ಇಂದಿನ ಯುವಜನರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದು ತಮ್ಮ ತೂಕದ ವಿಚಾರದಲ್ಲಿ. ದೇಹತೂಕದಲ್ಲಿ ಕೊಂಚ ಏರುಪೇರಾದರೂ ಖಿನ್ನತೆಗೆ ಒಳಗಾಗುತ್ತಾರೆ. ತಮ್ಮ ಬಗ್ಗೆ ತಾವೇ ಕೀಳರಿಮೆ ಹುಟ್ಟಿಸಿಕೊಳ್ಳುತ್ತಾರೆ. ಜಿಮ್‌ಗೆ ಓಡುವುದು, ಊಟ–ತಿಂಡಿ ಬಿಡುವುದು ಮಾಡುತ್ತಾರೆ. ಆದರೆ ಜಂಕ್ ಹಾಗೂ ಫಾಸ್ಟ್‌ಫುಡ್‌ಗಳನ್ನು ತಿನ್ನುವಾಗ ಮಾತ್ರ ಅವರು ತೂಕದ ಬಗ್ಗೆ ಯೋಚಿಸುವುದಿಲ್ಲ. ಬಾಯಿಗೆ ರುಚಿಸುವ ಜಂಕ್ ಆಹಾರಗಳು ದೇಹಕ್ಕೆ ಕಹಿ. ತಿನ್ನುವ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಆರೋಗ್ಯಕರ ಆಹಾರ ಸೇವನೆಯಿಂದ ದೇಹದ ತೂಕವನ್ನು ಸಮತೋಲನದಲ್ಲಿಡಬಹುದು ಎನ್ನುತ್ತಾರೆ ಪೌಷ್ಟಿಕತಜ್ಞೆ ಪ್ರಿಯದರ್ಶಿನಿ ಮಂಜುನಾಥ.
ಒಂದೇ ಬಾರಿಗೆ ತೂಕ ಇಳಿಸಬೇಕು ಎನ್ನುವ ಹಟಕ್ಕಿಂತ ನಿಧಾನಕ್ಕೆ ಸರಿಯಾದ ಕ್ರಮದ ಮೂಲಕ ತೂಕ ಇಳಿಸುವುದು ಉತ್ತಮ. ವ್ಯಾಯಾಮ ಮಾಡುವ ಅಭ್ಯಾಸವಿಲ್ಲದಿದ್ದರೆ ಈಗಿನಿಂದಲೇ ಪ್ರತಿದಿನ 20 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ಆರಂಭಿಸಿ. ನಂತರ ಜಾಗಿಂಗ್ ಮಾಡುವುದು, ಸೈಕ್ಲಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ, ಜೊತೆಗೆ ಆಹಾರಕ್ರಮದಲ್ಲೂ ಬದಲಾವಣೆ ಮಾಡಿಕೊಳ್ಳಿ ಎನ್ನುತ್ತಾರೆ ಪ್ರಿಯದರ್ಶಿನಿ.
* ಊಟ– ತಿಂಡಿಯನ್ನು ಸರಿಯಾದ ಸಮಯಕ್ಕೆ ಸೇವಿಸಿ. ಮನಸ್ಸಿಗೆ ಬಂದ ಸಮಯದಲ್ಲಿ ತಿನ್ನುವುದು ದೇಹ ತೂಕ ಹೆಚ್ಚಲು ಕಾರಣವಾಗಬಹುದು. ನಿಮ್ಮ ಊಟದೊಂದಿಗೆ ಪ್ರೊಟೀನ್ ಹಾಗೂ ನಾರಿನಾಂಶ ಅಧಿಕವಾಗಿರುವಂತೆ ನೋಡಿಕೊಳ್ಳಿ.
* ಬೆಳಗಿನ ಉಪಾಹಾರ ದೇಹದಲ್ಲಿ ಚಯಾಪಚಯ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ದೇಹಕ್ಕೆ ದಿನಪೂರ್ತಿ ಶಕ್ತಿ ನೀಡುತ್ತದೆ. ಬೆಳಗಿನ ಉಪಾಹಾರ ತಿನ್ನದೇ ಇದ್ದರೆ ಪದೇ ಪದೇ ಹಸಿವು ಕಾಡುತ್ತದೆ. ಆ ಕಾರಣಕ್ಕೆ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇವೆ. ಜೊತೆಗೆ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುತ್ತದೆ. ಇದು ತೂಕ ಹೆಚ್ಚಲು ಪ್ರಮುಖ ಕಾರಣ.
* ಕ್ಯಾಲೊರಿ ಅಧಿಕವಿರುವ ಆಲೂಗಡ್ಡೆ ಚಿಪ್ಸ್, ಕುಕೀಸ್‌ಗಳಿಂದ ದೂರವಿರಿ. ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣು–ತರಕಾರಿ ಹೆಚ್ಚು ಹೆಚ್ಚು ನಿಮ್ಮ ಆಹಾರಕ್ರಮದಲ್ಲಿ ಇರುವಂತೆ ನೋಡಿಕೊಳ್ಳಿ.
