ADVERTISEMENT

ಕೂದಲು ಆರೈಕೆ | ನ್ಯಾನೊಪ್ಲಾಸ್ಟಿಯಾ ಕೆರಾಟಿನ್ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 0:11 IST
Last Updated 24 ಆಗಸ್ಟ್ 2024, 0:11 IST
   

ಒರಟುಕೂದಲು, ತಲೆಹೊಟ್ಟು, ಅಗತ್ಯಕ್ಕಿಂತ ಹೆಚ್ಚು ಕೂದಲು ಉದುರುವುದು ಸೇರಿ ಹಲವು ಕೇಶಸಮಸ್ಯೆಗಳು ಆಗಾಗ್ಗೆ ಎಲ್ಲರನ್ನೂ ಕಾಡುತ್ತವೆ. ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಕೇಶರಾಶಿ ನಳನಳಿಸುವಂತೆ ಮಾಡಲು ಹಲವು ವಿಧಾನಗಳಿವೆ.

ಆರೋಗ್ಯಯುತ ಕೂದಲನ್ನು ಹೊಂದಿರುವುದು ಸುಲಕ್ಷಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಾಗಾಗಿ ಕೇಶ ಆರೈಕೆಯು ಜೀವನದ ಭಾಗವಾಗಿದೆ. ದಟ್ಟ, ನೀಳ ಕೊದಲು ಹೊಂದುವುದಕ್ಕೆ ಉತ್ತಮ ಆರೋಗ್ಯವು ಕಾರಣವಾಗಿದೆ. ಕೂದಲ ಆರೈಕೆಗೆ ಹೆಚ್ಚು ಗಮನ ನೀಡುತ್ತಿರುವ ಹೊತ್ತಿನಲ್ಲಿ ಕೇಶ ಆರೈಕೆಗೆಂದೇ ಮೀಸಲಾದ ಅತ್ಯಾಧುನಿಕ ತಂತ್ರಜ್ಞಾನ ನ್ಯಾನೊಪ್ಲಾಸ್ಟಿಯಾ ಮತ್ತು ಕೆರಾಟಿನ್‌ ಚಿಕಿತ್ಸೆಗಳ ಕುರಿತು ತಿಳಿಯುವ ಅಗತ್ಯವಿದೆ.

ಕೂದಲಿನ ಸಮಸ್ಯೆಗಳೇನು?

ADVERTISEMENT

ಸೀಳು ಕೂದಲು, ತಲೆ ಹೊಟ್ಟು, ಕಳೆಗುಂದಿರುವುದು, ಬೇಗ ಸಿಕ್ಕುಸಿಕ್ಕಾಗಿ ತನ್ನ ನುಣುಪು ಕಳೆದುಕೊಳ್ಳುವುದು, ಜಿಡ್ಡುಗಟ್ಟಿದ ಕೂದಲು, ಬಹುಬೇಗನೇ ಕೂದಲು ಬಿಳಿಯಾಗುವುದು, ಅಗತ್ಯಕ್ಕಿಂತ ಹೆಚ್ಚು ಕೂದಲು ಉದುರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಕಾಣಬಹುದು. ಆರೋಗ್ಯಯುತ ಜೀವನ, ಸಮತೋಲಿತ ಆಹಾರ ಸೇವನೆಯು ಕೂದಲ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 ಕಾರಣಗಳೇನು?

