ಪ್ರತಿ ವರ್ಷ ಅಕ್ಟೋಬರ್ 10ನ್ನು ‘ವಿಶ್ವ ಮಾನಸಿಕ ಆರೋಗ್ಯ ದಿನ’ವಾಗಿ ಆಚರಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ತಿಳಿಸಿದೆ
1992ರಲ್ಲಿ ಮೊದಲ ಬಾರಿಗೆ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಯಿತು.ವಿಶ್ವ ಮಾನಸಿಕ ಆರೋಗ್ಯ ದಿನ ಎಂದು ಆಚರಿಸಲು ಆರಂಭವಾಗಿ 29 ವರ್ಷಗಳೇ ಕಳೆದರೂ ಮಾನಸಿಕ ಆರೋಗ್ಯದ ಕುರಿತಾದ ಜಾಗೃತಿ ಜನರಲ್ಲಿ ಮೂಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ವಿಶ್ವದಲ್ಲಿ ಸುಮಾರು 100 ಕೋಟಿಗೂ ಹೆಚ್ಚು ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಖಿನ್ನತೆಯ ಪರಿಣಾಮಜನರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದಕ್ಕಾಗಿ ಸರ್ಕಾರಗಳುನಿತ್ಯದ ಪ್ರಾಥಮಿಕ ಆರೋಗ್ಯ ಸೇವೆಗಳ ಜೊತೆಗೆ ಮಾನಸಿಕ ಆರೋಗ್ಯ ಸೇವೆಗಳನ್ನು ನೀಡಬೇಕು. ಮಾನಸಿಕ ಆರೋಗ್ಯ ಇಲ್ಲದಿದ್ದಲ್ಲಿ ಸಾಮಾನ್ಯ ಆರೋಗ್ಯವೂ ಇಲ್ಲ ಎಂಬುದು ಎಚ್ಚರಿಕೆ ಗಂಟೆಯಾಗಲಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಜನರು ಆಧುನಿಕ ಜೀವನ ಶೈಲಿಯಲ್ಲಿ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಕಡೆಗಣಿಸುತ್ತಿದ್ದಾರೆ.ವ್ಯಕ್ತಿಯ ಮಿದುಳಿನಲ್ಲಿ ಆಗುವಂಥ ರಾಸಾಯನಿಕ ರಸದೂತಗಳ ಏರು ಪೇರಿನಿಂದ ಮಾನಸಿಕ ಕಾಯಿಲೆ ಕಂಡು ಬರುತ್ತದೆ. ಕೆಲವೊಮ್ಮೆ ಪರಿಸ್ಥಿತಿಯ ಒತ್ತಡ, ಆನುವಂಶೀಯತೆ, ಸುತ್ತಮುತ್ತಲ ವಾತಾವರಣ, ಕೆಲಸದ ಒತ್ತಡ, ಕೆಲಸದ ಸ್ಥಳದಲ್ಲಿನ ಕಿರಿಕಿರಿ, ಕೌಟುಂಬಿಕ ಸಮಸ್ಯೆಗಳಿಂದಬದುಕಿನಲ್ಲಿ ನೆಮ್ಮದಿ, ಶಾಂತಿ ಕಳೆದುಕೊಂಡು ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ಈ ವ್ಯಾಕುಲತೆಯಿಂದ ಜನರನ್ನು ಹೊರತರಬೇಕಿರುವುದು ಸರ್ಕಾರಗಳು, ಆರೋಗ್ಯ ಸಂಸ್ಥೆಗಳ ಕರ್ತವ್ಯವಾಗಿದೆ. ಮಾನಸಿಕ ಆರೋಗ್ಯ ಸೇವೆ, ಆಪ್ತಸಮಾಲೋಚನೆ ಹಾಗೂ ಧೈರ್ಯ ತುಂಬುವ ಕೆಲಸಗಳು ಆಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.