ಲಾಕ್‌ಡೌನ್ ಕಾಲದಲ್ಲಿ ನಮ್ಮ ಮನಃಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್.
---
'ಅವ್ನು ಬೆಳಿಗ್ಗೆ ಏಳೋದೇ ತಡ. ಸಂಗೀತ, ಹೋಂ ವರ್ಕ್, ಸ್ಕೂಲು. ಸಂಜೆ ಸ್ಕೂಲು ಮುಗಿದ ಮೇಲೆ ಅಥ್ಲೆಟಿಕ್ಸ್ ತರಬೇತಿ, ಪಾಠ ಓದೋದು,ಊಟ, ನಿದ್ದೆ.ಪಾದರಸದಂತೆ ಚಟುವಟಿಕೆಯಾಗಿದ್ದ ಮಗು ದೇಶ ಲಾಕ್‌ಡೌನ್ ಆದಾಗಿನಿಂದ ಮಂಕಾಗಿಬಿಟ್ಟಿದೆ. ಎಷ್ಟೂ ಅಂತ ಟೀವಿ ನೋಡ್ತಾನೆ, ವಿಡಿಯೊ ಗೇಂ ಆಡ್ತಾನೆ. ಜೊತೆಯಲ್ಲಿ ಆಡೋಕೆ ಯಾರೂ ಇಲ್ಲ...'
- ಆಪ್ತಸಮಾಲೋಚಕರ ಎದುರು4ನೇ ಕ್ಲಾಸ್ ಓದುವಮಗನ ಬಗ್ಗೆ ಮಾತನಾಡುತ್ತಿದ್ದತಾಯಿಯಮುಖವು ಬಾಡಿತ್ತು.
'ಮಗನ ವಿಚಾರ ಬಿಡಿ. ನಿಮ್ಮ ಬಗ್ಗೆ, ನಿಮ್ಮ ಗಂಡನ ಬಗ್ಗೆ ಹೇಳಿ. ನೀವು ಹೇಗಿದ್ದೀರಿ?' ಎಂಬ ಪ್ರಶ್ನೆ ಎದುರಾದಾಗ ದೊಡ್ಡದೊಂದು ನಿಟ್ಟುಸಿರಿನೊಂದಿಗೇ ಅವರು ಮುಂದಿನ ಮಾತು ಶುರು ಮಾಡಿದರು.
'ಏನೂ ಅಂತ ಹೇಳೋದು. ನಾವು ವರ್ಕಿಂಗ್ ಕಪಲ್. ಇಬ್ಬರು ಇಷ್ಟಪಟ್ಟು ಮದುವೆಯೇನೋ ಆಗಿದ್ದೆವು. ಆದರೆ ಇಬ್ಬರ ಇಷ್ಟಗಳು, ಆಸಕ್ತಿಗಳು ಬೇರೆ. ನಮ್ಮನಮ್ಮ ಲೋಕದಲ್ಲಿ ನಾವು ಖುಷಿಯಾಗಿದ್ದೆವು.ಈಗ ದಿನವಿಡೀ ಮನೆಯಲ್ಲಿ ಒಬ್ಬರ ಮುಖ ಒಬ್ಬರು ಎಷ್ಟೂಂತ ನೋಡೋದು. ಒಂಥರಾ ಕಿರಿಕಿರಿ, ಅದಕ್ಕೇ ಜಗಳಗಳು'. ಆಕೆಗೆ ಮಾತು ಹೇಗೆ ಮುಗಿಸಬೇಕು ಅಂತ ಗೊತ್ತಾಗಲಿಲ್ಲ.
ಲಾಕ್‌ಡೌನ್ ಘೋಷಣೆಯಾದ ನಂತರಬೆಂಗಳೂರು ಮಹಾನಗರದಲ್ಲಿ ಖಿನ್ನತೆಗೆ ಜಾರುವವರ ಸಂಖ್ಯೆಯೂ ಹೆಚ್ಚಾಗಿದೆ. ಧುತ್ತೆಂದು ಎದುರಾದ ಏಕಾಂತವನ್ನು, ಆಫೀಸಿಗೆ ಹೋಗುವ ಜಂಜಾಟವಿಲ್ಲದೆ ಸಿಗುತ್ತಿರುವ ಸಮಯವನ್ನು ಹೇಗೆ ಕಳೆಯಬೇಕೆಂದು ಹಲವರಿಗೆ ಅರ್ಥವಾಗುತ್ತಿಲ್ಲ. ಮಕ್ಕಳನ್ನು ನಿಭಾಯಿಸುವುದೋ, ಕೆಲಸದವರು ಬಾರದ ಕಾರಣ ಗುಡ್ಡೆಬಿದ್ದಿರುವ ಮನೆಗೆಲಸಗಳನ್ನು ಮುಗಿಸಿಕೊಳ್ಳುವುದೋ, ಗಂಡ/ಹೆಂಡತಿಯನ್ನು ಸಂಭಾಳಿಸುವುದೋ, ಮೂರು ಹೊತ್ತೂ ಹಳೆಯ ನೆನಪುಗಳನ್ನು ಮೊಗೆಯುವ ಹಿರಿಯರಿಗೆ ಓಗೊಡುವುದೋ... ಹೀಗೆ ಸಾಕಷ್ಟು ಗೊಂದಲಗಳು.