ಕ್ಲೋರೈಡ್‌ಯುಕ್ತ ನೀರಿನ ಅತಿ ಬಳಕೆ, ಅತಿಯಾದ ಬಿಸಿನೀರಿನ ಬಳಕೆ, ವಾಯುಮಾಲಿನ್ಯ, ಅತಿಯಾದ ಬಿಸಿಲು ಅಥವಾ ತೇವಾಂಶದಿಂದ ಕೂಡಿದ ವಾತಾವರಣ, ವಿಟಮಿನ್‌ ಕೊರತೆ ಅಥವಾ ಇನ್ನಿತರೆ ದೈಹಿಕ ಕಾಯಿಲೆಗಳಿಂದಲೂ ಕೂದಲು ಉದುರುವುದು, ಕಳೆಗುಂದುವ ಸಮಸ್ಯೆ ಉಂಟಾಗಬಹುದು. ಕಾಲ ಕಾಲಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸೇವಿಸುವುದರ ಜತೆಗೆ ಬಾಹ್ಯ ಆರೈಕೆಯು ಬಹಳ ಮುಖ್ಯ.

ಕೇಶ ಆರೈಕೆಗೆ ಸಂಬಂಧಪಟ್ಟಂತೆ ಚಿಕಿತ್ಸೆಗಳಲ್ಲಿ ನ್ಯಾನೊಪ್ಲಾಸ್ಟಿಯಾ ಮತ್ತು ಕೆರಾಟಿನ್‌ ಚಿಕಿತ್ಸೆಗಳು ಪ್ರಮುಖವಾದವು. ಕೂದಲನ್ನು ಬೇರು ಸಮೇತ ಬಲಪಡಿಸುವಲ್ಲಿ ಈ ಎರಡೂ ಚಿಕಿತ್ಸೆಗಳು ಉತ್ತಮವಾಗಿವೆ.

ನ್ಯಾನೊಪ್ಲಾಸ್ಟಿಯಾ ಚಿಕಿತ್ಸೆ ಹೇಗಿರಲಿದೆ?

ಮಳೆಗಾಲ ಮತ್ತು ತೇವಾಂಶದಿಂದ ಕೂಡಿದ ವಾತಾವರಣದ ಸಮಸ್ಯೆಯಲ್ಲಿ ಕೂದಲು ಸಿಕ್ಕುಸಿಕ್ಕಾಗಿ ಒರಟಾಗುತ್ತದೆ. ಇದನ್ನು ನಿಯಂತ್ರಿಸುವಲ್ಲಿ ಈ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ನ್ಯಾನೊಪ್ಲಾಸ್ಟಿಯಾ ಚಿಕಿತ್ಸೆಯಲ್ಲಿ ನ್ಯಾನೊ ಗಾತ್ರದ ಪೋಷಕಾಂಶ ಕಣಗಳು ಮತ್ತು ಅಮೈನೋ ಆಮ್ಲಗಳ ಸಮಪ್ರಮಾಣದ ಮಿಶ್ರಣವನ್ನು ಕೂದಲಿಗೆ ನೀಡಲಾಗುತ್ತದೆ. ಇದರಿಂದ ಕೂದಲನ್ನು ಆಳದಲ್ಲಿಯೇ ಸರಿಪಡಿಸಲು ನೆರವಾಗುತ್ತದೆ. ಇದರಲ್ಲಿ ಹಾನಿಕಾರಕವೆನಿಸುವ ರಾಸಾಯನಿಕ ಅಂಶಗಳು ಇರುವುದಿಲ್ಲ. ಎಷ್ಟೇ ಒರಟಾದ ಕೂದಲು ಇದ್ದರೂ ಶೇ 70ರಿಂದ 90ರಷ್ಟು ಭಾಗ ನಯವಾಗಿಸುವಲ್ಲಿ ಸಹಕರಿಸುತ್ತದೆ.

ನ್ಯಾನೊಪ್ಲಾಸ್ಟಿಯಾ ಚಿಕಿತ್ಸೆಯಿಂದ ರೇಷ್ಮೆಯಂಥ, ಹೊಳೆಯುವ, ಒರಟು ಮುಕ್ತ ಕೂದಲು ಪಡೆಯಬಹುದು. ಒಮ್ಮೆ ಚಿಕಿತ್ಸೆ ಪಡೆದುಕೊಂಡರೆ ಎರಡರಿಂದ ಆರು ತಿಂಗಳವರೆಗೆ ಕೂದಲು ನಯವಾಗಿಯೇ ಇರುತ್ತದೆ. ಸರಿಯಾದ ಕಾಳಜಿ ಇದ್ದರೆ ಚಿಕಿತ್ಸೆಯ ಬಾಳಿಕೆಯ ಅವಧಿ ಹೆಚ್ಚಿನದ್ದಾಗಿರುತ್ತದೆ.

