ADVERTISEMENT

ಕ್ಷೇಮ–ಕುಶಲ | ಅಯ್ಯೋ! ಭಯಂಕರ ತಲೆನೋವು!

ಡಾ.ಕೆ.ಎಸ್ ಶುಭ್ರತಾ
Published 30 ಜನವರಿ 2024, 0:00 IST
Last Updated 30 ಜನವರಿ 2024, 0:00 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತಲೆನೋವು ಬರದ ವ್ಯಕ್ತಿ ವಿರಳವೇ ಅನ್ನಬಹುದು. ತಲೆನೋವುಗಳಲ್ಲೂ ವಿಧಗಳುಂಟು. ಸಾಮಾನ್ಯವಾಗಿ ವಯಸ್ಸಿನ ಭೇದವಿಲ್ಲದೆ ಕಾಣಿಸಿಕೊಳ್ಳುವ ತಲೆನೋವಿನ ಒಂದು ವಿಧ ‘ಮೈಗ್ರೇನ್’. ಜಗತ್ತಿನಾದ್ಯಂತ ಸುಮಾರು ಶೇ 10ರಷ್ಟು  ಜನರು ಮೈಗ್ರೇನ್‍ನಿಂದ ಬಳಲುತ್ತಾರೆ. ಮೈಗ್ರೇನ್ ಕಾರಣಕ್ಕೆ ಸಾಕಷ್ಟು ಜನರು ಕೆಲಸಗಳನ್ನು ಮಾಡಲಾರದೇ ಒದ್ದಾಡುತ್ತಾರೆ. ದುರದೃಷ್ಟಕರ ವಿಚಾರವೆಂದರೆ, ರೋಗ ಪತ್ತೆ ಆಗದೇ ಶೇ 50ರಷ್ಟು ಮೈಗ್ರೇನ್ ಕಾಯಿಲೆಗೆ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ. ಹಾಗೆಯೇ ನೋವುನಿವಾರಕ ಮಾತ್ರೆಗಳಿಗೆ ದಾಸರಾಗಿಬಿಡುತ್ತಾರೆ.

ಕಾರಣವೇನು?

ಮೈಗ್ರೇನ್ – ಇದು ಮಿದುಳಿಗೆ ಸಂಬಂಧಪಟ್ಟ ಕಾಯಿಲೆ. ಈ ಮೊದಲು, ಮಿದುಳಿನಲ್ಲಿ ರಕ್ತಸಂಚಾರದ ವ್ಯತ್ಯಾಸದಿಂದ ಇದು ಆಗುತ್ತದೆಂದು ನಂಬಿದ್ದರೂ, ಈಗ ಇದೊಂದೇ ಕಾರಣವಲ್ಲವೆಂದು ಸಾಬೀತಾಗಿದೆ. ಸೆರೋಟೋನಿನ್, ಡೋಪಮಿನ್‍ನಂತಹ ನರವಾಹಕಗಳ ಏರುಪೇರು, ನರಕೋಶಗಳ ಪ್ರಚೋದನೆಯಲ್ಲಿ ವ್ಯತ್ಯಾಸ ಇತ್ಯಾದಿ ಕಾರಣಗಳನ್ನು ಪ್ರತಿಪಾದಿಸುತ್ತದೆ. ಮೈಗ್ರೇನ್ ವಂಶಪಾರಂಪರಿಕವಾಗಿಯೂ ಬರುವುದರಿಂದ, ವಂಶವಾಹಿನಿಯಲ್ಲೂ ಬರಬಹುದೆಂದು ಹೇಳಲಾಗುತ್ತದೆ.

ADVERTISEMENT


ಹೇಗಿರುತ್ತದೆ ಅಟ್ಯಾಕ್? 

ಸುಮಾರು ನಾಲ್ಕು ಗಂಟೆಗಳಿಂದ ಮೂರು ದಿನಗಳ ತನಕ ಇರಬಹುದಾದ ಈ ತಲೆನೋವು, ತಲೆಯ ಒಂದೇ ಬದಿಯಲ್ಲಿ ಕಾಣಿಸಿಕೊಂಡು, ‘ಪಟ್‍ಪಟ್’ ಎಂದು ಹೊಡೆದುಕೊಳ್ಳುವ ರೀತಿಯದ್ದಾಗಿರುತ್ತದೆ (Pulsatile quality). ವಾಕರಿಕೆ, ವಾಂತಿ, ಬೆಳಕು ನೋಡಲು ಆಗದಿರುವುದು (Photophobia) ಹಾಗೂ ತೀವ್ರ ಶಬ್ದಗಳನ್ನು ಕೇಳಲು ಆಗದಿರುವುದು (Phonophobia) ಕೂಡ ಇರುತ್ತದೆ.

