1. ನಾನು ಡಿಪ್ಲೊಮಾ ಮೆಕ್ಯಾನಿಕಲ್ ಓದುತ್ತಿದ್ದೇನೆ. ನನಗೆ ಯಾವುದೇ ಸಮಯದಲ್ಲಾಗಲಿ ಅಧ್ಯಾಪಕರು ಪಾಠ ಮಾಡುವಾಗ ಅಥವಾ ಬರೆಸಲು ಆರಂಭಿಸಿದಾಗ ನಿದ್ದೆ ತಡೆಯಲು ಆಗುವುದಿಲ್ಲ. ಹಾಗೆ ನಿದ್ದೆಗೆ ಜಾರುತ್ತೇನೆ. ನಿದ್ದೆಯನ್ನು ಎಷ್ಟು ನಿಯಂತ್ರಣ ಮಾಡಲು ಪ್ರಯತ್ನಿಸಿದರು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಮತ್ತು ಪರಿಹಾರ ಏನು?
ಅನೇಕ ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಅದರಲ್ಲಿ ಕೆಲವೆಂದರೆ ವಿಷಯದಲ್ಲಿನ ಆಸಕ್ತಿಯ ಕೊರತೆ, ಪಾಠದ ಮೇಲೆ ಗಮನ ಕೊಡಲು ಸಾಧ್ಯವಾಗದೇ ಇರುವುದು ಆಗಿರಬಹುದು. ಹಾಗಾಗಿ ಓದಿನ ಮೇಲೆ ಗಮನ ಹೆಚ್ಚಲು ಆರೋಗ್ಯ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಅದು ಮುಂಜಾನೆ ಏಕ್ಸ್‌ಸೈಜ್ ಮಾಡುವುದು, ರನ್ನಿಂಗ್ ಅಥವಾ ಜಾಗ್ಗಿಂಗ್ ಮಾಡುವುದು, ಬಾಡ್‌ಮಿಟನ್ ಅಥವಾ ಟೆನ್ನಿಸ್‌ನಂತಹ ಆಟಗಳನ್ನು ಆಡುವುದು ಈ ಯಾವುದನ್ನಾದರೂ ಮಾಡಬಹುದು. ಜೊತೆಗೆ ಜಿಮ್‌ಗೆ ಹೋಗಿ ಬೆವರಿಳಿಸುವುದು ಉತ್ತಮ ಆಯ್ಕೆ. ಈ ಏಕ್ಸ್‌ಸೈಜ್‌ಗಳು ನಿಮ್ಮನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಜೊತೆಗೆ ಗಮನಶಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ. ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದರಿಂದ ಸದಾ ಉತ್ಸಾಹದಿಂದ ಇರಬಹುದು. ಅದರೊಂದಿಗೆ ಪ್ರತಿದಿನ ಬೆಳ್ಳಿಗ್ಗೆ ಅಥವಾ ಸಂಜೆ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿ. ಈ ಎಲ್ಲಾ ನಿರಂತರ ಪ್ರಯತ್ನಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
2. ನಾನು ಎಂ. ಎ, ಬಿಎಡ್ ಮಾಡಿದ್ದೇನೆ. ನಾನು ಬುದ್ಧಿವಂತೆ, ವಿದ್ಯಾವಂತೆ. ನನಗೆ 4 ವರುಷದ ಮಗನಿದ್ದಾನೆ. ಆದರೆ ವಾಸ್ತವದ ಸಂತೋಷವನ್ನು ಅನುಭವಿಸಲು ಆಗುತ್ತಿಲ್ಲ. ನನ್ನಲ್ಲಿ ಕೀಳರಿಮೆ ತುಂಬ ಕಾಡುತ್ತಿದೆ. ಗಂಡನ ಮನೆಯಲ್ಲಿ ನನ್ನ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ. ಅವರಿಗಾಗಿ ನಾವು ಇರಬೇಕು ಎಂದು ಬಯಸುತ್ತಾರೆ. ಆದರೆ ನನಗೆ ಆ ರೀತಿ ಬದುಕಲು ಆಗುತ್ತಿಲ್ಲ. ನಮಗೆ ಕಷ್ಟ ಬಂದರೆ ನನ್ನ ತಾಯಿ ಮನೆಯವರೆ ಆಗಬೇಕು. ನನ್ನ ಓದಿಗೆ ತಕ್ಕ ಕೆಲಸವನ್ನು ತೆಗೆದುಕೊಳ್ಳಬೇಕು ಎಂಬ ಛಲ. ಅದಕ್ಕೆ ಗಂಡನ ಮನೆಯಲ್ಲಿ ಸಹಕಾರವಿಲ್ಲ. ನನ್ನ ಜೀವನ ಹೀಗೇಕಾಯಿತು ಎಂದೆನಿಸುತ್ತದೆ.. ಮನಸ್ಸಿಗೆ ನೆಮ್ಮದಿ ಇಲ್ಲ. ನಾನು ಯಾವ ರೀತಿ ಬದುಕಬೇಕು ಎಂಬುದನ್ನು ತಿಳಿಸಿಕೋಡಿ....