ಯಾರಿಗೆ ಸೂಕ್ತವಲ್ಲ?

ನಯ, ಒರಟು ಹಾಗೂ ಗುಂಗುರು ಹೀಗೆ ಎಲ್ಲ ವಿಧದ ಕೂದಲುಗಳಿಗೂ ಈ ಚಿಕಿತ್ಸೆ ಸೂಕ್ತವಾಗಿದೆ. ಆದರೆ ಈ ಚಿಕಿತ್ಸೆಯನ್ನು ಅನ್ವಯಿಸುವ ದೃಷ್ಟಿಯಿಂದ ನೋಡಿದರೆ ಚಿಕ್ಕ ಸುರುಳಿಯಾಕಾರದ ಕೂದಲುಗಳಿಗೆ ಸೂಕ್ತವಲ್ಲ. ಸಕಾಲದಲ್ಲಿ ಆರೈಕೆ ಮಾಡುವುದರಿಂದ ಯಾವುದೇ ಸಮಸ್ಯೆ ಉಂಟಾಗದು.

ಪೋಷಕಾಂಶಗಳು ಮತ್ತು ಅಮೈನೋ ಆಮ್ಲಗಳ ಬಳಕೆಯಿಂದ ಕೂದಲು ಆಂತರಿಕವಾಗಿ ಬಲಗೊಳ್ಳುತ್ತದೆ. ಸೀಳುಕೂದಲು ಕಡಿಮೆ ಮಾಡಲು ನೆರವಾಗುತ್ತದೆ. ಸ್ಟ್ರೇಟ್‌ನರ್‌ನಿಂದ ಕೂದಲನ್ನು ನಯವಾಗಿಸುವ, ಆಗಾಗ್ಗೆ ಬಣ್ಣ ಹಚ್ಚುವ, ರಾಸಾಯನಿಕ ಅಂಶಗಳಿಗೆ ಒಡ್ಡಿಕೊಳ್ಳುವ ಮಹಿಳೆಯರಿಗೆ ಈ ಚಿಕಿತ್ಸೆಯು ಸೂಕ್ತವಾಗಿದೆ.

ಕೆರಾಟಿನ್‌ ಚಿಕಿತ್ಸೆ

ಕೆರಾಟಿನ್‌ ಚಿಕಿತ್ಸೆಯಿಂದ ಕೂದಲು ತಾತ್ಕಾಲಿಕವಾಗಿ ನಯಗೊಳ್ಳುತ್ತದೆ. ಸಹಜವಾದ ನೇರ ಕೂದಲಿಗೂ ಪರಿಹಾರ ನೀಡಬಹುದು. ಉತ್ತಮ ನಿರ್ವಹಣೆಯಿಂದ ಪರಿಣಾಮವು ಎರಡರಿಂದ ಮೂರು ತಿಂಗಳ ಕಾಲ ಇರುತ್ತದೆ.

ಕೆರಾಟಿನ್‌ ಎಂದರೆ ಕೂದಲಿನ ಹೊರ ಪದರ ಮತ್ತು ಆಂತರಿಕ ರಚನೆಯನ್ನು ರೂಪಿಸುವ ಪ್ರೋಟಿನ್‌ ಇರುವ ಅಂಶ. ಶುಷ್ಕತೆ, ಹಾನಿಗೊಳಗಾಗಿ ಕೂದಲು ಒರಟಾಗಬಹುದು. ಈ ಚಿಕಿತ್ಸೆಯಲ್ಲಿ ಕೂದಲಿನ ರಂಧ್ರಗಳಿಗೂ ಪೋಷಕಾಂಶ ದೊರೆಯುವುದರಿಂದ ಕೇಶ ನಳನಳಿಸುತ್ತದೆ.

