1. ನನ್ನ ತಂಗಿಗೆ 35 ವರ್ಷ. ಇದುವರೆಗೂ ಆಕೆ ಋತುಮತಿ ಆಗಿಲ್ಲ. ಚಿಕಿತ್ಸೆಗೆಂದು ಹೋಗಿದ್ದಾಗ, ಅವಳಿಗೆ ಗರ್ಭಕೋಶ ಬೆಳವಣಿಗೆ ಆಗಿಲ್ಲ, ಇನ್ನು ಮುಂದೆ ಋತುಮತಿ ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದರು. ಅವಳು ಋತುಮತಿಯಾಗುತ್ತಾಳಾ ಇಲ್ಲವಾ ಎಂದು ತಿಳಿಸಿ.
ಪೂಜಾ, ಊರು ತಿಳಿಸಿಲ್ಲ
ನಿಮ್ಮ ತಂಗಿಗೆ 35 ವರ್ಷವಾದರೂ ಋತುಮತಿಯಾಗಿಲ್ಲವೆಂದರೆ ಅವರಿಗೆ ಗರ್ಭಕೋಶ ಬೆಳವಣಿಗೆ ಆಗಿಲ್ಲ ಎನಿಸುತ್ತದೆ. ಕೆಲವೊಂದು ಆಜನ್ಮ ನ್ಯೂನತೆಯಲ್ಲಿ ಗರ್ಭಕೋಶ ಹಾಗೂ ಯೋನಿಮಾರ್ಗವೂ ಇರದೇ ಕೇವಲ ಅಂಡಾಶಯವಿರುತ್ತದೆ. ಒಂದು ಅಂದಾಜಿನ ಪ್ರಕಾರ 4 ರಿಂದ 5 ಸಾವಿರ ಮಹಿಳೆಯರಲ್ಲಿ ಒಬ್ಬರಿಗೆ ಇಂಥ ಸಮಸ್ಯೆ ಕಂಡುಬರಬಹುದು. ಹೆಚ್ಚಿನ ಸಮಯದಲ್ಲಿ ಪತ್ತೆಯಾಗದೆಯೂ ಉಳಿಯಬಹುದು. ಯಾವುದೋ ವಿಷಯಕ್ಕಾಗಿ ವೈದ್ಯರಲ್ಲಿ ಪರೀಕ್ಷೆಗೆ ತೆರಳಿದಾಗ ಇಂಥ ವಿಚಾರಗಳು ಪತ್ತೆಯಾಗಬಹುದು. ಇಂತಹವರಲ್ಲಿ ಹೆಣ್ತನದ ಲೈಂಗಿಕ ಚಿಹ್ನೆಗಳಾದ ಸ್ತನಗಳ ಬೆಳವಣಿಗೆ ಇದ್ದು, ಕಂಕುಳಲ್ಲಿ ಹಾಗೂ ಜನನೇಂದ್ರಿಯ ಭಾಗದಲ್ಲಿ ಕೂದಲುಗಳಿರುತ್ತವೆ.