ಈ ದುರಿತ ಕಾಲದಲ್ಲಿ ನಮ್ಮ ಮನಃಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳುವುದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆ. ಈ ಪ್ರಶ್ನೆ ಕೇಳಿದವರು ಸ್ವತಃಉತ್ತರ ಹುಡುಕಿಕೊಳ್ಳಲು ನೆರವಾಗುತ್ತಿದೆ 'ಅನ್‌ಲೀಷ್ಪಾಸಿಬಿಲಿಟೀಸ್'.ಫೋನ್ಮತ್ತು ಸ್ಕೈಪ್ ಮೂಲಕ ಆಪ್ತಸಮಾಲೋಚನೆ ನಡೆಸುವ ನುರಿತ ಆಪ್ತಸಮಾಲೋಚಕರು ಏಕಾಂತದ ಬೇಸರ ಕಳೆಯಲು ಅತ್ಯುತ್ತಮವಾದ ಮತ್ತು ಸರಳವಾಗಿ ಅಳವಡಿಸಿಕೊಳ್ಳಬಹುದಾದ ಸಲಹೆಗಳನ್ನು ನೀಡುತ್ತಾರೆ.
ಹಲವು ಸಮಸ್ಯೆಗಳಿಗೆ ಗೊಂದಲವೇ ಕಾರಣ
ಕೋವಿಡ್-19 ಒಂದು ಕಾಯಿಲೆ ಅಂತ ಜನರಿಗೆ ಗೊತ್ತಾಗಿದೆ. ಆದರೆ ಈ ಕಾಯಿಲೆ ತರುವ ಕೊರೊನಾ ವೈರಸ್ ಹೇಗೆ ಹರಡುತ್ತೆ ಎಂಬ ಬಗ್ಗೆ ಜಾಗೃತಿ ಇನ್ನೂ ಮೂಡಿಲ್ಲ. ಮಾಧ್ಯಮಗಳಲ್ಲಿ ಸ್ಟೇಜ್-1, ಸ್ಟೇಜ್-2, ಸ್ಟೇಜ್-3 ಎಂಬ ಪದಗಳ ಉಲ್ಲೇಖವಾಗುತ್ತಿದೆ. ವಾಟ್ಸ್ಯಾಪ್‌ಗಳಲ್ಲಿ ಅಸಂಬದ್ಧ ಎನಿಸುವಂಥ ಸಂದೇಶಗಳು ಹರಿದಾಡುತ್ತಿವೆ. ಜನರಲ್ಲಿ ಜಾಗೃತಿಗಿಂತ ಹೆಚ್ಚಾಗಿ ಭಯ ಮತ್ತು ಗೊಂದಲ ಮೂಡಿದೆ.
ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟು ಜನರು ಮನೆಯಲ್ಲಿ ಉಳಿದಿದ್ದಾರೆ. ಇದನ್ನು ಒತ್ತಾಯ ಎಂದುಕೊಳ್ಳುತ್ತಿರುವ ಕಾರಣದಿಂದಲೇ ಅವರಲ್ಲಿ ಮಾನಸಿಕ ಒತ್ತಡ ಉಂಟಾಗುತ್ತಿದೆ. ಇದರ ಬದಲು ಕಾಯಿಲೆ ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ ಎಂಬ ಜಾಗೃತಿ ಮೂಡಿದ್ದರೆ ಜನರು ಸ್ವಯಿಚ್ಛೆಯಿಂದ ಮನೆಗಳಲ್ಲಿ ಉಳಿಯುತ್ತಿದ್ದರು. ಮಾನಸಿಕ ಸಮಸ್ಯೆಗಳು ಬರುವ ಸಾಧ್ಯತೆಯೂ ಕಡಿಮೆಯಿತ್ತು. ಜಾಗೃತ ವ್ಯಕ್ತಿಗಳು ದೃಢ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಾನಸಿಕವಾಗಿಯೂ ಸದೃಢರಾಗುತ್ತಾರೆ.
ಆಪ್ತಸಮಾಲೋಚನೆ ನನ್ನ ವೃತ್ತಿ. ಪ್ರತಿದಿನ ಹಲವರ ಜೊತೆಗೆ ಮಾತನಾಡುತ್ತೇನೆ. 'ಎಷ್ಟೊತ್ತು ಅಂತ ಮನೆಯಲ್ಲೇ ಇರೋದು?ಹೊರಗೆ ಯಾಕೆ ಹೋಗಬಾರದು? ಮಕ್ಕಳನ್ನು ಹೇಗೆ ನೋಡಿಕೊಳ್ಳೋದು? ನಂಗೂ ಒಂದೇ ಸಮ ಮನೆಯಲ್ಲಿದ್ದು ಬೋರ್ ಆಗುತ್ತೆ...' ಎಂದೆಲ್ಲಾ ಕೆಲವರು ಹೇಳುತ್ತಾರೆ.
ತಮಗೆ ಏನು ಅನ್ನಿಸುತ್ತಿದೆ ಎಂಬುದನ್ನು ಹಂಚಿಕೊಳ್ಳಲೂ ಹಲವರಿಗೆ ಆಗುತ್ತಿಲ್ಲ. ಮಾನಸಿಕ ಒತ್ತಡ ಹೆಚ್ಚಾದಾಗ ಸಹಜವಾಗಿಯೇ ಕೋಪ, ಇರಿಸುಮುರಿಸು (ಇರಿಟೇಶನ್)ಜಾಸ್ತಿಯಾಗುತ್ತೆ. ಇಂಥ ಬೇಡದ ವರ್ತನೆಗಳನ್ನುಹದ್ದುಬಸ್ತಿನಲ್ಲಿ ಇರಿಸಲು ಕೆಲ ದೈಹಿಕ ಮತ್ತು ಮಾನಸಿಕಚಟುವಟಿಕೆಗಳು ಅತ್ಯಗತ್ಯ.
