ರಾಮಮೂರ್ತಿಗಳು ಬ್ಯಾಂಕ್‌ನಿಂದ ನಿವೃತ್ತಿಯಾಗಿ ಸುಮಾರು ಎರಡು ವರ್ಷಗಳೇ ಕಳೆದಿವೆ. ಬ್ಯಾಂಕಿನಲ್ಲಿ ಇವರ ನಿಷ್ಠೆ, ಪ್ರಾಮಾಣಿಕತೆ ಬಗ್ಗೆ ಎಷ್ಟು ಹೆಸರಿತ್ತೋ, ಅಷ್ಟೇ ಇವರ ನೆನಪಿನ ಶಕ್ತಿಯ ಬಗ್ಗೆಯೂ ಹೆಸರಿತ್ತು. ಅಕೌಂಟ್ಸ್ ಲೆಕ್ಕ ಇಡುವುದು, ಮುಖ್ಯವಾದ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವುದು, ಹಳೆ ಗ್ರಾಹಕರನ್ನು ಗುರುತು ಹಿಡಿಯುವುದು, ಇವೆಲ್ಲವುದರಲ್ಲಿ ನಿಸ್ಸೀಮರು. ಆದರೆ ಇತ್ತೀಚಿಗೆ, ರಾಮಮೂರ್ತಿಗಳಿಗೆ ಮರೆಗುಳಿತನ ಕಾಡುತ್ತಿದೆ. ಕಳೆದ ಆರು ತಿಂಗಳುಗಳಲ್ಲಿಯೇ – ತಾವು ಇಟ್ಟ ವಸ್ತುಗಳನ್ನು ಪದೇ ಪದೇ ಹುಡುಕುತ್ತಿರುತ್ತಾರೆ. ದಿನಸಿ ತರಲು, ಲಿಸ್ಟ್ ಇಲ್ಲದೇ ಹೋಗಲಾಗುವುದಿಲ್ಲ. ಹತ್ತಿರದ ಸಂಬಂಧಿಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ. ವಾರದ ಹಿಂದಂತೂ,ಪಾರ್ಕ್‌ಗೆ ವಾಕಿಂಗ್‌ಗೆ ಹೋಗಿ ಮರಳುವಾಗ, ಮನೆ ದಾರಿಯೇ ಮರೆತುಹೋಗಿತ್ತು!
28 ವರ್ಷದ ಆದಿತ್ಯ, ಪ್ರಖ್ಯಾತ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿ. ಕಳೆದೆರಡು ತಿಂಗಳಿನಿಂದ, ಅಮೆರಿಕದ ಪ್ರಾಜೆಕ್ಟ್‌ಗಾಗಿ ಕೆಲಸ ಮಾಡುತ್ತಿದ್ದ. ರಾತ್ರಿ ಕೆಲಸ, ಹಗಲು ನಿದ್ದೆ. ಜೊತೆಗೆ ಪ್ರಾಜೆಕ್ಟ್ ಅನ್ನು ಡೆಡ್‍ಲೈನ್‌ನಲ್ಲಿ ಮುಗಿಸುವ ಧಾವಂತ. ದಿನಕ್ಕೆ ಸುಮಾರು 14ರಿಂದ 16 ಗಂಟೆ ಕೆಲಸ. ಕಳೆದ ತಿಂಗಳಿನಿಂದ, ಪಕ್ಕದ ಸೈಟ್‍ನಲ್ಲಿ, ಮನೆ ಕಟ್ಟುತ್ತಿದ್ದರು. ಆದಿತ್ಯ ರಾತ್ರಿ ಪಾಳಿ ಮುಗಿಸಿ, ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಕಟ್ಟಡ ಕೆಲಸ ಶುರು. ನಿದ್ದೆ ಅಧೋಗತಿ. ಇತ್ತೀಚಿಗೆ, ತುಂಬ ಕಿರಿಕಿರಿ, ಗೊಂದಲ, ಸಿಟ್ಟು ಬರುತ್ತಿತ್ತು. ಪ್ರಾಜೆಕ್ಟ್‌ಗೆ ಸಂಬಂಧಿಸಿದ ವಿಷಯಗಳನ್ನು ಪದೇ ಪದೇ ಮರೆಯುತ್ತಿದ್ದ. ಈ ಮೇಲ್ ಐಡಿಗಳು, ಫೋನ್ ನಂಬರ್‌ಗಳು ಮರೆತುಹೋಗುತ್ತಿದ್ದವು. ನಿನ್ನೆಯಂತೂ, ತನ್ನ ಲಾಗಿನ್ ಪಾಸ್‍ವರ್ಡ್ ಅನ್ನೇ ಮರೆತಿದ್ದ!