ಹೀಗೆ ಗರ್ಭಕೋಶವೇ ಬೆಳೆಯದಿರುವ ಸ್ಥಿತಿಯನ್ನು ‘ಮುಲೇರಿಯನ್ ಏಜೆನಿಸಿಸ್’ ಎನ್ನುತ್ತಾರೆ. ಇವರಲ್ಲಿ ಮಾಸಿಕ ಋತುಚಕ್ರವಾಗುವುದಿಲ್ಲ. ನಿಮ್ಮ ತಂಗಿಗೂ ಇಂತಹ ಸ್ಥಿತಿ ಇದ್ದರೆ ಅವರಿಗೆ ಮಾಸಿಕ ಋತುಚಕ್ರ ಮುಂದೆಯೂ ಆಗುವುದಿಲ್ಲ. ಇಂತಹವರು ಬಯಸಿದರೆ ಮದುವೆಯಾಗಬಹುದು. ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಇಂಥವರಲ್ಲಿ ಕೃತಕ ಯೋನಿಯನ್ನು ರಚಿಸುತ್ತಾರೆ. ಮುಂದೆ ಸೂಕ್ತ ಲೈಂಗಿಕ ಜೀವನ ನಡೆಸಲು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಆದರೆ ಅವರಿಗೆ ಮಕ್ಕಳಾಗುವುದಿಲ್ಲ. ಇಂತಹ ಮಹಿಳೆಯರನ್ನು ಮದುವೆ ಮಾಡುವಾಗ ಎಲ್ಲಾ ವಿಷಯಗಳನ್ನು ಪರಸ್ಪರ ಚರ್ಚಿಸಿಯೇ ಮಾಡಬೇಕು. ಜೊತೆಗೆ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳಬೇಕು. ಇವರ ಅಂಡಾಶಯದಿಂದ ಸರಿಯಾಗಿ ಅಂಡಾಣು ಬಿಡುಗಡೆಯಾಗದಿದ್ದಾಗ ಇಂಥವರು ಮಗು ಬೇಕೆಂದು ಬಯಸಿದಲ್ಲಿ ಇವರ ಅಂಡಾಣು ಹಾಗೂ ಪತಿಯ ವೀರ್ಯಾಣುಗಳನ್ನು ಉಪಯೋಗಿಸಿ ಬಾಡಿಗೆ ತಾಯ್ತನದಿಂದ ಮಗುವನ್ನು ಪಡೆಯಬಹುದು. ನೀವೂ ಕೂಡ ಅವರಿಗೆ ಮದುವೆ ಮಾಡುವುದಿದ್ದರೆ ಇವೆಲ್ಲಾ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಬೇಕು.
2. ನನಗೆ 46 ವರ್ಷ. ಮುಟ್ಟಿನ ಸಮಸ್ಯೆ ಇದೆ. ನಾನು 19 ಜನವರಿ 2022ರಂದು ಮುಟ್ಟಾದೆ. ಮುಟ್ಟಾಗಿ ಮೂರು ದಿನದ ನಂತರರಕ್ತಸ್ರಾವ ಆಯಿತು. ಮತ್ತೆ 3 ಫೆಬ್ರವರಿ 2022ಕ್ಕೆ ಮುಟ್ಟಾದೆ. ಆಗಿನಿಂದ ಐದು ದಿನಗಳಾದರೂ ಸ್ವಲ್ಪ ರಕ್ತಸ್ರಾವ ಕಾಣಿಸಿಕೊಳ್ಳುತ್ತಿದೆ. ಇದು ಹಾಗೆ ಮುಂದುವರಿದಿದೆ. ನನಗೆ ಪ್ಯಾಡ್ ಅಲರ್ಜಿ ಇದೆ. ಇದಕ್ಕೆ ಪರಿಹಾರ ತಿಳಿಸಿ.
ಸುಮಾ, ಊರು ತಿಳಿಸಿಲ್ಲ
ಸುಮಾರವರೇ ನಿಮ್ಮ ವಯಸ್ಸು ಋತುಬಂಧವಾಗುವ ಆಸುಪಾಸಿನಲ್ಲಿದೆ. ಈ ಮುಟ್ಟು ನಿಲ್ಲುವ ಸಂದರ್ಭಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಬೇಗ ಬೇಗನೆ ಋತುಚಕ್ರ ಕಾಣಿಸಿಕೊಂಡು ನಂತರ ಕೆಲವರ್ಷಗಳಲ್ಲಿ ನಿಂತೇಹೋಗುತ್ತದೆ. ಆದರೆ ಅತಿ ರಕ್ತಸ್ರಾವವಾದರೆ ಮಾತ್ರ ನೀವು ನಿರ್ಲಕ್ಷಿಸದೇ ತಜ್ಞವೈದ್ಯರ ಸಹಾಯ ಪಡೆದುಕೊಳ್ಳಿ.