ಇದನ್ನೂ ಓದಿ:ಜಗಳ-ಕುಟುಂಬ ಎಂಬ ಗೂಡಿನ ಕಾವು
ಯೋಗ, ಧ್ಯಾನ ಮಾಡಿ
ಹೀಗೆ ಹೇಳಿದ ತಕ್ಷಣ 'ನನಗೆ ಯೋಗಾಸನ ಬರಲ್ಲ, ನಾನು ಯೋಗಾ ಕ್ಲಾಸ್‌ಗೆ ಹೋಗಿಲ್ಲ' ಎಂಬ ಸಿದ್ಧ ಉತ್ತರವನ್ನು ಹಲವರು ಕೊಡ್ತಾರೆ. ನಾನು ಯೋಗ ಮಾಡಿ ಅಂತ ಹೇಳಿದ್ರೆ ಅದರರ್ಥಏಕಕಾಲಕ್ಕೆ ದೇಹ, ಮನಸ್ಸು ಮತ್ತು ಆತ್ಮಕ್ಕೆ ಖುಷಿಕೊಡುವ ಚಟುವಟಿಕೆ ನಡೆಸಿ ಎಂದು. ಸಾಧಕರ ಹಂತದಲ್ಲಿ ಸಾಧ್ಯವಾಗದಿದ್ದರೂ ಪರವಾಗಿಲ್ಲ, ನಿಮ್ಮ ಮಟ್ಟಿಗೆ ನೀವು ಯೋಗಾಭ್ಯಾಸ ಶುರು ಮಾಡಿ. ಅದೂ ಸಾಧ್ಯವಾಗದು ಎನಿಸಿದರೆ ಸೂಕ್ಷ್ಮ ವ್ಯಾಯಾಮಗಳನ್ನಾದರೂ(ಕೈ ತಿರುಗಿಸುವುದು, ಜಂಪಿಂಗ್ ಇತ್ಯಾದಿ) ಮಾಡಿ. ವ್ಯಾಯಾಮವೂ ಬೇಡ ಎನಿಸಿದರೆ ಕನಿಷ್ಠ ಪಕ್ಷ ಮನೆಯಲ್ಲಿಯೇ ಓಡಾಡಿ.ಒಟ್ಟಿನಲ್ಲಿ ದೇಹಕ್ಕೆ ಚಟುವಟಿಕೆ ಸಿಗುವಂಥದ್ದೇನಾದರೂ ದಿನದಲ್ಲಿ ಸ್ವಲ್ಪ ಸಮಯವಾದರೂ ಮಾಡಲೇಬೇಕು ಎಂಬುದು ನೆನಪಿರಲಿ. ದೇಹ ಜಡವಾದರೆ, ಮನಸ್ಸಿಗೆ ಉಲ್ಲಾಸ ಬರದು.
ಇನ್ನು ಧ್ಯಾನದ ವಿಷಯ. 'ಅದೆಲ್ಲಾ ನನ್ನಿಂದ ಆಗಲ್ಲ' ಎಂದು ಸಾರಾಸಗಟಾಗಿ ತಿರಸ್ಕರಿಸುವವರೇ ಹೆಚ್ಚು. ಇಲ್ಲಿಯೂ ಅಷ್ಟೇ. ನಿಮಗೆ ತರಬೇತಿ ಸಿಕ್ಕಿದ್ದರೆ, ಅನುಭವವಿದ್ದರೆ ಸೂಕ್ತ ರೀತಿಯಲ್ಲಿ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿ. ಧ್ಯಾನದ ಮೂಲಕ ಮನಸ್ಸನ್ನು ನಿಶ್ಚಲ ಸ್ಥಿತಿಗೆ ತನ್ನಿ. ಈವರೆಗೆ ಅಂಥ ಪ್ರಯತ್ನ ಮಾಡಿರದಿದ್ದರೆ ಈಗಲೇ ಶುರು ಮಾಡಿ. ಅದನ್ನು ಮಾಡೋಕೆ ಲಾಕ್‌ಡೌನ್‌ಗಿಂತ ಉತ್ತಮ ಅವಕಾಶ ಮತ್ತೊಂದಿಲ್ಲ.
ನಿಮಗೆ ಆರಾಮು ಎನ್ನಿಸುವಂತೆ ನೆಲದ ಮೇಲೆಯೋ, ಕುರ್ಚಿಯ ಮೇಲೆಯೋ ಕುಳಿತುಕೊಳ್ಳಿ. ದೀರ್ಘವಾಗಿ ಉಸಿರು ಎಳೆದುಕೊಳ್ಳಿ, ನಿಧಾನವಾಗಿ ಉಸಿರು ಬಿಡಿ. ಒಂದೇ ದಿನ ಹೆಚ್ಚು ಸಮಯ ಮಾಡಲು ಸಾಧ್ಯವಾಗದಿದ್ದರೆ ಚಿಂತೆಬೇಡ. ಆದರೆ ಪ್ರತಿದಿನ ಕೆಲ ಸಮಯ ಮಾಡುವುದು ರೂಢಿಸಿಕೊಳ್ಳಿ. ಕ್ರಮೇಣ ಅವಧಿ ಹೆಚ್ಚು ಮಾಡಿಕೊಳ್ಳಿ. ಉಸಿರಾಟದ ಮೇಲೆ ನಿಗಾಯಿಟ್ಟರೆ ದೇಹ ಮತ್ತು ಮನಸ್ಸು ನಮ್ಮ ನಿಯಂತ್ರಣಕ್ಕೆ ಬರುತ್ತೆ. ಸಂಕಲ್ಪ ಮಾಡಿದ್ದನ್ನು ಸಾಧಿಸುವ ಶಕ್ತಿ ಹೆಚ್ಚಾಗುತ್ತೆ. ಸಿಟ್ಟು ಕಡಿಮೆಯಾಗುತ್ತೆ.
ಇದನ್ನೂ ಓದಿ:ನಿತ್ಯವೂ ನೆಮ್ಮದಿ ಸಿಗಬಹುದೇ?
ನಿಮ್ಮೊಳಗೆ ಏನಾಗ್ತಿದೆ?
