ಮೊದಲಿಗೆ ಒಂದು ಪ್ರಸಂಗ ವಿವರಿಸಿಬಿಡುತ್ತೇನೆ. ದೀಪಾವಳಿಯ ದಿನ ಕುಟುಂಬದವರೆಲ್ಲ ಸೇರಿ ಹಬ್ಬ ಮಾಡುವುದು ನಾವು ರೂಢಿಸಿಕೊಂಡು ಬಂದಿರುವ ಸಂಪ್ರದಾಯ. ಹೀಗೆ ಒಂದೂವರೆ ತಿಂಗಳ ಹಿಂದೆ ಒಬ್ಬರು ನವೆಂಬರ್‌ನ 6, 7, 8ನೇ ತಾರೀಖು ಶೂಟಿಂಗ್‌ಗಾಗಿ ನನ್ನ ಬಿಡುವಿನ ಸಮಯ ಕೇಳಿದರು. ನಾನು ಹಿಂದೆ ಮುಂದೆ ನೋಡದೆ ಶೂಟಿಂಗ್‌ಗೆ ಒಪ್ಪಿಗೆ ನೀಡಿದೆ. ಮೊನ್ನೆ ಅಕ್ಕ ಕರೆ ಮಾಡಿ, ‘ಹಬ್ಬದ ದಿನ ಎಲ್ಲಿಗೆ ಹೋಗೋಣ? ಏನಾದರೂ ಯೋಚನೆ ಮಾಡಿದ್ದೀಯಾ?’ – ಎಂದು ಕೇಳಿದಳು. ಆಮೇಲೇ ನನಗೆ ಗೊತ್ತಾಗಿದ್ದು, ನಾನು ಒಪ್ಪಿಗೊಂಡ ದಿನಾಂಕದಲ್ಲೇ ಈ ಬಾರಿಯ ದೀಪಾವಳಿ ಇದೆ ಎಂದು.
ಯಾಕೆ ಈ ಪ್ರಸಂಗ ಹೇಳಿದೆ ಅಂದರೆ, ತೆರೆಯ ಮೇಲೆ ಒಬ್ಬ ನಟನಾಗಿ ಕರ್ತವ್ಯ ನಿರ್ವಹಿಸಿದಷ್ಟು ಸುಲಭವಾಗಿಒಬ್ಬ ಮಗನಾಗಿ, ತಂದೆಯಾಗಿ, ಗಂಡನಾಗಿ, ಸೋದರನಾಗಿ – ಹೀಗೆ ಜೀವನದ ಹಲವಾರು ಪಾತ್ರಗಳನ್ನು ನಿರ್ವಹಿಸಿಲ್ಲ. ಸಮಾಜದಲ್ಲಿ ಸೆಲೆಬ್ರಿಟಿ ಆಗಿ ಗುರುತಿಸಿಕೊಂಡಿದ್ದೇನೆ ನಿಜ. ಆದರೆ, ಸೆಲೆಬ್ರಿಟಿಜೀವನದ ಒತ್ತಡದಲ್ಲಿ ನನ್ನ ವೈಯಕ್ತಿಕ ಜೀವನದ ಎಷ್ಟೋ ಸುಮಧುರ ಕ್ಷಣಗಳನ್ನು ಕಳೆದುಕೊಂಡಿದ್ದೇನೆ. ನನ್ನ ಕುಟುಂಬಕ್ಕೆ ನಾನು ಅಗತ್ಯವಾಗಿ ನೆರವಾಗಲೇಬೇಕಿದ್ದ ಸಮಯದಲ್ಲಿ ಅಲ್ಲೆಲ್ಲೋ ಶೂಟಿಂಗ್‌ನಲ್ಲಿ ಇರುತ್ತಿದ್ದೆ, ಈಗಲೂ ಇದ್ದೇನೆ. ಈ ಕೊರಗು ನನ್ನನ್ನು ಯಾವಾಗಲೂ ಕಾಡುತ್ತದೆ. ಇದು ನನ್ನೊಬ್ಬನ ಕಥೆಯಷ್ಟೆ ಅಲ್ಲ. ಹೀಗೆ ಒಮ್ಮೆ ನನ್ನ ಸುತ್ತಮುತ್ತಲು ನೋಡಿದಾಗ ಎಲ್ಲರೂ ಹೀಗೆ ಯಾವುದೋ ಒಂದರ ಹಿಂದೆ ಓಡುತ್ತಿದ್ದಾರೆ. ಹೀಗೆಂದುಕೊಂಡು ಎಷ್ಟೋ ಬಾರಿ ಸಮಾಧಾನ ಮಾಡಿಕೊಂಡಿದ್ದು ಸುಳ್ಳಲ್ಲ.
ಒತ್ತಡ ಎಂದರೆ, ಸಮಯನಿರ್ವಹಣೆ ಇಲ್ಲದಿರುವುದು. ನಮಗಿರುವ ಸಮಯದ ಮಿತಿ ಮೀರಿ ನಮಗೆ ನಿರ್ವಹಿಸಲು ಕಷ್ಟವಾಗುವಷ್ಟು ಕೆಲಸಗಳನ್ನು ಒಪ್ಪಿಕೊಳ್ಳುವುದು ಒತ್ತಡಕ್ಕೆ ಎಡೆಮಾಡಿಕೊಡುತ್ತದೆ. ಜೊತೆಗೆ, ಒಂದಷ್ಟು ಜವಾಬ್ದಾರಿಗಳಿಂದಲೂ ನಾವು ಜಾರಿಕೊಳ್ಳಲು ಬರುವುದಿಲ್ಲ. ಆದರೆ, ಕೆಲವೊಂದನ್ನು ನಾವು ಒಪ್ಪಿಕೊಳ್ಳುವಾಗ ಯೋಚಿಸಬಹುದು. ಹೀಗೆ, ತಾನಾಗಿಯೇ ಇರುವ ಮತ್ತು ನಾವಾಗಿಯೇ ಮೈಮೇಲೆ ಎಳೆದುಕೊಳ್ಳುವ ಒತ್ತಡಗಳ ಮಧ್ಯೆ ಇರುವ ಸಣ್ಣ ಅಂತರವನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲಿ ಎಡವಿದರೆ ಒತ್ತಡ ಕಟ್ಟಿಟ್ಟ ಬುತ್ತಿ.