ಶೇ 30-40 ಜನರಲ್ಲಿ ಈ ತಲೆನೋವು ಪ್ರಾರಂಭವಾಗುವುದಕ್ಕೆ ಮುಂಚೆ ‘ಆರಾ’ (Aura) ಎಂಬ ಪ್ರಕ್ರಿಯೆ ಕಾಣಿಸುತ್ತದೆ. ಬೆಳಕಿನ ಮಿಂಚು, ಅಂಕುಡೊಂಕು ರೇಖೆಗಳು, ಮುಖದ ಒಂದು ಭಾಗದಲ್ಲಿ ಝಂಝಂಗುಟ್ಟುವಿಕೆ, ಕಿವಿಯಲ್ಲಿ ‘ಗೂಂ’ ಎಂಬ ಶಬ್ದ, ಮಾತಿನಲ್ಲಿ ತೊದಲು, ಕೈಕಾಲು ನಿಶ್ಶಕ್ತಿ ಇತ್ಯಾದಿ ‘ಆರಾ’ದಲ್ಲಿ ಕಾಣಿಸಬಹುದು. ಈ ಸ್ಥಿತಿ ತಾತ್ಕಾಲಿಕವಾಗಿ ಕೆಲವು ನಿಮಿಷಗಳಷ್ಟೆ ಇದ್ದು, ಕಡಿಮೆಯಾಗಿ ನಂತರದಲ್ಲಿ ತಲೆನೋವು ಪ್ರಾರಂಭವಾಗುತ್ತದೆ.

ತಲೆನೋವಿನ ಡೈರಿ
‘ತಲೆನೋವಿನ ಡೈರಿ’ಯನ್ನು ಮೈಗೇನ್‌ನಿಂದ ಬಳಲುತ್ತಿರುವ ಪ್ರತಿಯೊಬ್ಬರೂ ಕಾಪಿಡಬೇಕು. ಪ್ರತಿ ಬಾರಿ ತಲೆನೋವು ಬಂದಾಗ ದಿನ, ಸಮಯ, ತಲೆನೋವು ಇದ್ದ ಅವಧಿ – ಇವನ್ನು ಈ ಪುಸ್ತಕದಲ್ಲಿ ಬರೆಯಬೇಕು. ಹಾಗೆಯೇ ಮುಖ್ಯವಾದದ್ದು, ಅದು ಬರುವುದಕ್ಕೆ ಮುಂಚೆ ಏನಾದರೂ ಕಾರಣಗಳು (Triggers) ಇವೆಯೇ ಎಂಬುದು. ಬಿಸಿಲಿಗೆ ಹೋಗಿದ್ದೆ ಅಥವಾ ತಣ್ಣೀರಿನಲ್ಲಿ ತಲೆಸ್ನಾನ ಮಾಡಿದೆ ಅಥವಾ ಮನಸ್ಸಿಗೆ ತುಂಬಾ ನೋವಾಗಿ ಅತ್ತಿದ್ದೆ – ಹೀಗೆ ಬೇರೆ ಬೇರೆ ಕಾರಣಗಳಿರಬಹುದು. ಚಿಕಿತ್ಸೆ ನೀಡುವುದಕ್ಕೆ ಮತ್ತು ನಂತರದಲ್ಲಿ ರೋಗಿ ಹೇಗೆ ಗುಣಮುಖರಾಗಿದ್ದಾರೆ ಎಂದು ತಿಳಿದುಕೊಳ್ಳುವುದಕ್ಕೆ ಈ ತಲೆನೋವಿನ ಡೈರಿ ತುಂಬಾ ಸಹಕಾರಿ.

ಚಿಕಿತ್ಸೆ 

ಮೈಗ್ರೇನ್‍ನಿಂದ ಬಳಲುತ್ತಿರುವವರಿಗೆ ಎರಡು ತರಹದ ಚಿಕಿತ್ಸೆ ಲಭ್ಯವಿದೆ. ಮೊದಲನೆಯದು, ಈ ಮೈಗ್ರೇನ್ ಅಟ್ಯಾಕ್ ಆದಾಗ ನೀಡುವ ಚಿಕಿತ್ಸೆಯಾದರೆ, ಎರಡನೆಯದು ಈ ಅಟ್ಯಾಕ್‍ಗಳನ್ನು ಆಗದ ಹಾಗೆ ತಡೆಗಟ್ಟುವ ಚಿಕಿತ್ಸೆ.

