ಬದಲಾದ ಜೀವನಶೈಲಿ, ಮನೋಧೋರಣೆಗಳು ಮನುಷ್ಯನನ್ನು ಸ್ವಸ್ಥ ಬದುಕಿನಿಂದ ದೂರ ಉಳಿಯುವಂತೆ ಮಾಡುತ್ತವೆ. ಜೊತೆಗೆ ಅತಿಯಾಗಿ ಬಳಕೆಯಾಗುತ್ತಿರುವ ಆಹಾರ ಸಂರಕ್ಷಕಗಳು, ರಾಸಾಯನಿಕ ಪದಾರ್ಥಗಳು, ಕೃಷಿಯಲ್ಲಿನ ರಸಗೊಬ್ಬರ, ಕೀಟನಾಶಕಗಳು.. ಇವು ಮನುಷ್ಯರಲ್ಲಿ ಕ್ಯಾನ್ಸರ್‌ನಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಲು ಕಾರಣವಾಗುತ್ತವೆ.
ಕ್ಯಾನ್ಸರ್ ಹರಡಲು ಕಾರಣಗಳೇನು?
ಅತಿಯಾದ ತಂಬಾಕು ಸೇವನೆ, ಮದ್ಯಪಾನದ ವ್ಯಸನ, ಸೂರ್ಯನ ನೇರಳಾತೀತ ಕಿರಣಗಳಿಗೆ(ಯು.ವಿ ರೇಸ್) ಅತಿಯಾಗಿ ಶರೀರವನ್ನು ಒಡ್ಡುವುದು, ವಿಕಿರಣಗಳ ಬಳಕೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ, ಅನುವಂಶಿಕತೆ.. ಇಂಥ ಹಲವು ಅಂಶಗಳು ಕ್ಯಾನ್ಸರ್ ಹರಡಲು ಕಾರಣವಾಗಬಹುದು.
ಅಧ್ಯಯನಗಳ ಪ್ರಕಾರ 2022ನೇ ಸಾಲಿನಲ್ಲಿ ದೇಶದಾದ್ಯಂತ 14.6 ಲಕ್ಷ ಮಂದಿಯಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗಿದೆ ಎಂದು ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ತನ್ನ ವರದಿಯಲ್ಲಿ ತಿಳಿಸಿದೆ. ಕ್ಯಾನ್ಸರ್‌ನಿಂದಾಗುವ ಮರಣ ಪ್ರಮಾಣ 2022ರಲ್ಲಿ 8.08 ಲಕ್ಷದಷ್ಟಿದ್ದು, 2025ರ ವೇಳೆ ಈ ಪ್ರಮಾಣ 15.7 ಲಕ್ಷಕ್ಕೆ ಏರಲಿದೆ ಎಂದು ಅಂದಾಜಿಸಿದೆ. ಪ್ರತಿ 9 ಭಾರತೀಯರಲ್ಲಿ ಒಬ್ಬರಿಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. 68 ಪುರುಷರಲ್ಲಿ ಒಬ್ಬರಿಗೆ ಶ್ವಾಸಕೋಶದ ಕ್ಯಾನ್ಸರ್ ಮತ್ತು 29 ಸ್ತ್ರೀಯರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಬಾಧಿಸುತ್ತದೆ ಎಂದು ಐಸಿಎಂಆರ್ ಅಧ್ಯಯನಗಳು ತಿಳಿಸಿವೆ.
ಕ್ಯಾನ್ಸರ್ ತಡೆ ಹೇಗೆ ?
lಮೊದಲನೆಯದಾಗಿ ಕ್ಯಾನ್ಸರ್ ತಪಾಸಣೆ (SCREENING)ಮಾಡಿಸಿಕೊಳ್ಳಬೇಕು. ಯಾವುದೇ ಕ್ಯಾನ್ಸರ್ ಇರಲಿ, ಮೊದಲಿಗೆ ರೋಗ ಪತ್ತೆ ಮಾಡಿ, ತ್ವರಿತಗತಿಯಲ್ಲಿ ಚಿಕಿತ್ಸೆಗೆ ಒಳಗಾಗಬೇಕು.
lಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಬೀಡಿ, ಸಿಗರೇಟು. ಹುಕ್ಕ ಸೇದುವುದು ಸೇರಿದಂತೆ ಎಲ್ಲ ರೀತಿಯ ತಂಬಾಕು ಸೇವನೆ (ಅಭ್ಯಾಸವಿದ್ದರೆ) ನಿಲ್ಲಿಸಬೇಕು. ಸರ್ಕಾರ, ಇವುಗಳ ಬಳಕೆಯಿಂದ ದೂರ ಉಳಿಯುವಂತೆ ಕಾನೂನು ಕ್ರಮಗಳನ್ನು ಅನುಷ್ಠಾನ ಮಾಡುವುದು ಅವಶ್ಯಕ. ಜನರಲ್ಲಿ ಈ ಬಗ್ಗೆ ಜಾಗೃತಿಯನ್ನೂ ಮೂಡಿಸಬೇಕು.