ಹೆಸರು ಬೇಡ, ಊರು ಬೇಡ
ಈಗೀನ ಕಾಲದಲ್ಲಿ ಮಗುವಿನೊಂದಿಗೆ ಕೂಡು ಕುಟುಂಬದ ಮನೆಯಲ್ಲಿ ಬಾಳುವುದು ನಿಜಕ್ಕೂ ವರವೇ ಸರಿ. ಕೂಡು ಕುಟುಂಬದಲ್ಲಿ ಮಕ್ಕಳು ಅಜ್ಜ–ಅಜ್ಜಿಯೊಂದಿಗೆ ಬದುಕುವುದು ನಿಜಕ್ಕೂ ಅದೃಷ್ಟ. ಇದರಿಂದ ಮಕ್ಕಳ ಬೆಳವಣಿಗೆಯೂ ಚೆನ್ನಾಗಿರುತ್ತದೆ. ಜೊತೆಗೆ ಅವರು ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಾರೆ. ಅನೇಕರಿಗೆ ಮದುವೆಯ ಬಳಿಕದ ಜೀವನವು ಚಾಲೆಜಿಂಗ್ ಆಗಿರುತ್ತದೆ. ಅತ್ತೆ–ಮಾವ ಹಾಗೂ ನಿಮ್ಮ ನಡುವೆ ಬಾಂಧವ್ಯ ಇರಬೇಕು. ಆರೋಗ್ಯಕರ ಸಂವಹನವೂ ಇಲ್ಲಿ ಮುಖ್ಯ ಎನ್ನಿಸಿಕೊಳ್ಳುತ್ತದೆ. ನೀವು ನಿಮ್ಮ ಗಂಡನ ಮನೆಯನ್ನು ನಿಮ್ಮ ಮನೆ ಎಂದು ಪರಿಗಣಿಸಿ. ಆಗ ನೀವು ಈ ಮನೆಯಲ್ಲಿ ಖುಷಿಯಿಂದ ಇರಲು ಸಾಧ್ಯ. ಅಲ್ಲಿ ನಿಮ್ಮ ಸುತ್ತಲಿರುವವರು ನಿಮ್ಮವರು. ತಂದೆ–ತಾಯಿಗಳು ನಿಮಗೆ ಬೆನ್ನೆಲುಬಾಗಿ ಇದ್ದೆ ಇರುತ್ತಾರೆ. ಆದರೆ ನಿಮ್ಮ ಸುತ್ತಲಿರುವವರ ಜೊತೆ ಉತ್ತಮ ಬಾಂಧವ್ಯ ಹಾಗೂ ಒಳ್ಳೆಯ ಸಂಬಂಧ ಇರಿಸಿಕೊಳ್ಳುವುದು ಮುಖ್ಯ. ನಿಮ್ಮ ಗಂಡನ ಸಹಾಯ ಪಡೆದುಕೊಳ್ಳಿ. ಅವರ ಬಳಿ ನಿಮಗೆ ಕೆಲಸಕ್ಕೆ ಹೋಗುವ ಇರಾದೆ ಇದೆ ಎಂಬುದನ್ನು ತಿಳಿಸಿ. ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ತಾವೇ ಮುಂದೆ ನಿಂತು ಈ ವಿಷಯದ ಬಗ್ಗೆ ತಮ್ಮ ತಂದೆ–ತಾಯಿಗಳ ಜೊತೆ ಮಾತನಾಡಬಹುದು. ಒಂದು ಸಣ್ಣ ಹೊಂದಾಣಿಕೆಯಿಂದ ಮನೆಯಲ್ಲಿ ಸೌಹಾರ್ದತೆ ಮೂಡಲು ಸಹಾಯವಾಗುತ್ತದೆ. ಜನರೊಂದಿಗೆ ಧನಾತ್ಮಕ ಮನೋಭಾವದೊಂದಿಗೆ ಬೆರೆಯುವುದರಿಂದ ನೀವು ಸಮಾಜಿಕವಾಗಿ ತೆರೆದುಕೊಳ್ಳಬಹುದು. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿ ಕೀಳರಿಮೆ ಕಡಿಮೆಯಾಗುತ್ತದೆ. ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿ. ಕೆಲ ಹೊತ್ತು ಧ್ಯಾನ ಮಾಡಿ. ಸ್ವ ಸಹಾಯಕ್ಕೆ ನೆರವಾಗುವ ಪುಸ್ತಕಗಳನ್ನು ಓದಿ. ಇದರಿಂದ ಖಂಡಿತ ನಿಮಗೆ ಸಹಾಯವಾಗುತ್ತದೆ.