ಮೈಗ್ರೇನ್ ಅಟ್ಯಾಕ್ ಆದಾಗ ವೈದ್ಯರನ್ನು ಕೇಳಿಯೇ ನೋವಿನ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಒಂದು ಬಾರಿ ವೈದ್ಯರನ್ನು ಸಮಾಲೋಚಿಸಿದ್ದರೆ, ಅವರು ಈ ಮೈಗ್ರೇನ್ ಅಟ್ಯಾಕ್ ಆದಾಗ ಯಾವ ಮಾತ್ರೆ ತೆಗೆದುಕೊಳ್ಳಬಹುದೆಂದು ಹೇಳುತ್ತಾರೆ. ಅದೂ ತಲೆನೋವು ಪ್ರಾರಂಭ ಆಗುವ ಸಮಯದಲ್ಲೇ ತೆಗೆದುಕೊಂಡರೆ ಕೆಲಸ ಮಾಡುತ್ತದೆ. ತಲೆನೋವು ತೀವ್ರವಾದ ನಂತರ, ಈ ಮಾತ್ರೆಗಳು ಕೆಲಸ ಮಾಡಲಿಕ್ಕಿಲ್ಲ.

ತಲೆನೋವು ಬರದ ಹಾಗೆ ತಡೆಗಟ್ಟಲು ಚಿಕಿತ್ಸೆ ನೀಡಲಾಗುತ್ತದೆ. ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ತಲೆನೋವಿನಿಂದ ತೀವ್ರವಾದ ದೈನಂದಿನ ಚಟುವಟಿಕೆಗಳ ವ್ಯತ್ಯಾಸ, ಬಂದ ತಲೆನೋವು ಮೂರು ನಾಲ್ಕು ದಿನಗಳಾದರೂ ಹೋಗದಿರುವುದು, ಅತಿಯಾದ ನೋವಿನ ಮಾತ್ರೆಗಳ ಬಳಕೆ ಹೀಗೆ ಇದ್ಯಾವುದಿದ್ದರೂ ತಲೆನೋವು ತಡೆಗಟ್ಟುವ ಮಾತ್ರೆಗಳನ್ನು ನೀಡಬೇಕಾಗುತ್ತದೆ. ಈ ಮಾತ್ರೆಗಳನ್ನು ಮೂರರಿಂದ ಆರು ತಿಂಗಳ ತನಕ ಕೊಡಲಾಗುತ್ತದೆ.

ಎಚ್ಚರಿಕೆಯ ಕರೆಗಂಟೆಗಳು

ಈ ಕೆಳಗಿನವುಗಳಲ್ಲಿ ಯಾವುದಾದರೂ ಲಕ್ಷಣಗಳು ಇದ್ದರೆ, ‘ರೆಡ್ ಫ್ಲಾಗ್ ಸೈನ್’ ಎನ್ನುತ್ತೇವೆ; ತಕ್ಷಣ ವೈದ್ಯರನ್ನು ಕಾಣಬೇಕು.


  • ಜೀವನದಲ್ಲಿ ಮೊದಲ ಬಾರಿಗೆ ನೀವು ತಲೆನೋವು ಅನುಭವಿಸುತ್ತಿದ್ದೀರಾ ಎಂದರೆ ಅದು ಗಂಭೀರವೇ.

  • ‘ನನ್ನ ಜೀವನದ ಅತಿ ತೀವ್ರ ತಲೆನೋವು ಇದು’ ಎಂದು ಅನ್ನಿಸಿದರೆ, ಆಗಲೂ ಅದನ್ನು ಅಲಕ್ಷ್ಯ ಮಾಡಬಾರದು.

  • ತಲೆನೋವಿನೊಂದಿಗೆ ನಿರಂತರವಾಗಿ ವಾಂತಿ, ದೃಷ್ಟಿಯ ಸಮಸ್ಯೆಗಳು, ಕೈ-ಕಾಲು ಸ್ವಾಧೀನವನ್ನು ಕಳೆದುಕೊಳ್ಳುವುದು.

