ಮದುವೆ, ಮಕ್ಕಳಾದ ಬಳಿಕ ಮನೆ ಜವಾಬ್ದಾರಿಯನ್ನು ಹೊರುವ ಮಹಿಳೆಯರು ತಮ್ಮ ಆರೋಗ್ಯದ ಕಾಳಜಿಯನ್ನು ಪಕ್ಕಕ್ಕಿಡುತ್ತಾರೆ. ಮೊದಲು ಕುಟುಂಬಸ್ಥರಿಗೆ ಊಟ ತಯಾರಿ, ಮನೆ ಕೆಲಸ ಅದೂ ಇದು ಎನ್ನುತ್ತಾ ತಾವು ಸರಿಯಾದ ಸಮಯಕ್ಕೆ ಊಟ ಮಾಡದೆ, ಆರೋಗ್ಯಕರ ಆಹಾರ ಸೇವಿಸದೆ, ವ್ಯಾಯಾಮ ಮಾಡದೇ ದೇಹದಲ್ಲಿ ಬೊಜ್ಜು ಶೇಖರಣೆಗೆ ಅವಕಾಶ ಮಾಡಿಕೊಟ್ಟುಬಿಡುತ್ತಾರೆ. ಆದರೆ, ಈ ಬೊಜ್ಜು ನಿಮಗೆ ಅನೇಕ ರೀತಿಯ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಚ್ಚರ! ತಮ್ಮ ದೇಹದ ತೂಕಕ್ಕಿಂತ ಹೆಚ್ಚಾದ ಬೊಜ್ಜು ವಿವಿಧ ಕ್ಯಾನ್ಸರ್‌ಗೆ ದಾರಿ ಮಾಡಿಕೊಡಬಹುದು ಎಂದು ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಅಧ್ಯಯನ ಹೇಳುತ್ತಿದೆ. ಬೊಜ್ಜು ಶೇಖರಣೆಯಿಂದ ಮಹಿಳೆಯರಿಗೆ ಯಾವೆಲ್ಲಾ ಕ್ಯಾನ್ಸರ್ ಬರಬಹುದು ಎಂಬುದರ ಕುರಿತ ಮಾಹಿತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ.
ಬೊಜ್ಜಿನಿಂದ ಕ್ಯಾನ್ಸರ್ ಉಲ್ಭಣ ಹೇಗೆ?:
ಬೊಜ್ಜು ಪ್ರತಿಯೊಬ್ಬರಿಗೂ ಅಪಾಯ ತಂದಿಡುವಂತದ್ದೆ. ಆದರೆ, ಮಹಿಳೆಯರಿಗೆ ಅನಿವಾರ್ಯ ಕಾರಣದಿಂದ ಬೊಜ್ಜು ಹೆಚ್ಚಾಗಿ, ಅದನ್ನು ಕರಗಿಸಲು ಸಾಧ್ಯವಾಗದೇ ಹೋಗುತ್ತದೆ. ಹೆಚ್ಚಿನ ಕೆಟ್ಟ ಕೊಲೆಸ್ಟ್ರಾಲ್‌ನಿಂದ ಹೃದಯರಕ್ತನಾಳದ ಆರೋಗ್ಯ ಕೆಡಲಿದೆ. ಜೊತೆಗೆ, ಮಧುಮೇಹ, ಬಿಪಿ ಬರಲು ಕೊಲೆಸ್ಟ್ರಾಲ್ ರಹದಾರಿ ಇದ್ದಂತೆ. ಇದಷ್ಟೇ ಅಲ್ಲದೆ, ರಕ್ತ ಸಂಚಾರ ಸರಾಗವಾಗಿ ಸಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಅನೇಕ ಕಾಯಿಲೆ ಬರಬಹುದು ಎಚ್ಚರ/
ಯಾವೆಲ್ಲಾ ಕ್ಯಾನ್ಸರ್ ಬರಬಹುದು?
ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಪ್ರಕಾರ, ಹೆಚ್ಚುವರಿ ದೇಹದ ಕೊಬ್ಬು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಎಂಡೊಮೆಟ್ರಿಯಲ್ ಕ್ಯಾನ್ಸರ್, ಅಂಡಾಶಯ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಿಳಿಸಿದೆ.
