ಮಳೆ ಅಂದ್ರೆ ಯಾರಿಗ ತಾನೇ ಇಷ್ಟ ಆಗಲ್ಲ, ಜಿಟಿ ಜಿಟಿ ಮಳೆಯಲ್ಲಿ ಕೂದಲು ಬಿಚ್ಚಿ,ಆಗಸದತ್ತ ಮುಖ ಮಾಡಿ, ಗಿರಗಿರನೇ ತಿರುಗಿ, ಒಂದೆರೆಡು ಹನಿಗೆ ಬಾಯ್ತೆರೆದರೆ ಸಿಗುವ ಖುಷಿಗೆ ಪಾರವೇ ಇಲ್ಲ...ಆದರೆ ಮಳೆಯಲ್ಲಿ ನೆನೆದರೆ ಕೂದಲು ಹಾಳಾಗುತ್ತೆ, ಫಂಗಲ್ ಇನ್ನಿತರ ಸೋಂಕುಗಳು ಕಾಡುತ್ತವೆ ಎನ್ನುವುದು ಬಹುತೇಕರ ಚಿಂತೆ.
ಮಳೆ ನೀರಿನಲ್ಲಿ ಆ್ಯಸಿಡಿಕ್ ಹಾಗೂ ದೂಳಿನ ಅಂಶ ಇರುವುದರಿಂದ ಕೂದಲು ಉದರುವಿಕೆ ಹೆಚ್ಚಾಗುತ್ತದೆ. ಹಾಗಾಗಿ ಮಳೆಯಲ್ಲಿ ನೆನೆದು, ಕೂದಲು ಒದ್ದೆಯಾಗಿದ್ದರೆ ಮೆಡಿಕೆಟೆಡ್ ಶಾಂಪೂ, ಕಂಡಿಷನರ್ ಹಾಕಿ ತಲೆಸ್ನಾನ ಮಾಡುವುದು ಉತ್ತಮ. ಅಥವಾ ಕೂಡಲೇ ಕೂದಲನ್ನು ಕಾಟನ್ ಬಟ್ಟೆ ಅಥವಾ ಟವೆಲ್‌ನಿಂದ ಮೃದುವಾಗಿ ಒರೆಸಿ, ಒಣಗಿಸಬೇಕು.
ಶಾಂಪೂ ಬಳಸುವುದರಿಂದ ಕೂದಲು ಉದರುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಹಾಳಾಗಿರೊ ಕೂದಲನ್ನು ತೆಗಿಯುವುದೇ ಶಾಂಪೂ ಕೆಲಸ. ಕೂದಲು ನಿರಂತರವಾಗಿ ಬೆಳೆಯುವ ಪ್ರಕ್ರಿಯೆ. ಶಾಂಪೂ ಪೊಳ್ಳು ಕೂದಲನ್ನು ತೆಗೆದು ಹೊಸ ಕೂದಲು ಬೆಳೆಯಲು ಅನುಕೂಲ ಮಾಡಿಕೊಡುತ್ತದೆ. ಸಲ್ಫೇಟ್ ಮುಕ್ತ, ಪ್ಯಾರಾಬನ್ ಮುಕ್ತ ಮತ್ತು ಎಸ್‍ಎಲ್‍ಎಸ್ ಮುಕ್ತ ಶಾಂಪೂ ಮತ್ತು ಕಂಡಿಷನರ್ ಬಳಸಬೇಕು. ಇದರಿಂದ ಕೂದಲು ತುಂಡಾಗುವುದು ಕಡಿಮೆ ಆಗುತ್ತದೆ. ಮಹಿಳೆಯರು ಮಳೆಗಾಲದಲ್ಲಿ ಕೂದಲು ಬಿಡುವುದರಿಂದ ಉದರುವ, ಹಾಳಾಗುವ ಸಾಧ್ಯತೆ ಜಾಸ್ತಿ. ಹಾಗಾಗಿ ಸಾಧ್ಯವಾದಷ್ಟು ಕಟ್ಟಿರಬೇಕು.
ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಬೇಕು. ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಕೂದಲು ಸುಲಭವಾಗಿ ಉದುರುತ್ತವೆ. ಬೋರ್‌ವೆಲ್ ನೀರಿನಿಂದ ತಲೆಸ್ನಾನ ಮಾಡಬಾರದು, ಸಿಹಿನೀರೆ ತಲೆಸ್ನಾನಕ್ಕೆ ಉತ್ತಮ.
