ADVERTISEMENT

ನಿದ್ದೆ ಬರಿಸುವ ನೀಲಾಂಬರಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 4:32 IST
Last Updated 6 ಜುಲೈ 2024, 4:32 IST
<div class="paragraphs"><p>ಸಾಂದರ್ಭೀಕ ಚಿತ್ರ&nbsp;</p></div>

ಸಾಂದರ್ಭೀಕ ಚಿತ್ರ 

   

ಇಂದಿನ ಒತ್ತಡದ ದಿನಗಳಲ್ಲಿ, ಧಾವಂತದ ಬದುಕಿನಲ್ಲಿ ಹೆಚ್ಚಿನ ಜನರಿಗೆ ನಿದ್ದೆ ಮಾರುದೂರ ಹೋಗಿರುತ್ತದೆ. ಎಷ್ಟೇವಾಕಿಂಗ್, ವ್ಯಾಯಾಮ ಮಾಡಿ ಮೆತ್ತಗಿನ ಪಲ್ಲಂಗದಲ್ಲಿ ಮಲಗಿದರೂ ನಿದ್ದೆ ಮಾತ್ರ ಹತ್ತಿರವೇ ಸುಳಿಯದು. ನಿದ್ದೆ ಮಾತ್ರೆ ಸೇವಿಸಿದರೆ ಅದೂ ಕ್ಷಣಿಕ ಹಾಗೂ ಅಡ್ಡಪರಿಣಾಮದ ಭಯ. ಹಾಗಿದ್ದರೆ ನಿದ್ದೆ ಸರಿಯಾಗಿ ಬರಬೇಕಿದ್ದರೆ ಏನು ಮಾಡಬೇಕು? ಒಂದೇ ಒಂದು ಒಳ್ಳೆಯ ಉಪಾಯ ಎಂದರೆ ರಾತ್ರಿ ಮಲಗುವ ಮುನ್ನ ಇಂಪಾದ ಸಂಗೀತ ಕೇಳುವುದು. ಅದರಲ್ಲೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಕೆಲವೊಂದು ರಾಗಗಳು ನಿದ್ರಾಸಮಸ್ಯೆಯನ್ನು ದೂರ ಮಾಡುತ್ತದೆ. ಇದು ಅಧ್ಯಯನದ ಮೂಲಕ ಸಾಬೀತು ಕೂಡ ಆಗಿದೆ.


ನೀಲಾಂಬರಿ, ಭಾಗೇಶ್ರೀ, ಕಾಫಿ, ಕಮಾಚ್‌, ಅಭೋಗಿ ನಿದ್ರಾಹೀನತೆ ನಿವಾರಣೆಗಾಗಿಯೇ ಸಂಗೀತ ಚಿಕಿತ್ಸಕರು ಬಳಸುವ ಪ್ರಮುಖ ರಾಗಗಳು. ನೀಲಾಂಬರಿ ಜತೆಗೆ ಕಲ್ಯಾಣ್‌ ರಾಗ ಕೂಡ ನಿದ್ದೆ ಬರಿಸುವ ಗುಣ ಇದೆ ಎನ್ನುವುದು ಅಧ್ಯಯನಕಾರರ ಅಂಬೋಣ.

ADVERTISEMENT


ಚೆನ್ನೈಯ ಅಪೋಲೊ ಆಸ್ಪತ್ರೆಯ ‘ಮ್ಯೂಸಿಕ್ ಥೆರಪಿ’ ವಿಭಾಗದಲ್ಲಿ ಸುಮಾರು 15 ವರ್ಷಗಳ ಹಿಂದೆಯೇ ಈ ಅಧ್ಯಯನ ನಡೆದಿದೆ. ರಾಗಗಳಲ್ಲಿರುವ ನಾದ ತರಂಗಗಳನ್ನು ನಿದ್ದೆ ಸಮಸ್ಯೆ ಇರುವ ವ್ಯಕ್ತಿಯ ಮೇಲೆ ಪ್ರಯೋಗಿಸಿದಾಗ ರಕ್ತನಾಳಗಳಲ್ಲಿ ಒಂದು ರೀತಿಯ ಸಂವೇದನೆ ಉಂಟಾಗುತ್ತದೆ. ಇದರಿಂದ ಮಾನಸಿಕ ಉಲ್ಲಾಸವಾಗಿ ಬೇಗನೆ ನಿದ್ದೆ ಆವರಿಸುತ್ತದೆ. ರಾಗಗಳನ್ನು ಕೇಳಿದಾಗ ಲಾಲಿ ಹಾಡು ಕೇಳಿದಂತಹ ಅನುಭವವಾಗುತ್ತದೆ. ಕರುಣಾ, ಭಕ್ತಿ, ವಾತ್ಸಲ್ಯ ರಸ ಸೂಸುವ ಈ ರಾಗ ಮಕ್ಕಳೂ ಸೇರಿದಂತೆ ಎಲ್ಲರಿಗೂ ನಿದ್ದೆಗೆ ಬಹಳ ಸಹಾಯಕವಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.


