ADVERTISEMENT

ಆರೋಗ್ಯ: ಪ್ರಾಣಿಗಳಿರಲವ್ವ ಮನೆಯಲ್ಲಿ!

ಡಾ.ವಿನಯ ಶ್ರೀನಿವಾಸ್
Published 25 ಅಕ್ಟೋಬರ್ 2021, 19:30 IST
Last Updated 25 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅನಿವಾರ್ಯ ಕಾರಣಗಳಿಗಾಗಿ ಗೆಳತಿ ದೂರದ ಊರಿನಲ್ಲಿ ಒಬ್ಬಳೇ ಇರಬೇಕಾದ ಪರಿಸ್ಥಿತಿ ಬಂದಿತ್ತು. ಕಚೇರಿಯಲ್ಲಿ ಕೆಲಸದ ಒತ್ತಡ ಆಕೆಯನ್ನು ಹೈರಾಣಾಗಿಸುತ್ತಿದ್ದರೆ, ಮನೆಯಲ್ಲಿ ಒಂಟಿತನ ಬಹುವಾಗಿ ಬಾಧಿಸುತ್ತಿತ್ತು. ಆಗಲೇ ಅವಳು ಮನೆಯಲ್ಲಿ ಒಂದು ನಾಯಿಯನ್ನು ಸಾಕುವ ಆಲೋಚನೆ ಮಾಡಿದ್ದು. ಮೊದಲ ಒಂದೆರಡು ವಾರಗಳು ಆ ಮರಿಯ ಆರೈಕೆ ಮತ್ತು ನಿರ್ವಹಣೆ ತುಸು ಕಿರಿಕಿರಿ ಎನಿಸಿದರೂ ಬರು ಬರುತ್ತಾ ಅವಳು ಆ ದಿನಚರಿಗೆ ಹೊಂದಿಕೊಂಡಳು. ಅವಳು ಕಚೇರಿಯಿಂದ ಹಿಂದಿರುಗಿ ಬರುವುದನ್ನೇ ಕಾಯುವ ಆ ನಾಯಿ ಮರಿಯನ್ನು ಕಂಡರೆ ಅವಳಿಗೆ ಈಗ ಜೀವ! ಅದರ ಆರೈಕೆಯಲ್ಲಿ ಅವಳ ಒಂಟಿತನ ಈಗ ಮಾಯ!

ಹೌದು, ಮುದ್ದಿಗಾಗಿ ಸಾಕುವ ನಾಯಿ, ಬೆಕ್ಕು, ಪಕ್ಷಿಗಳು, ಮೊಲ ಮೊದಲಾದ ಪ್ರಾಣಿಗಳು ನಮ್ಮ ಒಂಟಿತನವನ್ನು ದೂರ ಮಾಡುತ್ತವೆ. ಅಷ್ಟೇ ಅಲ್ಲ, ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲೂ ನೆರವಾಗುತ್ತವೆ.

ಮನೆಯ ಹಿರಿಯರಿಗೆ ಮತ್ತು ಮಕ್ಕಳಿಗೆ ಈ ಪ್ರಾಣಿಗಳು ಒಳ್ಳೆಯ ಒಡನಾಡಿಗಳಾದಂತಾಗುತ್ತವೆ. ಆ ಪ್ರಾಣಿಗಳ ಆರೈಕೆಯಲ್ಲಿ ತನ್ಮಯರಾಗುವ ಹಿರಿಯರಿಗೆ ಸಮಯ ಕಳೆಯಲೂ ಇದು ಸಹಕಾರಿ. ನಿವೃತ್ತಿಯ ಬಳಿಕ ಹಿರಿಯರು ಯಾವುದೇ ನಿರ್ದಿಷ್ಟ ಕೆಲಸವಿಲ್ಲದೆ ಮಂಕಾಗುವುದು ಸಹಜ. ಅಂತಹ ಸಂದರ್ಭಗಳಲ್ಲಿ ಈ ಪ್ರಾಣಿಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಅವರ ದಿನಚರಿಯಲ್ಲಿ ಸೇರ್ಪಟ್ಟು, ಅವರಿಗೂ ಬದುಕಿನಲ್ಲಿ ಏನೋ ಜವಾಬ್ದಾರಿಯಿದ್ದಂತೆ ಭಾಸವಾಗುತ್ತದೆ. ಮಕ್ಕಳಿಗೆ ಅದರಲ್ಲಿಯೂ ಒಂದೇ ಮಗು ಇರುವಂತಹ ಮನೆಗಳಲ್ಲಿ ಈ ಮುದ್ದು ಪ್ರಾಣಿಗಳು ಮಗುವಿನ ಬೆಳವಣಿಗೆಯಲ್ಲಿ ಧನಾತ್ಮಕವಾಗಿ ಸಹಕರಿಸಬಲ್ಲವು. ಆ ಪ್ರಾಣಿಗಳೊಂದಿಗೆ ಒಡನಾಡುವ ಮತ್ತು ಅವುಗಳ ಆರೈಕೆ ಮಾಡುವ ಮಕ್ಕಳಲ್ಲಿ ಇನ್ನೊಬ್ಬರಿಗಾಗಿ ಕಾಳಜಿ ಮಾಡುವ, ಪ್ರೀತಿ-ಅನುಭೂತಿಗಳನ್ನು ತೋರುವ, ಸಂಬಂಧಗಳನ್ನು ನಿರ್ವಹಿಸುವ ಗುಣಗಳು ಸ್ವಾಭಾವಿಕವಾಗಿಯೇ ಬೆಳೆಯುತ್ತವೆ. ಅಷ್ಟೇ ಅಲ್ಲ, ಸಣ್ಣ ವಯಸ್ಸಿನಿಂದಲೇ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದನ್ನು ಮಕ್ಕಳು ರೂಢಿ ಮಾಡಿಕೊಳ್ಳುತ್ತಾರೆ.

