ಅದೊಂದು ಸಣ್ಣ ಊರಿನ ಸುಖಿ ಮಧ್ಯಮ ವರ್ಗದ ಕುಟುಂಬ. ಮುದ್ದಾದ ಎರಡು ಮಕ್ಕಳು. ಆದರೆ, ದುರ್ದೈವ ನೋಡಿ. ಹಿರಿಯ ಮಗಳಿಗೆ ಹುಟ್ಟಿನಿಂದಲೇ ಮುಖದಲ್ಲೊಂದು ಊನ. ಅವಳಿಗೆ ಒಂದು ಕಿವಿಯೇ ಇಲ್ಲ! ಕಿವಿ ಇರಬೇಕಾದ ಜಾಗದಲ್ಲಿ ಚೂರೇ ಚೂರು ಚರ್ಮದ ಮಡಿಕೆ. ‘ಪಾಪ, ಹುಣ್ಣಿಮಿ ಚಂದ್ರನಂಥ ಮುಖ ಕೊಟ್ಟ ದೇವರು ಕಿವಿ ತೀಡೋದೆ ಮರೆತುಬಿಟ್ಟ’ ಅಂತ ಎಲ್ಲರೂ ಮರುಗಿದರು. ವಿಪರ್ಯಾಸವೆಂದರೆ, ಅದನ್ನು ಸರಿಪಡಿಸಬಹುದೇ ಎಂಬ ಮಾಹಿತಿ ಆ ಮನೆಯವರಿಗಾಗಲೀ ಪರಿಚಯದವರಿಗಾಗಲೀ ಇರಲೇ ಇಲ್ಲ. ದೈಹಿಕ ನ್ಯೂನತೆಯ ಕೀಳರಿಮೆ, ಅವಮಾನದ ಹೊರತಾಗಿಯೂ ಆ ದಿಟ್ಟ ಹುಡುಗಿ, ಚೆನ್ನಾಗಿ ಓದಿ ನರ್ಸಿಂಗ್ ಕಾಲೇಜಿಗೆ ಸೇರಿದಳು. ಆಗಲೇ ಅವಳಿಗೆ ಗೊತ್ತಾಗಿದ್ದು, ಪ್ಲಾಸ್ಟಿಕ್ ಸರ್ಜರಿ ಮೂಲಕ ತನ್ನ ಕಿವಿ ನಿರ್ಮಿಸಬಹುದು ಎಂದು.
ಸರಳವಾದ ಶಸ್ತ್ರಚಿಕಿತ್ಸೆಯೊಂದರಲ್ಲಿ, ಅವಳದೇ ಪಕ್ಕೆಲುಬಿನ ಮೃದ್ವಸ್ಥಿಯ ಭಾಗವೊಂದನ್ನು ತೆಗೆದು, ಅದರಲ್ಲಿ ಕಿವಿಯ ಆಕಾರವನ್ನು ಕೆತ್ತಲಾಯಿತು. ಬಿಡಿ ತುಣುಕುಗಳನ್ನು ಪೇರಿಸಿ ಕಿವಿಯ ಒಳ-ಹೊರಗಿನ ಆಕೃತಿಯನ್ನೂ, ಅಂಕುಡೊಂಕುಗಳನ್ನೂ ತೀಡಿ ಅವಳದೇ ಇನ್ನೊಂದು ಕಿವಿಯ ಯಥಾರ್ಥ ಪ್ರತಿಬಿಂಬದಂತೇ ರಚಿಸಲಾಯಿತು. ಕಿವಿ ಇರಬೇಕಾದ ಸ್ಥಳದಲ್ಲಿನ ಚರ್ಮದ ಕೆಳಗೆ ಗವಿಯಂತೆ ಜಾಗ ನಿರ್ಮಿಸಿ ಅದನ್ನಲ್ಲಿ ತೂರಿಸಲಾಯಿತು.
