ADVERTISEMENT

ಮರೆವಿನ ನೂತನ ಸಂಹಿತೆ!

ಡಾ.ಕಿರಣ್ ವಿ.ಎಸ್.
Published 9 ಆಗಸ್ಟ್ 2021, 19:30 IST
Last Updated 9 ಆಗಸ್ಟ್ 2021, 19:30 IST
ನೆನಪು–ಪ್ರಾತಿನಿಧಿಕ ಚಿತ್ರ
ನೆನಪು–ಪ್ರಾತಿನಿಧಿಕ ಚಿತ್ರ    

ಮರೆವು. ಇದು ನಮಗೆ ಶಾಪವೂ ಆಗಬಹುದು, ವರವೂ ಆಗಬಹುದು. ಮರೆವಿಗೆ ಕಾರಣವಾದರೂ ಏನು? ಮರೆವಿನಿಂದ ಬಿಡುಗಡೆ ಸಾಧ್ಯವೆ?

ಬದುಕು ಎಂದರೆ ಲಕ್ಷಾಂತರ ಅನುಭವಗಳ ಗ್ರಹಿಕೆ. ಅದರಲ್ಲಿ ಕೆಲವು ನೆನಪುಗಳಾಗಿ ಉಳಿದರೆ, ಬಹುತೇಕ ಸಂಗತಿಗಳು ಚಿತ್ತದಿಂದ ಮರೆಯಾಗುತ್ತವೆ. ‘ಬದುಕಿಗೆ ಅಗತ್ಯವಾದ ವಿಷಯಗಳನ್ನು ಮಾತ್ರ ನಮ್ಮ ಮೆದುಳು ನೆನಪುಗಳ ರೂಪದಲ್ಲಿ ಉಳಿಸಿಕೊಳ್ಳುತ್ತದೆ; ಅನಗತ್ಯ ಸಂಗತಿಗಳು ನೆನಪುಗಳ ಹಂತಕ್ಕೆ ಏರದೇ ತಾನಾಗಿಯೇ ಮರೆಯಾಗುತ್ತವೆ’ ಎಂದೇ ಬಹುಕಾಲ ನಂಬಲಾಗಿತ್ತು. ಅಂದರೆ, ನೆನಪು ಎನ್ನುವುದು ಪ್ರಜ್ಞಾಪೂರ್ವಕ ಪ್ರಕ್ರಿಯೆ; ಮರೆವು ಎನ್ನುವುದು ಅದಕ್ಕೆ ವಿರುದ್ಧವಾದ, ಯಾವುದೇ ಪ್ರಯತ್ನ ಬೇಡದ ಸಹಜ ಕೆಲಸ ಎನ್ನುವ ಭಾವನೆಯಿತ್ತು.

ಕಳೆದ ಒಂದು ದಶಕದಲ್ಲಿ ನಡೆದ ಹಲವಾರು ಪ್ರಯೋಗಗಳು ಮರೆವಿನ ಕುರಿತಾದ ಹೊಸ ಒಳನೋಟಗಳನ್ನು ತೆರೆದಿಟ್ಟಿವೆ. ಈ ಮುನ್ನ ಎಣಿಸಿದಂತೆ ಮರೆವು ಎನ್ನುವುದು ನೆನಪಿಗೆ ವ್ಯತಿರಿಕ್ತವಾದ ನಿಷ್ಕ್ರಿಯ ಪ್ರಕ್ರಿಯೆ ಅಲ್ಲ. ಬದಲಿಗೆ, ಮೆದುಳು ಪ್ರಯತ್ನಪೂರ್ವಕವಾಗಿ ಸಂಗತಿಗಳನ್ನು ಮರೆಯಿಸುತ್ತದೆ! ನಮ್ಮ ಮೆದುಳು ಸುಖಾಸುಮ್ಮನೆ ಏನನ್ನೂ ಮರೆಯುವುದಿಲ್ಲ; ಅದರ ಹಿಂದೆ ಯಾವುದೋ ಉದ್ದೇಶ ಇರುತ್ತದೆ ಎಂದಾಯಿತು.