ವಾರಕ್ಕೊಮ್ಮೆ ಎಣ್ಣೆ ಬಳಸಿ: ಹೆಚ್ಚು ಕೊಬ್ಬರಿ ಎಣ್ಣೆ ಬಳಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಎಂಬ ನಂಬಿಕೆ ಮೊದಲಿನಂದಲೂ ಇದೆ. ಆದರೆ ವಾರಕ್ಕೊಮ್ಮೆ ಎಣ್ಣೆ ಹಚ್ಚಿ ಒಂದು ಅಥವಾ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿಂದ ತಲೆಸ್ನಾನ ಮಾಡುವುದರಿಂದ ಕೂದಲು ಬೆಳೆಯಲು ಸಹಾಯವಾಗುತ್ತದೆ ಎನ್ನುತ್ತಾರೆ ಹುಬ್ಬಳ್ಳಿಯ ಚರ್ಮರೋಗ ತಜ್ಞ ಡಾ.ಗಿರೀಶಕುಮಾರ ಎಂ.
ತಲೆಸ್ನಾನ ಆದ ನಂತರ ಟವೆಲ್ ಅಥವಾ ಬಟ್ಟೆ ಸುತ್ತಬಾರದು, ಹೆಚ್ಚು ಜೋರಾಗಿ ತಿಕ್ಕಬಾರದು, ಸಾಧ್ಯವಾದಷ್ಟು ಮೆಲ್ಲಗೆ ಒರೆಸಬೇಕು, ಮತ್ತು ಕೂದಲು ತಕ್ಷಣಕ್ಕೆ ಕಟ್ಟದೇ ಒಣಗಲು ಬಿಡಬೇಕು. ಹೇರ್‌ಡ್ರೈಯರ್ ಬಳಸಬಹುದು ಆದರೆ ಉಷ್ಣಾಂಶ ( ಟೆಂಪರೆಚರ್) ಪ್ರಮಾಣ ಕಡಿಮೆ ಇರಬೇಕು. ಹಸಿಯಿದ್ದಾಗ ಜೋರಾಗಿ ತಿಕ್ಕುವುದರಿಂದಲೇ ಹೆಚ್ಚು ಶೇ 10ರಿಂದ 20ರಷ್ಟು ಕೂದಲು ತುಂಡಾಗುತ್ತವೆ ಎನ್ನುತ್ತಾರೆ ಅವರು.
ಜೆಲ್ ಬಳಕೆ ಬೇಡ: ಹುಡುಗುರು ಸ್ಟೈಲಿಶ್ ಆಗಿ ಕಾಣಲು ಜೆಲ್ ಬಳಸುತ್ತಾರೆ, ಇದರಿಂದ ಬಿಳಿಕೂದಲು ಹೆಚ್ಚಾಗುತ್ತವೆ. ಕೆಲವರು ಜೆಲ್ ಬಳಸಿ, ಮೂರ್ನಾಲ್ಕು ದಿನ ಹಾಗೇ ಬಿಡುತ್ತಾರೆ. ಇದರಿಂದ ಕೂದಲು ಹಾಳಾಗುತ್ತವೆ. ಮಲಗುವ ಮುನ್ನ ಶಾಂಪೂ ಬಳಸಿ ತಲೆಸ್ನಾನ ಮಾಡಬೇಕು. ಇಲ್ಲದಿದ್ದರೆ ಕೂದಲು ಗಂಟಾಗುತ್ತದೆ, ದಿನ ಕಳೆದಂತೆ ಉದರಲು ಆರಂಭವಾಗುತ್ತದೆ. ಇದರಿಂದ ಮುಖದ ಮೇಲೆ ಮೊಡವೆಗಳಾಗುತ್ತದೆ. ಹುಡುಗುರ ಸಹ ವಾರಕ್ಕೊಮ್ಮೆ ಎಣ್ಣೆ ಬಳಸುವುದು ಉತ್ತಮ.
ಕಟ್ಟಿಗೆ ಬಾಚಣಿಕೆ ಬಳಸಿ: ಪ್ಲಾಸ್ಟಿಕ್ ಬಾಚಣಿಕೆ ಬದಲು, ಕಟ್ಟಿಗೆ ಬಾಚಣಿಕೆ ಬಳಸಬೇಕು. ಇದನ್ನು ಸುದೀರ್ಘ ಕಾಲ ಬಳಸಬಹುದು. ವಾರಕ್ಕೊಮ್ಮೆ ತಲೆದಿಂಬಿನ ಕವರ್ ಬದಲಾಯಿಸಬೇಕು ಇಲ್ಲವೇ ತೊಳೆದುಹಾಕಬೇಕು. ಇಲ್ಲದಿದ್ದರೆ ನೆತ್ತಿ ಮೇಲೆ ಜಿಡ್ಡು ಉಂಟಾಗಿ, ಕೂದಲು ಹಾಳಾಗುವ ಸಾಧ್ಯತೆ ಇರುತ್ತದೆ.