lನಿತ್ಯ 30 ರಿಂದ 45 ನಿಮಿಷಗಳ ಕಾಲ ಲಘು ವ್ಯಾಯಾಮ ಮಾಡಬೇಕು. ಯೋಗ, ನಡಿಗೆ, ಏರೋಬಿಕ್ಸ್‌ನಂತಹ ಚಟುವಟಿಕೆಗಳು ವ್ಯಾಯಾಮದ ಭಾಗವಾಗಿರಬೇಕು.
lಆಹಾರದಲ್ಲಿ ಸಂರಕ್ಷಕಗಳು(ಪ್ರಿಸರ್ವೆಟಿವ್ಸ್), ರಾಸಾಯನಿಕಗಳು, ಕೃತಕ ಬಣ್ಣಗಳು, ಸೋಡ, ಅತಿಯಾದ ಸಕ್ಕರೆಯುಕ್ತ ಆಹಾರ ಪದಾರ್ಥಗಳು, ರುಚಿಯನ್ನು ಹೆಚ್ಚಿಸಬಲ್ಲ ರಾಸಾಯನಿಕಗಳ ಬಳಕೆಯನ್ನು ಮಿತಿಗೊಳಿಸಬೇಕು.
lಸಾವಯವ ಕೃಷಿ ಉತ್ಪನ್ನಗಳನ್ನು ಬಳಸಬಹುದು. ಆಹಾರದಲ್ಲಿ ನವಣೆ, ಸಾಮೆ, ಸಜ್ಜೆಯಂತಹ ಸಿರಿಧಾನ್ಯಗಳ ಬಳಕೆ ಒಳ್ಳೆಯದು.
l ಊಟ, ಉಪಾಹಾರ ಕೊಂಡೊಯ್ಯುವ ಡಬ್ಬಿಗಳು ಪ್ಲಾಸ್ಟಿಕ್ ಮುಕ್ತವಾಗಿರಲಿ. ಊಟದ ತಟ್ಟೆ, ಲೋಟಗಳನ್ನೂ ಆ ಪಟ್ಟಿಗೆ ಸೇರಿಸಿಕೊಳ್ಳಿ.
lರೋಗನಿರೋಧಕ ಶಕ್ತಿ ಹೆಚ್ಚಿಸುವ ಸಿಟ್ರಿಕ್ ಅಂಶವಿರುವ (ಹುಳಿಯುಕ್ತ ಹಣ್ಣುಗಳು), ಹಣ್ಣು, ನಾರಿನಂಶವಿರುವ ತರಕಾರಿಗಳು, ಸೊಪ್ಪು, ಹಾಲಿನ ಉತ್ಪನ್ನಗಳು, ಸೀಫುಡ್ ಹೆಚ್ಚಾಗಿ ಬಳಸಿ. ಇದರಿಂದ ದೇಹದಲ್ಲಿ ‘ಫ್ರೀ ರಾಡಿಕಲ್ಸ್‘ ಅಂಶವನ್ನು ಕಡಿಮೆಯಾಗಿ, ಕ್ಯಾನ್ಸರ್ ಹರಡುವ ಜೀವಕೋಶಗಳ ಬೆಳವಣಿಗೆಯನ್ನು ಕುಂದಿಸಬಹುದು.
lಶರೀರದ ಯಾವುದೇ ಭಾಗದಲ್ಲಿ ದೀರ್ಘಕಾಲ ಗಂಟು, ಮಚ್ಚೆಗಳು ಉಳಿದುಕೊಂಡಿದ್ದು, ಅವು ಯಾವುದೇ ಚಿಕಿತ್ಸೆಗಳಿಂದ ನಿವಾರಣೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ, ಜೊತೆಗೆ, ಕಾರಣವಿಲ್ಲದೆ ತೂಕ ಕಡಿಮೆಯಾಗುತ್ತಿದ್ದರೆ, ಪದೇ ಪದೇ ಸೋಂಕುಗಳಿಗೆ ಒಳಗಾಗುತ್ತಿದ್ದರೆ, ಕಡ್ಡಾಯವಾಗಿ ವೈದ್ಯರ ಬಳಿ ತಪಾಸಣೆಗೆ ಹೋಗುವುದು ಅತ್ಯವ್ಯಶಕ.
ಚಿಕಿತ್ಸೆಗಳಿವೆ
ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗೆ ಕಿಮೋಥೆರಪಿ, ಇಮ್ಯೂನೋತೆರೆಪಿ, ವಿಕಿರಣಗಳ ಚಿಕಿತ್ಸೆ, ಟಾರ್ಗೆಟೆಡ್ ತೆರೆಪಿ, ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗಳು ಲಭ್ಯವಿವೆ. ಇದರಿಂದ ರೋಗಿಗೆ ಗುಣಮಟ್ಟದ ಜೀವನವನ್ನು ಕೊಡಲು ಸಾಧ್ಯವಿದೆ. ಆದ್ದರಿಂದ ಆರಂಭಿಕ ಹಂತದಲ್ಲಿ ರೋಗ ಪತ್ತೆ ಮಾಡಿ ಚಿಕಿತ್ಸೆಗೆ ಒಳಗಾಗುವುದು ಬಹಳ ಮುಖ್ಯ.
(ಲೇಖಕರು: ಓರಲ್ ಮೆಡಿಸಿನ್ ಹಾಗೂ ರೇಡಿಯಾಲಜಿ ತಜ್ಞರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.