ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ಅವರದ್ದು ಬಹಳ ದೊಡ್ಡ ಹೆಸರು. ಅವರ ಸಾಧನೆಗಳು ಹಲವಾರು. ಬರೆದ ದಾಖಲೆಗಳು ಹತ್ತಾರು. 19ನೇ ವಯಸ್ಸಿಗೇ ಬ್ಯಾಟ್ ಬೀಸಲು ಆರಂಭಿಸಿದ ಅವರಿಗೆ ಈಗ 35 ವರ್ಷ. ಆದರೆ ಅವರ ಫಾರ್ಮ್‌ನಲ್ಲಿ ಒಂಚೂರೂ ವ್ಯತ್ಯಾಸವಾಗಿಲ್ಲ. ಇದೀಗ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಮಹಿಳಾ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಅವರೇ ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿಧ್ದಾರೆ. ಇದೆಲ್ಲದರ ಹಿಂದೆ ಅವರು ಕಾಪಾಡಿಕೊಂಡು ಬಂದಿರುವ ಫಿಟ್‌ನೆಸ್ ಮಹತ್ವದ್ದು.
ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್‌ನಲ್ಲಿ ನಿರತರಾಗಿರುದೆಂದರೆ ಸಾಮಾನ್ಯ ವಿಷಯವಲ್ಲ. ಚಿಕ್ಕಂದಿನಿಂದಲೇ ದೈಹಿಕ ವ್ಯಾಯಾಮ ಮಾಡುತ್ತಾ ಬೆಳೆದ ಅವರು, ‘ಆಡಬೇಕೆಂದರೆ ದೇಹ ದಂಡಿಸುವುದು ಅನಿವಾರ್ಯ’ ಎಂದು ಹೇಳುತ್ತಾರೆ.
‘ಕ್ರೀಡಾಪಟುಗಳ ಕಾರ್ಯನಿರ್ವಹಿಸುವ ಅವಧಿ ತೀರಾ ಕಡಿಮೆ. ಇರುವ ಕಾಲಾವಕಾಶವದಲ್ಲಿ ದೊರೆತ ಅವಕಾಶಗಳನ್ನು ಬಳಸಿಕೊಂಡು ನಮ್ಮ ಸಾಮರ್ಥ್ಯ ತೋರಿಸಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಸಾಮಾನ್ಯವಾಗಿ ಕ್ರೀಡೆಯಲ್ಲಿ ನಿರತರಾಗಿರುವವರು ಬೇಗ ನಿವೃತ್ತಿಯಾಗುತ್ತಾರೆ. ನಿವೃತ್ತಿ ನಂತರ ಮತ್ತೆ ಹೊಸ ಜೀವನ ಆರಂಭಿಸಬೇಕಾಗುತ್ತದೆ. ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸುವುದಕ್ಕೂ ಆರೋಗ್ಯದ ದೃಷ್ಟಿಯಿಂದ ‘ಫಿಟ್’ ಆಗಿರುವುದು ಒಳಿತು’ ಎನ್ನುತ್ತಾರೆ ಅವರು.
‘ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸುಗಳೆರಡಕ್ಕೂ ಉತ್ತೇಜನ ಸಿಗುತ್ತದೆ. ಆದ್ದರಿಂದ ತಪ್ಪದೇ ಯೋಗ ಮಾಡುತ್ತೇನೆ. ಹಾಗೆಂದು ದುಡುಕಾಗಿ ಆರಂಭಿಸುವ ಅಗತ್ಯವಿಲ್ಲ ಹಂತ ಹಂತವಾಗಿ ಮಾಡಬೇಕು’ ಎನ್ನುತ್ತಾರೆ ಅವರು.
ಪ್ರತಿದಿನ ಜಿಮ್ನಾಷಿಯಂನಲ್ಲಿ ಎರಡು ಗಂಟೆ ತಾಲೀಮು ಮಾಡುತ್ತಾರೆ. ಕಾರ್ಡಿಯೊ ಮತ್ತು ಮಸಲ್ ಟ್ರೇನಿಂಗ್‌ಗೆ ವಿಶೇಷ ಒತ್ತು ನೀಡುತ್ತಾರೆ. ಟ್ರೆಡ್‌ಮಿಲ್ ಮೇಲಿನ ಓಟವನ್ನು ತಪ್ಪಿಸುವ ಮಾತೇ ಇಲ್ಲ. ಆಹಾರ ಸೇವನೆಯ ವಿಷಯದಲ್ಲಿಯೂ ಕಟ್ಟುನಿಟ್ಟು. ಜೊತೆಗೆ ವಿಶ್ರಾಂತಿ, ವಿಹಾರಗಳಲ್ಲಿಯೂ ಶಿಸ್ತು. ಸದಾ ಉಲ್ಲಸಿತರಾಗಿ, ತಮ್ಮ ತಂಡದ ಉಳಿದ ಆಟಗಾರ್ತಿಯರನ್ನೂ ಹುರಿದುಂಬಿಸುತ್ತ ಇರುವ ಮಿಥಾಲಿ ಜೂನಿಯರ್ ಆಟಗಾರ್ತಿಯರಿಗೆ ಮಾದರಿಯಾಗಿದ್ದಾರೆ.
ಪೃಥ್ವಿರಾಜ್
***
ನೀರುಣ್ಣುವುದು ಹೇಗೆ?