3. ನಾನು B com ಪದವಿಯನ್ನು ತೇರ್ಗಡೆಯಾಗಿದ್ದು, (2018)ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಪ್ರಾರಂಭದ ದಿನಗಳಲ್ಲಿ ನಾನು ತುಂಬಾ ಚೆನ್ನಾಗಿ ಅಭ್ಯಾಸ ಮಾಡಿದೆ.ಆದರೆ ಕೆಲವು ತಿಂಗಳಿನಿಂದ ಓದೋಕೇ ಆಗ್ತಾ ಇಲ್ಲ.ಓದುವ ಸಮಯದಲ್ಲಿ ಇಲ್ಲಸಲ್ಲದ ಯೋಚನೆಗೆಳು ಬರುತ್ತವೆ.ಹಾಗೆಯೇ ಓದುವುದನ್ನು ಮುಂದೂಡುತ್ತಾ ಹೋಗುತ್ತಿದ್ದೇನೆ ನಿರಂತರವಾಗಿ ಓದಲು ಆಗುತ್ತಿಲ್ಲ. ದಯವಿಟ್ಟು ಇದಕ್ಕೆ ಶಾಶ್ವತ ಪರಿಹಾರ ತಿಳಿಸಿ...
ಖಾಸಿಮ್ ಎ ರಾಯಚೂರು
ಒಮ್ಮೆ ನೀವು ಸರ್ದಾತ್ಮಕ ಪರೀಕ್ಷೆಗಳನ್ನು ಎದುರಿಸುವ ನಿರ್ಧಾರ ಮಾಡಿದರೆ ನಿಮ್ಮ ಮುಂದೆ ಬೇರೆ ಆಯ್ಕೆಗಳು ಇರುವುದಿಲ್ಲ. ಆದರೆ ನೀವು ಸತತ ಪ್ರಯತ್ನ ಮಾಡಲೇಬೇಕು. ಆದರೆ ನನಗೆ ಅರ್ಥವಾಗುತ್ತದೆ ಯಾವುದೇ ವಿಷಯವಾಗಲಿ ಮತ್ತೆ ಮತ್ತೆ ಅದನ್ನೇ ಮಾಡುತ್ತಿದ್ದರೆ ಖಂಡಿತ ಬೋರ್ ಎನ್ನಿಸುತ್ತದೆ. ಆದರೆ ಕಠಿಣ ಅಭ್ಯಾಸದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಕೋಚಿಂಗ್ ಕ್ಲಾಸ್‌ಗಳಿಗೆ ಸೇರಿಕೊಳ್ಳಿ. ಇದರಿಂದ ನಿಮ್ಮ ತರಗತಿಯ ಸಹಪಾಠಿಗಳೊಂದಿಗೆ ಸ್ಪರ್ಧೆ ಏರ್ಪಡುತ್ತದೆ. ಇದರಿಂದ ನೀವು ಸದಾ ಓದುವಂತೆ ಮನಸ್ಸು ಪ್ರೇರೆಪಿಸುತ್ತದೆ. ಓದಿನ ಮಧ್ಯೆ ಸ್ವಲ್ಪ ಬಿಡುವು ಪಡೆದುಕೊಳ್ಳಿ. ಆಗ ಓದುವುದು, ಚರ್ಚೆ ಮಾಡುವುದು ಅಥವಾ ಸ್ನೇಹಿತರ ಜೊತೆ ಕೆಲ ಹೊತ್ತು ಕಳೆಯುವುದು ಮಾಡಿ. ನಿಮ್ಮಿಂದ ಕೋಚಿಂಗ್ ಕ್ಲಾಸ್‌ಗಳಿಗೆ ಹೋಗಲು ಸಾಧ್ಯವಾಗದಿದ್ದರೆ ನಿಮ್ಮ ಸ್ನೇಹಿತರ ಗುಂಪಿನಲ್ಲಿ ಯಾರ್ಯಾರು ಪರೀಕ್ಷೆ ಎದುರಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಆಗ ನೀವು ಅವರ ಜೊತೆ ಕುಳಿತು ಓದಬಹುದು. ಆಗ ನಿಮಗೆ ಒಬ್ಬರೇ ಓದುವುದು ಬೇಸರವಾಗುವುದಿಲ್ಲ. ನೀವು ಕಂಬೈನ್ ಸ್ಟಡಿಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ಆಗ ಓದನ್ನು ಮುಂದಕ್ಕೆ ಹಾಕುವುದನ್ನು ತಪ್ಪಿಸಬಹುದು. ಒಳ್ಳೆಯ ಡಯೆಟ್ ರೂಢಿಸಿಕೊಳ್ಳಿ. ಕೆಲವೊಂದು ಏಕ್ಸ್‌ಸೈಜ್‌ಗಳು ನಮ್ಮನ್ನು ಆಕ್ಟಿವ್ ಆಗಿ, ದಿನವಿಡೀ ಫ್ರೆಶ್ ಆಗಿ ಇರುವಂತೆ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.