ADVERTISEMENT

Mothers Day Special: ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸಾ ಕ್ರಮ ಹೇಗೆ?

ಅನು ಶ್ರೀಧರ್
Published 8 ಮೇ 2021, 11:18 IST
Last Updated 8 ಮೇ 2021, 11:18 IST
   

ಇಂದು ವಿಶ್ವ ಅಮ್ಮಂದಿರ ದಿನಾಚರಣೆ. ಪುರಾತನ ಕಾಲದಿಂದಲೂ ಅಮ್ಮಾ ಎನ್ನುವ ಪದಕ್ಕೆ ಮಿಗಿಲಾದ ಪದವನ್ನು ಸೃಷ್ಟಿಸಲು ಸಾಧ್ಯವೇ ಆಗಿಲ್ಲ. ಈ ಕೊರೋನ ತಂದಿಟ್ಟಿರುವ ಭಯದ ವಾತಾವರಣದಲ್ಲೂ ದೃತಿಗೆಡದೆ ತಾಯಂದಿರು ತಮ್ಮ ಮಕ್ಕಳನ್ನು ಯೋಧರಿಗಿಂತ ಹೆಚ್ಚಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ.. ಅದರಲ್ಲೂ ಈಗಷ್ಟೇ ಮಕ್ಕಳಾಗಿರುವ ಮಹಿಳೆಯರು ಕಣ್ಣಿನ ರೆಪ್ಪೆಗಿಂತಲೂ ಜೋಪಾನವಾಗಿ ತನ್ನ ಕರುಳ ಕುಡಿಯನ್ನು ಸಾಕುವತ್ತ ಹೆಚ್ಚು ಗಮನ ಕೊಡುಬೇಕಿದೆ. ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಕೊರೋನ ಸೋಂಕು ತಗುಲಿದರೆ ಹೇಗೆ ಚಿಕಿತ್ಸಾ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಾಕಷ್ಟು ತಾಯಂದಿರಲ್ಲಿ ಗೊಂದಲ ಇದೆ. ಈ ತಾಯಂದಿರ ದಿನಾಚರಣೆ ದಿನದಂದು ಮನೆಯಲ್ಲಿಯೇ ತಮ್ಮ ಸುರಕ್ಷತೆ ಹೇಗೆ ಕಾಪಾಡಿಕೊಳ್ಳಬೇಕೆಂದು ಕೆಲವು ಸಲಹೆ ಇಲ್ಲಿದೆ.

* ಗರ್ಭಿಣಿಯರು ಪಾಸಿಟಿವ್ ಇರುವುದು ದೃಢಪಟ್ಟರೆ ಆಗ ಅವರು ಏನು ಮಾಡಬೇಕು? ಪಾಸಿಟಿವ್ ಎಂದ ಕೂಡಲೇ ಕೂಡಲೇ ಯಾವುದೇ ಕಾರಣಕ್ಕೂ ಆತಂಕ, ಭಯಕ್ಕೆ ಒಳಗಾಗ ಬೇಡಿ. ಏಕೆಂದರೆ, ಆತಂಕ ಹೆಚ್ಚಿದಾಗ ನಿಮ್ಮ ಮೆದುಳಿನಲ್ಲಿರುವ ನೆಗೆಟಿವ್ ಎನರ್ಜಿ ಬಿಡುಗಡೆಯಾಗಿ, ಅನವಶ್ಯಕ ಸಮಸ್ಯೆಗೆ ನೀವೇ ಎಡೆ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ಯಾನಿಕ್ ಆಗುವುದನ್ನು ನಿಲ್ಲಿಸಿ.

* ಪಾಸಿಟಿವ್ ಬಂದ ಗರ್ಭಿಣಿಯರು ಆಸ್ಪತ್ರೆಗೆ ತೆರಳುವುದು ಅಷ್ಟು ಸುರಕ್ಷಿತವಲ್ಲ. ಕೊರೋನ ಲಕ್ಷಣಗಳು ಸೌಮ್ಯವಾಗಿದ್ದರೆ ಆಸ್ಪತ್ರೆಗೆ ತೆರಳುವ ಬದಲು ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ, ಆರೋಗ್ಯಕರ ಆಹಾರ ಸೇವನೆ, ವಿಶ್ರಾಂತಿ, ವ್ಯಾಯಾಮ ಹಾಗೂ ಮಾನಸಿಕ ನೆಮ್ಮದಿ ಕಾಯ್ದುಕೊಳ್ಳುವತ್ತ ಹೆಚ್ಚು ಗಮನ ನೀಡಿ.

