ನಾನೊಬ್ಬ ಜಾದುಗಾರ. ಕೆಲವು ನಿಪುಣತಂತ್ರಗಳನ್ನು ಬಳಸಿ ಜನರನ್ನು ಆಕರ್ಷಿಸುವಂತೆ ಮಾಡುತ್ತೇನೆ. ನನ್ನ ಜಾದು ನಿಮ್ಮೆಲ್ಲರಿಗೂ ಇಷ್ಟವಾಗಬಹುದು. ಆದರೆ ಇಷ್ಟವಾಗುವಂತೆ ಜಾದು ಮಾಡುವುದು ನಾನು ಇಷ್ಟ ಪಡುವ ಒತ್ತಡವಷ್ಟೆ!
ನಮ್ಮಲ್ಲಿ ಹಲವಾರು ನಿರೀಕ್ಷೆಗಳಿರುತ್ತವೆ. ಅವು ಸಂಪೂರ್ಣವಾಗದೇ ಇದ್ದಾಗ ನಮ್ಮಲ್ಲಿ ಅವೇ ಒತ್ತಡವನ್ನು ಉಂಟಾಗಿಸುತ್ತವೆ.
ಇಂದು ಒತ್ತಡವಿಲ್ಲದ ಬದುಕನ್ನು ನೆನಪಿಸಿಕೊಳ್ಳುವುದು ಕಷ್ಟ. ಅವರವರ ಕಾರ್ಯವೈಖರಿಗೆ ಅನುಗುಣವಾಗಿ ಒತ್ತಡಗಳು ಇರುತ್ತವೆ.
ಒಂದು ಉತ್ಸವದಲ್ಲಿ ನನ್ನ ಜಾದುಪ್ರದರ್ಶನವಿತ್ತು. ಅಲ್ಲಿ ಕ್ರೇನ್‌ನಲ್ಲಿ ಒಂದು ಪೆಟ್ಟಿಗೆ ಇಟ್ಟಿರುತ್ತಾರೆ. ನನ್ನ ಕೈ ಕಾಲುಗಳನ್ನು ಕಟ್ಟಿ ಆ ಪೆಟ್ಟಿಗೆಯೊಳಗೆ ಮಲಗಿಸಿ, ಪೆಟ್ಟಿಗೆಗೆ ಬೆಂಕಿ ಹಚ್ಚುತ್ತಾರೆ. ಅಷ್ಟರೊಳಗೆ ನಾನು ಅಲ್ಲಿಂದ ಮಾಯವಾಗಬೇಕಿತ್ತು. ಆದರೆ ಅಷ್ಟರಲ್ಲಿ ಏನಾಯ್ತು ಎಂದರೆ ಸಾಮಾನ್ಯವಾಗಿ ಬೆಂಕಿ ಹಚ್ಚಲು ಬಳಸುತ್ತಿದ್ದಕ್ಕಿಂತ ಹೆಚ್ಚಿಗೆ, ನಾಲ್ಕು ಲೀಟರ್‌ನಷ್ಟು ಪೆಟ್ರೋಲ್ ಅನ್ನು ಆ ಪೆಟ್ಟಿಗೆಗೆ ಸುರಿಯಲಾಯಿತು. ಅದರೊಳಗಿದ್ದ ನನಗೆ ಉಸಿರಾಡಲು ಆಗಲಿಲ್ಲ. ಸತ್ತೇ ಹೋದೆನೇನೊ ಅನ್ನಿಸಿಬಿಟ್ಟಿತ್ತು. ಅದನ್ನು ನೆನಪಿಸಿಕೊಂಡರೆ ಈಗಲೂ ಒಂದು ಕ್ಷಣ ಮೈ ಜುಮ್ಮೆನ್ನುತ್ತದೆ.
ಒಮ್ಮೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾದು ಮಾಡುವಾಗ ಸ್ವಲ್ಪ ಎಡವಟ್ಟಾಗಿ ಜಾದು ಮಾಡಲಾಗದೇ ಸೋತುಹೋದೆ. ನನಗೆ ಮಾತ್ರವಲ್ಲ, ಜನರಿಗೂ ನನಗೆ ಜಾದು ಮಾಡಲು ಆಗಲಿಲ್ಲ ಎಂಬುದು ತಿಳಿಯಿತು. ಆ ಕ್ಷಣದ ಒದ್ದಾಟ, ಜನರಿಗೆ ಅರ್ಥ ಮಾಡಿಸಿ ಮತ್ತೆ ತೋರಿಸುವುದಾಗಿ ಕೇಳಿದಾಗ ಅವರೊಪ್ಪಿದರು.
