ತೆಂಗಿನ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದೆ? ಕೆಟ್ಟದ್ದೆ? – ಈ ಚರ್ಚೆ ಎಲ್ಲೆಡೆ ಮತ್ತೆ ಆರಂಭವಾಗಿದೆ. ಇದಕ್ಕೆ ಕೆರಿನ್ ಮಿಷಲ್ಸ್ ಎಂಬ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಾಪಕಿ ಜರ್ಮನಿಯ ಫ್ರೆಬರ್ಗ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣ ಕಾರಣವಾಗಿದೆ. ಇದನ್ನು ಹತ್ತು ಲಕ್ಷಕ್ಕೂ ಹೆಚ್ಚು ಜನ ಯೂಟ್ಯೂಬ್‍ನಲ್ಲಿ ವೀಕ್ಷಿಸಿದ್ದಾರೆ; ಅನೇಕ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಆಕೆ ಆ ಭಾಷಣದಲ್ಲಿ ಮೂಲತಃ ಹೇಳಹೊರಟಿರುವುದು ಇತ್ತೀಚೆಗೆ ಕೆಲವೇ ಆಹಾರಗಳಿಗೆ ‘ಶ್ರೇಷ್ಠ ಆಹಾರ’ ಅಥವಾ ‘ಸೂಪರ್ ಫುಡ್’ ಎನ್ನುವ ಹಣೆಪಟ್ಟಿಯನ್ನು ವಿರೋಧಿಸುವುದಾಗಿತ್ತು. ಈ ಸೂಪರ್ ಫುಡ್ ಎನ್ನುವ ಹಣೆಪಟ್ಟಿ ಈಗ ಅಮೆರಿಕದ ಎಣ್ಣೆಕಾಳಾದ ಚಿಯಾಬೀಜಗಳಿಗೆ ಮತ್ತು ದಕ್ಷಿಣ ಅಮೆರಿಕದ ಕೀನ್ವ, ಇಥಿಯೋಪಿಯಾದ ಟೆಫ್, ಜೊತೆಗೆ ತೆಂಗಿನ ಎಣ್ಣೆ – ಹೀಗೆ ಕೆಲವು ಬೆರಳೆಣಿಕೆಯಷ್ಟು ಆಹಾರಪದಾರ್ಥಗಳಿಗೆ ಮಾತ್ರ ಸಂದಿದೆ. ಇತ್ತೀಚೆಗೆ ಅಮೆರಿಕದಲ್ಲಿ ಕುರಿ–ಮೇಕೆಮಾಂಸಕ್ಕೂ ಸೂಪರ್ ಫುಡ್ ಎಂದು ಕರೆಯಲಾಗುತ್ತಿದೆ. ಆದರೆ ಈ ಸೂಪರ್ ಫುಡ್ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇಂತಹ ಸೂಪರ್ ಫುಡ್ ಪಟ್ಟಿಯನ್ನು ಕೆರಿನ್ ಮಿಷಲ್ ವಿಶ್ಲೇಷಿಸುತ್ತಾ ‘ತೆಂಗಿನ ಎಣ್ಣೆ ಸೂಪರ್ ಫುಡ್ ಇರಲಿ, ಅದೊಂದು ಶುದ್ಧ ವಿಷ’ ಎಂದು ಹೇಳಿದ್ದಾರೆ. ಇದು ವಿರೋಧಿಸುವ ಅಬ್ಬರದಲ್ಲಿ ಆಡಿರುವ ಅತಿಶಯೋಕ್ತಿ.