ADVERTISEMENT

ಮೆದುಳಿನ ಎಲ್ಲಾ ಭಾಗಗಳನ್ನೂ ಒಟ್ಟುಗೂಡಿಸಿದರೆ, ಅದರಲ್ಲಿ ಸುಮಾರು ಹತ್ತುಸಾವಿರ ಕೋಟಿ (ಒಂದರ ಮುಂದೆ ಹನ್ನೊಂದು ಸೊನ್ನೆಗಳು) ನರಕೋಶಗಳಿವೆ ಎಂದು ಅಂದಾಜು. ಈ ಬೃಹತ್ ಸಂಖ್ಯೆಯ ನರಕೋಶಗಳು ತಂತಮ್ಮ ನಡುವೆ ಸುಮಾರು ಎರಡು ಕೋಟಿ ಕೋಟಿ (ಎರಡರ ಮುಂದೆ ಹದಿನಾಲ್ಕು ಸೊನ್ನೆಗಳು) ಸಂಪರ್ಕಗಳನ್ನು ಸಾಧಿಸುತ್ತವೆ ಎಂಬ ಊಹೆಯಿದೆ. ನಮ್ಮ ಅನುಭವಕ್ಕೆ ಬಂದ ಪ್ರತಿಯೊಂದು ಘಟನೆಯೂ ಈ ನರವ್ಯೂಹದಲ್ಲಿ ಒಂದು ಹೊಸ ಸಂಪರ್ಕಜಾಲವನ್ನು ಸೃಜಿಸುತ್ತದೆ. ಈ ಜಾಲ ಕೆಲ ಸೆಕೆಂಡುಗಳ ಕಾಲದಿಂದ ಹಿಡಿದು, ಹಲವಾರು ವರ್ಷಗಳವರೆಗೆ ಸಕ್ರಿಯವಾಗಿ ಇರಬಹುದು. ಆಯಾ ಅನುಭವಕ್ಕೆ ಸಂಬಂಧಿಸಿದ ನರಗಳ ಸಕ್ರಿಯ ಜಾಲವನ್ನು ‘ಆಯಾ ಘಟನೆಯ ನೆನಪು’ ಎಂದು ಕರೆಯಬಹುದು. ಯಾವುದೇ ಅನುಭವವನ್ನು ನಾವು ಪುನಃ ಚಿತ್ತದಲ್ಲಿ ತರಲು ಇಚ್ಛಿಸಿದಾಗ ಆ ವಿಶಿಷ್ಟ ಸಂಪರ್ಕಜಾಲ ಉದ್ದೀಪನಗೊಳ್ಳುತ್ತಾ ನೆನಪಿನ ರೂಪದಲ್ಲಿ ಗ್ರಹಿಕೆಗೆ ಬರುತ್ತದೆ. ಇಂತಹ ಕೋಟ್ಯಂತರ ನೆನಪುಗಳನ್ನು ಶೇಖರಿಸಿ ಇಟ್ಟುಕೊಳ್ಳಬಲ್ಲ ಸಾಮರ್ಥ್ಯ ನಮ್ಮ ಮೆದುಳಿಗೆ ಇದೆ.