ಲಾಕ್‌ಡೌನ್ ಸೃಷ್ಟಿಸಿರುವ ಅನಿವಾರ್ಯ ಏಕಾಂತದಿಂದ ನಮಗೆ ತಿಳಿದೋ ತಿಳಿಯದೆಯೋ ಆತ್ಮಾವಲೋಕನವೂ ಆರಂಭವಾಗಿದೆ. ಇದು ಒಂಥರಾ ಒಳ್ಳೇದು ಅನ್ನಿ. ನಿಜ ಅಂದ್ರೆ ಪ್ರತಿದಿನ ನಾವು ಬೇರೆಯವರ ಜೊತೆಗೆ ಮಾತಾಡೋದೇ ಹೆಚ್ಚು. ನಮ್ಮ ಜೊತೆಗೆ ನಾವು ಮಾತಾಡೋಕೆ ಸಮಯವೇ ಸಿಕ್ಕಿರಲ್ಲ. ಈಗ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳೋಣ.
ಇಂಥ ಆತ್ಮಾವಲೋಕನವಾದಾಗಲೇ ನಮಗೆ ನಮ್ಮ ಬಗ್ಗೆ ಅರ್ಥವಾಗೋದು. ನನ್ನ ಶಕ್ತಿ, ನನ್ನ ದೌರ್ಬಲ್ಯ, ನನ್ನ ಭಾವನೆಗಳು, ನನಗೇನು ಬೇಕು, ನನ್ನ ಮನಸ್ಸಿಗೆ ಯಾವುದು ಇಷ್ಟವಾಗುತ್ತೆ,ನನಗೆಏನಾಗಬೇಕು ಅಂತ ಆಸೆಯಿದೆ, ಈಗ ನಾನು ಏನಾಗಿದ್ದೇನೆ... ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಹಿಂದೆ ಮನಸ್ಸು ಓಡುತ್ತದೆ. ಸರಿಯಾದ ಕ್ರಮದಲ್ಲಿ ಈ ಪ್ರಶ್ನೆಗಳ ಬೆನ್ನು ಹತ್ತಿದರೆ ಮನಸ್ಸಿಗೆ ಸಮಾಧಾನವಾಗುವಂಥ ಉತ್ತರವೂ ಸಿಗುತ್ತದೆ.
ಈಗ ಸಿಕ್ಕಿರುವ ಅನಿವಾರ್ಯ ಏಕಾಂತವನ್ನು ಇಂಥ ಆತ್ಮಾವಲೋಕನಕ್ಕಾಗಿಸದುಪಯೋಗಪಡಿಸಿಕೊಳ್ಳಿ.
ಇದನ್ನೂ ಓದಿ:ರಜೆಯಲ್ಲಿ ಕಲಿಕೆಯ ಮಜಾ
ಮನಃಪೂರ್ವಕ ಕೆಲಸ ಮಾಡಿ, ಹಳಹಳಿಕೆ ಬೇಡ
ಹಲವು ಉದ್ಯೋಗಸ್ಥಗೃಹಿಣಿಯರಿಗೆ ಮನೆಕೆಲಸ,ಅಡುಗೆ ಇಷ್ಟವಾಗುವುದಿಲ್ಲ. ಅಯ್ಯೋ ಅನಿವಾರ್ಯವೆಂಬ ಮನಃಸ್ಥಿತಿಯಲ್ಲಿ ಮಾಡುತ್ತಿರುತ್ತಾರೆ. ಇನ್ನು ಮನೆಯಲ್ಲಿಯೇ ಕುಳಿತಿರುವ ಪುರುಷ ಸಿಂಹಗಳಿಗೂ ಅಷ್ಟೇ. ಪಾತ್ರೆ ತೊಳೆಯೋದೋ, ಮಗುವಿಗೆ ಸ್ನಾನ ಮಾಡಿಸೋದೋ ಇಷ್ಟವೇ ಇರಲ್ಲ. 'ಅಯ್ಯೋ ಮಾಡಲೇಬೇಕಲ್ಲ' ಎಂಬ ಮನಃಸ್ಥಿತಿಯಲ್ಲಿ ಮಾಡುತ್ತಿರುತ್ತಾರೆ. ಹೀಗೆ ಇಷ್ಟವಿಲ್ಲದೆ ಮಾಡುವ ಕೆಲಸಗಳೂ ನಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಅದೇ ಕೆಲಸವನ್ನು ಇಷ್ಟಪಟ್ಟು ಮನಃಪೂರ್ವಕವಾಗಿ ಮಾಡಿದರೆ, ಮನಸ್ಸಿಗೆ ಖುಷಿ ಸಿಗುತ್ತದೆ.ಮಾಡುವುದು ಅದೇ ಕೆಲಸವಾದರೂ,ಕೆಲಸದಹಿಂದಿನ ಭಾವನೆ ಬಹುಮುಖ್ಯ.
ಯಾವುದೇ ಕೆಲಸ ಮಾಡಿದರೂಮನಃಪೂರ್ವಕ ಮಾಡಬೇಕು. ವರ್ತಮಾನದ ಈ ಕ್ಷಣದಲ್ಲಿ ಖುಷಿಯಾಗಿ ಬದುಕುವುದು ಬಹು ಮುಖ್ಯ. ಆದ್ರೆ ನಾವು ಹೇಗಾಗಿದ್ದೀವಿ ಗೊತ್ತಾ? ನಿನ್ನೆ ಏನೋ ಆಯ್ತು ಅಂತ "ಈಗ" ಕೊರಗ್ತೀವಿ. ನಾಳೆ ಏನಾಗಬಹುದು ಎಂಬ ಆತಂಕದಲ್ಲಿ ಇಂದಿನ ಈ ಕ್ಷಣವನ್ನು ಹಾಳು ಮಾಡಿಕೊಳ್ಳುತ್ತೇವೆ. ದೇವರು ಕೊಟ್ಟಿರುವ ಈ ಕ್ಷಣವನ್ನುಎಂಜಾಯ್ ಮಾಡಲ್ಲ. ಯಾರ ಜೊತೆಗೋ ಫೋನ್‌ನಲ್ಲಿ ಮಾತಾಡ್ತಾ ಇರ್ತೀವಿ, ಇಲ್ಲಿ ಇನ್ನೇನೋ ಕೆಲಸ ಮಾಡ್ತಾ ಇರ್ತೀವಿ. ಕೆಲವರಂತೂ ನೆಮ್ಮದಿಯಾಗಿ ಶೌಚಕ್ಕೂ ಹೋಗಲ್ಲ.ಅಲ್ಲಿಯೂಅವರಿಗೆ ಮೊಬೈಲ್ ಇರಬೇಕು!