ಹೇಗೆ, ನೆನಪಿನ ಶಕ್ತಿಯು ಮನುಷ್ಯನಿಗೆ ಪ್ರಕೃತಿದತ್ತವಾಗಿ ಒಲಿದ ವರವೋ, ಅದೇ ರೀತಿ ಮರೆಗುಳಿತನವೂ ವರವೇ ಸರಿ. ಕಲ್ಪಿಸಿಕೊಳ್ಳಿ, ದಿನನಿತ್ಯದ ಪ್ರತಿಯೊಂದು ಮಾತು, ಘಟನೆ, ವಸ್ತುವಿಷಯಗಳು ನಮ್ಮ ಸ್ಮೃತಿಪಟಲದಲ್ಲಿಯೇ ಉಳಿದುಬಿಟ್ಟರೆ ಎಂತಹ ಗೊಂದಲ, ಕಸಿವಿಸಿಯಾಗುತ್ತಿತ್ತು ನಮ್ಮ ಬಾಳು! ಅನೇಕ ಕಹಿ ಘಟನೆಗಳನ್ನು ಹಿಂದಕ್ಕೆ ತಳ್ಳಿ, ಮುನ್ನಡೆಯಲು ಮರೆವು ಎಂಬ ವರವೇ ಅಲ್ಲವೇ ಕಾರಣ!
ರಾಮಮೂರ್ತಿಯವರ ಪರಿಸ್ಥಿತಿ ಗಮನಿಸಿದರೆ, ಅದು ವೃದ್ಧಾಪ್ಯದ ಮರೆಗುಳಿತನ ಎನ್ನಿಸಬಹುದು. ಆದರೆ ಅವರ ಮರೆವು ಜೀವನದ ಅನೇಕ ಆಯಾಮಗಳಲ್ಲಿ ಆವರಿಸಿಕೊಂಡು, ಗಾಢವಾಗಿ ಪರಿಣಾಮ ಬೀರುತ್ತಿರುವುದನ್ನು ಗಮನಿಸಿದರೆ, ಗಂಭೀರ ಸಮಸ್ಯೆಯಿರಬಹುದು ಎನ್ನಿಸುತ್ತದೆ.
ಆದಿತ್ಯನ ಪ್ರಕರಣದಲ್ಲಿ, ಕೆಲಸದ ಒತ್ತಡ, ನಿದ್ರಾಹೀನತೆ, ಬದಲಾದ ನಿದ್ದೆಯ ಸಮಯ – ಇವು ಆತನಲ್ಲಿ ಅತೀವ ಒತ್ತಡವುಂಟು ಮಾಡುತ್ತಿವೆ. ಬಹುಶಃ ಇವುಗಳಿಂದಲೇ ಅವನಲ್ಲಿ ಮರೆವು ಕಾಣಿಸುತ್ತಿರಬಹುದು.
ಮರೆಗುಳಿತನಕ್ಕೆ ಅನೇಕ ಕಾರಣಗಳಿವೆ. ಕೆಲವು ಸಾಮಾನ್ಯವಾದವು ಹಾಗೂ ಸರಿಪಡಿಸಬಹುದಾದಂಥವು. ಇನ್ನು ಕೆಲವು ಗಂಭೀರವಾದವು.
ಸಾಮಾನ್ಯ ಕಾರಣಗಳು
ನಿದ್ರಾಹೀನತೆ:
ಬಹುಶಃ ಮರೆವಿಗೆ ಅತ್ಯಂತ ಸಾಮಾನ್ಯವಾದ ಕಾರಣವೇ ನಿದ್ರಾಹೀನತೆ. ರಾತ್ರಿ ಪದೇಪದೇ ಎಚ್ಚರವಾಗುವುದು, ನಿದ್ದೆಯ ಸಮಯದಲ್ಲಿ ಬದಲಾವಣೆ, ನಿದ್ದೆಯ ಗುಣಮಟ್ಟ ಸರಿಯಿರದಿದ್ದರೆ, ಅತಿಯಾದ ಗೊರಕೆ, ಇನ್ನೂ ಇತ್ಯಾದಿ ಕಾರಣಗಳಿಂದ ನಿದ್ರಾಹೀನತೆ ಉಂಟಾಗಬಹುದು. ಇದರಿಂದ ದೇಹ ಹಾಗೂ ಮೆದುಳಿಗೆ ಅವಶ್ಯಕವಾದ ವಿಶ್ರಾಂತಿ ದೊರೆಯದೇ, ಏಕಾಗ್ರತೆ ಕೊರತೆ ಉಂಟಾಗಿ ಮರೆವು ಕಾಡಬಹುದು.
ಒತ್ತಡ:
ತೀವ್ರ ಒತ್ತಡದಿಂದ, ದೇಹದಲ್ಲಿ ಅನೇಕ ಜೈವಿಕ ಬದಲಾವಣೆಗಳಾಗಿ, ಹಾರ್ಮೋನುಗಳಲ್ಲಿ ಏರುಪೇರಾಗಬಹುದು. ಅದರಿಂದ ಮೆದುಳಿನ ಪರಿಣಾಮ ಉಂಟಾಗಿ, ಏಕಾಗ್ರತೆ, ನಿರ್ಧರಿಸುವ ಸಾಮರ್ಥ್ಯ ಕುಂಠಿತವಾಗಿ, ಮರೆವು ಹೆಚ್ಚುತ್ತದೆ.
