ಜಾಗಿಂಗ್ ಮಾಡುವುದು ದೇಹ ಮತ್ತು ಆರೋಗ್ಯಕ್ಕೆ ಉತ್ತಮ. ಬೀದಿ, ರಸ್ತೆಯಲ್ಲಿದ್ದ ಕಸವನ್ನು ಹೆಕ್ಕಿ ಸ್ವಚ್ಛ ಮಾಡಿದರೆ ಪರಿಸರಕ್ಕೆ ಒಳ್ಳೆಯದು. ಇವೆರಡನ್ನೂ ಒಟ್ಟಾಗಿ ಮಾಡಿದರೆ ಹೇಗಿದ್ದೀತು?
ಜಾಗಿಂಗ್ ಮಾಡುತ್ತಾ ರಸ್ತೆಬದಿಯಲ್ಲಿದ್ದ ಕಸ ಹೆಕ್ಕುವ ಹೊಸ ಫಿಟ್‌ನೆಸ್ ಟ್ರೆಂಡ್ ಈಗ ಶುರುವಾಗಿದೆ. ಸ್ವೀಡನ್‌ನಲ್ಲಿ ಆರಂಭವಾದ ಈ ಟ್ರೆಂಡ್ ಈಗ ವಿಶ್ವವ್ಯಾಪಿಯಾಗಿದೆ. ಇದನ್ನು ಪ್ಲೊಗ್ಗಿಂಗ್(Plogging) ಎಂದು ಕರೆಯುತ್ತಾರೆ. ಜಾಗಿಂಗ್ ಮತ್ತು ಪಿಕಪ್ ಆಫ್ ಲಿಟರ್ (ಸ್ಪೀಡಿಷ್: ಪ್ಲಾಗಪ್) ಪದಗಳನ್ನು ಜೋಡಿಸಿ ಪ್ಲೊಗ್ಗಿಂಗ್ ಆಗಿದೆ. ಇದು ಜಾಗಿಂಗ್‌ಗಿಂತಲೂ ಪರಿಣಾಮಕಾರಿ ಹಾಗೂ ಪರಿಸರ ಸ್ವಚ್ಛ ಮಾಡುತ್ತಾ ಆರೋಗ್ಯ ಕಾಪಾಡಿಕೊಳ್ಳಬಹುದು.
ಒಬ್ಬ ವ್ಯಕ್ತಿ ಓಡುತ್ತಾ, ಆ ದಾರಿಯಲ್ಲಿ ಸಿಗುವ ಕಸವನ್ನು ಹೆಕ್ಕಿ ಕೈಯಲ್ಲಿದ್ದಬ್ಯಾಗ್‌ಗೆ ತುಂಬಿಸಿಕೊಂಡು ಪರಿಸರ ಕಾಳಜಿ, ಫಿಟ್‌ನೆಸ್ ಬಗ್ಗೆಯೂ ಆಲೋಚನೆ ಮಾಡುವುದು ಪ್ಲೊಗ್ಗಿಂಗ್ ಹಿಂದಿನ ಉದ್ದೇಶ. ಈ ಪರಿಸರ ಸ್ನೇಹಿ ಟ್ರೆಂಡ್ ಯೂರೋಪ್, ಅಮೆರಿಕ, ಮೆಕ್ಸಿಕೊ ಹಾಗೂ ಇನ್ನು ಕೆಲ ರಾಷ್ಟ್ರಗಳಿಗೆ ಹಬ್ಬಿತು ಎನ್ನಲಾಗಿದೆ. ಈಗ ಇನ್‌ಸ್ಟಾಗ್ರಾಂನಲ್ಲಿ ದಿನದಲ್ಲಿ ಸಾವಿರಾರು ಜನರು ‘ಪ್ಲೊಗ್ಗಿಂಗ್’ ಪೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಫಿಟ್‌ನೆಸ್ ಟ್ರೆಂಡ್ ಆರಂಭಿಸಿದ್ದು 2016ರಲ್ಲಿ ಸ್ವೀಡನ್‌ನ ಎರಿಕ್ ಅಸ್ಟ್ರೋಮ್ ಎಂಬ ಓಟಗಾರ್ತಿ. ತಾನು ಪ್ರತಿದಿನ ಜಾಗಿಂಗ್ ಮಾಡುವ ಮಾರ್ಗದಲ್ಲಿ ಕಸದ ರಾಶಿ ನೋಡಿ ರೋಸಿ ಹೋಗಿ ಇದನ್ನು ಆರಂಭಿಸಿದರು. ಎಲ್ಲರೂ ಪರಿಸರ ಸ್ವಚ್ಛತೆ ಬಗ್ಗೆ ಗಮನ ಹರಿಸಲಿ ಎಂದು ಅದರ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿ ಕೊಂಡರು. ಇದು ಬರಬರುತ್ತಾ ಭಾರಿ ಪ್ರಚಾರ ಪಡೆಯಿತು.