ADVERTISEMENT

ಎಷ್ಟೋ ಬಾರಿ ಈ ಮುದ್ದು ಪ್ರಾಣಿಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುವುದೇ ವ್ಯಕ್ತಿಯ ಆತಂಕ ಹಾಗೂ ಒತ್ತಡವನ್ನು ಕಡಿಮೆ ಮಾಡಬಲ್ಲದು. ಅಕ್ವೇರಿಯಂನಲ್ಲಿರುವ ಮೀನುಗಳು ಅತ್ತಿಂದಿತ್ತ ಚಲಿಸುವುದನ್ನು ಒಂದಿಷ್ಟು ಸಮಯ ನೋಡುತ್ತಾ ಕುಳಿತರೆ ಎಂತಹ ಕುಗ್ಗಿದ ಮನಸ್ಸೂ ಪ್ರಫುಲ್ಲವಾಗಬಲ್ಲದು. ಮನೆಯಲ್ಲಿ ಸಾಕಿದ ನಾಯಿಯನ್ನು ದಿನದಲ್ಲಿ ಎರಡರಿಂದ ಮೂರು ಬಾರಿ ಹೊರಗೆ ಕರೆದುಕೊಂಡು ಹೋಗುವ ನೆಪದಲ್ಲಿ ನೀವೂ ಒಂದಿಷ್ಟು ನಡೆದಿರುತ್ತೀರಿ! ಅಷ್ಟೇ ಅಲ್ಲ, ಅದರೊಂದಿಗೆ ಆಟವಾಡುವಾಗ ನಿಮ್ಮ ದೇಹಕ್ಕೂ ಒಂದಿಷ್ಟು ವ್ಯಾಯಾಮವಾಗಿರುತ್ತದೆ. ಇದು ನಿಮ್ಮನ್ನು ಕ್ರಿಯಾಶೀಲರನ್ನಾಗಿಡಬಲ್ಲದು. ಅವುಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಾ ನೀವು ಸದಾ ಚಟುವಟಿಕೆಗಳಿಂದ ಕೂಡಿರುತ್ತೀರಿ. ಇದು ಪರೋಕ್ಷವಾಗಿ ನಿಮ್ಮ ಹೃದಯ ಮತ್ತು ಶ್ವಾಸಕೋಶಗಳ ಆರೋಗ್ಯವನ್ನೂ ಕಾಪಾಡಬಲ್ಲದು. ಅವು ನಿಮ್ಮ ಬರುವಿಕೆಗಾಗಿ ಕಾಯುವಾಗ, ನಿಮ್ಮೊಡನೆಯೇ ಟಿವಿ ವೀಕ್ಷಣೆಗೆ ಕೂರುವಾಗ ಅವುಗಳೊಂದಿಗೆ ಒಂದು ಬಗೆಯ ಭಾವನಾತ್ಮಕ ಬೆಸುಗೆ ಬೆಳೆಯುತ್ತದೆ. ಇದು ನಿಮ್ಮಲ್ಲಿ ಸುರಕ್ಷಾ ಮನೋಭಾವವನ್ನು ಹಾಗೂ ಸಂತಸವನ್ನು ತರಬಲ್ಲದು.