ಇದನ್ನು ಕೆಲವರು ಮಲ್ಟಿಟಾಸ್ಕಿಂಗ್ ಎಂದು ಬೀಗುತ್ತಾರೆ. ಆದರೆ ನನಗಂತೂ ಇದು ಶುದ್ಧ ಪೆದ್ದುತನ ಎನಿಸುತ್ತೆ. ಇಂಥವರಿಗೆಎಷ್ಟೇ ಸೌಲಭ್ಯ, ದುಡ್ಡು ಕೊಟ್ರೂ ಮನಸ್ಸಿಗೆ ಖುಷಿ ಸಿಗಲ್ಲ. ಅವರು ಯಾವಸಂಬಂಧಕ್ಕೂ ಬೆಲೆ ಕೊಡಲ್ಲ. ಯಾವುದೂ ಅವರಿಗೆ ನೆಮ್ಮದಿ ಕೊಡಲ್ಲ. ದೇವರು ಎಲ್ಲವನ್ನೂ ಕೊಟ್ಟಿದ್ದರೂ ಅದನ್ನು ಅನುಭವಿಸುವ ಮನಃಸ್ಥಿತಿಯೇ ಇಂಥವರಲ್ಲಿ ರೂಢಿಯಾಗಿರುವುದಿಲ್ಲ.ಅಪ್ಪ-ಅಮ್ಮ ಮಾತಾಡ್ತಾ ಇದ್ರೂ ಕೈಲಿರುವ ಮೊಬೈಲ್ ಮೇಲೆ ಬೆರಳು ಸ್ವೈಪ್ ಮಾಡ್ತಿರುತ್ತೆ. ಹೆಂಡತಿ ಏನೋ ಹೇಳ್ತಿದ್ರೆ, ಇವರು ಹೂಂಗುಟ್ಟುತ್ತಾ ಮತ್ತೇನೋ ಯೋಚನೆ ಮಾಡ್ತಾ ಇರ್ತಾರೆ. ಮಕ್ಕಳ ಜೊತೆಗೆ ಆಟ ಆಡುವಾಗಲು ಮನಸ್ಸು ಷೇರು ಮಾರ್ಕೆಟ್ ಮೇಲೆ ಇರುತ್ತೆ. ಇಂಥ ಪ್ರವೃತ್ತಿಯಿಂದ ಜಗಳಗಳು ಸಾಮಾನ್ಯ.
ಲಾಕ್‌ಡೌನ್ ಶುರುವಾದ ನಂತರ ಇಂಥ ಮನಸ್ಥಿತಿಯಿರುವವರು ಇರುವ ಮನೆಗಳಲ್ಲಿ ಜಗಳಗಳು ಹೆಚ್ಚಾಗಿವೆ. ಇಂಥವರು ಸ್ವತಃ ಬದಲಾಗಲು ಪ್ರಯತ್ನಪಡಬೇಕು.
ಇದನ್ನೂ ಓದಿ:ಮಕ್ಕಳ ಸ್ಕೂಲ್ ಮನೆಯೇ ಅಲ್ವಾ?
ಸಿಕ್ಕಿದ್ದಕ್ಕೆ ತೃಪ್ತಿಯಿರಲಿ
ಅತೃಪ್ತಿಯಿದ್ದಾಗಲೇ ಮನುಷ್ಯ ಉನ್ನತ ಮಟ್ಟಕ್ಕೆ ಬೆಳೆಯುವುದು ಎಂಬ ಮಾತು ಇದೆ. ಅದೊಂದು ಹಂತ. ನಾವು ಇನ್ನಷ್ಟು ಸಾಧಿಸುವ ಛಲ ರೂಢಿಸಿಕೊಳ್ಳುವುದು, ಅದಕ್ಕಾಗಿ ಪ್ರಯತ್ನ ಪಡುವುದು ಬೇರೆ. ಅದೇ ರೀತಿ ಇರುವುದನ್ನು ಅನುಭವಿಸುತ್ತಾ, ಅದರಿಂದ ನೆಮ್ಮದಿ ಹೊಂದುವುದು ಬೇರೆ. ಎರಡನೇ ಪ್ರವೃತ್ತಿಯೇ ನಮ್ಮಲ್ಲಿ ಇಲ್ಲದಿದ್ದರೆ ಲಾಕ್‌ಡೌನ್ ಸ್ಥಿತಿಯನ್ನು ನಿಭಾಯಿಸುವುದು ಬಲುಕಷ್ಟ.
ಅತೃಪ್ತ ಮನಃಸ್ಥಿತಿಯವರಿಗೆ ರಾತ್ರಿ ನಿದ್ದೆ ಬರುವುದು ಕಷ್ಟ. ಇವರ ತಲೆ ರಾತ್ರಿಹೊತ್ತೇ ಕ್ರಿಯಾಶೀಲವಾಗಿರುತ್ತದೆ. ಆ ನಿಶ್ಯಬ್ದ ಮತ್ತು ಏಕಾಂತ ಅವರ ಮನಸ್ಸಿನಲ್ಲಿ ಸಾಕಷ್ಟು ಅಲೆಗಳನ್ನು ಎಬ್ಬಿಸುತ್ತವೆ. ಈಗಲಾಕ್‌ಡೌನ್ ಶುರುವಾದ ನಂತರ ಹಗಲುಗಳೂ ಸಹ ನಿಶ್ಯಬ್ದವಾಗಿವೆ. ಅವರ ಪರಿಸ್ಥಿತಿ ಹೇಗಿರಬೇಡ.
