಾಮಕ್ಕೆ ತುತ್ತಾದ ಮಕ್ಕಳಿಗೆ ಆಸ್ಪತ್ರೆಯ ಉಪಚಾರ ಅತ್ಯಗತ್ಯ. ರೋಗವು ತೀವ್ರ ಸ್ವರೂಪದ ಹಂತದಲ್ಲಿದ್ದಾಗ ಕಣ್ಣಿನ ಕಡೆಗೆ ಗಮನ ಕೊಡಬೇಕು, ಮೊದಲಿನ ನಾಲ್ಕೈದು ದಿನ ಗಂಜಿ, ಹಾಲು, ಹಣ್ಣಿನ ರಸ, ಎಳನೀರಿನಂತಹ ದ್ರವ ಆಹಾರವನ್ನು ಕೊಡುವುದು ಸೂಕ್ತ. ನಂತರ ಮಗು ಬೇಡುವ ಎಲ್ಲ ಆಹಾರವನ್ನು ಧಾರಾಳವಾಗಿ ಕೊಡಬೇಕು. ಪಥ್ಯ, ಮೂಢನಂಬಿಕೆಗಳ ಇಕ್ಕಟ್ಟಾದ ಚೌಕಟ್ಟಿನಲ್ಲಿ ಮಗುವನ್ನು ಕೊರಗಲು ಬಿಡಬಾರದು. ದ್ವಿತೀಯ ಸೋಂಕು ಹಾಗೂ ದುಷ್ಪರಿಣಾಮಗಳಿಂದ ರಕ್ಷಣೆ ಕೊಡುವ ದೃಷ್ಟಿಯಿಂದ ಸೂಕ್ತ ಜೀವಿ-ರೋಧಕಗಳನ್ನು ಕೊಡುವುದು ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.