ಮೂಗಿರುವವರೆಗೂ ನೆಗಡಿ ತಪ್ಪಿದ್ದಲ್ಲ ಎಂಬಂತೆ ಎಲ್ಲರೂ ಒಮ್ಮೆಯಾದರೂ ತಲೆನೋವನ್ನು ಅನುಭವಿಸಿರುತ್ತಾರೆ. ತಲೆನೋವು ಒಂದು ಸ್ವತಂತ್ರ ರೋಗವಾಗಿರದೇ, ಹಲವಾರು ಬೇರೆ ರೋಗಗಳ ಲಕ್ಷಣವಾಗಿಯೂ ಕಂಡುಬರಬಹುದು. ಏನೇ ಆಗಲಿ, ತಲೆನೋವು ಕೊಡುವ ಕಷ್ಟ ಅನುಭವಿಸಿದವರಿಗೇ ಗೊತ್ತು. ಮಾತು ಮಾತಿಗೂ ಸಿಡುಕುವುದು, ಹಣೆಗೆ ಒಂದು ಪಟ್ಟಿಯನ್ನು ಕಟ್ಟಿಕೊಳ್ಳುವುದು, ಬೆಳಕನ್ನು ನೋಡುವುದಕ್ಕೆ ಆಗದಿರುವುದು ತಲೆನೋವಿನ ಸಾಮಾನ್ಯ ಲಕ್ಷಣಗಳಾಗಿವೆ.
ಹಾಗಾದರೆ ಎಲ್ಲಾ ರೀತಿಯ ತಲೆನೋವುಗಳೂ ಒಂದೆಯೇ? ಖಂಡಿತ ಇಲ್ಲ. ಹಣೆಯ ಬದಿಗಳಲ್ಲಿ ತಡೆಯಲಾರದಷ್ಟು ನೋವು, ಜೊತೆಗೆ ಹೊಟ್ಟೆ ತೊಳಸು, ವಾಂತಿ, ಅಸಿಡಿಟಿಯ ಲಕ್ಷಣಗಳನ್ನು ಹೊಂದಿರುವ ತಲೆನೋವನ್ನು ನಮ್ಮ ದೇಹದಲ್ಲಿ ಪಿತ್ತವು ಕೆರಳಿ ಬಂದದ್ದೆಂದು ತಿಳಿಯಬೇಕು. ಇದನ್ನು ‘ಮೈಗ್ರೇನ್’ ಎಂದೂ ಕರೆಯಬಹುದು. ಈ ರೀತಿಯ ತಲೆನೋವು ಬಂದಾಗ ತಾವೇ ಗಂಟಲಿಗೆ ಬೆರಳು ಹಾಕಿಕೊಂಡು ವಾಂತಿ ಮಾಡಿಕೊಳ್ಳುತ್ತಾರೆ. ಈ ರೀತಿಯ ತಲೆನೋವು ಬರದಿರಲು ಅಸಿಡಿಟಿ ಆಗದಂತೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುವುದು, ಖಾರ, ಮಸಾಲೆ ಪದಾರ್ಥಗಳನ್ನು ಮಿತವಾಗಿ ಬಳಸುವುದು ಒಳ್ಳೆಯದು. ಬೂದುಗುಂಬಳದ ತುಂಡನ್ನು ತುರಿದುಕೊಂಡು, ಇದನ್ನು ಕೈಯಲ್ಲಿ ಹಿಂಡಿ ಪಡೆದ ರಸವನ್ನು ಒಂದು ಲೋಟದಷ್ಟು ದಿನವೂ ಕುಡಿಯಬೇಕು. ಅರ್ಧ ಚಮಚದಷ್ಟು ಜೀರಿಗೆಯನ್ನು ಒಂದು ಲೀಟರ್ ತಣ್ಣೀರಿನಲ್ಲಿ ರಾತ್ರಿ ನೆನೆಹಾಕಿ, ಬೆಳಿಗ್ಗೆ ಸೋಸಿಕೊಂಡು ದಿನವಿಡೀ ಈ ನೀರನ್ನೇ ಕುಡಿಯಬೇಕು. ಎರಡು ಚಮಚದಷ್ಟು ಎಳ್ಳೆಣ್ಣೆಯನ್ನು ಬೆಚ್ಚಗೆ ಮಾಡಿ, ಅದಕ್ಕೆ ಒಂದು ಚಿಟಕಿಯಷ್ಟು ಉಪ್ಪು ಸೇರಿಸಿ, ಹಣೆಗೆ ಮೃದುವಾಗಿ ತಿಕ್ಕಬೇಕು. ನಂತರ ಒಂದು ಚಿಕ್ಕ ಟವಲನ್ನು ಬಿಸಿನೀರಿನಲ್ಲಿ ಅದ್ದಿ, ಹಿಂಡಿ, ಹಣೆಗೆ ಶಾಖವನ್ನು ಕೊಡಬೇಕು. ಜೊತೆಗೆ ಶಾಂತವಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಮತ್ತೊಂದು ರೀತಿಯ ತಲೆನೋವು ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಕಾಡುವುದು. ಸಾಫ್ಟ್‌ವೇರ್ ಮುಂತಾದ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಸದಾಕಾಲ ಕಂಪ್ಯೂಟರ್‌ನ್ನು ನೋಡುವುದರಿಂದ ಕಣ್ಣುಗಳ ನರಗಳಿಗೆ ಶ್ರಮ ಉಂಟಾಗಿ ತಲೆನೋವು ಕಾಡುವುದು. ಜೊತೆಗೆ ವೃತ್ತಿಯ ಒತ್ತಡವೂ ಕಾರಣವಾಗುತ್ತದೆ. ಬೆಳಗಿನ ಜಾವ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುವಾಗಲೇ ಕುತ್ತಿಗೆ ನೋವು, ತಲೆಯ ಹಿಂಭಾಗದ ನೋವು, ಕೈಗಳ ಮಣಿಕಟ್ಟಿನ ನೋವುಗಳ ಜೊತೆಗೆ ಬರುತ್ತಾರೆ. ಈ ರೀತಿಯ ತಲೆನೋವನ್ನು ವಾತವು ಹೆಚ್ಚಾಗಿ ಬಂದದ್ದು ಅಥವಾ ‘ಟೆನ್ಷನ್’ ತಲೆನೋವು ಎಂದು ತಿಳಿಯಬೇಕು. ತಂಪಾದ ಆಹಾರವನ್ನು ಸೇವಿಸದಿರುವುದು, ಬಿಸಿ, ತಾಜಾ ಆಹಾರವನ್ನು ಸೇವಿಸುವುದು, ಅತಿಯಾದ ಕಾಫಿ, ಟೀ ಸೇವಿಸದಿರುವುದು, ಧೂಮಪಾನ–ಮದ್ಯಪಾನಗಳಿಂದ ದೂರವಿರುವುದು ಒಳ್ಳೆಯದು. ಒಂದಗಲ ಸೊಪ್ಪಿನ ತಂಬುಳಿಯನ್ನು ವಾರಕ್ಕೊಮ್ಮೆಯಾದರೂ ಬಳಸಬೇಕು. ಒಂದೆಗಲದ ಒಂದು ಎಲೆಯನ್ನು ಕಚ್ಚಿ ತಿಂದು, ಮೇಲೆ ಸ್ವಲ್ಪ ಬಿಸಿ ಹಾಲನ್ನು ದಿನಕ್ಕೊಮ್ಮೆ ಸೇವಿಸಬೇಕು.
ಒಂದೆಗಲದ ಸೊಪ್ಪನ್ನು ಕುಟ್ಟಿ ರಸತೆಗೆದು ಗಾಜಿನ ಬಾಟ್ಲಿಯಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟುಕೊಳ್ಳಬೇಕು. ಈ ರಸವನ್ನು ಪ್ರತಿ ರಾತ್ರಿಯೂ ಮಲಗುವ ಮುನ್ನ ಎರಡು ಚಮಚದಷ್ಟು ಕುಡಿಯಬೇಕು. ಇದೇ ಸೊಪ್ಪಿನ ರಸಕ್ಕೆ ಸಮಪ್ರಮಾಣದಲ್ಲಿ ಕೊಬ್ಬರಿಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಬೆರಸಿ, ಸಣ್ಣ ಉರಿಯಲ್ಲಿ ಕಾಯಿಸಿ ಎಣ್ಣೆಯನ್ನು ತಯಾರಿಸಬೇಕು. ಈ ಎಣ್ಣೆಯನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ತಲೆಗೆ ಸ್ನಾನ ಮಾಡಬೇಕು.