ಇಂಥವರಿಗೆ ನಾನು ಅತ್ಯಂತ ಸರಳ ಸಲಹೆ ಕೊಡುತ್ತೇನೆ. ಮಲಗುವ ಮೊದಲು ಅಥವಾ ಯಾವಾಗಲೇ ಆಗಲಿ, ತಲೆ ಬಿಸಿಯಾದಾಗ, ಮನಸ್ಸನ್ನು ಗಾಢ ಅತೃಪ್ತಿ ಕಾಡಲು ಆರಂಭಿಸಿದಾಗಒಂದು ಪುಸ್ತಕ-ಪೆನ್ ತೆಗೆದುಕೊಂಡು ಬರೆಯಲು ಶುರು ಮಾಡಿ. ನಿಮಗೆ ಸಿಕ್ಕಿರುವುದು, ನೀವು ಸಾಧಿಸಿರುವುದನ್ನು ಗುರುತು ಮಾಡಿಕೊಳ್ಳಿ. ನೀವು ಬರೆದಾಗ ನಿಮ್ಮ ಮನಸ್ಸು ಅದನ್ನು ರಿಜಿಸ್ಟರ್ ಮಾಡಿಕೊಳ್ಳುತ್ತೆ. ಆ ಖುಷಿಯನ್ನು ಗಾಢವಾಗಿ ಅನುಭವಿಸಲು ಪ್ರಯತ್ನಪಡುತ್ತೆ. ದಯವಿಟ್ಟು ಅದಕ್ಕೆ ತಡೆಹಾಕಬೇಡಿ. ಮನಃಪೂರ್ವಕ ಆ ಖುಷಿ ಅನುಭವಿಸಿ. ಪ್ರತಿದಿನ ಇದನ್ನು ಅಭ್ಯಾಸ ಮಾಡಿದರೆ ನಿಮ್ಮಲ್ಲಿ ಪಾಸಿಟಿವ್ ಎನರ್ಜಿಯ ಹರಿವು ಹೆಚ್ಚಾಗುತ್ತೆ. ಇನ್ನಷ್ಟು ಸಾಧಿಸಬೇಕೆಂಬ ತುಡಿತದ ಜೊತೆಜೊತೆಗೆ ಈವರೆಗೆ ಸಾಧಿಸಿರುವುದಕ್ಕೆ ಹೆಮ್ಮೆ, ಬದುಕಿನಲ್ಲಿ ಸಿಕ್ಕ ಪ್ರತಿಯೊಂದರ ಬಗ್ಗೆ ಕೃತಜ್ಞತೆ, ಸಂಬಂಧಗಳಿಗೆ ಬೆಲೆ ಕೊಡುವ ಪ್ರವೃತ್ತಿ ನಿಮಗೆ ರೂಢಿಯಾಗುತ್ತೆ.
ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಸಿಕ್ಕಿದ್ದಕ್ಕೆ ನಾನು ಖುಷಿಯಾಗಿದ್ದೇನೆ. ನನಗೆ ಸಿಗುವುದೇ ಇಲ್ಲ ಎಂದು ದೂರ ಹೋಗಿದ್ದನ್ನು ವಿಧಿಗೆ ಬಿಟ್ಟಿದ್ದೇನೆ ಎಂಬ ನಿರ್ಲಿಪ್ತ ಮನಃಸ್ಥಿತಿ ಬೆಳೆಯುತ್ತದೆ.
ಯಾವುದು ಸುಖ? ಯಾವುದು ದುಃಖ?
ನಮ್ಮ ದೈನಂದಿನ ಬದುಕಿನಲ್ಲಿ ನಾವು ಯಾವುದನ್ನೆಲ್ಲಾ ಸಮಸ್ಯೆಗಳು, ದುಃಖ ಉಂಟುಮಾಡುವ ಸಂಗತಿಗಳು ಎಂದುಕೊಳ್ಳುತ್ತೇವೆಯೋ ಅವು ವಾಸ್ತವವಾಗಿ ಹಾಗಿರುವುದಿಲ್ಲ. ಕೆಲವೊಮ್ಮೆ ನಮ್ಮ ನಿಯಂತ್ರಣಕ್ಕೆ ಮೀರಿದ ಸಂಗತಿಗಳಿಂದ ನಮ್ಮಲ್ಲಿ ನೆಗೆಟಿವ್ ಎನರ್ಜಿ ಬೆಳೆಯುತ್ತದೆ. ಅಂಥ ಪರಿಸ್ಥಿತಿಯಲ್ಲಿಯೂ ನಮ್ಮ ಮನಸ್ಸನ್ನು ತುಸುವೇ ಟ್ಯೂನ್ ಅಪ್ ಮಾಡಿಕೊಂಡರೂ ಪಾಸಿಟಿವ್ ಆಗಿ ಇರಬಹುದು, ಪಾಸಿಟಿವ್ ಆಗಿ ಯೋಚನೆ ಮಾಡಬಹುದು.
ಈಗ ಲಾಕ್‌ಡೌನ್ ಆಗಿರುವ ಸಂದರ್ಭವನ್ನೇ ತೆಗೆದುಕೊಳ್ಳೋಣ. ಹೊರಗೆ ಓಡಾಡಲು ಆಗಲ್ಲ. ಇಡೀ ದಿನ ಮನೆಯಲ್ಲೇ ಇರಬೇಕು. ಈ ಸಮಯವನ್ನು ಸಾಂಸಾರಿಕ ಬಂಧ ಬಿಗಿ ಮಾಡಲು ಬಳಸಿಕೊಳ್ಳಬಹುದಲ್ಲವೇ?