ಪ್ರತಿದಿನ ಆರೋಗ್ಯಕರವಾಗಿರಲು ಕನಿಷ್ಠ 3 ಲೀಟರ್ ನೀರು ಕುಡಿಯಲೇಬೇಕು. ಇನ್ನು ಕ್ರೀಡೆ, ವ್ಯಾಯಾಮಗಳಲ್ಲಿ ತೊಡಗಿಸಿಕೊಂಡಿರುವವರು, 60ಕೆ.ಜಿಗಿಂತ ಹೆಚ್ಚಿನ ತೂಕ ಹೊಂದಿದವರೂ ಕನಿಷ್ಠ 3.5 ಲೀಟರ್ ನೀರು ಸೇವಿಸಬೇಕು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ನೀರುಣ್ಣುವುದು ಗೊತ್ತೆ?
ಹೌದು. ಆಗಾಗ ನೀರುಣ್ಣಬೇಕು. ಕೆಲಸ ಕಾರ್ಯಗಳಲ್ಲಿ ನಮ್ಮನ್ನೇ ಮರೆತಿದ್ದರೂ ಗುಟುಕು ನೀರು ಹೀರಬೇಕು. ಉಣ್ಣುವಂತೆ ಹೀರಬೇಕು. ಏನಿದು ನೀರುಣ್ಣುವುದು.. ಗುಟುಕು ನೀರನ್ನು ಬಾಯ್ತುಂಬ ತುಂಬಿಕೊಂಡು, ಬಾಯಿಯ ಅಂಗಳ, ಹಲ್ಲು, ವಸಡುಗಳಿಗೆಲ್ಲ ನೀರು ತಾಕಿಸಿ, ಸೋಕಿಸಿ, ಗಂಟಲಿನಾಳಕ್ಕೆ, ನಾಳಕ್ಕೆ ತಾಕುವಂತೆ ನೀರನ್ನು ಸೇವಿಸಬೇಕು. ನಿಧಾನಕ್ಕೆ ಗುಟುಕರಿಸಬೇಕು. ಹೀಗೆ ನೀರುಣ್ಣುತ್ತ, ಅದು ನಾಭಿಯಾಳಕ್ಕೆ ಇಳಿಯುವುದನ್ನು ಅನುಭವಿಸಬೇಕು.
ನೀರುಣ್ಣುವಾಗ, ಗುಟುಕರಿಸುವಾಗ ನಿಮ್ಮ ದೃಷ್ಟಿ ಕನಿಷ್ಠ 20 ಅಡಿ ದೂರವಿರುವ ವಸ್ತುವನ್ನು ಕೇಂದ್ರೀಕರಿಸಿರಬೇಕು. ಕಂಪ್ಯೂಟರ್ ಸ್ಕ್ರೀನ್‌ಗಳಲ್ಲಿ ಕಣ್ಣು ನೆಟ್ಟು ಕೂರುವವರಿಗಂತೂ ಇದು ಅತ್ಯವಶ್ಯ. ಪ್ರತಿ ಇಪ್ಪತ್ತು ನಿಮಿಷಗಳಿಗೆ ಒಮ್ಮೆ ಇಂಥ ಬ್ರೇಕುಗಳನ್ನು ಪಡೆಯಬೇಕು.
ಇದರಿಂದ ವಾತಾನುಕೂಲಿತ ಪ್ರದೇಶದಲ್ಲಿ ಕುಳಿತು ಕೆಲಸ ಮಾಡುವವರ ಚರ್ಮದಲ್ಲಿ ತೇವಾಂಶ ಉಳಿಯುತ್ತದೆ. ಒಣಕಣ್ಣಿನ ಸಮಸ್ಯೆ ಕಂಡು ಬರುವುದಿಲ್ಲ. ದೃಷ್ಟಿಗೂ ವ್ಯಾಯಾಮ ಸಿಕ್ಕಂತೆ ಆಗುತ್ತದೆ. ಜೀವಜಲವೆಂದೇ ಹೆಸರಾದ ನೀರು ಕೆಲಸದ ನಡುವೆ ಹೊಸ ಚೈತನ್ಯ ನೀಡುತ್ತದೆ.
ಬೆಳಗಿನ ಹೊತ್ತಿನಲ್ಲಿ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದಾದರೆ ರಾತ್ರಿಯೇ ತಾಮ್ರದ ಬಾಟಲಿ ಅಥವಾ ಪಾತ್ರೆಯಲ್ಲಿ ನೀರು ತುಂಬಿಸಿಡಿ. ಅದನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಪ್ರತಿದಿನವೂ ತಾಮ್ರದ ಪಾತ್ರೆಗಳನ್ನು ತೊಳೆಯಬೇಕು.
ಉಗುರು ಬಿಸಿ ನೀರು ಕುಡಿಯುವ ಅಭ್ಯಾಸ ಒಳ್ಳೆಯದು. ಆದರೆ ಅತಿಯಾದ ಬಿಸಿ ನೀರಿಗೆ ತಣ್ಣೀರು ಬೆರೆಸಿ ತಣಿಸಬಾರದು.
ಆಗಾಗ ನೀರುಣ್ಣುತಲಿದ್ದರೆ, ಆರೋಗ್ಯಕ್ಕೆ ಸಮಸ್ಯೆ ಇರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.