ಆದರೆ ಈ ಚಿಕಿತ್ಸೆಯಲ್ಲಿ ಫಾರ್ಮಾಲ್ಡಿಹೈಡ್‌ ಅಂಶ ಇಲ್ಲದೇ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಕೆಲವು ಕೆರಾಟಿನ್‌ನಲ್ಲಿ ಈ ಅಂಶಗಳಿರುತ್ತವೆ. ಇವು ಕಣ್ಣು, ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಲೇಬಲ್‌ಗಳನ್ನು ಪರಿಶೀಲಿಸಿ ಚಿಕಿತ್ಸೆ ಪಡೆಯುವುದು ಮುಖ್ಯ. ಕೂದಲನ್ನು ಬಾಹ್ಯವಾಗಿ ಹೆಚ್ಚು ಮೃದುಗೊಳಿಸಲು ನ್ಯಾನೊಪ್ಲಾಸಿಯಾದಂತೆ ಕೆರಾಟಿನ್‌ ಚಿಕಿತ್ಸೆಯು ಪರಿಣಾಮಕಾರಿಯೇ. ಆದರೆ, ನ್ಯಾನೊಪ್ಲಾಸ್ಟಿಯಾದಷ್ಟು ಆಳವಾದ ಕಂಡೀಷನಿಂಗ್‌ ಮತ್ತು ಬೇರು ಮಟ್ಟದಲ್ಲಿಯೇ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆರಾಟಿನ್‌ ಕೆಲಸ ಮಾಡುವುದಿಲ್ಲ.

ನಿರ್ದಿಷ್ಟ ಅವಧಿಗೆ ಕೂದಲನ್ನು ನಯವಾಗಿಸಲು ಇದೊಂದು ಉಪಯುಕ್ತ ಚಿಕಿತ್ಸೆಯಾಗಿದೆ. ಕೆರಾಟಿನ್ ಚಿಕಿತ್ಸೆಗಿಂತಲೂ ನ್ಯಾನೊಪ್ಲಾಸ್ಟಿಯಾ ಸ್ವಲ್ಪ ದುಬಾರಿಯಾಗಿದೆ. ಆದರೆ ಒರಟು, ದಪ್ಪ ಕೂದಲನ್ನು ನಯವಾಗಿಸಿ, ಅಲೆಯಂತೆ ಮಾಡಲು ಈ ಚಿಕಿತ್ಸೆ ಪರಿಣಾಮಕಾರಿ. ಹೊಳೆಯುವ ಕೂದಲಿಗೆ ಬೇಡಿಕೆ ಹೆಚ್ಚಿರುವುದರಿಂದ ಕೂದಲಿಗೆ ಹಾನಿಯಾಗದಂತೆ ಇರುವ ಉತ್ತಮ ಗುಣಮಟ್ಟದ ಚಿಕಿತ್ಸೆಗಳನ್ನು ಪಡೆಯುವುದೂ ಮುಖ್ಯವಾಗಿರುತ್ತದೆ.

-ಡಾ.ವಿಜಯಗೌರಿ ಭಂಡಾರು, ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಕೂದಲ ಆರೈಕೆಗೆ ಮನೆಮದ್ದು

*ವಾರಕ್ಕೆ ಎರಡೂ ಬಾರಿಯಾದರೂ ಉತ್ತಮ ಶ್ಯಾಂಪೂ ಹಾಗೂ ಕಂಡೀಷನರ್‌ ಬಳಸಿ ಸ್ನಾನ ಮಾಡಿ.

