ಪಾಲಕರಾಗಿ ಪ್ರತಿಯೊಬ್ಬ ತಂದೆ-ತಾಯಿಯೂ ತಮ್ಮ ಮಕ್ಕಳನ್ನು ಸಾಕಿ, ಸಲಹಿ, ಪೋಷಿಸಿ, ಕಾಳಜಿಯಿಂದ ಮಾರ್ಗದರ್ಶನ ನೀಡಿ, ಒಳ್ಳೆಯ ವ್ಯಕ್ತಿಯನ್ನಾಗಿಸಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ‘ಲೋಕೋ ಭಿನ್ನ ರುಚಿಃ’ ಎಂಬಂತೆ ಒಬ್ಬಬ್ಬರದು ಒಂದೊಂದು ಬಗೆಯ ಪೋಷಕತ್ವ. ಅನಿರ್ಬಂಧಿತ ಪೋಷಕತ್ವ, ಅಂದರೆ ಮಕ್ಕಳನ್ನು ಅವರಿಷ್ಟಕ್ಕೆ ತಕ್ಕಂತೆ ಸ್ವೇಚ್ಛೆಯಾಗಿ ಬೆಳೆಯಲು ಬಿಡುವುದು. ಮತ್ತೊಂದು ಸರ್ವಾಧಿಕಾರಿ ಪೋಷಕತ್ವ. ಅಂದರೆ, ಮಕ್ಕಳಿಗೆ ಯಾವ ಸ್ವಾತಂತ್ರ್ಯವನ್ನು ಕೊಡದೆ, ತಮ್ಮ ಅಧೀನದಲ್ಲೇ ಮಕ್ಕಳನ್ನು ಬೆಳೆಸುವುದು. ಇನ್ನೊಂದು ಅತ್ಯಾರೈಕೆಯ ಪೋಷಕರು. ಇವರು ಮಕ್ಕಳ ಬಗ್ಗೆ ಅತಿಯಾದ ಕಾಳಜಿಯನ್ನು ತೋರುತ್ತಾರೆ. ಯಾವ ಮಟ್ಟಿಗೆಂದರೆ, ಮಕ್ಕಳ ಸಣ್ಣ ಪುಟ್ಟ ನಿರ್ಧಾರಗಳನ್ನೂ ತಾವೇ ತೆಗೆದುಕೊಳ್ಳುತ್ತಾರೆ. ನೀವು ಯಾವ ರೀತಿಯ ಪೋಷಕರು ಎಂಬ ಗೊಂದಲವೇ? ಇದನ್ನು ತಿಳಿಯಲು ನಮ್ಮ ಸುತ್ತ ಮುತ್ತ ಕಣ್ಣಾಡಿಸಿದರೆ ಸಾಕು. ಎಲ್ಲಾ ರೀತಿಯ ಪೋಷಕ ವರ್ಗವೂ ನಮಗೆ ಗೋಚರಿಸುತ್ತವೆ. ಕಾಲ ಸರಿಯುತ್ತಿರುವಂತೆಯೇ ಮಕ್ಕಳನ್ನು ಒಳ್ಳೆಯ ಪ್ರಜೆಗಳನ್ನಾಗಿ ಮಾಡುವುದು ಪೋಷಕರಿಗೆ ಒಂದು ಸವಾಲೇ ಸರಿ.