ಸದಾಕಾಲ ಸೀನು, ನೆಗಡಿ, ಕಣ್ಣುಗಳು, ಮುಖವು ಸ್ವಲ್ಪ ಬಾತುಕೊಳ್ಳುವುದು, ಕಣ್ಣಲ್ಲಿ ನೀರು ಸುರಿಯುವುದು, ತಲೆಯ ಮುಂಭಾಗದಲ್ಲಿ, ಅಂದರೆ ಹುಬ್ಬುಗಳ ಮೇಲೆ ಮತ್ತು ಬದಿಗಳಲ್ಲಿ ತಲೆನೋವು ಜೊತೆಗೆ ತಲೆ ಭಾರವಿರುವ ಸ್ಥಿತಿಯನ್ನು ದೇಹದಲ್ಲಿ ಕಫವು ಹೆಚ್ಚಾಗಿ ಬಂದದ್ದೆಂದು ತಿಳಿಯಬೇಕು. ‘ಸೈನಸಿಟಿಸ್’ ಎನ್ನುವ ತಲೆನೋವು ಧೂಳು, ಹೊಗೆ ಹೆಚ್ಚಾಗಿರುವ ದ್ವಿಚಕ್ರ ವಾಹಕರು ತಪ್ಪದೇ ಮುಖಕ್ಕೆ ಪಾರದರ್ಶಕ ಪ್ಲಾಸ್ಟಿಕ್ ಪರದೆ ಉಳ್ಳ ಪೂರ್ತಿ ಹೆಲ್ಮೆಟ್ಟನ್ನು ಹಾಕಿಕೊಳ್ಳಬೇಕು. ಮೊಸರು, ಪಚ್ಚೆ ಬಾಳೆಹಣ್ಣನ್ನು ಈ ತಲೆನೋವು ಭಾದಿಸಿದಾಗ ಬಳಸದಿರುವುದು ಒಳ್ಳೆಯದು. ಹಸಿಶುಂಠಿಯನ್ನು ನೀರಿನಲ್ಲಿ ತೇಯ್ದು ಸ್ವಲ್ಪ ಬಿಸಿ ಮಾಡಿ ಹಣೆಗೆ ಲೇಪಿಸಿದರೆ ಶೀತದ ತಲೆನೋವು ಕೂಡಲೇ ತಿನ್ನುವುದು. ಅರಿಸಿನ ಕೊನೆಯ ಒಂದು ಅಂಚಿಗೆ ಸ್ವಲ್ಪ ತುಪ್ಪವನ್ನು ಸವರಿ, ಈ ಭಾಗವನ್ನು ಬೆಂಕಿಯಲ್ಲಿಟ್ಟು, ಇದರಿಂದ ಬರುವ ಹೊಗೆಯನ್ನು ಮೂಗಿನಿಂದ ಸೇದಿ, ಬಾಯಿಂದ ಹೊರಬಿಡಬೇಕು. ಇದು ನೆಗಡಿ, ಸೈನಸ್, ತಲೆನೋವು ಅನುಭವಿಸುವವರಿಗೆ ರಾಮಬಾಣವಾಗಿದೆ. ಅರ್ಧ ಹಿಡಿಯಷ್ಟು ತುಳಸಿಯನ್ನು ತಂದು, ತೊಳೆದು ಒಂದು ಪಾತ್ರೆಗೆ ಹಾಕಿ, ಇದಕ್ಕೆ ಒಂದು ಲೀಟರ್‌ನಷ್ಟು ಕುದಿಯುತ್ತಿರುವ ನೀರನ್ನು ಸುರಿದು ತಟ್ಟೆಯನ್ನು ಮುಚ್ಚಿಡಬೇಕು. ಆರಿದ ಮೇಲೆ ಈ ನೀರನ್ನು ದಿನವಿಡೀ ಕುಡಿಯಬೇಕು. ಅರ್ಧ ಚಮಚದಷ್ಟು ಅರಿಸಿನಪುಡಿಯನ್ನು ಅರ್ಧ ಲೋಟ ಬಿಸಿ ಹಾಲಿಗೆ ಬೆರೆಸಿ, ರಾತ್ರಿ ಮಲಗುವ ಮುನ್ನ ಕುಡಿಯಬೇಕು.
ಆಗಾಗ್ಗೆ ತಲೆನೋವಿನಿಂದ ತೊಂದರೆ ಪಡುವವರು ಮೇಲಿನ ಮನೆಮದ್ದುಗಳನ್ನು ಮಾಡಿಕೊಳ್ಳಬಹುದು. ಆದರೆ ವೈದ್ಯರನ್ನು ಸಂಪರ್ಕಿಸದೇ, ಔಷಧ ಅಂಗಡಿಯವರು ಕೊಡುವ ಮಾತ್ರೆಗಳನ್ನು ನುಂಗುವುದು ಅಥವಾ ಹಿಂದೊಮ್ಮೆ ವೈದ್ಯರು ತಲೆನೋವಿನ ನಿವಾರಣೆಗೆ ಬರೆದು ಕೊಟ್ಟ ಮಾತ್ರೆಗಳನ್ನು ತೊಂದರೆ ಬಂದಾಗಲೆಲ್ಲಾ ನುಂಗುವುದು ಅಪಾಯಕಾರಿ. ದೈನಂದಿಕ ಆಹಾರಸೇವನೆಯಲ್ಲಿ ಶಿಸ್ತುಪಾಲನೆಯನ್ನು ಕಾಪಾಡಿಕೊಳ್ಳಬೇಕು; ಪ್ರಾಣಾಯಾಮ–ಯೋಗಾಭ್ಯಾಸಗಳು ತಲೆನೋವಿನ ಪರಿಹಾರಕ್ಕೆ ಯೋಗ್ಯಕ್ರಮಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.