ADVERTISEMENT

‘ಮಗು ಅಳ್ತಾ ಇದೆ!’ - ಮಗುವಿನ ಅಳುವಿಗೂ ಹಲವು ಕಾರಣ

ಡಾ.ಕುಶ್ವಂತ್ ಕೋಳಿಬೈಲು
Published 31 ಜನವರಿ 2023, 2:28 IST
Last Updated 31 ಜನವರಿ 2023, 2:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಾಯಿಯ ಗರ್ಭದಿಂದ ಹೊರಬಂದ ಶಿಶುವಿನ ಮೊದಲ ಅಳುವನ್ನು ಕೇಳಲು ಉಸಿರು ಬಿಗಿ ಹಿಡಿದು ವೈದ್ಯರು ಕಾಯುತ್ತಿರುತ್ತಾರೆ. ನವಜಾತ ಶಿಶುವು ತಾಯಿಯ ಗರ್ಭದಿಂದ ಹೊರಬಂದ ನಂತರ ಅದರ ಉಸಿರಾಟವು ಪ್ರಾರಂಭವಾಗಲು ಮಗು ಅಳುವುದು ಅಗತ್ಯ. ಒಂದು ವೇಳೆ ಮಗುವು ಅಳದೆ ಹೋದರೆ ವೈದ್ಯರು ಅಳಬೇಕಾಗಿ ಬರಬಹುದು! ಮಗುವಿನ ಮೊದಲ ಅಳು ಮಗುವಿನ ಶ್ವಾಸಕೋಶದ ಒತ್ತಡವನ್ನು ಕಡಿಮೆ ಮಾಡಿ ಮಗುವಿನ ಶ್ವಾಸಕೋಶದೊಳಗೆ ಗಾಳಿಯು ಸಂಚರಿಸುವಂತೆ ಮಾಡುತ್ತದೆ.

ಮಗುವು ಜೀವಂತವಿರಲು ಶ್ವಾಸಕೋಶದೊಳಗಿನ ಗಾಳಿಯಲ್ಲಿರುವ ಆಮ್ಲಜನಕವು ಮಗುವಿನ ರಕ್ತದೊಳಗೆ ಸೇರಿಕೊಳ್ಳುವ ಅತ್ಯಗತ್ಯವಾದ ಪ್ರಕ್ರಿಯೆಗೆ ನಾಂದಿ ಹಾಡುವ ಕೆಲಸವನ್ನೂ ಮಗುವಿನ ಮೊದಲ ಅಳು ಮಾಡುತ್ತದೆ. ಮಗುವು ನಗುವುದನ್ನು ಕಲಿಯಲು ಹಲವು ವಾರಗಳು ಮತ್ತು ಮಗುವು ಶಬ್ದಗಳನ್ನು ಉಚ್ಚರಿಸಲು ಕೆಲವು ವರ್ಷಗಳು ಬೇಕಾಗುವ ಕಾರಣದಿಂದ ಮಗುವು ಸುತ್ತಮುತ್ತಲಿನ ಪರಿಸರದೊಂದಿಗೆ ಮತ್ತು ಜನರೊಂದಿಗೆ ತನ್ನ ಅಳುವಿನ ಮೂಲಕ ಸಂವಾದವನ್ನು ಮಾಡುತ್ತದೆ.

ತಾಯಿ ಮತ್ತು ಮಗುವಿನ ಒಡನಾಟವು ಹೆಚ್ಚಾದಂತೆ ತಾಯಿಯು ಮಗುವಿನ ವಿವಿಧ ಮಾದರಿಯ ಅಳುವನ್ನು ಗುರುತಿಸುವ ಸೂಕ್ಷ್ಮತೆ ಮತ್ತು ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾಳೆ. ಹಸಿವಿನ ಅಳು, ನಿದ್ರೆ ಬಂದಾಗಿನ ಅಳು, ಒದ್ದೆ ಡಯಪರ್‌ನಿಂದ ತೊಂದರೆ ಅನುಭವಿಸುವಾಗಿನ ಅಳು – ಹೀಗೆ ಈ ಸಾಮಾನ್ಯ ಕಾರಣಗಳಿಂದಾಗಿ ಆರೋಗ್ಯವಂತ ಮಗುವು ವಿವಿಧ ಮಾದರಿಗಳಲ್ಲಿ ಅಳುತ್ತದೆ. ಮಗುವಿನ ಅಳುವಿನ ಶೈಲಿಯನ್ನು ಗಮನಿಸುತ್ತಾ ಹೆಚ್ಚಿನ ತಾಯಂದಿರು ಮಗುವಿನ ಅಳುವಿನ ಹಿಂದಿರುವ ಕಾರಣವನ್ನು ಗುರುತಿಸಬಲ್ಲವರಾಗಿರುತ್ತಾರೆ.