ಈ ಪ್ರಾಣಿಗಳೊಂದಿಗಿನ ಒಡನಾಟವು ವ್ಯಕ್ತಿಯ ಶರೀರದಲ್ಲಿ ಡೊಪೊನಿನ್ ಮತ್ತು ಸೆರೊಟೊನಿನ್ ಎಂಬ ನರವಾಹಕಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಈ ನರವಾಹಕಗಳು ನಿಮ್ಮ ಉದ್ವೇಗವನ್ನು ಹತ್ತಿಕ್ಕಿ ಮನಸ್ಸನ್ನು ಪ್ರಶಾಂತವಾಗಿರಿಸಬಲ್ಲದು ಕೂಡ. ಅಷ್ಟೇ ಅಲ್ಲ, ಮನಸ್ಸು ಆತಂಕ ಮತ್ತು ಖಿನ್ನತೆಯಿಂದಲೂ ಹೊರಬರಬಹುದು.

ಮುದ್ದಿಗಾಗಿ ಪ್ರಾಣಿಗಳನ್ನು ಸಾಕುವವರು ಕೆಲವು ಪ್ರಾಣಿಜನ್ಯ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಆದರೆ ಅವುಗಳ ನಿರ್ವಹಣೆಯಲ್ಲಿ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಅವುಗಳ ಆರೋಗ್ಯದ ಜೊತೆಗೆ ನಿಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ನೆನಪಿಡಿ
* ಪ್ರಾಣಿಗಳನ್ನು ಅಥವಾ ಅವುಗಳ ವಸ್ತುಗಳನ್ನು ಮುಟ್ಟಿದ ಬಳಿಕ ಸಾಬೂನಿನಿಂದ ಚೆನ್ನಾಗಿ ಕೈತೊಳೆದುಕೊಳ್ಳಿ.
* ನಾಯಿ ಅಥವಾ ಬೆಕ್ಕುಗಳನ್ನು ಸಾಕಿದ್ದರೆ ಅವುಗಳಿಗೆ ಕನಿಷ್ಠ ವಾರಕ್ಕೊಮ್ಮೆ ಸ್ನಾನ ಮಾಡಿಸಿ.
*ಅವು ಸಣ್ಣ ಮರಿಗಳಾಗಿದ್ದಾಗಲೇ ನಿಮ್ಮ ಆಜ್ಞೆಯನ್ನು ಪಾಲಿಸಲು ತರಬೇತಿಯನ್ನು ಕೊಡಿ. ಆಗ ಅವುಗಳೊಂದಿಗೆ ನೀವು ಇನ್ನೂ ಹೆಚ್ಚು ಖುಷಿಯಾಗಿರಬಹುದು.
* ನಾಯಿ ಮತ್ತು ಬೆಕ್ಕುಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೇ ಜಂತು ಹುಳುವಿಗಾಗಿ ಔಷಧವನ್ನು ಕೊಡಿಸಿ.
*ಪಶುವೈದ್ಯರ ಸಲಹೆಯ ಮೇರೆಗೆ ವರ್ಷಕ್ಕೊಮ್ಮೆ ರೇಬಿಸ್ ಕಾಯಿಲೆಯ ಮತ್ತು ಇತರ ಆರು ಕಾಯಿಲೆಗಳ ವಿರುದ್ಧದ ಲಸಿಕೆಯನ್ನು ಕೊಡಿಸಿ. (ಎಲ್ಲ ಕಾಯಿಲೆಗಳಿಗೂ ಒಂದೇ ಲಸಿಕೆ ಲಭ್ಯವಿದೆ.)
*ದಿನವೂ ಅವುಗಳಿಗಾಗಿಯೇ ಇರುವ ಬ್ರಷ್‍ನಿಂದ ಕೂದಲನ್ನು ಬಾಚಿ. ಇದರಿಂದ ಅವುಗಳ ಚರ್ಮ ಆರೋಗ್ಯವಾಗಿರುತ್ತದೆ.
*ನೀವು ಸಾಕಿದ ಬೆಕ್ಕು ಅಥವಾ ನಾಯಿ ಅಕಸ್ಮಾತ್ ನಿಮ್ಮನ್ನು ಕಚ್ಚಿದರೆ ಕೂಡಲೇ ವೈದ್ಯರ ಸಲಹೆಯನ್ನು ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.