ಅವರು ಕೊಟ್ಟಿರುವ ಕಾರಣ ತೆಂಗಿನೆಣ್ಣೆಯಲ್ಲಿ ಶೇ 90ರಷ್ಟು ಸ್ಯಾಚುರೇಟೆಡ್ ಕೊಬ್ಬಿನ ಅಂಶವಿದೆ. (ಸ್ಯಾಚುರೇಟೆಡ್ ಎಂದರೆ ರಾಸಾಯನಿಕವಾಗಿ ಪೂರ್ತಿಯಾಗಿದ್ದು, ಇನ್ನೂ ಪ್ರಕ್ರಿಯೆಗೆ ತೆರೆದುಕೊಂಡಿಲ್ಲ ಎನ್ನುವಂಥದ್ದು.) ಇಂತಹ ಎಣ್ಣೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ದೇಹಕ್ಕೆ ಅವಶ್ಯಕವಾದ ಲಿನೋಲೆನಿಕ್ ಆಮ್ಲ ಇಲ್ಲವೇ ಇಲ್ಲ ಎನ್ನಲಾಗುತ್ತದೆ. ಇದನ್ನು ಸಂಪೂರ್ಣವಾಗಿ ಅಲ್ಲಗಳೆಯಲಾಗುವುದಿಲ್ಲ. ಅಲ್ಲದೆ, ಅಮೆರಿಕನ್ ಹಾರ್ಟ್ ಅಸೋಸಿಯೇಷನ್, ಹೆಸರಾಂತ ಕೋಕ್ರೇನ್ ವರದಿ, ಬ್ರಿಟಿಷ್ ನ್ಯೂಟ್ರೀಷನ್ ಫೌಂಡೇಶನ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನೇ ವಾದಿಸುತ್ತಿರುವುದು.
ವಾಸ್ತವವಾಗಿ ತೆಂಗಿನ ಎಣ್ಣೆಯಲ್ಲಿ ಐ.ಸಿ.ಎಂ.ಆರ್. (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಹೊರತರುವ ಭಾರತೀಯ ಆಹಾರಪದಾರ್ಥಗಳ ಪೌಷ್ಟಿಕಾಂಶ ವಿವರ ಪಟ್ಟಿಯಲ್ಲಿ ಶೇ 90.8ರಷ್ಟು ಸ್ಯಾಚುರೇಟೆಡ್ ಕೊಬ್ಬು, ಶೇ 7ರಷ್ಟು ಮೂನೋ ಅನ್‍ಸ್ಯಾಚುರೇಟೆಡ್ ಕೊಬ್ಬು ಹಾಗೂ ಶೇ 1.9ರಷ್ಟು ಪಾಲಿ ಅನ್‍ಸ್ಯಾಚುರೇಟೆಡ್ ಕೊಬ್ಬು ಇದೆ ಎಂದು ತಿಳಿಸುತ್ತದೆ. ಇಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರತಿಪಾದಿಸುತ್ತಿರುವುದೇನೆಂದರೆ, ಸ್ಯಾಚುರೇಟೆಡ್ ಕೊಬ್ಬಿರುವ ಎಣ್ಣೆಯಿಂದ ಶೇ 10ಕ್ಕೂ ಕಡಿಮೆ ಶಕ್ತಿಯನ್ನು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಅಂದರೆ, ದಿನಕ್ಕೆ ಸುಮಾರು 30ಗ್ರಾಂಗೂ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ವನಸ್ಪತಿಯಂತಹ ಎಣ್ಣೆಯಲ್ಲಿರುವಂತಹ ಟ್ರಾನ್ಸ್‌ಫ್ಯಾಟಿ ಆ್ಯಸಿಡ್‍ಗಳು ದಿನಕ್ಕೆ 3 ಗ್ರಾಂಗೂ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಒಮೇಗಾ 3 ಎಣ್ಣೆಯ ಅಂಶವನ್ನು ಕನಿಷ್ಠ ಶೇ 2ರಷ್ಟು ಶಕ್ತಿ ಕೊಡುವಂತೆ ಮತ್ತು ಮೋನೋ ಅನ್‍ಸ್ಯಾಚುರೇಟೆಡ್ ಕೊಬ್ಬಿನಿಂದ 15ರಿಂದ ಶೇ 20ರಷ್ಟು ಶಕ್ತಿ ಬರುವಂತೆ ನೋಡಿಕೊಳ್ಳಬೇಕು. ಸ್ಯಾಚುರೇಟೆಡ್ ಕೊಬ್ಬಿರುವ ಎಣ್ಣೆಯ ಗುಂಪಿಗೆ ತೆಂಗಿನ ಎಣ್ಣೆ ಮತ್ತು ಪಾಮ್‌ಎಣ್ಣೆ – ಎರಡೂ ಸೇರಿಕೊಳ್ಳುತ್ತದೆ. ಮೋನೋ ಅನ್‍ಸ್ಯಾಚುರೇಟೆಡ್ ಕೊಬ್ಬಿನ ಗುಂಪಿಗೆ ಕಡಲೇಕಾಯಿ ಎಣ್ಣೆ, ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕುಸುಬಿ ಎಣ್ಣೆ, ಹತ್ತಿಬೀಜದ ಎಣ್ಣೆಗಳಾಗಿವೆ. ಹಾಗೆಯೇ ಒಮೇಗ 3 ಇರುವ ಎಣ್ಣೆಯ ಗುಂಪಿನಲ್ಲಿ ಸೋಯಾ ಎಣ್ಣೆ, ಸಾಸಿವೆ ಎಣ್ಣೆ, ಅಗಸಿಬೀಜ, ಕಾಮಕಸ್ತೂರಿ, ಅಳವಿಬೀಜ, ಮೀನೆಣ್ಣೆಗಳಾಗಿವೆ. ತೆಂಗಿನ ಎಣ್ಣೆಯ ಸ್ಯಾಚುರೇಟೆಡ್ ಕೊಬ್ಬಿನಲ್ಲಿ ಲಾರಿಕ್ ಆಮ್ಲ ಶೇ 50ರಷ್ಟು ಇರುತ್ತದೆ. ಇದೇ ಲಾರಿಕ್ ಆಮ್ಲ ತಾಯಿಯ ಹಾಲಿನಲ್ಲಿಯೂ ಸುಮಾರು ಶೇ 10ರಷ್ಟು ಇರುತ್ತದೆ. ಈ ಕಾರಣದಿಂದ ‘ತೆಂಗಿನಎಣ್ಣೆ ತಾಯಿಯ ಹಾಲಿಗೆ ಸಮ’ ಎನ್ನುವುದು ಮೂರ್ಖತನದ ಪರಮಾವಧಿ. ಇದೇ ವಾದವನ್ನು ಮುಂದುವರಿಸಿ, ಶೇಂಗಾಎಣ್ಣೆಯ ಪರ ವಕಾಲತ್ತವನ್ನು ವಹಿಸಿದರೆ, ತಾಯಿ ಹಾಲಿನಲ್ಲಿ ಸುಮಾರು ಶೇ 30ರಷ್ಟು ಓಲೀಕ್ ಆ್ಯಸಿಡ್ ಕೊಬ್ಬಿನ ಅಂಶವಿದ್ದರೆ ಅದು ಶೇಂಗಾಎಣ್ಣೆಯಲ್ಲಿ ಶೇ 46ರಷ್ಟಿರುತ್ತದೆ. ಹೀಗಾಗಿ ಶೇಂಗಾಎಣ್ಣೆ ತಾಯಿ ಹಾಲಿಗೆ ಸಮ ಎನ್ನಬಹುದು! ಅಥವಾ ತಾಯಿಯ ಹಾಲಿನಲ್ಲಿ ಕೊಲೆಸ್ಟ್ರಾಲ್ ಇದೆ, ಇನ್ನಾವುದೋ ಪ್ರಾಣಿಯ ಕೊಬ್ಬಿನಲ್ಲಿ ಕೊಲೆಸ್ಟ್ರಾಲ್ ಇದ್ದ ತಕ್ಷಣ ಅದು ತಾಯಿಯ ಹಾಲಿಗೆ ಸಮನಾಗಲು ಸಾಧ್ಯವಿಲ್ಲ. ತೆಂಗಿನೆಣ್ಣೆಯನ್ನು ತಾಯಿಯ ಹಾಲಿಗೆ ಸಮ – ಎಂದು ಪರವಹಿಸುವುದಕ್ಕೂ, ಹಾಗೆಯೇ ಅದನ್ನು ‘ಶುದ್ಧ ವಿಷ’ ಎಂದು ಜರಿಯುವುದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ತಾಯಿಯ ಹಾಲು ಕೂಡ ಮೊದಲನೆಯ ದಿನ ಇದ್ದ ಪೌಷ್ಟಿಕಾಂಶಕ್ಕಿಂತ ಎರಡನೆಯ ದಿನ ಬೇರೆಯಾಗುತ್ತದೆ. ಇದು ಒಂದು ವಾರದಲ್ಲಿ ಬಹಳಷ್ಟು ಬದಲಾವಣೆಯಾಗುತ್ತದೆ. ಹಾಗೆಯೇ ತಾಯಿಯ ಊಟದ ಮೇಲೆ ಕೂಡ ಇದು ಅವಲಂಬಿತವಾಗಿರುತ್ತದೆ.