ಈಗ ನಮ್ಮ ದೆಹಲಿ, ಬೆಂಗಳೂರಿನಲ್ಲೂ ಇಂತಹ ಟ್ರೆಂಡ್ ನಿಧಾನವಾಗಿ ಆರಂಭವಾಗಿದೆ. ಅದರಲ್ಲೂ ಪರಿಸರಪ್ರೇಮಿಗಳು ಹಾಗೂ ಫಿಟ್‌ನೆಸ್ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತಿದೆ.
‘ನಾನು ಪ್ಲೊಗ್ಗಿಂಗ್ ಬಗ್ಗೆ ಲೇಖನ ಓದಿದ ಬಳಿಕ ಜಾಗಿಂಗ್ ಮಾಡುತ್ತಾ ಎಷ್ಟು ದಿನಗಳನ್ನು ನಿರರ್ಥಕವಾಗಿ ಕಳೆದೆ ಎಂದೆನ್ನಿಸಿತು. ಮರುದಿನದಿಂದಲೇ ಬೆಳಿಗ್ಗೆಯ ನಡಿಗೆಯ ಅವಧಿಯಲ್ಲಿ ಕೈಗವಸು, ಬ್ಯಾಗ್ ಹಿಡಿದುಕೊಂಡು, ದಾರಿಯಲ್ಲಿ ಸಿಗುವ ಕಸವನ್ನು ಹೆಕ್ಕುತ್ತಾ ಹೋದೆ. ಈ ಕೆಲಸದಿಂದ ಪರಿಸರರಕ್ಷಣೆಯಲ್ಲಿ ತೊಡಗಿಕೊಂಡ ಖುಷಿಯೂ ನನ್ನದಾಯಿತು’ ಎಂದು ಇನ್‌ಸ್ಟಾಗ್ರಾಂನಲ್ಲಿ ಲೌರಾ ಎಂಬವರು ಬರೆದುಕೊಂಡಿದ್ದಾರೆ.
ಅರ್ಧಗಂಟೆ ಬರಿಯ ಜಾಗಿಂಗ್ ಮಾಡುವುದಕ್ಕಿಂತ ಪ್ಲೊಗ್ಗಿಂಗ್ ಮಾಡಿದರೆ ಎರಡು ಪಟ್ಟು ಹೆಚ್ಚು ಕ್ಯಾಲೊರಿ ಬರ್ನ್ ಆಗುತ್ತದೆ. ಇದರಲ್ಲಿ ಓಡುವುದು, ಬಗ್ಗುವುದು, ಏಳುವುದು ಮಾಡಬೇಕಾಗಿದ್ದರಿಂದ ಸಹಜವಾಗಿ ಹೆಚ್ಚು ಕ್ಯಾಲೊರಿ ಕಳೆದುಕೊಳ್ಳುತ್ತೇವೆ. ಹಾಗೇ ದೇಹಕ್ಕೆ ಅಧಿಕ ವ್ಯಾಯಾಮವೂ ಆಗುವುದರಿಂದ ಫಿಟ್ ಆಗಿ, ಸ್ನಾಯುಗಳು ಸದೃಢವಾಗುತ್ತವೆ. ದೈಹಿಕ ಆರೋಗ್ಯ ಸುಧಾರಣೆ ಹಾಗೂ ಪರಿಸರ ಕಾಳಜಿಯನ್ನು ಒಟ್ಟಿಗೆ ಮಾಡಬಹುದು ಎಂದು ಪ್ಲೊಗ್ಗಿಂಗ್ ಪ್ರಿಯರ ಮಾತು.ಈಗೀಗ ಟ್ರೆಕ್ಕಿಂಗ್‌ನಲ್ಲೂ ಪ್ಲೊಗ್ಗಿಂಗ್ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.