ಮೇಲಿನ ಚರ್ಮವು ಮೃದುವಸ್ಥಿಯ ಆಕೃತಿಯ ಉದ್ದಗಲಕ್ಕೂ, ಸಂದುಗಳಲ್ಲೂ ಅಂಟಿಕೊಂಡ ಕೆಲ ದಿನಗಳ ಬಳಿಕ, ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಿ, ತಲೆಭಾಗಕ್ಕೆ ಅಂಟಿಕೊಂಡಿದ್ದ ಕಿವಿಯ ಆಕೃತಿಯ ಹಿಂಭಾಗವನ್ನು ಪ್ರತ್ಯೇಕಿಸಿ ಸಾಮಾನ್ಯ ಕಿವಿಯಂತೆ ಮುಂದೆ ವಾಲಿಸಿದಾಗ.. ಅಗೋ, ಕಿವಿ ತಯಾರು!
‘ಅವಳ ಮದುವೆ ಹೇಗೆ, ಮುಂದಿನ ಜೀವನ ಹೇಗೆ ಎಂಬ ದೊಡ್ಡ ಚಿಂತೆಯಿಂದ ಪಾರು ಮಾಡಿದಿರಿ ಡಾಕ್ಟ್ರೇ’ ಅಂತ ಅವಳ ತಂದೆ ಕೃತಜ್ಞತೆಯಿಂದ ಕೈ ಜೋಡಿಸುತ್ತಿದ್ದರೆ, ‘ಓಲೆ ಯಾವಾಗಿಂದ ಹಾಕ್ಕೊಳ್ಳಬಹುದು ಸಾರ್?’ ಎಂದು ಖುಶಿಯಿಂದ ಪುಟಿಯುತ್ತಿದ್ದಳು ಮೀನಾಕ್ಷಿ (ಹೆಸರು ಬದಲಿಸಲಾಗಿದೆ).
ಇದೇ ರೀತಿಯ ಅನೇಕ ಚಮತ್ಕಾರಿ ಉಪಾಯಗಳಿಂದ ಶರೀರದ ವಿವಿಧ ಅಂಗಗಳ ನ್ಯೂನತೆ, ಸಮಸ್ಯೆ ಅಥವ ನಷ್ಟವನ್ನು ಸರಿಪಡಿಸಲು ಬೆಳೆದು ನಿಂತಿರುವ ಮತ್ತು ಬೆಳೆಯುತ್ತಲೇ ಇರುವ ವೈದ್ಯಕೀಯ ವಿಭಾಗವೇ ಪ್ಲಾಸ್ಟಿಕ್ ಸರ್ಜರಿ. ಸಮಸ್ಯೆಯೆಂದರೆ, ಇದು ತೀರಾ ಆಧುನಿಕ ಮತ್ತು ತೀವ್ರಗತಿಯಿಂದ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾದ್ದರಿಂದ, ಜನಸಾಮಾನ್ಯರಿಗಿರಲಿ, ವೈದ್ಯಕೀಯ ಮತ್ತು ಅರೆವೈದ್ಯಕೀಯ ಕ್ಷೇತ್ರದವರಲ್ಲಿಯೇ ಇದರ ಬಗೆಗೆ ಮಾಹಿತಿ ಕಡಿಮೆ. ಇದರಿಂದಾಗಿ ಮೀನಾಕ್ಷಿಯಂಥ ಎಷ್ಟೋ ಜನರು, ತುಂಬಾ ಸಮಯ ಅದರ ಸದುಪಯೋಗದಿಂದ ವಂಚಿತರಾಗುತ್ತಿದ್ದಾರೆ. ಅದಕ್ಕೆಂದೇ, ಕೇಂದ್ರಸರ್ಕಾರದ ಅನುಮೋದನೆಯೊಂದಿಗೆ ಪ್ರತಿವರ್ಷ ಜುಲೈ 15ರಂದು ‘ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನ’ವೆಂದು ಆಚರಿಸಿ ಜನಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ.