ಕೆಲವೊಮ್ಮೆ ನಿಮಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಲು ತಿಳಿಸುತ್ತಾರೆ. ಎಲ್ಲಾ ವರದಿಗಳು ನಾರ್ಮಲ್ ಅಂತ ಬಂದರೆ ಏನು ಭಯ ಬೇಡ. ನಿಮಗೆ ಪ್ಯಾಡ್ ಅಲರ್ಜಿ ಇದ್ದರೆ ನೀವು ಮರುಬಳಕೆ ಮಾಡಬಹುದಾದಂತಹ ಕಾಟನ್ ಪ್ಯಾಡ್ ಅಥವಾ ಸ್ವಚ್ಛವಾದ ಹತ್ತಿ ಬಟ್ಟೆಯನ್ನು ಮುಟ್ಟಿನ ಸಮಯದಲ್ಲಿ ಬಳಸಿ. ಅದನ್ನು ತಣ್ಣೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಉಪಯೋಗಿಸುವುದು ಅತ್ಯುತ್ತಮ ವಿಧಾನ. ಬಳಸಿ ಬಿಸಾಡುವ ಪ್ಯಾಡ್‌ಗಳಿಂದ ನಿಮಗೆ ಅಲರ್ಜಿ ಅಷ್ಟೇ ಅಲ್ಲ, ಪರಿಸರ ಮಾಲಿನ್ಯ ಕೂಡ. ಆದ್ದರಿಂದ ನಿಮಗೆ ತಾಳ್ಮೆ ಇದ್ದರೆ, ತೊಳೆಯುವ ಸೌಲಭ್ಯವಿದ್ದರೆ, ಹತ್ತಿಬಟ್ಟೆಯನ್ನು ಬಳಸುವುದು ಅಥವಾ ಮರುಬಳಕೆಯ ಕಾಟನ್ ಪ್ಯಾಡ್ ಅತ್ಯುತ್ತಮ ವಿಧಾನ.
3. ನನಗೆ 27 ವರ್ಷ. 3 ವರ್ಷದ ಮಗು ಇದೆ. ನಾನು 45 ದಿನಗಳಿಗೆ ಒಂದು ಸರಿ ಮುಟ್ಟು ಆಗ್ತಿದ್ದೇನೆ. ಮುಟ್ಟಾದಾಗ ಹೆಚ್ಚು ರಕ್ತಸ್ರಾವವಾಗುವುದಿಲ್ಲ(ಹೆಚ್ಚು ಮುಟ್ಟು ಹೋಗೋದಿಲ್ಲ). ಮಗು ಆದ ಮೇಲೆ ಈ ರೀತಿ ಆಗ್ತಿದೆ. ಇದರಿಂದ ಏನಾದರೂ ತೊಂದರೆ ಇದೆಯಾ?
ಮಮತ, ಊರು ತಿಳಿಸಿಲ್ಲ.
ಮಮತಾರವರೇ ಮಗುವಾದ ಮೇಲೆ ನಿಮ್ಮ ತೂಕ ಹೆಚ್ಚಾಗಿದೆಯೋ ಇಲ್ಲವೋ ಎಂದೇನು ತಿಳಿಸಿಲ್ಲ. ಹೆಚ್ಚಿನ ಮಹಿಳೆಯರು ಒಂದು ಮಗುವಾದ ಮೇಲೆ ಬೊಜ್ಜು ಬೆಳೆಸಿಕೊಂಡು ಬಿಡುತ್ತಾರೆ. ಅದರಿಂದಲೂ ಕೂಡ ಹಾರ್ಮೋನುಗಳ ವ್ಯತ್ಯಾಸದಿಂದ ಪಿ.ಸಿ.ಓ.ಡಿ ಸಮಸ್ಯೆಯಾಗಿ ಕಡಿಮೆ ಮುಟ್ಟು ಹೋಗುತ್ತಿರಬಹುದು. ಆದ್ದರಿಂದ ನೀವು ತೂಕ ಹೆಚ್ಚಾಗಿದ್ದರೆ ಸಮತೂಕ ಹೊಂದಲು ಪ್ರಯತ್ನಿಸಿ. ಜೀವನಶೈಲಿ ಬದಲಾಯಿಸಿಕೊಳ್ಳಿ (ಈ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ತಿಳಿಸಿದ್ದೇವೆ). ಅಷ್ಟಕ್ಕೂ ಸರಿಯಾಗದಿದ್ದರೆ ತಜ್ಞವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.