ಮನೆಮಂದಿಯೆಲ್ಲಾ ಒಮ್ಮೆ ಕೂತು ಮಾತನಾಡಿ. ಮನೆ ಕೆಲಸ ಮತ್ತು ಅಡುಗೆಯಲ್ಲಿ ಹೆಂಡತಿಗೆ ಗಂಡ ಸಹಾಯ ಮಾಡಬಹುದು. ತಾನು ಓದಬೇಕು ಅಥವಾ ಕಲಿಯಬೇಕು ಎಂದುಕೊಂಡಿದ್ದನ್ನು ಹೆಂಡತಿ ಪ್ರಯತ್ನಿಸಬಹುದು. ಮಕ್ಕಳನ್ನು ಎಂಗೇಜ್ ಮಾಡಲು ಒಂದು ಟೈಂ ಟೇಬಲ್ ಮಾಡಿಕೊಡಿ. ಅವರೊಂದಿಗೆ ನಿಮ್ಮ ಸಮಯವನ್ನು ಹೊಂದಿಸಿಕೊಳ್ಳಿ. ಮಕ್ಕಳ ಜೊತೆಗೆ ಚೆನ್ನಾಗಿ ಆಡಿ, ಓದಿ, ಕುಣಿಯಿರಿ. ಮನೆಯಲ್ಲೇ ಇದ್ದರೂ, ಲಾಕ್‌ಡೌನ್ ಆಗಿದ್ದರೂ ದಿನದ 24 ಗಂಟೆ ನಿಮಗೆ ಸಾಲದಾಗುತ್ತೆ.
ಇದನ್ನೂ ಓದಿ:ಮಕ್ಕಳಿಗೆ ‘ಕೊರೊನಾ’ ಅರ್ಥ ಮಾಡಿಸಿ
ಖುಷಿಯಾಗಿರೋದಕ್ಕೆ ಒಂದಿಷ್ಟು ಐಡಿಯಾಗಳು
*ವಯಸ್ಸಾದವರಿಗೆ ಭಾವನಾತ್ಮಕ ಆಸರೆ ಕೊಡಿ. ಅವರಿಗೆ ಹೆಚ್ಚು ಮಾತನಾಡಬೇಕು ಎಂಬ ಆಸೆಯಿರುತ್ತೆ. ಯಾರೂ ನಮ್ಮ ಮಾತು ಕೇಳಿಸಿಕೊಳ್ಳುತ್ತಿಲ್ಲ ಎಂಬ ಬೇಸರವಿರುತ್ತೆ. ಲಾಕ್‌ಡೌನ್‌ನಲ್ಲಿ ಸಿಕ್ಕ ಸುಸಮಯವನ್ನು ಅವರೊಂದಿಗೆ ಖುಷಿಯಿಂದ ಕಳೆಯಿರಿ. ಅವರ ಮಾತಿಗೆ ಕಿವಿಯಾಗಿ.
* ಮನೆಯನ್ನು ಇಡಿಯಾಗಿ ಕ್ಲೀನ್ ಮಾಡಿ ಎಷ್ಟು ದಿನವಾಯ್ತು? ಮಕ್ಕಳೂ ಸೇರಿದಂತೆ ಮನೆಮಂದಿಯೆಲ್ಲರೂ ಸೇರಿಕೊಂಡು ಮನೆ ಕ್ಲೀನ್ ಮಾಡಿ. ಕಿಟಕಿಗಳನ್ನು ಒರೆಸಿ, ಅಟ್ಟದಲ್ಲಿ ಏನೆಲ್ಲಾ ಪೇರಿಸಿಟ್ಟೀರಿ ನೋಡಿ, ಕರ್ಟನ್‌ಗಳನ್ನು ಒಗೆಯಿರಿ.
* ನಿಮ್ಮ ಕುಟುಂಬದ ಸದಸ್ಯರನ್ನು ಜಡ್ಜ್ ಮಾಡೋಕೆ, ಒತ್ತಾಯಪೂರ್ವಕ ಬದಲಿಸೋಕೆ ಹೋಗಬೇಡಿ (ದುರಭ್ಯಾಸಗಳಿದ್ದರೆ, ಕಿರಿಕಿರಿ ಉಂಟು ಮಾಡುವ ಪ್ರವೃತ್ತಿಯಿದ್ದರೆ ಬೇರೆ ಮಾತು).
* ಮಕ್ಕಳು ಮಾತನಾಡಲು ಶುರು ಮಾಡಿದಾಗ ಕೇಳಿಸಿಕೊಳ್ಳಿ, ಅವು ಕೇಳುವ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ. ಅವರ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದರೆ ನಿಮ್ಮ ಜ್ಞಾನವೂ ವಿಸ್ತಾರವಾಗುತ್ತೆ. ಲಾಕ್‌ಡೌನ್‌ನಿಂದ ಸಿಕ್ಕಿರುವ ಧಂಡಿಯಾದ ಸಮಯ ಕಳೆಯಲು ಇದು ಅತ್ಯುತ್ತಮ ಮಾರ್ಗ.
* ನಮ್ಮ ಫೇಸ್‌ಬುಕ್ ಪುಟfacebook.com/UnleashPossibilitiesGlobal ಮೂಲಕ ನೀವು ಪ್ರತಿದಿನ ಕಂಡುಕೊಂಡಒಂದು ಪಾಸಿಟಿವ್ ಚಿಂತನೆ, ಅನುಭವ ಹಂಚಿಕೊಳ್ಳಿ.