ADVERTISEMENT

* ಪ್ರತಿ ತಿಂಗಳು ಟೆಸ್ಟ್‌ಗೆ ತೆರಳುವ ಗರ್ಭಿಣಿಯರು ಸಾಧ್ಯವಾದಷ್ಟು ವಿಡಿಯೋ ಕಾಲ್‌ಗಳ ಮೂಲಕವೇ ವೈದ್ಯರೊಂದಿಗೆ ಸಮಾಲೋಚಿಸಿ. ಅಲ್ಟ್ರಾಸೌಂಡ್, ರಕ್ತ ಪರೀಕ್ಷೆಗಳು ಮತ್ತು ಭ್ರೂಣದ ಪರೀಕ್ಷೆಯಂತಹ ಕಡ್ಡಾಯ ಪ್ರಸವಪೂರ್ವ ಪ್ರಕ್ರಿಯೆಗಳಿಗಾಗಿ ಮಾತ್ರ ಆಸ್ಪತ್ರೆ ಅಥವಾ ಚಿಕಿತ್ಸಾಲಯಕ್ಕೆ ಭೇಟಿ ನೀಡಿ. ಆ ವೇಳೆ ಕಡ್ಡಾಯವಾಗಿ ಡಬಲ್ ಮಾಸ್ಕ್‌ ಧರಿಸಿಯೇ ಮನೆಯಿಂದ ಹೊರಕ್ಕೆ ಕಾಲಿಡಿ.

* ಮನೆಯಲ್ಲಿಯೇ ಯೋಗ, ಧ್ಯಾನ ಮಾಡುವುದರಿಂದ ಗರ್ಭಿಣಿಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ.

* ಕೊರೊನಾ ಬರುವ ಮುಂಚಿತವಾಗಿಯೇ ಹೆಚ್ಚು ಗಮನ ವಹಿಸಿ. ಹೊರಗಡೆ ಹಾಗೂ ಹೊರಗಡೆಯಿಂದ ಬರುವ ವ್ಯಕ್ತಿಗಳೊಂದಿಗಿನ ಮುಖಾ ಮುಖಿ ಸಂವಾದವನ್ನು ಆದಷ್ಟು ನಿಯಂತ್ರಿಸಿ.

* ಕೋವಿಡ್ ದೃಢಪಟ್ಟಿದ್ದರೆ ಸ್ವಯಂ ಔಷಧಿ ಮಾಡಿಕೊಳ್ಳಬೇಡಿ. ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ, ನಿಮ್ಮಲ್ಲಾಗುತ್ತಿರುವ ಆರೋಗ್ಯ ಸಮಸ್ಯೆ ಏರುಪೇರುಗಳನ್ನು ಮುಚ್ಚುಮರೆಯಿಲ್ಲದೇ ಹಂಚಿಕೊಳ್ಳಿ, ಯಾವುದೇ ಕಾರಣಕ್ಕೂ ಮತ್ತೊಬ್ಬರ ಅಭಿಪ್ರಾಯ ಪಡೆಯದೇ ವೈದ್ಯರ ಸಲಹೆಯನ್ನಷ್ಟೇ ಅನುಸರಿಸಿ

* ನಿಮ್ಮನ್ನು ನೀವು ಐಸೋಲೇಟ್ ಮಾಡಿಕೊಳ್ಳಿ. ಪ್ರತಿ ಆರು ಗಂಟೆಗೊಮ್ಮೆ ನಿಮ್ಮ ತಾಪಮಾನ ಮತ್ತು ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ

* ಒಂದು ವೇಳೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದರೆ, ನಾಲ್ಕು ದಿನಗಳವರೆಗೂ ಪ್ಯಾರಾಸಿಟಮಾಲ್ ಮಾತ್ರೆ ತೆಗೆದುಕೊಂಡ ನಂತರವೂ ನಿಮ್ಮ ತಾಪಮಾನ ಕಡಿಮೆಯಾಗದೇ ಇದ್ದರೆ, ನಿಮ್ಮ ಆಮ್ಲಜನಕ ಮಟ್ಟ 94ಕ್ಕಿಂತ ಕಡಿಮೆಯಾದರೆ ಮಾತ್ರ, ನೀವು ವೈದ್ಯರನ್ನು ಅವಶ್ಯಕವಾಗಿ ಮಾತನಾಡಿ, ಅವರ ನಿರ್ದೇಶನದಂತೆ ಚಿಕಿತ್ಸೆ ಪಡೆಯಿರಿ.

* ನಿಮಗೆ ತೀವ್ರವಾದ ಎದೆ ನೋವು, ಉಗುರುಗಳು ನೀಲಿ ಬಣ್ಣಕ್ಕೆ ಇದ್ದರೆ ಆಸ್ಪತ್ರೆಗೆ ಭೇಟಿ ನೀಡುವುದು ಒಳ್ಳೆಯದು.

* ತಾಯಿಗೆ ಸೋಂಕು ತಗುಲಿದ್ದರೆ ಗರ್ಭದಲ್ಲಿರುವ ಮಗುವಿಗೂ ಆ ಸೋಂಕು ಹರಡಲಿದೆಯೇ ಎಂಬ ಬಗ್ಗೆ ಈವರೆಗೂ ಯಾವುದೇ ಅಧ್ಯಯನ ದೃಢಪಡಿಸಲ್ಲ. ಹೀಗಾಗಿ ತಾಯಂದಿರು ಮಗುವಿಗೆ ಸೋಂಕು ತಗುಲಬಹುದೇ ಎಂದು ಹೆಚ್ಚಾಗಿ ಚಿಂತೆಗೀಡಾಬೇಕಿಲ್ಲ.

