ಒತ್ತಡದ ಬದುಕಿನಲ್ಲಿ ಮೈಮನಸ್ಸು ನಿರಾಳವಾಗಬೇಕು ಎಂದು ಪದೇ ಪದೇ ಬ್ಯೂಟಿಪಾರ್ಲರ್, ಮಸಾಜ್ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದರೆ, ಅಲ್ಲಿ ಯದ್ವಾತದ್ವಾ ಮಸಾಜ್ ಮಾಡಿಸಿಕೊಳ್ಳುತ್ತಿದ್ದರೆ ಮತ್ತೊಮ್ಮೆ ಯೋಚಿಸಿ.
ಧಾವಂತದ ಬದುಕಿನಲ್ಲಿ ಮಾನಸಿಕ ಒತ್ತಡ, ಕ್ಲೇಶಗಳು ಹೆಚ್ಚುತ್ತಿವೆ. ಇದರಿಂದ ಮುಕ್ತರಾಗಲು ಸರಳ ಉಪಾಯವಾಗಿ ಮಸಾಜ್ ಮಾಡಿಸಿಕೊಳ್ಳುವ ಟ್ರೆಂಡ್ ಕೂಡ ಹೆಚ್ಚುತ್ತಿದೆ. ಆದರೆ, ಪರಿಣತರಲ್ಲದವರೂ ಮಾಡುವ ಮಸಾಜ್‌ನಿಂದ ಆಗುವ ಅನಾಹುತಗಳೇ ಹೆಚ್ಚು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಸಲೂನ್‌ನಲ್ಲಿ, ಮಸಾಜ್ ಸೆಂಟರ್‌ಗಳಲ್ಲಿ ಕೇಶವಿನ್ಯಾಸಕರು, ಮಸಾಜ್ ಮಾಡುವವರು ಮಸಾಜ್‌ನ ನೆಪದಲ್ಲಿ ಕುತ್ತಿಗೆಯನ್ನು ಹಠಾತ್ತನೆ ತಿರುಗಿಸುವುದರಿಂದ ಪಾರ್ಶ್ವವಾಯುವಿನಂಥ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಪಾರ್ಲರ್‌ಗಳಲ್ಲಿ ಕೂದಲು ತೊಳೆಯುವಾಗ ಕುತ್ತಿಗೆ ಹಾಗೂ ಬೆನ್ನನ್ನು ಅತಿಯಾಗಿ ಹಿಂದಕ್ಕೆ ಬಾಗಿಸಿದಾಗಲೂ ಕುತ್ತಿಗೆಯ ನರಗಳಿಗೆ ಹಾನಿಯಾಗಬಹುದು. ಇದರಿಂದ ರಕ್ತ ಹೆಪ್ಪುಗಟ್ಟುವಿಕೆಯೂ ಉಂಟಾಗಬಹುದು. ಹೀಗೆ ರಕ್ತ ಹೆಪ್ಪುಗಟ್ಟಿದರೆ ಮಿದುಳಿಗೆ ಸಮರ್ಪಕವಾಗಿ ರಕ್ತ ಪೂರೈಕೆಯಾಗದೇ ಪಾರ್ಶ್ವವಾಯುವಿನಂಥ ಸಮಸ್ಯೆ ಉಂಟಾಗಬಹುದು. ಅತಿಯಾದ ರಕ್ತದೊತ್ತಡ, ಮಧುಮೇಹ, ಅತಿ ಬೊಜ್ಜು, ಸಂಧಿವಾತ, ಅಸಹಜ ರಕ್ತನಾಳ ಹೊಂದಿರುವವರು, ನರದೌರ್ಬಲ್ಯದಂಥ ಸಮಸ್ಯೆಯಿಂದ ಬಳುತ್ತಿರುವವರು ಹೆಚ್ಚು ಜಾಗ್ರತೆ ವಹಿಸುವುದು ಮುಖ್ಯ.
ಏನು ಮಾಡಬೇಕು?
ಕೂದಲು ತೊಳೆಯುವ ಸಮಯದಲ್ಲಿ ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿದಾಗ ತಲೆ ತಿರುಗುವಿಕೆ ಅಥವಾ ತಲೆಸುತ್ತ ಕಾಣಿಸಿಕೊಂಡರೆ ಕೂಡಲೇ ಮಲಗಿ ವಿಶ್ರಾಂತಿ ಪಡೆಯಿರಿ. ಕಡಿಮೆಯಾಗದೇ ಇದ್ದರೆ ವೈದ್ಯರನ್ನು ನೋಡಿ.