ಮಕ್ಕಳ ಗುಣ ಹಾಗೂ ನಡತೆಯಿಂದ, ಪೋಷಕರ ಹಾಗೂ ಮಕ್ಕಳ ಸಂಬಂಧ ಹೇಗಿದೆಯೆಂದು ತಿಳಿಯುತ್ತದೆ. ಕಾರಣ ಮಕ್ಕಳು ನಾವು ಹೇಳಿಕೊಟ್ಟದ್ದನ್ನು ಕಲಿಯುವುದಕ್ಕಿಂತ ನಾವೇನು ಮಾಡುತ್ತೇವೋ ಅದನ್ನು ನೋಡಿ ಕಲಿಯುತ್ತಾರೆ. ಕೆಲವು ಪೋಷಕರು ಮಕ್ಕಳಿಗೆ ಯಾವುದೇ ರೀತಿಯ ಕಟ್ಟುಪಾಡುಗಳನ್ನೂ ಹಾಕದೆ ಸಲಹುತ್ತಾರೆ. ಇಂತಹವರಿಗೆ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಅರಿವೇ ಇರುವುದಿಲ್ಲ. ಇವರಿಗೆ ಮಕ್ಕಳು ತಮ್ಮಷ್ಟಕ್ಕೆ ತಾವೇ ಬೆಳೆದು ನಿಲ್ಲುತ್ತಾರೆಂಬ ಅನಿಸಿಕೆ. ಇವರು ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದಿಲ್ಲ. ಕೆಲವರಂತೂ ಮಕ್ಕಳ ಮೂಲಭೂತ ಸೌಕರ್ಯವನ್ನೂ ಒದಗಿಸುವಲ್ಲಿ ವಿಫಲರಾಗಿರುತ್ತಾರೆ. ಆದರೆ ಇದು ಉದ್ದೇಶಪೂರ್ವಕವಲ್ಲ. ಬಹಳಷ್ಟು ಸಮಯದಲ್ಲಿ ಪೋಷಕತ್ವದಲ್ಲಿ ತಿಳಿವಳಿಕೆ ಇರುವುದಿಲ್ಲ. ಮತ್ತೆ ಕೆಲವರಿಗೆ ತಮ್ಮ ಮಕ್ಕಳು ತಾವು ನಿಗಾ ವಹಿಸದಿದ್ದರೂ ಉತ್ತಮ ಪ್ರಜೆಗಳಾಗುತ್ತಾರೆಂಬ ನಂಬಿಕೆ. ಇನ್ನೂ ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರಿಗೆ ಅವರದೇ ಆದ ತೊಂದರೆಗಳಲ್ಲಿ ಸಿಲುಕಿ, ಮಕ್ಕಳ ಕಡೆ ಗಮನ ಹರಿಸಲು ಸಾಧ್ಯವಾಗಿರುವುದಿಲ್ಲ. ಅತಿಯಾದ ಸಿರಿತನ ಹಾಗೂ ಅತಿಯಾದ ಬಡತನ ಎರಡರಲ್ಲೂ ಈ ರೀತಿಯ ಅನಿರ್ಬಂಧಿತ ಪೋಷಕರಿರಿತ್ತಾರೆ. ಈ ರೀತಿಯ ಪೋಷಕತ್ವದಲ್ಲಿ ಬೆಳೆದ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಾರೆ. ಕೆಟ್ಟ ಚಟಗಳಿಗೆ ಬಲಿಯಾಗುವ ಸಾಧ್ಯತೆಗಳಿರುತ್ತವೆ.
ಮಕ್ಕಳ ಆತ್ಮವಿಶ್ವಾಸದಿಂದ ಹಿಡಿದು ದೈಹಿಕ ಆರೋಗ್ಯದವರೆಗೂ ಎಲ್ಲದರ ಮೇಲೂ ನಮ್ಮ ಪೋಷಕತ್ವದ ಶೈಲಿಯ ಪ್ರಭಾವವಿರುತ್ತದೆ. ಮತ್ತೊಂದು ಬಗೆಯ ಪೋಷಕತ್ವವೆಂದರೆ, ಕಟ್ಟುಪಾಡಿನ ಪಾಲನೆ. ಇದರಲ್ಲಿ ಪೋಷಕರಿಗೆ ಮಕ್ಕಳು ಯಾವಾಗಲೂ ತಮ್ಮ ಅಣತಿಯಂತೆಯೇ ನಡೆಯಬೇಕೆನ್ನುವ ಬಯಕೆ.
