ಕೋವಿಡ್-19 ವೈರಸ್ ಸೋಂಕು ಮಕ್ಕಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಆದರೂ ಮಕ್ಕಳು ಕಡ್ಡಾಯ ಮಾಸ್ಕ್ ಬಳಕೆ, ಅಂತರ ಕಾಯ್ದುಕೊಳ್ಳುವಂತಹ ಕ್ರಮಗಳನ್ನು ಪಾಲಿಸಲೇಬೇಕು. ಸಣ್ಣಮಕ್ಕಳಲ್ಲಿ ಪೋಷಕರು ಬಾಯಿ ಸ್ವಚ್ಛತೆ ಕಡೆಗೆ ಕಡಿಮೆ ನಿಗಾ ವಹಿಸುತ್ತಾರೆ. ಆದರೆಬಾಯಿಯ ಸ್ವಚ್ಚತೆ ಮತ್ತು ಅದರ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದೂ ಸಹ ಕೊರೊನಾ ಸೋಂಕು ಪರಿಣಾಮವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.
ಕೋವಿಡ್ 19 ಹೊಸ ಬಗೆಯ ವೈರಸ್. ಇದರ ಗುಣಲಕ್ಷಣ, ಲಸಿಕೆ ಬಗ್ಗೆಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಆದರೆ ಈ ಹಿಂದೆ ಅನೇಕ ಸಂಶೋಧನೆಗಳು ಬಾಯಿಯ ಆರೋಗ್ಯ ಉತ್ತಮವಾಗಿದ್ದರೆ,ನ್ಯುಮೋನಿಯಾದಂತಹ ಉಸಿರಾಟದ ತೊಂದರೆ ತರುವ ಕಾಯಿಲೆಗಳುಉಲ್ಬಣವಾಗುವುದನ್ನು ತಡೆಯುತ್ತವೆ ಎಂದು ತಿಳಿಸಿವೆ.
ಕೊರೊನಾವು ಶ್ವಾಸಕೋಶ, ಉಸಿರಾಟಕ್ಕೆ ಸಂಬಂಧಿಸಿದ ರೋಗವಾಗಿದ್ದರಿಂದ ಇಂತಹ ಸಂದರ್ಭದಲ್ಲಿ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಬೆಂಗಳೂರಿನ ದೊಮ್ಮಲೂರಿನ ಸ್ಮಾಲ್ ಬೈಟ್ಸ್ ಮಕ್ಕಳ ಹಲ್ಲಿನ ಆಸ್ಪತ್ರೆಯ ನಿರ್ದೇಶಕಿ ಡಾ.ಪ್ರಮಿಳಾ ನಾಯ್ಡು ಸಲಹೆ ನೀಡಿದ್ದಾರೆ.
ಮಕ್ಕಳ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಆದರೆ ಈ ಸಮಯದಲ್ಲಿ ಮುಖ್ಯವಾಗಿ ಬಾಯಿ ಶುಚಿತ್ವ, ಆರೋಗ್ಯ ನಿರ್ವಹಣೆ ಮತ್ತು ರೋಗ ತಡೆಗಟ್ಟುವಿಕೆಗೆ ಒತ್ತು ನೀಡಬೇಕು. ಕೊರೊನಾ ವೈರಸ್ ಸೋಂಕಿನಿಂದ ಮುಕ್ತವಾಗಲು ಮಾಸ್ಕ್, ಸ್ಯಾನಿಟೈಸರ್ ಬಳಕೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದಂತೆ, ಅವರಿಗೆ ಉತ್ತಮ ಆಹಾರ ಪದ್ಧತಿ ಹಾಗೂ ವ್ಯಾಯಾಮ ಬಗ್ಗೆಯೂ ತಿಳಿಸಬೇಕು.ಮಗುವಿನ ಹಲ್ಲಿನ ಆರೋಗ್ಯದ ಬಗ್ಗೆ ಮಕ್ಕಳ ದಂತವೈದ್ಯರನ್ನು ವೀಡಿಯೊ ಸಮಾಲೋಚನೆ ಅಥವಾ ವೈಯಕ್ತಿಕವಾಗಿ ಸಂಪರ್ಕಿಸುವುದು ಬಹಳ ಮುಖ್ಯ.
ಬಾಯಿಯ ಆರೋಗ್ಯ, ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿವೆ ವೈದ್ಯರ ಟಿಪ್ಸ್
ಟೆಲಿಬೈಟ್ಸ್ ಮೂಲಕ ಸಲಹೆ
ಈಗ ಮಕ್ಕಳನ್ನು ಕ್ಲಿನಿಕ್‌ಗೆ ಕರೆದೊಯ್ಯುವುದು ಅಪಾಯ. ಅವರಿಗೆ ಸೋಂಕು ತಗುಲುವ ಅಪಾಯ ಇರುತ್ತದೆ. ಬಾಯಿ ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ, ಟೆಲಿಬೈಟ್ಸ್ ಮೂಲಕ ವೈದ್ಯರ ಸಮಾಲೋಚನೆ ಪಡೆಯಬಹುದು. ಮಕ್ಕಳ ಹಲ್ಲಿನ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ವೀಡಿಯೊ ದಂತವೈದ್ಯಕೀಯ ಸೇವೆ ಉಪಯೋಗಿಸಿಕೊಳ್ಳಬಹುದು. ಇದು ರೋಗಿಯ ಮತ್ತು ವೈದ್ಯರ ನಡುವಿನ ಅಂತರವನ್ನು ಕಡಿಮೆ ಮಾಡುವುದಲ್ಲದೆ, ಮಕ್ಕಳಿಗೆ ಪರಿಚಿತ ವಾತಾವರಣದಲ್ಲಿರುವುದರಿಂದ ಅವರಿಗೆ ಸಮಸ್ಯೆ ಹೇಳಲು ನಿರಾಳವಾಗುತ್ತದೆ.