*ಅತಿಯಾದ ದೂಳಿನಲ್ಲಿ ಓಡಾಡಬೇಕಾದ ಪರಿಸ್ಥಿತಿ ಬಂದರೆ, ಹೆಲ್ಮೆಟ್‌ ಹಾಕಿಕೊಳ್ಳುವಾಗ ಕಡ್ಡಾಯವಾಗಿ ಕೂದಲಿಗೆ ಹೊಂದುವ ಬಟ್ಟೆಯನ್ನು ಧರಿಸಿ, ರಕ್ಷಣೆ ಪಡೆಯಿರಿ.

*ವಾರಕ್ಕೆ ಒಮ್ಮೆಯಾದರೂ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ

**ಮಳೆಯಲ್ಲಿ ನೆನೆದರೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಅತಿಯಾದ ಬಿಸಿ ನೀರಿನ ಬಳಕೆ ಮಾಡದಿರಿ.

*ದೇಹದ ಉಷ್ಣವನ್ನು ಸುಸ್ಥಿತಿಯಲ್ಲಿಡಿ. ಅತಿ ಉಷ್ಣದಿಂದಲೂ ಕೂದಲು ಉದುರುವ ಸಾಧ್ಯತೆ ಹೆಚ್ಚು.

*ಮೂರು ತಿಂಗಳಿಗೊಮ್ಮೆಯಾದರೂ ಸಣ್ಣ ಪ್ರಮಾಣದಲ್ಲಿ ಕೂದಲಿಗೆ ಕತ್ತರಿ ಹಾಕಿ. ಇದರಿಂದ ಹೊಸ ಕೂದಲ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

*ರಾಸಯನಿಕಯುಕ್ತ ಹೇರ್‌ಡೈ ಬಳಸುವ ಮುನ್ನ ಯೋಚಿಸಿ.

*ಆಗಾಗ್ಗೆ ತಲೆಹೊಟ್ಟು ಆಗುತ್ತಿದ್ದರೆ ಅದಕ್ಕೆ ಸೂಕ್ತ ಚಿಕತ್ಸೆ ಪಡೆದುಕೊಳ್ಳಿ. ತಲೆಹೊಟ್ಟಿನಿಂದಲೂ ಕೂದಲ ಬೆಳವಣಿಗೆಗೆ ತೊಂದರೆಯಾಗುತ್ತದೆ. 

*ಸೀಳು ಕೂದಲಿದ್ದರೆ ಕೂದಲಿನ ಬೆಳವಣಿಗೆಗೆ ತೊಂದರೆಯಾಗುತ್ತದೆ. ಹಾಗಾಗಿ ಅಂಥ ಕೂದಲನ್ನು ತೆಗೆಯಿರಿ.

*ರಾಸಯನಿಕಯುಕ್ತ ಶ್ಯಾಂಪು, ಸೋಪುಗಳ ಬಳಕೆ ಬೇಡ.

*ವಿಟಮಿನ್‌ ಇ ಅಂಶವಿರುವ ಆಹಾರವನ್ನು ಯಥೇಚ್ಛವಾಗಿ ಸೇವಿಸಿ. ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ ಹೇರ್‌ಪ್ಯಾಕ್‌ ಮಾಡಿಕೊಳ್ಳಿ. ಉದಾಹರಣೆಗೆ ನೆನೆಸಿಟ್ಟ ಮೆಂತ್ಯೆ ಕಾಳನ್ನು ರುಬ್ಬಿ ತಲೆಗೆ ಹಚ್ಚುವುದು, ದಾಸವಾಳ, ಭೃಂಗರಾಜವನ್ನು ಅರೆದು ಹಚ್ಚುವುದು. ಕೂದಲಿಗೆ ಯಾವುದು ಸೂಕ್ತ ಎಂಬುದನ್ನು ಮೊದಲು ನಿರ್ಧರಿಸಿ, ನಂತರ ಹೇರ್‌ಪ್ಯಾಕ್ ಮಾಡಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.