ಮಕ್ಕಳು, ಪಾಲಕರ ನಿಲುವಿನ ಬಗ್ಗೆ ಪ್ರಶ್ನೆ ಮಾಡುವಂತೆಯೇ ಇಲ್ಲ. ಮಾಡಿದರೂ ಅವರು ಅದರ ಬಗ್ಗೆ ಗಮನ ಹರಿಸುವುದಿಲ್ಲ. ಅವರ ಗುರಿ ಮಕ್ಕಳ ವಿಧೇಯತೆ ಮಾತ್ರ. ಅತಿಯಾದ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸಲು ಈ ಪೋಷಕರು ಬಳಸುವ ಸೂತ್ರ ಶಿಕ್ಷೆ. ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮಕ್ಕಳು ಸುಳ್ಳು ಹೇಳಲು ಶುರು ಮಾಡುತ್ತಾರೆ. ಈ ಪೋಷಕರು ಶಿಸ್ತಿನ ಹೆಸರಿನಲ್ಲಿ ಮಕ್ಕಳ ಭಾವನೆಗಳಿಗೂ ಬೆಲೆ ಕೊಡುವುದಿಲ್ಲ. ಹೀಗೆ ನಿಯಮ ಪಾಲನೆಯಲ್ಲೇ ಬೆಳೆದ ಮಕ್ಕಳು ದೊಡ್ಡವರಾದ ಮೇಲೂ ಹೆಚ್ಚಿನ ಸಮಯ ನಿಬಂಧನೆಗಳಿಗೆ ಅಂಟಿಕೊಂಡೇ ಇರುತ್ತಾರೆ. ಈ ಬಗೆಯ ಪೋಷಕತ್ವಕ್ಕೆ ಕಾರಣ ಅವರ ಜೀವನದಲ್ಲಿ ನಡೆದ ಅಥವಾ ಅವರು ನೋಡಿದ ಘಟನೆಗಳೂ ಕಾರಣವಾಗಿರುತ್ತವೆ. ಇದರಡಿಯಲ್ಲಿ ಬೆಳೆದ ಮಕ್ಕಳು ಆತ್ಮವಿಶ್ವಾಸವನ್ನು ಗಳಿಸುವಲ್ಲಿ ವಿಫಲರಾಗುತ್ತಾರೆ. ಕಾರಣ ಅವರ ಅಭಿಪ್ರಾಯಗಳಿಗೆ ಚಿಕ್ಕಂದಿನಿಂದಲೂ ಬೆಲೆಯೇ ಇರುವುದಿಲ್ಲ. ಈ ಮಕ್ಕಳು ದೊಡ್ಡವರಾದ ಮೇಲೂ ಹಗೆತನ ಹಾಗೂ ಜಗಳಗಂಟಿತನವನ್ನು ಮೈಗೂಡಿಸಿಕೊಂಡಿರುತ್ತಾರೆ. ಪೋಷಕರ ನಿರೀಕ್ಷೆಗೆ ತಕ್ಕಂತೆ ಬದುಕುತ್ತಿಲ್ಲವೆಂಬ ಕೀಳಿರಿಮೆ ಅವರನ್ನು ಕಾಡುತ್ತಿರುತ್ತದೆ.