ಸ್ತನ ಕ್ಯಾನ್ಸರ್
ಇತ್ತೀಚಿನ ದಿನಗಳಲ್ಲಿ ಸ್ತನಕ್ಯಾನ್ಸರ್‌ಗೆ ಒಳಗಾಗುವ ಮಹಿಳೆಯರ ಪ್ರಮಾಣ ಭಾರತದಲ್ಲಿ ಹೆಚ್ಚಾಗಿದೆ. ಮಹಿಳೆಯರಲ್ಲಿ ಕೊಬ್ಬಿನ ಅಂಗಾಂಶವು ಈಸ್ಟ್ರೊಜೆನ್ ಅನ್ನು ಉತ್ಪಾದಿಸುತ್ತದೆ, ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಅದರಲ್ಲೂ ಸ್ಥೂಲಕಾಯದ ಮಹಿಳೆಯರು ಸಾಮಾನ್ಯವಾಗಿ ದೊಡ್ಡದಾದ ಸ್ತನ ಹೊಂದಿರುವ ಕಾರಣ, ಅವರಿಗೆ ಸ್ತನಕ್ಯಾನ್ಸರ್ ಕೂಡಲೇ ತಿಳಿಯುವುದೂ ಇಲ್ಲ. ಇದರಿಂದ ಸ್ತನಕ್ಯಾನ್ಸರ್‌ನ ಲಕ್ಷಣಗಳನ್ನೂ ಸಹ ತೂಕ ಹೆಚ್ಚಿರುವ ಮಹಿಳೆಯರು ಕೂಡಲೇ ಕಂಡು ಹಿಡಿಯಲು ಸಾಧ್ಯವಾಗದೇ ಸ್ತನಕ್ಯಾನ್ಸರ್ ಕೊನೆ ಹಂತಕ್ಕೆ ತಲುಪುವ ಅಪಾಯವೂ ಇರುತ್ತದೆ.
ಎಂಡೊಮೆಟ್ರಿಯಲ್ ಕ್ಯಾನ್ಸರ್
ಸ್ಥೂಲಕಾಯತೆಯು ಎಂಡೊಮೆಟ್ರಿಯಲ್ ಕ್ಯಾನ್ಸರ್‌ಗೆ ಪ್ರಾಥಮಿಕ ಅಪಾಯಕಾರಿ ಅಂಶವಾಗಿದೆ, ಹೆಚ್ಚು ತೂಕ ಇರುವವರಲ್ಲಿ ಈ ಕ್ಯಾನ್ಯಾರ್‌ನ ಪ್ರಮಾಣ 2 ರಿಂದ 4 ಪಟ್ಟು ಹೆಚ್ಚಿಸುತ್ತದೆ. ಹೆಚ್ಚುವರಿ ಈಸ್ಟ್ರೊಜೆನ್ ಉತ್ಪಾದನೆ ಮತ್ತು ಇನ್ಸುಲಿನ್ ಪ್ರತಿರೋಧ ಕಡಿಮೆಯಾಗುವುದರಿಂದ ಎಂಡೋಮೆಟ್ರಿಯಲ್ ಕ್ಯಾನ್ಸರ್ ಬೊಜ್ಜು ಇರುವ ಮಹಿಳೆಯರಿಗೆ ಬೇಗ ಬರುವ ಸಾಧ್ಯತೆ ಇದೆ.
ಅಂಡಾಶಯದ ಕ್ಯಾನ್ಸರ್
ಅಂಡಾಶಯದಲ್ಲಿ ರೂಪುಗೊಳ್ಳುವ ಜೀವಕೋಶಗಳ ಬೆಳವಣಿಗೆಯಿಂದ ಅಂಡಾಶಯ ಕ್ಯಾನ್ಸರ್ ಬರಲಿದೆ. ಒಬೆಸಿಟಿ ಇರುವ ಮಹಿಳೆಯರಿಗೆ ಈ ಕ್ಯಾನ್ಸರ್‌ನ ಅಪಾಯ ಬೇಗ ಆಗಬಹುದು. ಅದರಲ್ಲೂ ಋತುಬಂಧಕ್ಕೆ ಒಳಗಾಗುವ ಮಹಿಳೆಯರು ಹೆಚ್ಚು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಲೈಂಗಿಕ ಸಂಪರ್ಕಕ್ಕೆ ಒಳಗಾದ ಬಳಿಕವೂ ಸ್ವಚ್ಛತೆಗೆ ಆಧ್ಯತೆ ಅತ್ಯವಶ್ಯಕ. ಬೊಜ್ಜು ಇರುವ ಕಾರಣ, ಸ್ವಚ್ಛತೆಗೆ ಮಹಿಳೆಯರು ಸೋಮಾರಿತನ ತೋರಬಹುದು. ಇದು ಅಂಡಾಶಯ ಕ್ಯಾನ್ಸರ್‌ಗೆ ದಾರಿ ಮಾಡಿಕೊಡಲಿದೆ.