ADVERTISEMENT

ಅನಾರೋಗ್ಯ ಪೀಡಿತವಾದಾಗಲೂ ಮಗುವು ಅಳುವು ಶೈಲಿಯು ವಿಭಿನ್ನವಾಗಿರುವುದನ್ನು ತಜ್ಞ ವೈದ್ಯರು ಗುರುತಿಸಬಲ್ಲರು. ಥೈರಾಯ್ಡ್ ಸಮಸ್ಯೆಯಿರುವ ಮಗುವಿನ ಗೊಗ್ಗರು ಮಾದರಿಯ ಆಳು ಮತ್ತು ಮಗುವಿಗೆ ಮೆದುಳಿನ ಸೋಂಕು ಅಥವಾ ಜಾಂಡೀಸ್ ಇದ್ದಾಗ ಎತ್ತರದ ಸ್ವರದಲ್ಲಿ ಮೂಡುವ ಹರಿತವಾದ ಅಳುವಿನ ಬಗ್ಗೆಯೂ ವೈದ್ಯಕೀಯ ರಂಗದಲ್ಲಿ ಉಲ್ಲೇಖವಿದೆ. ವಿಜ್ಞಾನಿಗಳು ಈಗ ಒಂದು ಹೆಜ್ಜೆ ಮುಂದೆ ಹೋಗಿ ಮಗುವಿನ ಅಳುವಿನ ಮಾದರಿಯನ್ನು ಗಮನಿಸಿ ಮಗುವಿನಲ್ಲಿ ಮುಂದೆ ಬರಬಹುದಾದ ಮಾನಸಿಕ ಕಾಯಿಲೆಗಳನ್ನೂ ಪಟ್ಟಿಮಾಡಬಲ್ಲರು.

ಮಗುವು ಅಳುವುದಕ್ಕೆ ಕಾರಣವು ಏನೇ ಇರಬಹುದು. ಆದರೆ ಮಗುವಿನ ಅಳು ಕಡಿಮೆಯಾಗದಿದ್ದರೆ ಅದು ಹೆತ್ತವರಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತದೆ. ತಾಯಿಯ ಗ್ರಹಿಕೆಯು ಸೂಕ್ಷ್ಮವಾಗಿರದಿದ್ದರೆ ಮಗುವಿನ ಅಳು ಅನೇಕ ತಪ್ಪು ಕಲ್ಪನೆಗಳಿಗೆ ಮತ್ತು ಅವಾಂತರಕ್ಕೂ ದಾರಿಯಾಗಬಹುದು. ಮಗುವಿಗೆ ಅತಿ ಬಿಗಿಯಾದ ಬಟ್ಟೆ ತೊಡಿಸಿದಲ್ಲಿ ಅಥವಾ ಮಗುವಿನ ಮೃದುವಾದ ತ್ವಚೆಯ ಮೇಲೆ ಅಲರ್ಜಿಯನ್ನು ಉಂಟು ಮಾಡುವ ಉತ್ಪನ್ನಗಳನ್ನು ಬಳಸಿದಲ್ಲಿಯೂ ಮಗುವು ಅಳಬಹುದು. ಮಗುವು ಭಿನ್ನ ಕಾರಣಕ್ಕೆ ಅಳುತ್ತಿದ್ದಾಗಲೂ ಮಗು ಹಸಿವಿನಿಂದ ಅಳುತ್ತಿದೆ ಎಂಬ ತಪ್ಪು ಕಲ್ಪನೆಯಲ್ಲಿ ಕೆಲವು ತಾಯಂದಿರು ಮಗುವಿಗೆ ತಮ್ಮ ಹಾಲು ಸಾಕಾಗುತ್ತಿಲ್ಲವೆಂದು ಆತಂಕಕ್ಕೆ ಒಳಗಾಗುತ್ತಾರೆ.

ಇದೇ ಆತಂಕ ಮತ್ತು ತಪ್ಪು ಕಲ್ಪನೆಯು ಅವರನ್ನು ಮಗುವಿಗೆ ಲ್ಯಾಕ್ಟೋಜನ್ ನೀಡಲು ಪ್ರೇರೇಪಿಸುತ್ತದೆ. ಮಗುವಿನ ತೂಕ ನಿರಂತರವಾಗಿ ಹೆಚ್ಚಾಗುತ್ತಿದ್ದರೂ, ಮಗುವು ಅಳುತ್ತಿದ್ದರೆ ಅದಕ್ಕೆ ಕಾರಣ ತಾಯಿಯಲ್ಲಿ ಎದೆಹಾಲಿನ ಕೊರತೆ ಆಗಿರುವುದಿಲ್ಲ. ತಾಯಿಯಲ್ಲಿ ಎದೆಹಾಲಿನ ಉತ್ಪಾದನೆಯು ಹಾರ್ಮೋನ್ ಮೇಲೆ ಅವಲಂಬಿತವಾಗಿರುವುದರಿಂದ ಒತ್ತಡ ಮತ್ತು ಆತಂಕಗಳು ಎದೆಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡಿ ಹೊಸ ಸಮಸ್ಯೆಯನ್ನು ಸೃಷ್ಟಿಸಬಹುದು. ಹಾಗಾಗಿ ಮಗುವು ಯಾವುದೋ ಕಾರಣದಿಂದ ಅಳುತ್ತಿದ್ದಾಗ ಮನೆಯವರು ಮಗುವು ಹಸಿವಿನಿಂದ ಅಳುತ್ತಿದೆ ಎಂಬ ಭ್ರಮೆಗೆ ಬೀಳಬಾರದು; ಹಸಿವಿಲ್ಲದಿರುವ ಮಗುವಿಗೂ ಹಾಲುಣಿಸುವಂತೆ ತಾಯಿಯ ಮೇಲೆ ಒತ್ತಡ ಹೇರಬಾರದು.