ನಮ್ಮ ಬದುಕು ಹೇಗಾಗಿದೆ ಅಂದರೆ, ಶಾಲೆಗೆ ಹೋಗೊ ಪುಟ್ಟ ಮಗುವಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಒತ್ತಡದಲ್ಲಿ ಇರುವವರೇ. ಇಪ್ಪತ್ತು ಮೂವತ್ತು ವರ್ಷದ ಹಿಂದೆ ಕಾಲ ಹೀಗೆ ಇರಲಿಲ್ಲ. ಸ್ಪರ್ಧೆಯಲ್ಲಿ ಬಿದ್ದವರಂತೆ ಈಗ ಎಲ್ಲರೂ ಓಡುತ್ತಿದ್ದೇವೆ. ಪ್ರಬುದ್ಧಮಾನಕ್ಕೆ ಬಂದ ಮೇಲೆ ಒತ್ತಡ ಶುರುವಾಗುತ್ತದೆ ಎನ್ನುವುದೆಲ್ಲ ಈಗ ಹಳೆಯದಾಯಿತು. ಒಂದನೇ ತರಗತಿ ಮಗುವಿಗೂ ನಾವೂ ಒತ್ತಡ ಕೊಡುತ್ತಿದ್ದೇವೆ.
ಬದ್ಧತೆ ಅಥವಾ ಜವಾಬ್ದಾರಿಗಳೇ ನಮ್ಮನ್ನು ರೂಪಿಸಿರುವುದು. ಅದೇ ಬದುಕಿನ ಅಂದ. ಯಾವುದೋ ಕೆಲಸಕ್ಕೆ ಬದ್ಧರಾಗುವಾಗ ಸ್ವಲ್ಪ ಯೋಚಿಸಬೇಕು ಅಷ್ಟೆ. ಈ ಒತ್ತಡಗಳ ಮಧ್ಯೆ ನಮ್ಮ ಆರೋಗ್ಯ ಮತ್ತು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಯಾವುದನ್ನೋ ಸಾಧಿಸಲು ಹೋಗಿ ಮತ್ತ್ಯಾವುದನ್ನೋ ಕಳೆದುಕೊಂಡಿದ್ದೇವೆ ಎನಿಸುತ್ತದೆ. ಹೀಗೆ ಯೋಚನೆ ಬರುವ ಮುಂಚೆಯೇ ನಮ್ಮ ಬುದುಕಿನ ಗುರಿಗಳನ್ನು ಬದಲು ಮಾಡಿಕೊಳ್ಳಬೇಕು. ಆಗ ನಿಜಕ್ಕೂ ಬದುಕು ಸೊಗಸು.
ಹೀಗೆ ಈ ಎಲ್ಲ ಒತ್ತಡಗಳ ಮಧ್ಯೆ ನಮಗೆ ಅಂತಲೇ ಸಮಯ ಕೊಟ್ಟುಕೊಳ್ಳುತ್ತಿಲ್ಲ. ದಿನದಲ್ಲಿ ಒಂದೋ ಎರಡು ಗಂಟೆ ನಮಗೆ ಅಂತಲೇ ಸಮಯ ಮೀಸಲಿರಿಸಿಕೊಂಡರೆ ನಾವು ಎಷ್ಟೋ ಆರಾಮಾಗಿ, ಒತ್ತಡದಿಂದ ಮುಕ್ತರಾಗಿ ಇರಬಹುದೇನೋ. ಇದು ನನ್ನ ಅನ್ನಿಸಿಕೆ. ಎಷ್ಟೇ ಕೆಲಸ ಇದ್ದರೂ ಅದನ್ನು ಆದ್ಯತೆ ಮೇರೆಗೆ ಮಾಡುವುದನ್ನು ನಾವು ಕಲಿತುಕೊಳ್ಳಬೇಕು. ಆಗ ಒತ್ತಡ ಕಾಡುವುದಿಲ್ಲ. ಇದನ್ನೆಲ್ಲ ನಾನು ಮಾಡಿದ್ದೀನಿ ಅಂತಲ್ಲ. ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲ ಹಾಗೆ, ಈಗ ನನಗೆ ಬುದ್ಧಿ ಬಂದಿದೆ. ನಾನು ನಿಸರ್ಗವನ್ನು ಬಹಳ ಪ್ರೀತಿಸುತ್ತೇನೆ. ನನ್ನ ಒತ್ತಡದ ಸಮಯದಲ್ಲಿ ನಿಸರ್ಗದ ಮಧ್ಯೆ ಕೂತು ಎಲ್ಲವನ್ನು ಮರೆಯುವ ಆಸೆ. ಕ್ಷಣ ಕಾಲವಾದರೂ ಎಲ್ಲವನ್ನು ಮರೆತು, ನನ್ನನ್ನು ನಾನು ಕಂಡುಕೊಳ್ಳುವ, ಮತ್ತೆ ಇನ್ನು ಹೆಚ್ಚು ಉತ್ಸಾಹಿ ಆಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಬಯಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.