*ವಯಸ್ಸು 52. ಆರೋಗ್ಯವಾಗಿದ್ದೇನೆ. ಮದುವೆಯಾಗಿ 25 ವರ್ಷಗಳಾಗಿವೆ. ಮೂರು ಮಕ್ಕಳ ಸುಖೀ ಸಂಸಾರ. ಲೈಂಗಿಕ ಆಸಕ್ತಿ ಇದೆ. ತೃಪ್ತಿಯ ಮಟ್ಟ ಕಡಮೆಯಾಗುತ್ತಿದೆ. ಅಂಗವು ಬೇಗ ಗಡಸುತನವನ್ನು ಕಳೆದುಕೊಳ್ಳುತ್ತದೆ. ಪರಿಹಾರವೇನು? - ಹೆಸರಿಲ್ಲ ಬಳ್ಳಾರಿ
ಉತ್ತರ: ದೀರ್ಘಕಾಲದ ಸಂಬಂಧಗಳಲ್ಲಿ ಲೈಂಗಿಕ ಆಸಕ್ತಿ ಉಳಿಯಬೇಕಾದರೆ ಸಂಗಾತಿಯ ಆಸಕ್ತಿ, ಆಯ್ಕೆಗಳು ಮತ್ತು ಇಬ್ಬರ ನಡುವಿನ ಭಾವನಾತ್ಮಕ ಬಂಧ ಹೇಗಿದೆ ಎನ್ನುವುದು ಮುಖ್ಯವಾಗುತ್ತದೆ. ನಿಮ್ಮ ಪತ್ರದಲ್ಲಿ ಪತ್ನಿಯ ಬಗೆಗೆ ಯಾವುದೇ ಉಲ್ಲೇಖವಿಲ್ಲದಿರುವುದನ್ನು ನೋಡಿದರೆ ನೀವು ಅವರ ಬಗೆಗೆ ಹೆಚ್ಚು ಗಮನ ಹರಿಸಿದಂತಿಲ್ಲ ಎನ್ನಿಸುತ್ತದೆ. ಮಧ್ಯವಯಸ್ಸಿನಲ್ಲಿ ಹಾರ್ಮೋನ್‌ಗಳ ಮಟ್ಟ ಕಡಿಮೆಯಾದಂತೆ ಸಂಗಾತಿಯು ಪೂರ್ಣ ಮನಸ್ಸಿನಿಂದ ಸಕ್ರಿಯವಾಗಿ ಪಾಲುಗೊಳ್ಳದಿದ್ದಾಗ ಏಕಮುಖ ಲೈಂಗಿಕ ಕ್ರಿಯೆ ತೃಪ್ತಿದಾಯಕವಾಗಿರುವುದಿಲ್ಲ. ಪತ್ನಿಯ ಜೊತೆ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಾ ಅವರನ್ನು ಗೌರವಿಸುತ್ತಾ ಭಾವನಾತ್ಮಕವಾಗಿ ಹೆಚ್ಚು ಹತ್ತಿರವಾಗಿ. ಮಿಲನಕ್ಕೂ ಮೊದಲು ಹೆಚ್ಚು ಸಮಯ ಸ್ಪರ್ಷಸುಖವನ್ನು ಹಂಚಿಕೊಳ್ಳಿ. ಲೈಂಗಿಕ ಕ್ರಿಯೆಯ ಹೊರತಾಗಿ ಪತ್ನಿಯ ಜೊತೆ ಹೇಗೆ ಸಮಯ ಕಳೆಯುತ್ತೀರಿ ಮತ್ತು ಹೇಗೆ ವರ್ತಿಸುತ್ತೀರಿ ಎನ್ನುವುದು ನಿಮ್ಮಿಬ್ಬರ ನಡುವಿನ ಆತ್ಮೀಯತೆಯ ಸೂಚನೆಯಾಗುತ್ತದೆ. ಆತ್ಮೀಯತೆ ಹೆಚ್ಚುತ್ತಾ ಹೋದಂತೆ ತೃಪ್ತಿಯ ಮಟ್ಟವೂ ಹೆಚ್ಚುತ್ತದೆ.