ನೆನಪುಗಳ ರಚನೆಯ ಹಿನ್ನೆಲೆಯಲ್ಲಿ ಮರೆಯುವಿಕೆಯನ್ನು ವಿಶ್ಲೇಷಿಸಬಹುದು. ನೆನಪಿನ ಕುರಿತಾದ ಸಂಪರ್ಕಜಾಲ ಮೆದುಳಿನಲ್ಲಿ ರೂಪುಗೊಂಡಿದ್ದರೂ, ಅದು ಸಮಯಕ್ಕೆ ಸರಿಯಾಗಿ ಉದ್ದೀಪನಗೊಳ್ಳದಿದ್ದರೆ ಗ್ರಹಿಕೆಗೆ ಬರುವುದಿಲ್ಲ. ‘ತಲೆಯಲ್ಲಿದೆ; ಆದರೆ ಈ ಕ್ಷಣಕ್ಕೆ ನೆನಪಾಗುತ್ತಿಲ್ಲ’ ಎನ್ನುವ ಹಳಹಳಿಕೆ ಇಂತಹದ್ದೇ. ಮರೆವಿನ ಮತ್ತೊಂದು ವಿಧಾನದಲ್ಲಿ ನೆನಪು ಶೇಖರವಾಗಿರುವ ಎಡೆಯನ್ನು ತಲುಪಲು ಅಗತ್ಯವಾದ ಪ್ರಕ್ರಿಯೆ ಅಶಕ್ತವಾಗಿರಬಹುದು. ಇದರಲ್ಲಿ ಯಾವುದೋ ಒಂದು ನೆನಪು ಮಾತ್ರ ಮಸುಕಾಗುವುದಿಲ್ಲ. ಬದಲಿಗೆ, ನೆನಪುಗಳನ್ನು ಮರುಕಳಿಸುವ ಇಡೀ ಪ್ರಕ್ರಿಯೆ ವಿಫಲವಾಗುತ್ತದೆ. ಮೂರನೆಯ ವಿಧಾನದಲ್ಲಿ ಮೆದುಳಿನ ಒಂದು ಭಾಗದಲ್ಲಿ ಶೇಖರವಾಗಿರುವ ನೆನಪುಗಳನ್ನು ಗ್ರಹಿಕೆಗೆ ಬಾರದಂತೆ ಮೆದುಳಿನ ಮತ್ತೊಂದು ಬಲಶಾಲಿ ಭಾಗ ವ್ಯವಸ್ಥಿತವಾಗಿ ನಿಗ್ರಹಿಸಬಲ್ಲದು. ಅಂದರೆ, ನೆನಪುಗಳು ಇದ್ದರೂ, ಅವುಗಳನ್ನು ತಲುಪಬಲ್ಲ ವ್ಯವಸ್ಥೆ ಇದ್ದರೂ, ಆ ಪ್ರಕ್ರಿಯೆ ಸಾಕಾರವಾಗದಂತೆ ಮತ್ತೊಂದು ಭಾಗದಿಂದ ಒತ್ತಡ ಬಂದರೆ, ಒಟ್ಟಾರೆ ಮರೆವಿನ ಸಂದರ್ಭವೇ ಆಗುತ್ತದೆ. ಈ ರೀತಿ ಮೆದುಳಿನ ಒಂದು ಭಾಗ ಮತ್ತೊಂದು ಭಾಗವನ್ನು ನಿಗ್ರಹಿಸುತ್ತಾ, ಪ್ರಯತ್ನಪೂರ್ವಕವಾಗಿ ಮರೆವು ಮೂಡುವಂತೆ ಮಾಡುತ್ತದೆ.