  • ‘ತಲೆ ಒಡೆದೇ ಹೋಗುತ್ತದೆ’ ಎಂಬಂಥ ನೋವು.

  • ಈಗಾಗಲೇ ಕ್ಯಾನ್ಸರ್, ಎಚ್‌.ಐ.ವಿ.ಯಂಥ ಸಮಸ್ಯೆಗಳು ಇದ್ದರೆ, ಅಂಥವರಲ್ಲಿನ ತಲೆನೋವು.


ಎದೆಗುಂದದಿರಿ

ಮೈಗ್ರೇನ್ ಸಾಮಾನ್ಯವಾದ ಕಾಯಿಲೆ; ಜೀವಕ್ಕೆ ಭಯವೇನಿಲ್ಲ. ಮಾತ್ರೆಗಳೊಂದೇ ಇದಕ್ಕೆ ಚಿಕಿತ್ಸೆಯಲ್ಲ. ಅದರ ಜೊತೆ ನಮ್ಮ ಜೀವನಶೈಲಿ ಬದಲಾವಣೆಗಳನ್ನೂ ಮಾಡಿಕೊಳ್ಳಬೇಕು.

  • ಚಿಕಿತ್ಸೆಯಿಂದ ಮೈಗ್ರೇನ್ ಅಟ್ಯಾಕ್ಸ್ ಕಡಿಮೆಯಾಗಬಹುದೇ ಹೊರತು ಮೈಗ್ರೇನ್ ಸಂಪೂರ್ಣವಾಗಿ ಬರದ ಹಾಗೆ ಮಾಡಲು ಸಾಧ್ಯವಿಲ್ಲ. ಈ ವಿಷಯವನ್ನು ಮಾನಸಿಕವಾಗಿ ಒಪ್ಪಿಕೊಳ್ಳಬೇಕು.

  • ತಲೆನೋವು ಬರಲು ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಕಾರಣಗಳು (Trigger) ಇರುತ್ತವೆ. ಉದಾಹರಣೆಗೆ ಹಸಿವು, ನಿದ್ರಾಹೀನತೆ, ತೀವ್ರ ಪರಿಮಳ, ಮಲಬದ್ಧತೆ, ಬಿಸಿಲು, ಪ್ರಯಾಣ, ಗಲಾಟೆ ಇತ್ಯಾದಿ. ಇದರಲ್ಲಿ ಕೆಲವನ್ನು ನಾವು ತಡೆಯಬಹುದು. ಕೆಲವೊಂದಕ್ಕೆ ನಮ್ಮ ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಬಿಸಿಲಿಗೆ ಹೋಗುವಾಗ ಛತ್ರಿ ಹಿಡಿಯುವುದು, ತಂಪಿನ ಕನ್ನಡಕ, ಟೋಪಿ ಧರಿಸುವುದು, ಚೆನ್ನಾಗಿ ನೀರನ್ನು ಕುಡಿಯುವುದು, ಊದಿನ ಕಡ್ಡಿಯ ವಾಸನೆಯಿಂದ ದೂರ ಇರುವುದು ಇತ್ಯಾದಿ.

  • ಒತ್ತಡ ಮತ್ತು ಮೈಗ್ರೇನ್‍ಗೆ ನಿಕಟ ಸಂಬಂಧವಿದೆ. ತೀವ್ರತರದ ನಕಾರಾತ್ಮಕ ಯೋಚನೆ, ಖಿನ್ನತೆ, ಆತಂಕಗಳೂ ಮೈಗ್ರೇನ್ ಅಟ್ಯಾಕ್‍ಗೆ ದಾರಿಯಾಗಬಹುದು. ಒತ್ತಡ ನಿರ್ವಹಣೆ ಕಲಿಯುವುದು ಅತ್ಯಗತ್ಯ. ಪ್ರತಿನಿತ್ಯ ಮನಸ್ಸಿಗೆ ಖುಷಿ/ನೆಮ್ಮದಿ ಕೊಡುವ ಚಟುವಟಿಕೆಗಳಾದ ಯೋಗ, ಸಂಗೀತವನ್ನು ಆಲಿಸುವುದು, ಧ್ಯಾನ, ನಡಿಗೆ, ಸ್ನೇಹಿತರೊಂದಿಗೆ ಹರಟೆ – ಇಂಥವನ್ನು ರೂಢಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.