ನವದೆಹಲಿ: ನಿತ್ಯ ನಾಲ್ಕು ಗಂಟೆಗಳ ದೈಹಿಕ ಶ್ರಮ ಮತ್ತು ಎಂಟು ಗಂಟೆಗಳ ನಿದ್ರೆಯು ವ್ಯಕ್ತಿಯ ಆರೋಗ್ಯಕರ ಜೀವನಕ್ಕೆ ಸೋಪಾನ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಆರೋಗ್ಯಕರ ಜೀವನ ಬಯಸುವುದಾದರೆ ನಿತ್ಯ ಲಘು, ಮಧ್ಯಮ ಹಾಗೂ ಕಠಿಣ ದೈಹಿಕ ಕಸರತ್ತು ನಡೆಸಬೇಕು. ಇದರ ಒಟ್ಟಾರೆ ಅವಧಿ ಕನಿಷ್ಠ 4 ಗಂಟೆಯಾಗಿರಬೇಕು. ಲಘು ಶ್ರಮದಲ್ಲಿ ಆಹಾರ ಸಿದ್ಧಪಡಿಸುವುದು, ಮಧ್ಯಮದಲ್ಲಿ ದೈಹಿಕ ಕಸರತ್ತುಗಳು ಹಾಗೂ ಕಠಿಣ ಪರಿಶ್ರಮದಲ್ಲಿ ವೇಗದ ನಡಿಗೆ ಹಾಗೂ ಜಿಮ್ ಸೇರಿದೆ ಎಂದು ಸಂಶೋಧಕರು ಹೇಳಿದ್ದಾರೆ.
‘ಒಂದು ದಿನದಲ್ಲಿ 6 ಗಂಟೆಗಳ ಕಾಲ ಕೂತಿರುವುದು ಹಾಗೂ 5 ಗಂಟೆ ನಿಂತಿರುವುದನ್ನೂ ಚಟುವಟಿಕೆ ಸಮಯ ಒಳಗೊಂಡಿದೆ’ ಎಂದು ಆಸ್ಟ್ರೇಲಿಯಾದ ಸ್ವಿನ್‌ಬರ್ನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಹೇಳಿದೆ.
ಈ ಅಧ್ಯಯನಕ್ಕೆ ಸುಮಾರು 2 ಸಾವಿರ ಜನರನ್ನು ಒಳಪಡಿಸಲಾಗಿತ್ತು. ದಿನದ 24 ಗಂಟೆಗಳ ದಿನಚರಿಯನ್ನು ದಾಖಲಿಸಲಾಯಿತು. ಇದರಲ್ಲಿ ಕೂರುವ, ಮಲಗುವ, ನಿಂತಿರುವ, ಹಾಗೂ ದೈಹಿಕ ಶ್ರಮವನ್ನೂ ಪರಿಗಣಿಸಿ ಉತ್ತಮ ಆರೋಗ್ಯಕ್ಕೆ ಯಾವುದು ಸೂಕ್ತ ಎಂದು ಈ ತಂಡ ಶಿಫಾರಸು ಮಾಡಿದೆ.
‘ಮಧುಮೇಹ ಇಲ್ಲದಿರುವವರಿಗೆ ಹೋಲಿಸಿದಲ್ಲಿ ಮಧುಮೇಹಿಗಳು ಹೆಚ್ಚು ಸಮಯ ಕೂರುವುದಕ್ಕಿಂತ ಒಂದಷ್ಟು ಸಮಯ ದೈಹಿಕ ಚಟುವಟಿಕೆಗಳಿಗೆ ಮೀಸಲಿಟ್ಟರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಹೆಚ್ಚು ಅನುಕೂಲ. ವ್ಯಾಯಾಮ ಸಮಯದಲ್ಲಿನ ಏರುಪೇರು ನಿದ್ರೆಗೆ ಹಾನಿ ಮಾಡಬಹುದು. ಆದರೆ ಚಟುವಟಿಕೆಯಿಂದ ಇದ್ದರೆ ನಿದ್ರೆಗೆ ಹೆಚ್ಚು ಪ್ರಯೋಜನಕಾರಿ’ ಎಂದು ತಜ್ಞರು ಹೇಳಿದ್ದಾರೆ.
‘ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಉತ್ತಮ. ಆದರೆ ಅದು ಸಮತೋಲನದಲ್ಲಿರಬೇಕು. ಆರೋಗ್ಯವಾಗಿರಬೇಕೆಂದು ಹೆಚ್ಚು ಸಮಯ ವ್ಯಾಯಾಮ ನಡೆಸುವುದೂ ಅಪಾಯ. 10 ಗಂಟೆ ವ್ಯಾಯಾಮ ಮಾಡಿ, ಇತರ ಚಟುವಟಿಕೆಗೆ ಸಮಯವನ್ನೇ ನೀಡದಿದ್ದರೂ ಅದು ಉತ್ತಮ ಆರೋಗ್ಯಕ್ಕೆ ಕಾರಣವಾಗಲಾರದು’ ಎಂದು ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.