* ನಾರಿನಾಂಶ ಹೆಚ್ಚಿರುವ ಆಹಾರ ಪದಾರ್ಥಗಳು ಹಸಿವನ್ನು ಕಡಿಮೆ ಮಾಡುತ್ತವೆ. ಊಟದಲ್ಲಿ ಕಡಿಮೆ ಕ್ಯಾಲೊರಿ ಇರುವ ಆಹಾರ ಪದಾರ್ಥಗಳಿಗೆ ಹೆಚ್ಚು ಒತ್ತು ನೀಡಿ. ಕಡಿಮೆ ಕೊಬ್ಬಿನಂಶ ಇರುವ ಹಾಲು, ಚೀಸ್ ಬಳಸಿ. ಬೆಣ್ಣೆ ಹಾಗೂ ತುಪ್ಪದ ಬದಲು ಸಾಸಿವೆ ಎಣ್ಣೆ ಅಥವಾ ಆಲೀವ್ ಎಣ್ಣೆ ಬಳಸಿ.
* ನೀರಿನಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಿ. ದೇಹಕ್ಕೆ ಹೆಚ್ಚು ನೀರು ಸೇರಿದಷ್ಟೂ ತೂಕ ನಿಯಂತ್ರಣದಲ್ಲಿರುತ್ತದೆ. ಹಣ್ಣು, ಹಸಿ ತರಕಾರಿ, ಕಡಿಮೆ ಕೊಬ್ಬಿನಂಶ ಇರುವ ಯೋಗ್ಹರ್ಟ್ ಸೇವಿಸಿ.
* ಹಸಿವು ಇದ್ದಾಗಲಷ್ಟೇ ತಿನ್ನಿ. ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡಿದಾಗ ಖಂಡಿತ ತೂಕ ನಿಯಂತ್ರಣವಾಗುತ್ತದೆ. ಅಲ್ಲದೇ ಊಟವೂ ರುಚಿಸುತ್ತದೆ. ನಿಮ್ಮ ಹೊಟ್ಟೆ ತುಂಬಿದೆ ಎಂಬ ಸಂದೇಶವನ್ನು ಮೆದುಳಿಗೆ ರವಾನಿಸಲು 15 ನಿಮಿಷಗಳ ಕಾಲಾವಕಾಶ ಬೇಕು ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.
* ದಿನದಲ್ಲಿ ಕನಿಷ್ಠ 30 ರಿಂದ 40 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಇದರಿಂದ ಕೇವಲ ಕ್ಯಾಲೊರಿ ಕಡಿಮೆಯಾಗುವುದಲ್ಲದೇ ಫಿಟ್‌ನೆಸ್ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ತೂಕವು ನಿಯಂತ್ರಣದಲ್ಲಿರುತ್ತದೆ.
* ಟಿವಿ ನೋಡುವುದು, ಕಂಪ್ಯೂಟರ್ ಮುಂದೆ ಕೂರುವುದು, ವಿಡಿಯೊ ಗೇಮ್ ಆಡುವ ಸಮಯಕ್ಕೆ ಮಿತಿ ಹಾಕಿಕೊಳ್ಳಿ. ನಿಮ್ಮ ’ಸ್ಕ್ರೀನ್ ಟೈಮ್’ 2 ಗಂಟೆಗಿಂತ ಕಡಿಮೆ ಇರಲಿ.
* ಒಣಹಣ್ಣು, ಚುರುಮುರಿ ಸಲಾಡ್, ಸೂಪ್ ಅತಿಯಾದ ಹಸಿವನ್ನು ಬೇಗನೆ ಶಮನಗೊಳಿಸುತ್ತವೆ. ಅಲ್ಲದೇ ಇವು ತೂಕ ನಿಯಂತ್ರಿಸಿಕೊಳ್ಳಲು ನೆರವಾಗುತ್ತವೆ. ಅವು ಸದಾ ನಿಮ್ಮ ಮನೆಯಲ್ಲಿ ಇರಲಿ.
* ಸೋಡಾ, ಸಂಗ್ರಹಿತ ಜ್ಯೂಸ್‌ಗಳು ಹಾಗೂ ತಂಪುಪಾನೀಯಗಳ ಸೇವನೆ ತೂಕ ಹೆಚ್ಚಲು ಮುಖ್ಯ ಕಾರಣ. ಆ ಕಾರಣಕ್ಕೆ ಇದನ್ನು ಕುಡಿಯುವುದು ಕಡಿಮೆ ಮಾಡಿ. ಅದರ ಬದಲು ನೀರು ಕುಡಿಯಿರಿ, ಇಲ್ಲವೇ ಕಡಿಮೆ ಕೊಬ್ಬಿನಾಂಶ ಇರುವ ಹಾಲಿನ ಉತ್ಪನ್ನಗಳನ್ನು ಕುಡಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.