ಒಂದರಿಂದ ಮೂರು ತಿಂಗಳು ಪ್ರಾಯದ ಶಿಶುಗಳು ಸಂಜೆಯ ವೇಳೆ ಹೊಟ್ಟೆಯನ್ನು ಬಿಗಿಯಾಗಿಸಿಕೊಂಡು ತಮ್ಮ ಕೈ ಕಾಲುಗಳನ್ನು ಮಡಚಿಕೊಂಡು ಅಳುವುದು ಸಾಮಾನ್ಯ. ಹೊಟ್ಟೆಯ ಕೋಲಿಕ್ ಕಾರಣದಿಂದ ಹುಟ್ಟುವ ಈ ಮಾದರಿಯ ಅಳು ಮಗುವಿನ ವಿಕಾಸನದ ಒಂದು ಭಾಗ. ಕೆಲವೊಮ್ಮೆ ಗಂಟೆಗಳ ಕಾಲ ಮಗುವು ಅತ್ತಾಗ ಹೆತ್ತವರು ಆತಂಕಕ್ಕೆ ಒಳಗಾಗುತ್ತಾರೆ. ಮಗುವಿನ ಕರುಳಿನೊಳಗಿರುವ ಸೂಕ್ಷ್ಮಾಣುಜೀವಿಗಳನ್ನು ಮತ್ತು ಮಗುವಿನ ಬೆಳೆಯುತ್ತಿರುವ ಮೆದುಳು ಹೊರಸೂಸುವ ರಾಸಾಯನಿಕಗಳು ಈ ಕೋಲಿಕ್ ಮಾದರಿಯ ಹೊಟ್ಟೆಯ ನೋವಿಗೆ ಕಾರಣವಾಗಿರಬಹುದೆಂದು ಅಂದಾಜಿಸಿದರೂ ಇದರ ಬಗ್ಗೆ ಸ್ಪಷ್ಟವಾದ ಅರಿವು ಸಿಕ್ಕಿಲ್ಲ. ಮೂರು ತಿಂಗಳ ನಂತರದ ದಿನಗಳಲ್ಲಿ ಈ ನೋವು ಮಾಯವಾಗುವುದರಿಂದ ಈ ಹೊಟ್ಟೆಯ ನೋವನ್ನು ಮಗುವಿನ ವಿಕಸನದ ಭಾಗವಾಗಿಯೂ ವಿಜ್ಞಾನ ಗುರುತಿಸುತ್ತದೆ.

ಹೆತ್ತವರು ತಮ್ಮ ಆತಂಕದಿಂದ ಮಗುವಿಗೆ ಗ್ರೈಪ್ ವೈನ್, ಪ್ರೋಭಯೋಟಿಕ್ ಮುಂತಾದ ವಸ್ತುಗಳನ್ನು ಕೊಟ್ಟರೂ ಅದು ನೋವನ್ನು ಶಮನ ಮಾಡುವಲ್ಲಿ ಹೆಚ್ಚು ಉಪಯೋಗವಾದ ನಿದರ್ಶನಗಳಿಲ್ಲ! ಮಗುವಿನ ಅಳುವಿಗೆ ಗಂಭೀರ ಸೋಂಕುಗಳೂ ಕಾರಣವಾಗಿರಬಹುದು. ಆಗ ಮಗುವಿನ ಅಳು ನಿರಂತರವಾಗಿರುತ್ತದೆ. ಅದನ್ನು ನಿರ್ಲಕ್ಷ್ಯಮಾಡದೆ ತಜ್ಞವೈದ್ಯರಿಂದ ಪರೀಕ್ಷೆ ಮಾಡಿಸಬೇಕು.

ನಮ್ಮ ಮೌನಕ್ಕೆ ಸಾವಿರ ಅರ್ಥಗಳಿರುವಂತೆ, ಮಗುವಿನ ಅಳುವಿಗೂ ಹಲವು ಕಾರಣಗಳಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.