ಪ್ಲಾಸ್ಟಿಕ್ ಸರ್ಜರಿಯ ಆದಿ ಮತ್ತು ವೈಭವ
ಪ್ಲಾಸ್ಟಿಕ್ ಸರ್ಜರಿಯ ವಿಜ್ಞಾನ ಇಷ್ಟಕ್ಕೂ ಆರಂಭವಾಗಿದ್ದು, ನಾಗರಿಕತೆಯ ತೊಟ್ಟಿಲು ಎಂದೇ ಹೆಸರಾದ ನಮ್ಮ ಭಾರತದಲ್ಲೇ! ಕ್ರಿಸ್ತಶಕೆಯ ಆರಂಭಕ್ಕೈ ಮೊದಲೇ ಈ ತರಹದ ಶಸ್ತ್ರಕ್ರಿಯೆಗಳನ್ನು ಯಶಸ್ವಿಯಾಗಿ ಮಾಡಿ ದಾಖಲಿಸಿದ್ದು ಸುಶೃತಮುನಿ.ಅರಿವಳಿಕೆ, ಆಂಟಿಬಯೋಟಿಕ್ ಇತ್ಯಾದಿ ಇರದ ದಿನಗಳಲ್ಲಿ ನಡೆದ ಈ ವಿದ್ಯಮಾನ ಸೋಜಿಗವಾದರೂ ನಿಜ. ಆತ, ಕತ್ತರಿಸಿ ಹೋದ ಮೂಗನ್ನು ರೋಗಿಯ ಹಣೆಯ ತ್ವಚೆಯಿಂದ ಪುನರ್ನಿರ್ಮಿಸುತ್ತಿದ್ದ ವಿಧಿಯು ‘ಇಂಡಿಯನ್ ಫೋರಹೆಡ್ ಫ್ಲಾಪ್’ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಇಂದಿಗೂ ಉಪಯೋಗದಲ್ಲಿದೆ.
ಕಾಲಾನುಕ್ರಮದಲ್ಲಿ, ಯೂರೋಪ್ ಮತ್ತು ಅಮೆರಿಕದಲ್ಲಿ, ವಿಶ್ವಯುದ್ಧದ ಸಮಯದಲ್ಲಿ ಒದಗಿದ ಅವಕಾಶದಿಂದಾಗಿ ಪ್ಲಾಸ್ಟಿಕ್ ಸರ್ಜರಿಯಲ್ಲಿ ನವ ಆವಿಷ್ಕಾರಗಳಾದವು. ಕಳೆದ ಕೆಲ ದಶಕಗಳಲ್ಲಂತೂ ಪ್ರಸ್ತುತ ವಿಜ್ಞಾನವು ಅತ್ಯಂತ ತ್ವರಿತಗತಿಯಲ್ಲಿ ವಿಕಸನ ಹೊಂದಿದ್ದು ಅನೇಕಾನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದೆ.