* ಹಾಲುಣಿಸುವ ತಾಯಂದಿರಿಗೆ ಸೋಂಕು ದೃಢಪಟ್ಟರೆ, ಹಾಲು ಉಳಿಸುವುದರಿಂದ ಮಗುವಿಗೆ ಸೋಂಕು ಹರಡಬಹುದೇ ಎಂಬ ಆತಂಕವಿರುತ್ತದೆ. ಆದರೆ, ಹಾಲುಣಿಸುವುದರಿಂದಲೂ ಶಿಶುವಿಗೆ ಸೋಂಕು ತಗುಲಿರುವ ಬಗ್ಗೆ ಈವರೆಗೂ ವರದಿಯಾಗಿಲ್ಲ. ಹೀಗಾಗಿ ತಾಯಂದಿರುವ ನೆಮ್ಮದಿಯಿಂದ ಹಾಲುಣಿಸಬಹುದು. ಆದರೆ, ಈ ವೇಳೆ ಅವಶ್ಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

* ಸೋಂಕು ಇರುವ ತಾಯಂದಿರು ಸದಾ ಮಾಸ್ಕ್ ಧರಿಸಬೇಕು, ಮಗುವನ್ನು ಮುಟ್ಟುವಾಗಲೆಲ್ಲಾ ಬಿಸಿ ನೀರಿನಿಂದ ಕೈ ತೊಳೆಯುವುದು ಅಥವಾ ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಬೇಕು. ಇನ್ನೂ ಜಾಗೃತಿ ವಹಿಸಲು ಇಚ್ಚಿಸುವವರು, ಸ್ತನದಿಂದ ಹಾಲನ್ನು ಬಾಟಲಿಗೆ ಹಾಕಿಕೊಂಡು ಸಹ ಮಗುವಿಗೆ ಹಾಲುಣಿಸಬಹುದು.

ಗರ್ಭೀಣಿಯರು ಲಸಿಕೆ ಹಾಕಿಸಿಕೊಳ್ಳಬಹುದೇ?

ಕೊರೋನ ಲಸಿಕೆ ಬಗ್ಗೆ ಬಹಳಷ್ಟು ಚರ್ಚೆಗಳಾಗುತ್ತಿವೆ. ಆದರೆ, ಈ ಎಲ್ಲಾ ಅನುಮಾನಗಳಿಗೆ ಗರ್ಭಿಣಿಯರು ಹಾಗೂ ಈಗಷ್ಟೇ ಮಗುವಿಗೆ ಜನ್ಮ ನೀಡಿದ ತಾಯಂದಿರು ತಲೆಕೊಡಬೇಕಿಲ್ಲ. ಕೋವಿಡ್‌ನ ಲಸಿಕೆ ಸುರಕ್ಷಿತವಾಗಿದ್ದರೂ, ಗರ್ಭಿಣಿಯರು ಹಾಗೂ ಹಾಲುಣಿಸುತ್ತಿರುವ ತಾಯಂದಿರು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಆಕ್ಷೇಪವಿದೆ. ಹೀಗಾಗಿ ಸದ್ಯದ ಮಟ್ಟಿಗೆ ಲಸಿಕೆ ಪಡೆಯದೇ ಇರುವುದೇ ಉತ್ತಮ. ಆದರೆ, ಗರ್ಭ ಧರಿಸಿದ 12 ವಾರಗಳ ಕಾಲ‌ ಮಕ್ಕಳ ಬೆಳವಣಿಗೆಯಾಗುವುದರಿಂದ ಈ ಸಂದರ್ಭದಲ್ಲಿ ಲಸಿಕೆ ಹಾಸಿಕೊಳ್ಳುವುದು ಅಷ್ಟು‌ ಸುರಕ್ಷಿತವಲ್ಲ. ಲಸಿಕೆ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೂ ಲಭ್ಯವಾದರೆ ಇವರ ಆರೋಗ್ಯ ಇನ್ನಷ್ಟು ಸುಧಾರಿಸಲು ಸಹಾಯವಾಗಲಿದೆ.

ಈ ಅಮ್ಮಂದಿರ ದಿನಾಚರಣೆ ಸಂದರ್ಭದಲ್ಲಿ ಈಗಷ್ಟೇ ಅಮ್ಮನ ಸವಿ ಅನುಭವಿಸುತ್ತಿರುವ, ಅಮ್ಮ ಎನಿಸಿಕೊಳ್ಳಲು ಹಾತೊರೆಯುತ್ತಿರುವ ಮಹಿಳೆಯರಿಗೆ ಈ ವರ್ಷ ಜಾಗೃತಿಯಿಂದ ಇರುವುದೇ ಸವಾಲಾಗಿದೆ. ಎಲ್ಲರಿಗೂ ಅಮ್ಮಂದಿರ ದಿನಾಚರಣೆ ಶುಭಾಶಯಗಳು.

ಲೇಖಕಿ: ಹಿರಿಯ ಸ್ತ್ರೀರೋಗ ತಜ್ಞೆ, ಅನು ಶ್ರೀಧರ್ , ಫೋರ್ಟಿಸ್ ಆಸ್ಪತ್ರೆ ಬನ್ನೇರುಘಟ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.