ದುಶ್ಚಟಗಳು:
ಮುಖ್ಯವಾಗಿ ಮದ್ಯಪಾನದಿಂದ ಮೆದುಳಿನ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಕುಸಿಯುತ್ತದೆ. ಮದ್ಯವು ನೇರವಾಗಿ ಹಾಗೂ ಪರೋಕ್ಷವಾಗಿಯೂ ಮೆದುಳಿನ ಮೇಲೆ ಪರಿಣಾಮ ಉಂಟು ಮಾಡಿ ಮರೆಗುಳಿತನ ಕಾಣಿಸಿಕೊಳ್ಳುತ್ತದೆ.
ಆತಂಕ, ಖಿನ್ನತೆ ಆಗೂ ಇತರ ಮಾನಸಿಕ ಕಾಯಿಲೆಗಳು:
ಆತಂಕ, ಖಿನ್ನತೆಗಳು ಸಾಮಾನ್ಯವಾದ ಮಾನಸಿಕ ಕಾಯಿಲೆಗಳು. ಈ ಕಾಯಿಲೆಗಳಿಂದ ಬಳಲುವವರಲ್ಲೂ ನೆನಪಿನ ಶಕ್ತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಲ್ಲಿ ಚಿತ್ತಚಂಚಲತೆಯಿಂದ (ADHD) ಮರೆಗುಳಿತನದಂತಹ ವರ್ತನೆ ಕಾಣಿಸಬಹುದು.
ಅನಾರೋಗ್ಯಕರ ಆಹಾರ ಮತು ಜೀವನಪದ್ಧತಿ:
ಹಾಳು-ಮೂಳು ತಿನ್ನುವುದು, ಪೋಷಕಾಂಶವಿಲ್ಲದ ಆಹಾರಸೇವನೆ, ಬೊಜ್ಜು, ವ್ಯಾಯಾಮ ಇಲ್ಲದಿರುವುದು, ಚಟುವಟಿಕೆ ಇಲ್ಲದಿರುವುದು – ಇವೆಲ್ಲವೂ ಮರೆಗುಳಿತನಕ್ಕೆ ಆಹ್ವಾನ ನೀಡುತ್ತವೆ.
ಜೀವಸತ್ವ ಬಿ1, ಬಿ12, ಥೈರಾಯಿಡ್ ಗ್ರಂಥಿಯ ಸಮಸ್ಯೆಗಳಿಂದ ಮರೆಗುಳಿತನ ಉಂಟಾಗುತ್ತದೆ.ನಿದ್ರಾಮಾತ್ರೆಗಳ ವಿಪರೀತ ಹಾಗೂ ವೈದ್ಯರ ಸಲಹೆಗೂ ಮೀರಿದ ಬಳಕೆಯಿಂದಲೂ ನೆನಪಿನ ಶಕ್ತಿಯ ಸಮಸ್ಯೆಯಾಗುತ್ತದೆ.
ತಲೆಗೆ ಪೆಟ್ಟು, ಅಲ್ಝೈಮರ್ ಕಾಯಿಲೆ, ಪಾರ್ಶ್ವವಾಯು, ಪಾರ್ಕಿನ್ಸನ್ ಕಾಯಿಲೆ – ಇವು ಮರೆಗುಳಿತನಕ್ಕೆ ಗಂಭೀರವಾದ ಕಾರಣಗಳು. ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಮರೆಗುಳಿತನ, ಹಗಲುರಾತ್ರಿ ಗೊಂದಲ, ಜೋಲಿ ಹೋಗುವುದು, ಕೈನಡುಕ, ಭ್ರಾಂತು ಮುಂತಾದ ಚಿಹ್ನೆಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಮರೆಗುಳಿತನ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳು
*ಆರೋಗ್ಯಕರ ಜೀವನಶೈಲಿ, ಆಹಾರಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.
*ಒತ್ತಡಮುಕ್ತ ಜೀವನಶೈಲಿ ನಮ್ಮದಾಗಬೇಕು.
*ನಿಯಮಿತವಾಗಿ ಕಡಿಮೆ ಬೊಜ್ಜಿರುವ ಆಹಾರ, ಹಣ್ಣು ಮತ್ತು ನಾರಿನ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು.
*ನಿಯಮಿತವಾದ ನಿದ್ದೆ.
*ಓದು, ಪದಬಂಧ, ಸುಡೊಕು ಬಿಡಿಸುವುದು, ಪಜಲ್ ಬಿಡಿಸುವುದು, ಚಿತ್ರಕಲೆ ಮುಂತಾದ ಹವ್ಯಾಸಗಳ ರೂಢಿ.
*ನಿಯಮಿತವಾದ ದೈಹಿಕ ವ್ಯಾಯಾಮ, ಯೋಗ, ಪ್ರಾಣಾಯಾಮ.
*ದುಶ್ಚಟಗಳಿಂದ ದೂರವಿರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.