ಹೀಗೆ ಯಾವಾಗಲೂ ಒಂದಲ್ಲಾ ಒಂದು ಕಾರಣಕ್ಕೆ ಒತ್ತಡಗಳು ನಮ್ಮೊಟ್ಟಿಗೆ ಇದ್ದೇ ಇರುತ್ತವೆ. ಏನು ಮಾಡಲು ಸಾಧ್ಯ ಹೇಳಿ. ಧೈರ್ಯವಾಗಿ ನಮಗೆ ತೊಡಕಾಗುವ ಎಲ್ಲಾ ಸವಾಲುಗಳನ್ನು ಎದುರಿಸಬೇಕು. ಆಗ ತನ್ನಿಂದ ತಾನೇ ಒತ್ತಡ ನಿವಾರಣೆಯಾಗಿ ನೆಮ್ಮದಿ ಮರಳುತ್ತದೆ.
ಸಂತೋಷ, ದುಃಖ, ಅಸಹನೆ, ಕೋಪ – ಇವೆಲ್ಲವುಗಳಿಂದ ಎದುರಾಗುವ ಒತ್ತಡಗಳು ಒಂದು ಬಗೆ. ಇವಾವುದೂ ಶಾಶ್ವತವಲ್ಲ. ಕಾಲಕಾಲಕ್ಕೆ ಎಲ್ಲವೂ ಬದಲಾಗುತ್ತಿರುತ್ತದೆ.
ತೀರಾ ಒತ್ತಡ ಅನ್ನಿಸಿದಾಗ ಸಿನಿಮಾ ನೋಡಲು ತೆರಳುತ್ತೇನೆ; ಇದು ನಾನು ಹುಟ್ಟಿಸಿಕೊಂಡಿರುವ ಗೀಳು ಹೌದು. ನಾನು ನೋಡುವ ಎಲ್ಲಾ ಸಿನಿಮಾಗಳು ಉತ್ತಮವಾಗಿ ಇರುತ್ತವೆ ಎಂದು ಹೇಳಲಾರೆ. ಒಳ್ಳೆ ಸಿನಿಮಾ ಆಗಿದ್ದರೆ ನೋಡುವೆ ಇಲ್ಲದಿದ್ದರೇ ನಿದ್ದೆ ಮಾಡುವೆ. ಹೀಗೆ ಹಾಗೂ ಹೀಗೂ ಮಾಡಿ ಒತ್ತಡದಿಂದ ಹೊರಬರುವೆ ಎನ್ನುವುದಂತೂ ಸತ್ಯ.
ನನ್ನ ವೈಯಕ್ತಿಕ ಬದುಕಿಗಿಂತ ವೃತ್ತಿಪರ ಜೀವನದಲ್ಲಿ ಹೆಚ್ಚು ಒತ್ತಡಗಳು ಇವೆ. ಆದರೆ ಜಾದು ನನ್ನ ಗುರಿ ಮತ್ತು ಕನಸು ಆಗಿರುವುದರಿಂದ ಇವಾವುದೂ ಹೆಚ್ಚು ಹೊರೆ ಎನಿಸಿಲ್ಲ. ಜಾದುಗಾರಿಕೆಯನ್ನು ನನ್ನ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವಾಗ ನನ್ನಲ್ಲಿ ಒತ್ತಡ ಉಂಟಾಗಿತ್ತು. ಕಾಲ ಹಾಗೂ ಅಂತರಂಗ – ಇವೆರಡೂ ನನ್ನನ್ನು ಜಾದುಗಾರಿಕೆಯನ್ನೇ ಆಯ್ಕೆ ಮಾಡಿಕೊಳ್ಳುವಂತೆ ಮಾಡಿದವು.
ಇವತ್ತಿಗೂ ನನಗೆ ಅನಿಸುತ್ತಿರುವುದಷ್ಟೆ. ಯಾವುದೋ ಒಂದು ವಿಷಯ ನಮ್ಮಲ್ಲಿ ಗೊಂದಲ ಉಂಟು ಮಾಡುತ್ತದೆ ಎಂದಾದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸಿ. ಇಲ್ಲವೇ ಕಾಲವೇ ಎಲ್ಲವನ್ನು ಸರಿಪಡಿಸುತ್ತದೇ ಎಂದುಕೊಂಡು ತಮ್ಮಷ್ಟಕ್ಕೆ ಇರಲು ಬಿಟ್ಟುಬಿಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.