ಪ್ಲಾಸ್ಟಿಕ್ ಸರ್ಜರಿಯ ಉತ್ತುಂಗದ ನಿದರ್ಶನ, ಮುಖ ಪ್ರತ್ಯಾರೋಪಣೆ. ಈ ಶಸ್ತ್ರಚಿಕಿತ್ಸೆಯು ವೈದ್ಯವಿಜ್ಞಾನದ ಅತ್ಯಂತ ಕ್ಲಿಷ್ಟಕರ ಬೆಳವಣಿಗೆಗಳಲ್ಲೊಂದು. ಸಿಡಿಗುಂಡಿನಿಂದಾಗಿ ನಾಶವಾಗಿ ಹೋಗಿದ್ದ ಕೇಟಿ ಎಂಬ ತರುಣಿಯ ಮುಖವನ್ನು ತೆಗೆದು ಮೆದುಳು ನಿಷ್ಟ್ಕ್ರಿಯಗೊಂಡ ಅಂಗದಾನಿಯ ಮುಖವನ್ನು ಮೂಳೆ, ಮಾಂಸ, ನರ, ರಕ್ತನಾಳ ಆದಿಯಾಗಿ ಕಸಿ ಮಾಡಿದ್ದು ಇದುವರೆಗಿನ ಅತ್ಯಂತ ದೊಡ್ಡ ಮುಖಪರಿವರ್ತನೆಗಳಲ್ಲೊಂದು. ಕ್ಯಾನ್ಸರ್, ಅಪಘಾತ ಇತ್ಯಾದಿ ಸಂದರ್ಭದಲ್ಲಿ ಮುಖದ ಪುನರ್ನಿರ್ಮಾಣ ಇದೀಗ ಎಲ್ಲೆಡೆ ಸಾಮಾನ್ಯವಾದರೂ , ಇಷ್ಟು ದೊಡ್ಡ ಶಸ್ತ್ರವಿಜ್ಞಾನದ ಯಶಸ್ಸು, ವಾಸ್ತವತೆಯನ್ನು ಕಾಲ್ಪನಿಕ ಲೋಕದ ಮಗ್ಗುಲಿಗೆ ತಂದು ನಿಲ್ಲಿಸಿ ರೋಮಾಂಚನ ಮೂಡಿಸಿದೆ. ಕಾಲಕಾಲಕ್ಕೆ ಎದುರಾಗುವ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವುದರಲ್ಲಿ ಮಾನವ ನಾಗರಿಕತೆ ಮತ್ತು ವಿಜ್ಞಾನ ಎಂದೆಂದೂ ಹಿಂದೆ ಬೀಳದು ಎಂಬ ಸಂದೇಶ ಎಲ್ಲೆಡೆ ಬೀರುವಂತಿದೆ.
ಪ್ಲಾಸ್ಟಿಕ್ ಸರ್ಜರಿ ಎಲ್ಲೆಲ್ಲಿ?
ಪ್ಲಾಸ್ಟಿಕ್ ಸರ್ಜರಿಯ ಆದಿ ಮತು ತುತ್ತುದಿಗಳು ಇಷ್ಟಾದರೆ, ಇನ್ನು ದಿನನಿತ್ಯದ ಬಳಕೆಯಲ್ಲಿನ ಮಜಲುಗಳು ಸಾಕಷ್ಟಿವೆ. ಸೌಂದರ್ಯವೃದ್ಧಿಗಾಗಿ ಮಾಡುವ ಸುರೂಪ ಶಸ್ತ್ರಚಿಕಿತ್ಸೆ ಒಂದೆಡೆಯಾದರೆ, ಅಂಗಾಂಗಗಳ ಪುನರ್ನಿರ್ಮಾಣಕ್ಕಾಗಿ ಮಾಡುವ ರೀಕನ್‌ಸ್ಟ್ರಕ್ಟಿವ್ ಸರ್ಜರಿ ಇನ್ನೊಂದೆಡೆ. ಮುಖದ ಸೌಂದರ್ಯಕ್ಕಾಗಿ ಪ್ರಮುಖವಾಗಿ ಮೂಗು, ಗದ್ದ, ತುಟಿ, ಬಕ್ಕತಲೆ ಹಾಗು ಕಣ್ರೆಪ್ಪೆಗಳ ಪ್ಲಾಸ್ಟಿಕ್ ಸರ್ಜರಿ ಜನಪ್ರಿಯವಾಗಿದ್ದರೆ, ದೇಹದ ಆಕಾರವನ್ನು ಸಪೂರವಾಗಿಸಲು, ಬೇಡವಾದ ಕೊಬ್ಬನ್ನು ತೆಗೆಯುವುದು ಹಾಗೂ ಬೇಕಾದ ಕಡೆ ಕಸಿ ಮಾಡುವ ಲಿಪೋಸಕ್ಷನ್ ಹಾಗು ಲಿಪೋಸ್ಕಲ್ಪ್ಟಿಂಗ್ ಕಾರ್ಯಗಳು ಸರ್ವೇಸಾಮಾನ್ಯ. ಇದಲ್ಲದೇ ಸಿಲಿಕಾನ್‌ನಿಂದ ಸ್ತನವೃದ್ಧಿಗೂ ಹಾಗೂ ಸ್ತನೋತ್ಥಾನ ಶಸ್ತ್ರಚಿಕಿತ್ಸೆಗೂ ಇತ್ತೀಚೆಗೆ ಸಾಕಷ್ಟು ಬೇಡಿಕೆ ಉಂಟು. ಇದಿಷ್ಟು ನಿಮಗೆ ಈಗಾಗಲೇ
ಗೊತ್ತಿರಲಿಕ್ಕೂ ಸಾಕು.