ಸರಿಯಾದ ಪೋಷಕತ್ವವೆಂದರೆ, ಮಕ್ಕಳಿಗೆ ಒಳ್ಳೆಯ ಸುರಕ್ಷತೆ, ಮಾರ್ಗದರ್ಶನ ಹಾಗೂ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡಬೇಕು. ಬದಲಿಗೆ ಮಕ್ಕಳು ಮಾಡುವ ಎಲ್ಲಾ ಕೆಲಸವನ್ನೂ ಸಹಾಯದ ಹೆಸರಿನಲ್ಲಿ ತಾವೇ ಮಾಡುವುದಲ್ಲ. ಕೆಲವು ಪೋಷಕರು ಮಕ್ಕಳ ಬಗ್ಗೆ ಅತಿಯಾದ ಕಾಳಜಿ ಹೊಂದಿದವರಾಗಿರುತ್ತಾರೆ. ಇತ್ತೀಚಿನ ಬಹಳಷ್ಟು ಪೋಷಕರಿಗೆ ಕಲಿಕೆಯಲ್ಲಾಗಲೀ, ಕ್ರೀಡೆಗಳಲ್ಲಾಗಲೀ, ಕಲೆಗಳಲ್ಲಾಗಲೀ ತಮ್ಮ ಮಕ್ಕಳೇ ಮೊದಲಿಗರಾಗಬೇಕೆನ್ನುವ ಹಠ! ಬದುಕಿನ ಪ್ರತೀ ಹಂತದಲ್ಲೂ ತಮ್ಮ ಮಕ್ಕಳೇ ಗೆಲ್ಲಬೇಕೆನ್ನುವ ಛಲ. ಈ ಪ್ರಕ್ರಿಯೆಯಲ್ಲಿ ಮಕ್ಕಳ ಬಹಳಷ್ಟು ಕೆಲಸಗಳನ್ನು, ನಿರ್ಧಾರಗಳನ್ನು ಪೋಷಕರೇ ತೆಗೆದುಕೊಳ್ಳುತ್ತಾರೆ. ಮಕ್ಕಳ ಅಭಿವೃದ್ಧಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಪೋಷಕರ ಹಕ್ಕು ನಿಜ. ಆದರೆ ಅವರಿಗೆ ಏನನ್ನೂ ಆಯ್ಕೆ ಮಾಡಲು ಬಿಡದಿರುವುದು ಮಕ್ಕಳ ಸ್ವಾತಂತ್ರ್ಯಹರಣವಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ತಮ್ಮ ನೆರವೇರದ ಅಭಿಲಾಷೆಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ಅತಿ ಕಾಳಜಿ ಇರುವ ಪೋಷಕರಾಗಿರುತ್ತಾರೆ. ಅತ್ಯಾರೈಕೆಯ ಪೋಷಕತ್ವದ ಮಕ್ಕಳು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಹೆದರುತ್ತಾರೆ. ತಮ್ಮ ಬೆನ್ನಿಗೆ ಪೋಷಕರಿರುತ್ತಾರೆ ಎಂಬ ಭ್ರಮೆಯಲ್ಲಿಯೇ ಇರುತ್ತಾರೆ.
ಹಾಗಾದರೆ ಯಾವ ರೀತಿಯ ಪೋಷಕತ್ವ ಸರಿ? ಯಾವುದೇ ಪೋಷಕತ್ವವೂ ಪರಿಪೂರ್ಣವಲ್ಲ. ಮೇಲಿನ ಯಾವುದೇ ಪೋಷಕ ವರ್ಗಕ್ಕೆ ನೀವು ಸೇರಿದ್ದರೂ ತಪ್ಪಿತಸ್ಥ ಮನೋಭಾವ ಬೇಡ. ಜೀವನದಲ್ಲಿ ಪೋಷಕತ್ವವೆನ್ನುವುದು ಒಂದು ಮಜಲು. ಪ್ರತಿಯೊಬ್ಬರೂ ಪೋಷಕರಾದ ನಂತರವೇ ತಿಳಿಯುವಂಥ ಹಂತ! ಅವರವರ ಬದುಕಿನ ಅನುಭವಗಳಿಂದ ಅವರವರ ಜೀವನದ ಮಾರ್ಪಾಟುಗಳಾಗಿರುತ್ತವೆ. ಮಕ್ಕಳಿಗೆ ಬದುಕಿನ ದಾರಿಯನ್ನು ತೋರಿಸುವ ಮಾರ್ಗದರ್ಶನ ನೀಡಿ. ಹಾಗಾದರೆ ಅವು ಯಾವುವೆಂದು ನೋಡೋಣ.
* ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ.
* ಮಕ್ಕಳು ತಪ್ಪು ಮಾಡಿದಾಗ, ತಿದ್ದಿ ತಿಳಿ ಹೇಳಿ. ಓದಿನಲ್ಲಾಗಲೀ, ಆಟದಲ್ಲಾಗಲೀ ಹಿಂದುಳಿದರೆ, ತಪ್ಪು ಎಲ್ಲಿ ಆಗಿದೆಯೆಂದು ತೋರಿಸಿಕೊಡಿ. ಮೊದಲ ಸ್ಥಾನವೇ ಬೇಕೆಂಬ ಛಲ ತೊಡಬೇಡಿ. ತಪ್ಪುಗಳು ಕಲಿಸುವ ಪಾಠಕ್ಕಿಂತ ದೊಡ್ಡ ಪಾಠ ಜೀವನದಲ್ಲಿಲ್ಲ.
* ಅತಿಯಾದ ರಕ್ಷಣೆ ಬೇಡ. ಮಕ್ಕಳು ಬಿದ್ದಾಗ ಅವರನ್ನು ಹಿಡಿದುಕೊಳ್ಳಿ. ಬೀಳಲೇ ಬಾರದೆಂದು ಅವರ ಹಿಂದೆಯೇ ನಿಲ್ಲಬೇಡಿ. ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಿ. ಬದುಕಿನ ಬಹಳಷ್ಟು ಪಾಠಗಳನ್ನು ಮಕ್ಕಳು ಕಲಿಯುವುದು ಮನೆಯಿಂದಲೇ.
* ಜವಾಬ್ದಾರಿ.ಮಕ್ಕಳಿಗೆ ಅವರು ಮಾಡಿದ ಕೆಲಸಕ್ಕೆ ಅವರೇ ಹೊಣೆಗಾರರು ಎನ್ನುವುದನ್ನು ತಿಳಿಸಬೇಕು.
* ಮಕ್ಕಳು ಬಿದ್ದಾಗ, ಜಾಗ್ರತೆಯಿಂದಿರಲು ತಿಳಿಸಬೇಕೇ ಹೊರತು ಬಿದ್ದ ನೆಲವನ್ನು ಬೈಯ್ಯುವುದು ಸರಿಯಲ್ಲ. ಇದನ್ನು ಎಳವೆಯಿಂದಲೇ ಸರಿಪಡಿಸಿದರೆ, ಮಕ್ಕಳು ಬೇರೆಯವರ ಮೇಲೆ ತಪ್ಪು ಹೊರಿಸುವುದಿಲ್ಲ.
* ಬಲಹೀನತೆ ಶಾಪವಲ್ಲ. ಎಲ್ಲರೂ ಪರಿಪೂರ್ಣರಾಗಿರಲು ಸಾಧ್ಯವಿಲ್ಲ. ಆದರೆ ನಾವು ಮಕ್ಕಳ ಮುಂದೆ ‘ಸೂಪರ್ ಮೊಮ್’ ಅಥವಾ ‘ಸೂಪರ್ ಡ್ಯಾಡ್’ಗಳಾಗಲು ಬಯಸುತ್ತೇವೆ. ಇದರಿಂದ ಮಕ್ಕಳಿಗೆ ಇನ್ನೊಂದು ಮಗ್ಗುಲಿನ ಪರಿಚಯವೇ ಆಗುವುದಿಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಕುಂದು ಕೊರತೆ ಇದ್ದೇ ಇರುತ್ತದೆ. ಮಕ್ಕಳಿಗೆ ಆರ್ಥವಾಗುವ ರೀತಿಯಲ್ಲಿ ತಿಳಿಸಿದರೆ ಅರ್ಥ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳಿಗೆ ಬದುಕಿನ ವಿವಿಧ ಮಜಲುಗಳ ಪರಿಚಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.