ಪೌಷ್ಟಿಕ ಆಹಾರ ಸೇವಿಸಿ: ಈಗಿನ ಮಕ್ಕಳು ಹೆಚ್ಚು ಜಂಕ್ ಫುಡ್ ಸೇವಿಸುವುದರಿಂದ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ. ವಿಟಮಿನ್ ಡಿ, ಹಿಮೊಗ್ಲೋಬಿನ್ ಕೊರತೆಯಿಂದ ಕೂದಲು ಬೆಳವಣಿಗೆ ಕುಂಠಿತವಾಗುತ್ತದೆ. ಸಾಧ್ಯವಾದಷ್ಟು ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳು, ಒಣಹಣ್ಣು, ಹಣ್ಣು, ಶೇಂಗಾ, ಬೆಲ್ಲ ಸೇವಿಸುವುದರಿಂದ ಕೂದಲು ಉತ್ತಮವಾಗಿ ಬೆಳೆಯುತ್ತದೆ. ಮಾಂಸಹಾರಿಗಳಾಗಿದ್ದರೆ ದಿನಕ್ಕೆರೆಡು ಬಾರಿ ಮೊಟ್ಟೆಯ ಬಿಳಿಭಾಗ ಸೇವಿಸಬೇಕು ಎನ್ನುತ್ತಾರೆ ಹುಬ್ಬಳ್ಳಿಯ ಚರ್ಮರೋಗ ತಜ್ಞ ಡಾ.ಗಿರೀಶಕುಮಾರ್ ಎಂ.
ಡಬ್ಬಿಯಲ್ಲಿರಲಿ ಹಣ್ಣು, ತರಕಾರಿ: ಒತ್ತಡ ಮತ್ತು ಪೌಷ್ಟಿಕಾಂಶದ ಕೊರತೆ ಕೂದಲು ಉದರಲು ಮುಖ್ಯ ಕಾರಣ. ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರು ಡಬ್ಬಿಯಲ್ಲಿ ಹಣ್ಣು, ನೆನೆಸಿಟ್ಟ ಕಾಳು, ತರಕಾರಿ, ಡ್ರೈ ಫ್ರೂಟ್ ಇಟ್ಟುಕೊಳ್ಳುವುದು ಉತ್ತಮ. ಕೆಲಸದ ಮಧ್ಯೆ ಆಗಾಗ ಬಿಡುವು ಮಾಡಿಕೊಂಡು ಇವುಗಳನ್ನು ಸೇವಿಸಬೇಕು.
ಸಂಜೆ ಸ್ನ್ಯಾಕ್ಸ್ ತಿನ್ನುವ ಬದಲು ಇವುಗಳನ್ನು ಸೇವಿಸಬಹುದು. ದಾಳಿಂಬೆ, ದ್ರಾಕ್ಷಿ, ಅವಕಾಡೊ (ಬಟರ್ ಫ್ರೂಟ್), ಕಿವಿ, ಪಪ್ಪಾಯ ಹೆಚ್ಚು ಉಪಯುಕ್ತ. ಮೂರು ದಿನಕ್ಕೊಮ್ಮೆ ತಲೆಸ್ನಾನ ಮಾಡವುದು ಉತ್ತಮ. ವರ್ಕೌಟ್ ಮಾಡುವವರು, ಹೆಚ್ಚು ಬೆವರುವವರು ಎರಡು ದಿನಕ್ಕೊಮ್ಮೆ ತಲೆಸ್ನಾನ ಮಾಡಬಹುದು ಎನ್ನುತ್ತಾರೆ ಅವರು.
ರೀಲ್ಸ್ ಫಾಲೊ ಮಾಡಬೇಡಿ: ಇತ್ತೀಚನ ದಿನಗಳಲ್ಲಿ ರೀಲ್ಸ್ ನೋಡಿ ಅನೇಕರು ಮನೆಯಲ್ಲೆ ಎಣ್ಣೆ ತಯಾರಿಸುವ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಆದರೆ ಇದಕ್ಕೆ ನಿರ್ದಿಷ್ಟ ಮಾರ್ಗದರ್ಶನ ಇರದೇ ಇರುವುದರಿಂದ ಕೆಲವರಿಗೆ ಅಲರ್ಜಿ ಉಂಟಾಗಿ ಕೂದಲು ಕಳೆದುಕೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲಿನಂದಲೂ ಬಳಸಿ ರೂಢಿಯಿದ್ದರೆ ಸಮಸ್ಯೆಯಿಲ್ಲ. ಆದರೆ ರೀಲ್ಸ್ ನೋಡಿ ಒಮ್ಮೆ ಬಳಸಿದರೆ, ರಿಯಾಕ್ಷನ್ ಆಗಿ ಕೂದಲು ಹಾಳಾಗಬಹುದು. ಹಾಗಾಗಿ ಎಚ್ಚರಿಕೆ ಅಗತ್ಯ ಎನ್ನುತ್ತಾರೆ ಡಾ.ಗಿರೀಶಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.