ನಿರ್ದಿಷ್ಟ ಸೌಂದರ್ಯ ಚಿಕಿತ್ಸೆ, ಮಸಾಜ್ ಹಾಗೂ ಇತರೆ ಚಿರೋಪ್ರಾಕ್ಟಿಕ್ ಚಿಕಿತ್ಸೆಯ ಸಮಯದಲ್ಲಿ ಕುತ್ತಿಗೆ, ಬೆನ್ನುಹುರಿ ಸೇರಿದಂತೆ ಯಾವುದೇ ಅಂಗಾಂಗಗಳ ಮೇಲೆ ಅತಿಯಾದ ಒತ್ತಡ ಹಾಕಿದಂತೆ ಅನಿಸಿದರೆ, ಕೂಡಲೇ ಸೌಂದರ್ಯತಜ್ಞರಿಗೆ ನಿಲ್ಲಿಸಲು ಹೇಳಿ. ಕುತ್ತಿಗೆ ಹಾಗೂ ತಲೆಯ ಮೇಲೆ ಹಠಾತ್ ತಣ್ಣೀರು ಸುರಿಯುವುದರಿಂದಲೂ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇರುತ್ತದೆ.
ಮಿದುಳಿನ ಮೇಲೆ ಒತ್ತಡ ಬಿದ್ದು, ಪಾರ್ಶ್ವವಾಯು ಸಂಭವಿಸಿದರೆ ಹಠಾತ್ ದೌರ್ಬಲ್ಯ, ಮಾತು ಹಾಗೂ ಗ್ರಹಿಕೆಯಲ್ಲಿ ಸಮಸ್ಯೆಗಳು, ತೀವ್ರ ತಲೆನೋವು, ತಲೆತಿರುಗುವಿಕೆ, ದೇಹ ಸಮತೋಲನದಲ್ಲಿ ಇಲ್ಲದೇ ಇರುವುದು, ದೃಷ್ಟಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು.
ನೆನಪಿರಲಿ:
* ಬಹುತೇಕ ಎಲ್ಲ ಪ್ರಮುಖ ರಕ್ತನಾಳಗಳು ಮತ್ತು ನರಗಳು ಕುತ್ತಿಗೆಯ ಮೂಲಕ ಹಾದುಹೋಗುವುದರಿಂದ ಕುತ್ತಿಗೆ ದೇಹದ ನಿರ್ಣಾಯಕ ಭಾಗವಾಗಿದೆ. ಹಾಗಾಗಿ ಯಾರಿಗಾದರೂ ಕುತ್ತಿಗೆ ಕೊಡುವ ಮುಂಚೆ ಎರಡು ಬಾರಿ ಯೋಚಿಸಿ.
* ಅಂಗರಚನಾವಿಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ತರಬೇತಿ ಪಡೆದ ಸೌಂದರ್ಯತಜ್ಞರಿಂದ ಮಸಾಜ್ ಮಾಡಿಸಿಕೊಳ್ಳುವುದು ಒಳ್ಳೆಯದು
* ಕ್ಷಣಿಕ ನಿರಾಳತೆಯನ್ನು ಅನುಭವಿಸುವ ಸಲುವಾಗಿ ಕಳಪೆ ಮಟ್ಟದ, ವೃತ್ತಿಪರರಲ್ಲದವರಿಂದ ಮಸಾಜ್ ಮಾಡಿಸಿಕೊಳ್ಳಬೇಡಿ.
* ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.
* ತಲೆ ಮತ್ತು ಕುತ್ತಿಗೆಗೆ ನೀರು ಹಾಕುವಾಗ ಸಾಧ್ಯವಾದಷ್ಟು ತಣ್ಣೀರಿನ ಬದಲು ಬೆಚ್ಚಗಿನ ನೀರನ್ನು ಬಳಸಿ.
* ಸೌಂದರ್ಯತಜ್ಞರು ಯಾವುದೇ ಚಿಕಿತ್ಸೆ ನೀಡುವ ಮೊದಲು ಗ್ರಾಹಕರ ಕುತ್ತಿಗೆಯನ್ನು ಆರಾಮದಾಯಕ ಭಂಗಿಯಲ್ಲಿ ಇರಿಸಲಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಕುತ್ತಿಗೆ ಹಾಗೂ ಬೆನ್ನುಹುರಿಯ ಮೇಲೆ ಪದೇ ಪದೇ ಒತ್ತಡ ಹಾಕದಂತೆ ನೋಡಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.