ರಾಗಗಳಿಂದ ನಿದ್ರಾ ಸಮಸ್ಯೆ ದೂರವಾದ ಬಗ್ಗೆ ಸುದೀರ್ಘ ಇತಿಹಾಸವೂ ಇದೆ. ತಾನ್‌ಸೇನ್‌ ಸಂಗೀತದಲ್ಲಿ ಅನೇಕ ಪ್ರಯೋಗ ಮಾಡಿ ದೀಪ್‌ ರಾಗ, ಬೈಜೂಬಾವ್ರ ರಾಗ ಬಳಸಿ ನಿದ್ದೆಯ ಜತೆಗೆ ತಲೆನೋವು ಸಮಸ್ಯೆ ಕೂಡ ಬಗೆಹರಿಸಿಕೊಂಡಿದ್ದನಂತೆ. ಜಹಾಂಗೀರ್‌ ಒಮ್ಮೆ ನಿದ್ರಾಹೀನತೆಯಿಂದ ಬಳಲಿದಾಗ ತಂಬೂರಿ ಶ್ರುತಿ ಮಾಡಿ ಅದರ ನಾದದಿಂದ ಮಂಪರು ಬಂದು ನಿದ್ದೆ ಬರುವ ಹಾಗೆ ಆಯಿತು. ಹೀಗಾಗಿ ರಾಗಗಳು ನಿದ್ದೆ ಸಮಸ್ಯೆಯನ್ನು ದೂರ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಿವೆ.


ಹಳೆಯ ಹಿಂದಿ ಚಿತ್ರಗೀತೆಗಳನ್ನು ಆಲಿಸುವ ಆಸಕ್ತಿಯುಳ್ಳವರು ನಿದ್ದೆ ಸಮಸ್ಯೆ ಇದ್ದರೆ ಮಧುಮತಿ ಚಿತ್ರದ ‘ಆಜಾರೇ ಪರದೇಸಿ..’ ಹಾಡು ಕೇಳಬಹುದು. ಇದು ಸುಪ್ರಸಿದ್ಧ ರಾಗ ‘ಭಾಗೇಶ್ರೀ’ಯಲ್ಲಿದ್ದು ನಿದ್ರಾಹೀನತೆಗಾಗಿ ಸಂಗೀತ ಚಿಕಿತ್ಸೆಯಲ್ಲಿ ಬಳಸಲಾಗಿದೆ. ಕೆಲವೊಂದು ರಾಗಗಳು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ದೂರ ಮಾಡಲು ಸಹಕಾರಿ. ಕೊಳಲು ಕೇಳಿ ನಿದ್ದೆ ಮಾಡಿ. ಕೊಳಲ ನಾದ ನಿದ್ದೆ ಬರಿಸಲು ಹೇಳಿ ಮಾಡಿಸಿದಂತಹ ವಾದ್ಯ. ಬೆಂಗಳೂರಿನಲ್ಲಿ ವಿದ್ವಾನ್‌ ಶಂಕರರಾವ್‌ ಕೊಳಲಿನ ಮೂಲಕ ಸಂಗೀತ ಚಿಕಿತ್ಸೆ ನೀಡುತ್ತಾರೆ. ನಿದ್ರೆ ಸಮಸ್ಯೆ ಎದುರಿಸುವವರು ಮಾತ್ರವಲ್ಲ ಅನೇಕ ಆಸ್ತಮಾ ರೋಗಿಗಳು ಸಹ ಇವರ ಚಿಕಿತ್ಸೆಯಿಂದ ಸಂಪೂರ್ಣ ಪ್ರಯೋಜನ ಪಡೆದವರಿದ್ದಾರೆ. ಜೊತೆಗೆ ಕೊಳಲಿನಲ್ಲಿ ಮೆಡಿಟೇಷನ್ ಆಲ್ಬಂಗಳು ಬಂದಿವೆ, ಇವುಗಳನ್ನು ಮಲಗುವ ಮುನ್ನ ಕೇಳಿದರೆ ಚೆನ್ನಾಗಿ ನಿದ್ದೆ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.