ಇಷ್ಟೊಂದು ವ್ಯವಸ್ಥಿತವಾದ ಮರೆವಿನ ಅಗತ್ಯವಾದರೂ ಏನು? ಲಕ್ಷಾಂತರ ಪ್ರಭೇದಗಳ ಜೀವಿಗಳನ್ನು ನಿರ್ವಹಿಸುವ ಪ್ರಕೃತಿ, ಇದಕ್ಕಾಗಿ ಒಂದು ವಿನ್ಯಾಸವನ್ನು ಅಂತರ್ಗತಗೊಳಿಸಿರುತ್ತದೆ. ಜೀವಿಗಳು ಆ ವಿನ್ಯಾಸದ ಭಾಗ. ಈ ಪ್ರಕ್ರಿಯೆಯಲ್ಲಿ ಆಯಾ ಜೀವಿಯ ಪಾತ್ರನಿರ್ವಹಣೆಗೆ ಪೂರಕವಾದ ನೆನಪುಗಳು ಉಳಿದುಕೊಳ್ಳುತ್ತವೆ; ಪೂರಕವಲ್ಲದ ನೆನಪುಗಳನ್ನು ಜೀವಿಯ ಮೆದುಳು ನಿಗ್ರಹಿಸುತ್ತದೆ ಎಂದು ತಜ್ಞರ ಅಭಿಮತ. ಇದಕ್ಕಾಗಿ, ನೆನಪುಗಳನ್ನು ಉಳಿಸಿಡಲು ಮಾಡುವಷ್ಟೇ ಪ್ರಯತ್ನವನ್ನು ಮರೆವು ಮೂಡಿಸಲೂ ಮಾಡಬೇಕು ಎನ್ನುವುದು ಸೋಜಿಗ. ಕಾಯಿಲೆಯಿಂದ ಬಳಲುವಾಗ ಅನುಭವಿಸಿದ ತೀವ್ರ ನೋವು ಕೆಲದಿನಗಳಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತದೆ. ಕೆಲವರಿಗೆ ಆ ಸಂದರ್ಭದ ಹಲವಾರು ಪ್ರಸಂಗಗಳ ನೆನಪು ಇರುವುದೇ ಇಲ್ಲ. ಇದರ ಹಿಂದೆ ಇರುವ ರಾಸಾಯನಿಕ ಪ್ರಕ್ರಿಯೆಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ.

ಇದನ್ನು ಅರಿಯುವುದರ ಪ್ರಯೋಜನವೇನು? ಮರೆವಿಗೆ ಸಂಬಂಧಿಸಿದ ಅನೇಕ ವ್ಯಾಧಿಗಳಿಗೆ, ಮಾನಸಿಕ ಸ್ಥಿತಿಗಳಿಗೆ ಉತ್ತರ ದೊರೆಯಬಹುದು. ಮೆದುಳಿನ ಒಂದು ಭಾಗದ ಮೇಲೆ ಮತ್ತೊಂದು ಭಾಗದ ನಿಯಂತ್ರಣವನ್ನು ಹತ್ತಿಕ್ಕುವ ಮೂಲಕ, ಮರೆವಿನ ಕಾರಣದಿಂದ ಭಾವನೆಗಳ ಮೇಲೆ ಆಗುವ ಪರಿಣಾಮಗಳನ್ನು ಅರಿಯಬಹುದು. ಮರೆಯುವಿಕೆಯ ಪ್ರಕ್ರಿಯೆ ನಮ್ಮ ಮೆದುಳಿನ ಕಾರ್ಯವನ್ನು, ನಮ್ಮ ಒಟ್ಟಾರೆ ಜೀವನವನ್ನು ಯಾವ ರೀತಿ ಪ್ರಭಾವಿಸುತ್ತದೆ ಎಂಬುದನ್ನು ಬಲ್ಲೆವು. ಇದನ್ನು ಉತ್ತಮಗೊಳಿಸುವ ವಿಧಾನಗಳನ್ನು ಪತ್ತೆ ಮಾಡಬಹುದು.

ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿರುವ ಓರ್ವ ವಿಜ್ಞಾನಿ ಹೇಳುವಂತೆ, ‘ಜೀವವಿಕಾಸ ನೆನಪು ಮತ್ತು ಮರೆವಿನ ನಡುವೆ ಒಂದು ಚಂದದ ಸಮತೋಲನ ಸಾಧಿಸಿದೆ. ಬೇಕಿದ್ದನ್ನು ಬಲವಾಗಿ ಉಳಿಸಿಕೊಂಡು, ಬೇಡದ್ದನ್ನು ನಿರ್ಭಾವುಕವಾಗಿ ಮರೆಯುವುದು ಜೀವನದ ಬಗ್ಗೆ ನಮ್ಮ ಆಶಾಭಾವ, ಗಟ್ಟಿತನ, ಛಲಗಳ ಸಂಕೇತ.’

(ಲೇಖಕ: ವೈದ್ಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.