*ವಯಸ್ಸು 31. ಮದುವೆಯಾಗಿ 5 ವರ್ಷಗಳಾಗಿದ್ದು ಮಗನಿದ್ದಾನೆ. ಗಂಡನಿಗೆ ಪಾರ್ಶ್ವವಾಯು ಆಗಿದೆ. ನಾವಿಬ್ಬರೂ ಲೈಂಗಿಕ ಸಂಪರ್ಕ ಮಾಡಬಹುದೇ? ಸೇರಿದರೆ ಹುಟ್ಟುವ ಮಗುವಿಗೆ ಏನಾದರೂ ಸಮಸ್ಯೆಗಳು ಬರಬಹುದೇ?- ಪಾರ್ವತಿ, ಹುಬ್ಬಳ್ಳಿ.
ಉತ್ತರ: ನಿಮ್ಮ ಪತಿಯ ವಯಸ್ಸು, ಕಾಯಿಲೆಯಿಂದಾದ ದೈಹಿಕ ನ್ಯೂನತೆ ಮುಂತಾದ ವಿವರಗಳಿದ್ದಿದ್ದರೆ ಸಹಾಯವಾಗುತ್ತಿತ್ತು. ಲೈಂಗಿಕ ಸಂಪರ್ಕಮಾಡುವ ಬಗೆಗೆ ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಸಾಮಾನ್ಯ ಸಂದರ್ಭಗಳಲ್ಲಿ ಲೈಂಗಿಕ ಚಟುವಟಿಕೆ ಕಾಯಿಲೆಯನ್ನು ಹೆಚ್ಚು ಮಾಡುವುದಿಲ್ಲ. ಬದಲಾಗಿ ಮನಸ್ಸಿಗೆ ಉಲ್ಲಾಸವನ್ನು ನೀಡಿ ಕಾಯಿಲೆ ಗುಣವಾಗಲು ಸಹಾಯ ಮಾಡುತ್ತದೆ. ಪಾರ್ಶ್ವವಾಯು ಅನುವಂಶಿಕವೇನಲ್ಲ. ಹಾಗಾಗಿ ಹುಟ್ಟುವ ಮಗುವಿಗೆ ಕಾಯಿಲೆಗಳಿರುವ ಸಾಧ್ಯತೆಗಳು ಅತಿ ಕಡಿಮೆ.
ಚಿಕ್ಕ ವಯಸ್ಸಿನಲ್ಲಿ ಇಂತಹ ದೊಡ್ಡ ಆಘಾತವನ್ನು ಎದುರಿಸಿರುವುದಕ್ಕಾಗಿ ನೀವಿಬ್ಬರೂ ಮಾನಸಿಕವಾಗಿ ನೊಂದಿರುತ್ತೀರಿ. ಹಾಗಾಗಿ ಲೈಂಗಿಕ ಸಂಪರ್ಕಕ್ಕೆ ಬಹಳ ಹಿಂಜರಿಕೆ, ಭಯ ಇರುವುದು ಸಹಜ. ಒಮ್ಮೆಲೆ ಮಿಲನಕ್ಕೆ ಪ್ರಯತ್ನಿಸಿ ವಿಫಲರಾದರೆ ಹಿಂಜರಿಕೆ ಹೆಚ್ಚಾಗುತ್ತದೆ. ಆರಂಭದಲ್ಲಿ ಸಾಕಷ್ಟು ದಿನ ಅಪ್ಪುಗೆ, ಚುಂಬನ ಸ್ಪರ್ಷ ಸುಖಗಳಲ್ಲಿ ಮೈಮರೆಯುತ್ತಾ ಹೋಗಿ. ನಿಧಾನವಾಗಿ ಮಿಲನಕ್ಕೆ ಸಿದ್ಧರಾಗುತ್ತೀರಿ. ಪತಿಯ ದೈಹಿಕ ಸ್ಥಿತಿಗೆ ಹೊಂದುವಂತೆ ಸಂಭೋಗದ ರೀತಿಯನ್ನು ಬದಲಾಯಿಸಿಕೊಳ್ಳಿ.