ಇದಲ್ಲದೇ, ಜನ್ಮಜಾತ ವಿಕೃತಿಗಳನ್ನು ಸರಿಪಡಿಸಲೂ ಪ್ಲಾಸ್ಟಿಕ್ ಸರ್ಜರಿ ಬೇಕಾಗುತ್ತದೆ. ಉದಾಹರಣೆಗೆ ಸೀಳುತುಟಿ, ಊನವಾದ ಕೈ, ಕಾಲು, ಬೆರಳುಗಳು ಇತ್ಯಾದಿ. ಹಾಗೆಯೇ, ಅಪಘಾತದಿಂದಾಗಿಯೋ, ಕ್ಯಾನ್ಸರ್‌ನ ಚಿಕಿತ್ಸೆಯಿಂದಾಗಿಯೋ ದೇಹದ ಯಾವುದೇ ಭಾಗದ ತ್ವಚೆ, ಮಾಂಸಖಂಡ, ನರ ಇತ್ಯಾದಿ ಅಂಗಾಂಶಗಳು ನಷ್ಟವಾಗಿದ್ದರೆ, ಅವುಗಳನ್ನು ದೇಹದ ಇನ್ನಾವುದೋ ಭಾಗದಿಂದ ಎರವಲು ತಂದು ಕಸಿ ಮಾಡುವುದೂ ಪ್ಲಾಸ್ಟಿಕ್ ಸರ್ಜರಿಯೇ. ಬೆಂಕಿ ಅನಾಹುತಕ್ಕೆ ಒಳಗಾದ ಚರ್ಮದ ಚಿಕಿತ್ಸೆಗೂ ಪ್ಲಾಸ್ಟಿಕ್ ಸರ್ಜರಿ ಬೇಕು. ಕೈ ಮತ್ತು ಕೈಬೆರಳುಗಳಿಗೆ ಪೆಟ್ಟಾದಾಗ ಸಾಮಾನ್ಯವಾಗಿ ನಾಜೂಕಾದ ನರನಾಡಿಗಳ ಆರೈಕೆ ಬೇಕಾದುದರಿಂದ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆ ಬರುವುದೂ ಮಾಮೂಲು. ಪಾರ್ಶ್ವವಾಯುವಿನಿಂದ ಸೊಟ್ಟಗಾದ ಮುಖವನ್ನೂ ಸರಳ ಪ್ಲಾಸ್ಟಿಕ್ ಸರ್ಜರಿಯಿಂದ ಸರಿಪಡಿಸುವುದೆಂಬುದು ಎಷ್ಟು ಜನರಿಗೆ ಗೊತ್ತುಂಟು, ಹೇಳಿ.