ಕೊಲೊರೆಕ್ಟಲ್ ಕ್ಯಾನ್ಸರ್
ಬೊಜ್ಜು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ, ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಅಪಾಯವನ್ನು ಗಮನಿಸಬಹುದು.
ಬೊಜ್ಜು ಮತ್ತು ಕ್ಯಾನ್ಸರ್ ನಡುವಿನ ಸಂಪರ್ಕವೇನು?
* ಹಾರ್ಮೋನ್ ಅಸಮತೋಲನ: ಹೆಚ್ಚುವರಿ ಕೊಬ್ಬಿನ ಅಂಗಾಂಶವು ಇನ್ಸುಲಿನ್ ಮತ್ತು ಈಸ್ಟ್ರೊಜೆನ್ ಸೇರಿದಂತೆ ಹಾರ್ಮೋನ್ ಉತ್ಪಾದನೆಯನ್ನು ಬದಲಾಯಿಸುತ್ತದೆ, ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
* ಉರಿಯೂತ: ಸ್ಥೂಲಕಾಯದಿಂದ ಉಂಟಾಗುವ ದೀರ್ಘಕಾಲದ ಉರಿಯೂತವು ಡಿಎನ್ಎಗೆ ಹಾನಿ ಮಾಡುತ್ತದೆ ಮತ್ತು ಸೆಲ್ಯುಲಾರ್ ಪ್ರಕ್ರಿಯೆಗಳನ್ನು ಅಡ್ಡಿಪಡಿಸುತ್ತದೆ.
* ಇನ್ಸುಲಿನ್ ಪ್ರತಿರೋಧ: ಬೊಜ್ಜು-ಸಂಬಂಧಿತ ಇನ್ಸುಲಿನ್ ಪ್ರತಿರೋಧವು ಹೆಚ್ಚಿದ ಇನ್ಸುಲಿನ್ ತರಹದ ಬೆಳವಣಿಗೆಯ ಅಂಶ-1 (IGF-1) ಗೆ ಕಾರಣವಾಗುತ್ತದೆ, ಜೀವಕೋಶದ ಪ್ರಸರಣವನ್ನು ಉತ್ತೇಜಿಸುತ್ತದೆ.
ತಡೆಗಟ್ಟುವಿಕೆ ಹೇಗೆ?
ಇದನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗವೆಂದರೆ ಆರೋಗ್ಯಕರ ಜೀವನ ಶೈಲಿ.
* ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ: 18.5 ಮತ್ತು 24.9 ರ ನಡುವೆ BMI ಇರಲಿ.
* ದೈಹಿಕ ಚಟುವಟಿಕೆ: ವಾಕಿಂಗ್, ಸೈಕ್ಲಿಂಗ್ ಅಥವಾ ಈಜು ಮುಂತಾದ ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ.
* ಸಮತೋಲಿತ ಆಹಾರ: ಸಂಪೂರ್ಣ ಆಹಾರಗಳಾದ ಹಣ್ಣು, ತರಕಾರಿಗಳು ಮತ್ತು ನೇರ ಪ್ರೋಟೀನ್‌ಗಳ ಮೇಲೆ ಕೇಂದ್ರೀಕರಿಸಿ.
* ಸ್ಕ್ರೀನಿಂಗ್ ಮತ್ತು ತಪಾಸಣೆ: ನಿಯಮಿತ ಕ್ಯಾನ್ಸರ್ ಸ್ಕ್ರೀನಿಂಗ್ ಮತ್ತು ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಉತ್ತಮ
–ಡಾ ಮೋನಿಕಾ ಪನ್ಸಾರಿ, ಹಿರಿಯ ಸಲಹೆಗಾರರು - ಸರ್ಜಿಕಲ್ ಆಂಕೊಲಾಜಿ, ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.