*24 ವರ್ಷದ ವಿದ್ಯಾರ್ಥಿನಿ. ಪುರುಷ ಸ್ನೇಹಿತನೊಬ್ಬನಿದ್ದು ದೂರದಲ್ಲಿ ವಾಸಿಸುತ್ತಾನೆ. ಅವನು ಸಿಗದಿದ್ದಾಗ ಲೈಂಗಿಕ ಆಸಕ್ತಿಯನ್ನು ಹಿಡಿತದಲ್ಲಿಡಲು ಕಷ್ಟವಾಗುತ್ತಿದೆ. ಹೊಸ ಹುಡುಗನೊಬ್ಬನ ಪರಿಚಯವಾಗಿದ್ದು ಅವನು ಲೈಂಗಿಕ ಆಸಕ್ತಿ ವ್ಯಕ್ತಪಡಿಸಿದ್ದಾನೆ. ನಾನು ಆಗ ತಿರಸ್ಕರಿಸಿದ್ದರೂ ಇತ್ತೀಚೆಗೆ ಆಸಕ್ತಿ ಮೂಡುತ್ತಿದೆ. ಇಬ್ಬರೂ ಗುಟ್ಟಾಗಿಡುವುದಕ್ಕೆ ಸಾಧ್ಯವಾಗುವುದಾದರೆ ಹೊಸ ಹುಡುಗನ ಸಂಪರ್ಕದಿಂದ ತೊಂದರೆಯಾಗಬಹುದೇ? ಸಲಹೆನೀಡಿ. -ರಶ್ಮಿ ಊರಿನ ಹೆಸರಿಲ್ಲ.
ಉತ್ತರ: ನಿಮ್ಮ ಲೈಂಗಿಕ ಆಸಕ್ತಿಗಳು ಸಹಜವಾದದ್ದು. ಲೈಂಗಿಕ ಸಂಪರ್ಕದ ಮೂಲಕ ಒಂದು ದೀರ್ಘಕಾಲದ ಸಂಬಂಧಕ್ಕೆ ಅಡಿಪಾಯ ಹಾಕುವ ಬಗೆಗೆ ಗೊಂದಲಗಳಿರುವಂತೆ ಕಾಣಿಸುತ್ತದೆ. ಹೊಸ ಹುಡುಗನೊಂದಿಗೆ ಸೇರುವುದನ್ನು ಸಾಮಾಜಿಕವಾಗಿ ಗುಟ್ಟಾಗಿ ಇಡಬಹುದಾದರೂ ನಿಮ್ಮ ಅಂತರಂಗದಿಂದ ಮುಚ್ಚಿಡಲು ಸಾಧ್ಯವಾಗುತ್ತದೆಯೇ? ಹೊಸ ಹುಡುಗನ ಸಂಪರ್ಕವಾದ ನಂತರ ಹಳೆಯ ಸ್ನೇಹಿತನೊಡನೆ ಹೇಗೆ ಸಮಯ ಕಳೆಯುತ್ತೀರಿ? ಆಗ ಅಪರಾಧಿ ಭಾವ ಮೂಡಬಹುದೇ? ಮೂಡಿದರೆ ಏನು ಮಾಡುತ್ತೀರಿ? ನಿಮ್ಮಂತೆಯೇ ಹಳೆಯ ಸ್ನೇಹಿತ ಕೂಡ ಇನ್ನೊಬ್ಬ ಹುಡುಗಿಯೊಡನೆ ಸೇರಿದರೆ ನಿಮ್ಮೊಳಗೆ ಮೂಡುವ ಭಾವನೆಗಳೇನು? ಹಳೆಯ ಸ್ನೇಹಿತನೊಡನೆ ಇರುವ ಸಂಬಂಧದ ಭವಿಷ್ಯವೇನು? ನಿಮ್ಮ ತಕ್ಷಣದ ಆದ್ಯತೆ ಲೈಂಗಿಕ ಸುಖ ಪಡೆಯುವುದು ಎನ್ನುವುದಾದರೆ ಅದರಿಂದ ಹಳೆಯ ಸ್ನೇಹಿತನೊಡನಿದ್ದ ಸಂಬಂಧ ಹದಗೆಡುವ ಸಾಧ್ಯತೆಗಳಿಗೆ ಸಿದ್ಧರಿದ್ದೀರಾ? ಹೀಗೆ ಲೈಂಗಿಕ ಒತ್ತಡಗಳನ್ನು ತಣಿಸಿಕೊಳ್ಳಲು ಹೊಸಬರೊಡನೆ ಸಂಪರ್ಕ ಬೆಳೆಸುವುದರಿಂದ ಮುಂದೊಂದು ದಿನ ನಿಮ್ಮ ಮನಸ್ಸಿನಲ್ಲಿ ನಿಮ್ಮ ಬಗೆಗೆ ಯಾವ ಅಭಿಪ್ರಾಯ ಮೂಡಬಹುದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ನಿಮ್ಮ ದಾರಿ ನಿಚ್ಚಳವಾಗುತ್ತದೆ.
***************
ಏನಾದ್ರೂ ಕೇಳ್ಬೋದು
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್ ಉತ್ತರಿಸಲಿದ್ದಾರೆ.
bhoomika@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.