ಹಲ್ಲುಜ್ಜುವುದು, ಬಾಯಿ ಮುಕ್ಕಳಿಸುವುದು ಮುಖ್ಯ
ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಬಹಳ ಮುಖ್ಯ. ಮೃದುವಾಗಿರುವ ಬ್ರಷ್‌ನಿಂದ ಹಲ್ಲುಜ್ಜಬೇಕು. ಹಲ್ಲುಜ್ಜುವ ಮೊದಲು ಹಾಗೂ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ಕೈ ತೊಳೆಯಲು ಮಕ್ಕಳಿಗೆ ಕಲಿಸಬೇಕು. ಹಲ್ಲುಗಳ ಸಂದಿನಿಂದಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಮುಕ್ಕಳಿಸುವುದು ಸಹಾಯ ಮಾಡುತ್ತದೆ. ಹಲ್ಲುಜ್ಜಿದ ನಂತರ ನಾಲಿಗೆಯನ್ನು ಮರೆಯದೇ ಸ್ವಚ್ಛ ಮಾಡಬೇಕು.ಟಂಗ್ ಕ್ಲೀನರ್‌ಗಳನ್ನು ಬಳಸುವುದು ಉತ್ತಮ. ಇದರಿಂದ ಕೆಟ್ಟ ಉಸಿರಾಟಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ.
ಆರೋಗ್ಯಕರ ಉಪಾಹಾರ
ದಿನದ ಮೊದಲ ಉಪಾಹಾರ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಹಾಗೆಯೇ ಉತ್ತಮ ಉಪಾಹಾರದ ಆಯ್ಕೆಗಳು ಸಹ ಉತ್ತಮ ಹಲ್ಲಿನ ಆರೋಗ್ಯಕ್ಕೂ ಕಾರಣವಾಗಬಹುದು. ಹಲ್ಲುಗಳ ಮೇಲೆ ಉಳಿದಿರುವ ಕೆಲವು ಬ್ಯಾಕ್ಟೀರಿಯಾಗಳು ಉಪಾಹಾರದೊಂದಿಗೆ ಬಾಯಿಗೆ ಸೇರಿದಾಗ ಅದನ್ನುಸೇವಿಸುವುದರಿಂದ ಆಮ್ಲಗಳು ಉತ್ಪತ್ತಿಯಾಗುತ್ತವೆ. ಆ ಆಮ್ಲ ದಂತಕ್ಷಯಕ್ಕೆ ಕಾರಣವಾಗಬಹುದು. ಆದ್ದರಿಂದ, ಮಗುವಿನ ಉಪಾಹಾರದಲ್ಲಿ ಧಾನ್ಯಗಳನ್ನು ಸೇರಿಸಬೇಕು. ಏಕೆಂದರೆ ಅವು ದಂತಕ್ಷಯವನ್ನು ಉತ್ತೇಜಿಸುವ ಸಾಧ್ಯತೆ ಕಡಿಮೆ.
ಸಿಹಿ ಪಾನೀಯ, ತಿಂಡಿ ಬೇಡ
ಕಾರ್ಬೊನೇಟೆಡ್ ತಂಪು ಪಾನೀಯ, ಸಿಹಿತಿಂಡಿಗಳನ್ನುಮಕ್ಕಳು ಇಷ್ಟಪಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಪೋಷಕರು ಸೇವನೆಯ ಪ್ರಮಾಣವನ್ನು ಗಮನಿಸಿ, ಅದನ್ನು ಕನಿಷ್ಟ ಮಟ್ಟಕ್ಕೆಸೀಮಿತಗೊಳಿಸಬೇಕು. ಕಾರ್ಬೊನೇಟೆಡ್ ಪಾನೀಯಗಳು ಮತ್ತು ಆಮ್ಲೀಯ ರಸಗಳು ಮಗುವಿನ ಹಲ್ಲುಗಳಿಗೆ ಹಾನಿ ಮಾಡುತ್ತವೆ. ಅಲ್ಲದೆ, ಆಗಾಗ್ಗೆ ಸಿಹಿ ಸೇವಿಸುವುದರಿಂದ ದಂತಕುಳಿಗಳಿಗೆ ಕಾರಣವಾಗಬಹುದು.
ನೀರು ಜಾಸ್ತಿ ಸೇವನೆ
ಮಗು ಹೆಚ್ಚು ನೀರು ಕುಡಿಯುವಂತೆ ನೋಡಿಕೊಳ್ಳಬೇಕು.ಮಕ್ಕಳ ದೇಹವು ಸೋಂಕಿನಿಂದ ಹೋರಾಡುವಾಗ ದ್ರವಾಂಶಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ನಿರ್ಜಲೀಕರಣ ಅಪಾಯವನ್ನು ಹೆಚ್ಚಿಸುತ್ತದೆ.
ಹಲ್ಲುಜ್ಜುವ ಬ್ರಷ್‌ಗಳನ್ನು ನಿಯಮಿತವಾಗಿ ಬದಲಾಯಿಸಿ
ಟೂತ್ ಬ್ರಷ್‌ಗಳು ಅನೇಕ ರೀತಿಯ ಬ್ಯಾಕ್ಟೀರಿಯಾಗಳ ವಾಸಸ್ಥಾನಗಳಾಗಿರುತ್ತವೆ. ಮೂರು ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಮೊದಲೇ ಅವುಗಳನ್ನು ಬದಲಾಯಿಸುವುದು ಉತ್ತಮ. ಈ ಸಮಯದಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಆರೈಕೆ ಮಾಡುವುದೊಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.