4. ನನಗೆ 37 ವರ್ಷ. 10 ವರ್ಷದ ಮಗಳಿದ್ದಾಳೆ. ನಾವು ಎರಡನೇ ಮಗುವಿಗೆ 8 ವರ್ಷದಿಂದ ಪ್ರಯತ್ನಿಸುತ್ತಿದ್ದೇವೆ. ನನಗೆ ನಿಯಮಿತವಾಗಿ ಮುಟ್ಟು ಬರುತ್ತದೆ. ನನ್ನ ತೂಕ 65 ಕೆಜಿ ಇದೆ. ಎಚ್.ಎಸ್.ಜಿ, ಲ್ಯಾಪರೋಸ್ಕೋಪಿ, ಎಲ್ಲಾ ವರದಿಗಳು ನಾರ್ಮಲ್ ಇವೆ. ಡಾಕ್ಟರ್ ಕೂಡ ಎರಡನೇ ಮಗುವಾಗದಿರುವುದಕ್ಕೆ ಕಾರಣಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ನನಗೆ 30 ವರ್ಷವಾದಾಗಿನಿಂದ ಎರಡನೇ ಮಗುವಿಗೆ ಪ್ರಯತ್ನಿಸುತ್ತಿದ್ದೇವೆ. ಆ ಸಮಯದಲ್ಲಿ ನಾನು 50 ಕೆ.ಜಿ ಇದ್ದೆ. ನನ್ನ ಈ ಸಮಸ್ಯೆಗೆ ಪರಿಹಾರ ತಿಳಿಸಿ
ಕಲ್ಪ, ಊರು ತಿಳಿಸಿಲ್ಲ.
ಕಲ್ಪಾರವರೇ ನಿಮ್ಮ ಎಲ್ಲಾ ವರದಿಗಳು ನಾರ್ಮಲ್ ಇದೆ. ನೀವು ಒಮ್ಮೆ ನಿಮ್ಮ ಪತಿಯ ವೀರ್ಯ ತಪಾಸಣೆ ಮಾಡಿಸಲು ತಿಳಿಸಿ. ಅದು ಕೂಡ ಸರಿಯಾಗಿದ್ದರೆ ಆಗ ನಿಮಗಿರುವುದು ಕಾರಣಕೊಡಲಾಗದ ಬಂಜೆತನ ಎನಿಸಿಕೊಳ್ಳುತ್ತದೆ. ಶೇ 25 ರಷ್ಟು ಬಂಜೆತನ ಈ ಗುಂಪಿಗೆ ಬರುತ್ತವೆ. ಎಲ್ಲಾ ಸಮಸ್ಯೆಗಳಿಗೆ ವೈದ್ಯಕೀಯ ವಿಜ್ಞಾನದಲ್ಲಿ 100ಕ್ಕೆ ನೂರು ಪರಿಹಾರ ಸಿಗುತ್ತದೆ ಎಂದು ಹೇಳಲು ಇನ್ನೂ ಸಾಧ್ಯವಾಗಿಲ್ಲ. ಪ್ರನಾಳಶಿಶು ಮಾಡಿದರೂ ಕೂಡ 100ಕ್ಕೆ ನೂರು ಫಲಪ್ರದವಾಗುವುದಿಲ್ಲ. ಹೆಚ್ಚೆಂದರೆ ಶೇ 50ರಷ್ಟು ಮಾತ್ರ ಫಲಪ್ರದವಾಗಬಹುದು. ಹಾಗಾಗಿ ನೀವು ನಿಮ್ಮ ಪ್ರಯತ್ನವನ್ನು ಮುಂದುವರೆಸಿ. ಹಾಗೆಯೇ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ತಜ್ಞವೈದ್ಯರ ಮೇಲ್ವಿಚಾರಣೆ ಹಾಗೂ ಸಲಹೆ ಪಡೆಯುತ್ತಾ ಮುಂದುವರೆಯಿರಿ. ನಿಮಗೆ ಬೇಗನೆ ಇನ್ನೊಂದು ಮಗು ಆಗುವುದು ಎಂಬ ಭರವಸೆ ಇದೆ.
–ಡಾ. ವೀಣಾ ಎಸ್. ಭಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.