ಮೈಕ್ರೋಸರ್ಜರಿ
ಪ್ಲಾಸ್ಟಿಕ್ ಸರ್ಜರಿಯಲ್ಲಿ ತುಂಬ ಚಿಕ್ಕದಾದ ಅಂಗಾಂಶಗಳ ಮೇಲೆ ಅತಿಸೂಕ್ಷ್ಮ ಶಸ್ತ್ರಕ್ರಿಯೆಗಳನ್ನು ನಡೆಸಲು ವಿಶೇಷವಾಗಿ ಬೆಳೆದು ಬಂದಿದ್ದು ಮೈಕ್ರೋಸರ್ಜರಿ. ಸೂಕ್ಷ್ಮದರ್ಶಕದ ಮೂಲಕ, ಕೂದಲೆಳೆಯಷ್ಟು ಸಣ್ಣ ನರತಂತುಗಳನ್ನೂ ಧಮನಿಗಳನ್ನೂ ಬರಿಗಣ್ಣಿಗೂ ಕಾಣದ ಹೊಲಿಗೆಗಳಿಂದ ಹೊಲಿದು ಜೋಡಿಸುವ ತಂತ್ರಜ್ಞಾನ. ಇದು ಎಷ್ಟೋ ಅಸಾಧ್ಯಗಳನ್ನು ಸಾಧ್ಯವಾಗಿಸಿದೆ. ತುಂಡಾದ ಅಂಗಗಳನ್ನು ನರನಾಡಿಗಳ ಸಮೇತ ಪುನರ್ಜೋಡಣೆ ಮಾಡುವುದು, ಸೂಕ್ಷ್ಮ ಅಂಗಾಂಗ ಕಸಿ ಮಾಡುವುದೂ ಅಲ್ಲದೇ ಇನ್ನೂ ಅನೇಕ ಕ್ಲಿಷ್ಟಕರ ಸಂದರ್ಭಗಳಲ್ಲಿ ಮೈಕ್ರೋಸರ್ಜರಿಯ ಚಮತ್ಕಾರ ಅಪಾರ.
ಒಂದು ಕಾಲವಿತ್ತು. ಪ್ಲಾಸ್ಟಿಕ್ ಸರ್ಜರಿ ಕೇವಲ ಶ್ರೀಮಂತರಿಗಾಗಿ ವಿದೇಶಗಳಲ್ಲೋ, ಮಹಾನಗರಗಳಲ್ಲೋ ಮಾತ್ರ ಲಭ್ಯವಿತ್ತು. ಆದರೆ, ಈಗ ಹಾಗಲ್ಲ. ನಮ್ಮ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಇದೀಗ ಎಲ್ಲೆಡೆ ಪ್ಲಾಸ್ಟಿಕ್ ಸರ್ಜರಿಯ ಸೌಲಭ್ಯವು ಕೈಗೆಟಕುವ ದರದಲ್ಲಿ ಲಭ್ಯವಿದೆ. ಜನಸಾಮಾನ್ಯರು ಸದುಪಯೋಗ ಪಡೆಯುವುದೊಂದೇ ಬಾಕಿ ಇದೆ. ಇಷ್ಟಕ್ಕೂ, ಪ್ಲಾಸ್ಟಿಕಕ್‌ಗೂ ಪ್ಲಾಸ್ಟಿಕ್ ಸರ್ಜರಿಗೂ ಏನು ಸಂಬಂಧ ಅಂತ ತಾನೇ ನಿಮ್ಮ ಕುತೂಹಲ? ಮೆತ್ತಗಿರುವಾಗ ನಾವು ಮೂಡಿಸಿದ ಆಕಾರದಲ್ಲಿಯೇ ಗಟ್ಟಿಯಾಗಿಬಿಡುವುದು ಪ್ಲಾಸ್ಟಿಕ್ ಗುಣವಿಶೇಷ. (ಗ್ರೀಕ್ ಮೂಲ: ಪ್ಲಾಸ್ಟಿಕೋಸ್). ಅದೇ ರೀತಿಯಾಗಿ, ದೇಹದ ಅಂಗ, ಅಂಗಾಂಶಗಳನ್ನು ಅವಶ್ಯ ಇರುವ ಆಕಾರಕ್ಕೆ ತೀಡಿ ಶಾಶ್ವತವಾಗಿ ಪರಿವರ್ತಿಸುವ ಶಸ್ತ್ರಚಿಕಿತ್ಸೆಯೇ ಪ್ಲಾಸ್ಟಿಕ್ ಸರ್ಜರಿ.
(ಲೇಖಕ: ಪ್ಲಾಸ್ಟಿಕ್ ಸರ್ಜರಿ ತಜ್ಞರು, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.