ಯಾವುದೇ ಅಡುಗೆಯೆಣ್ಣೆ ಅಥವಾ ಆಹಾರವೊಂದನ್ನು ಪರಿಪೂರ್ಣ ಎಂದು ನೋಡುವುದೇ ತಪ್ಪು. ಒಂದು ಆಹಾರವನ್ನು ಆಯಾ ಆಹಾರ ಪದ್ಧತಿಯಲ್ಲಿ ಭೌಗೋಳಿಕ ಹಿನ್ನೆಲೆ ಮತ್ತು ವಾತಾವರಣದಲ್ಲಿ ಸಮಗ್ರವಾಗಿ ಸರಿ ಹೊಂದುತ್ತದೆಯೇ ಇಲ್ಲವೇ ಎನ್ನುವುದು ಮುಖ್ಯ. ಕರಾವಳಿ ಭಾಗದ ಜನರು ತೆಂಗಿನ ಎಣ್ಣೆಯಲ್ಲಿ ಮೀನು ಹುರಿದರೆ, ತೆಂಗಿನ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಕೊಬ್ಬು, ಮೀನಿನಲ್ಲಿರುವ ಒಮೇಗಾ 3 ಕೊಬ್ಬು ಸೇರಿ ಪರಿಪೂರ್ಣ ಎಣ್ಣೆಯಾಗುತ್ತದೆ. ಹಾಗೆಯೇ ತೆಂಗಿನ ಎಣ್ಣೆಯಲ್ಲಿ ಒಗ್ಗರಣ್ಣೆ ಹಾಕುವಾಗ ಸಾಸಿವೆ ಬಿದ್ದೇ ಬೀಳುತ್ತದೆ. ಸಾಸಿವೆಯಲ್ಲಿರುವ ಬೇರೆಯೇ ಕೊಬ್ಬಿನ ಅಂಶ ಜೊತೆಗೂಡಿ ಪರಿಪೂರ್ಣತೆಯನ್ನು ಪಡೆಯುತ್ತದೆ. ಬಿಡಿಬಿಡಿಯಾಗಿ ಪರಿಪೂರ್ಣತೆಯನ್ನು ಕಾಣದೆ, ಇಡಿಯಲ್ಲಿ ಕಾಣುವುದು ಒಳ್ಳೆಯದು. ಯಾವುದೇ ಒಂದು ಆಹಾರದಲ್ಲಿ ಪರಿಪೂರ್ಣತೆಯನ್ನು ಕಾಣುವುದು ತಪ್ಪಾಗುತ್ತದೆ. ಆಹಾರದ ವೈವಿಧ್ಯತೆ ಇದ್ದಲ್ಲಿ, ವಿಜ್ಞಾನಕ್ಕೆ ತಿಳಿದ ಮತ್ತು ತಿಳಿಯದ ಅಂಶಗಳು ಅದರಲ್ಲಿ ಸೇರ್ಪಟ್ಟು ಪರಿಪೂರ್ಣವಾಗುತ್ತವೆ. ಹಾಗೆಯೇ ನಮಗೆ ದಿನಕ್ಕೆ ದ್ರವರೂಪದಲ್ಲಿ ಬೇಕಾದ ಅಡುಗೆಯೆಣ್ಣೆ ಸುಮಾರು 30 ಗ್ರಾಂ. ಇನ್ನುಳಿದ ಸುಮಾರು 60-70 ಗ್ರಾಂ ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆಕಾಳು, ತರಕಾರಿ – ಅದರಲ್ಲೂ ಸೊಪ್ಪುಗಳ ಮೂಲಕ ಬರುವಂಥದ್ದು. ಹಾಗಾಗಿ ತೆಂಗಿನ ಎಣ್ಣೆಯನ್ನು ಬಳಸುವವರು ಯಾವುದೇ ಸಮಸ್ಯೆಯಿಲ್ಲದೆ ಬಳಸಬಹುದು. ಆಯುರ್ವೇದ ಹೇಳುವಂಥ ‘ಹಿತ ಭುಕ್’, ‘ಮಿತ ಭುಕ್’ ಹಾಗೂ ‘ಋತ ಭುಕ್’ ಸರಿಯಾಗಿಯೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.