ನಾವಿದ್ದೇವೆ ಸಹಾಯ ಮಾಡೋಕೆ
ಮೇಲೆ ಬರೆದ ಈ ಅಂಶಗಳನ್ನು ಅನುಸರಿಸಿದ ನಂತರವೂ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳಿದ್ದರೆ ದಯವಿಟ್ಟು ನಮ್ಮ ತಂಡವನ್ನು ಸಂಪರ್ಕಿಸಿ. ಕನ್ನಡ ಬಾರದ ನಿಮ್ಮ ಗೆಳೆಯರಿಗೆ ಆಪ್ತ ಸಮಾಲೋಚಕರ ಅಗತ್ಯವಿದೆ ಎಂದಾದರೆ ನಮ್ಮ ನಂಬರ್ ಕೊಡಿ. ಲಾಕ್‌ಡೌನ್ ಅವಧಿಯಲ್ಲಿ ಇದು ನಮ್ಮ ತಂಡದ ಉಚಿತ ಸೇವೆ.
ನಮ್ಮ ತಂಡದ ಸದಸ್ಯರಹೆಸರು, ಅವರು ಯಾವೆಲ್ಲಾ ಭಾಷೆಗಳಲ್ಲಿ ಮಾತನಾಡಬಲ್ಲರು ಮತ್ತು ಯಾವ ಅವಧಿಯಲ್ಲಿ ಅವರನ್ನು ಸಂಪರ್ಕಿಸಬಹುದು ಎಂಬ ಮಾಹಿತಿ ಇಲ್ಲಿದೆ.
* ಭವ್ಯಾ ವಿಶ್ವನಾಥ್:ಮೊ-98808 07003, ಭಾಷೆ- ಕನ್ನಡ ಮತ್ತು ಇಂಗ್ಲಿಷ್,ಸಮಯ- ಸೋಮವಾರದಿಂದ ಶನಿವಾರದವರೆಗೆ 10ರಿಂದ 12, 2ರಿಂದ 8.
* ರಂಜಿನಿ ಮೂರ್ತಿ:ಮೊ-97403 11083, ಭಾಷೆ- ಕನ್ನಡ, ಇಂಗ್ಲಿಷ್, ಹಿಂದಿ. ಸಮಯ- ಸೋಮವಾರದಿಂದ ಶುಕ್ರವಾರ. ಸಂಜೆ 3ರಿಂದ 5.
* ಅಶ್ವಿನಿ ರೆಡ್ಡಿ: ಮೊ-63648 33535, ಭಾಷೆ- ಕನ್ನಡ, ಇಂಗ್ಲಿಷ್, ತೆಲುಗು,ಸಮಯ- ಪ್ರತಿದಿನ ಮಧ್ಯಾಹ್ನ 12ರಿಂದ ಸಂಜೆ 6.
* ಶಕುಂತಲಾ ಎ.: ಮೊ-81050 11778, ಭಾಷೆ- ಕನ್ನಡ, ಹಿಂದಿ, ಇಂಗ್ಲಿಷ್.ಸಮಯ- ಸೋಮವಾರದಿಂದ ಶುಕ್ರವಾರ ಮಧ್ಯಾಹ್ನ 2ರಿಂದ ಸಂಜೆ 7.pm to 7pm
* ರಾಜಿ: ಮೊ-99450 61731, ಭಾಷೆ- ಕನ್ನಡ, ಇಂಗ್ಲಿಷ್, ತಮಿಳು. ಸಮಯ- ಸೋಮವಾರದಿಂದ ಶುಕ್ರವಾರ ಮಧ್ಯಾಹ್ನ 2ರಿಂದ 7.
* ಹರ್ಷಿಣಿ ರಾಧಾಕೃಷ್ಣ:ಮೊ- 97319 87421, ಭಾಷೆ- ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು. ಸಮಯ- ಬೆಳಿಗ್ಗೆ 11ರಿಂದ 3.
* ಜಾಯ್ ಬಸು: ಮೊ-98863 29015, ಭಾಷೆ- ಇಂಗ್ಲಿಷ್, ಹಿಂದಿ, ಬೆಂಗಾಲಿ,ಸಮಯ-ಸೋಮವಾರ, ಶನಿವಾರ, ಭಾನುವಾರ. ಬೆಳಿಗ್ಗೆ 10ರಿಂದ 3.
* ತೃಪ್ತಿ ಗಾವ್ಕರ್: ಮೊ-96119 80263, ಭಾಷೆ- ಇಂಗ್ಲಿಷ್. ಸಮಯ-ಪ್ರತಿದಿನ ಬೆಳಿಗ್ಗೆ 11ರಿಂದ 4.
* ಅಂಜಲಿ ವಿ.ಬನ್ಸಾಲ್: ಮೊ-99804 35538, ಭಾಷೆ- ಇಂಗ್ಲಿಷ್, ಹಿಂದಿ. ಸಮಯ- ಸೋಮವಾರ, ಬುಧವಾರ ಮತ್ತು ಶುಕ್ರವಾರ. ಸಂಜೆ 3ರಿಂದ 7, ರಾತ್ರಿ 9ರಿಂದ 11.
* ಪ್ರಾಚಿ: ಮೊ-98220 28126, ಭಾಷೆ- ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಕೊಂಕಣಿ. ಸೋಮವಾರದಿಂದ ಶನಿವಾರ ಬೆಳಿಗ್ಗೆ 10ರಿಂದ ಸಂಜೆ4.
* ಶಿಲ್ಪಾ ಅಗರ್‌ವಾಲ್: ಮೊ-95351 93512, ಭಾಷೆ- ಇಂಗ್ಲಿಷ್, ಹಿಂದಿ, ಮರಾಠಿ. ಸಮಯ- ಸೋಮವಾರದಿಂದ ಶನಿವಾರ 11ರಿಂದ 1, 4ರಿಂದ 6.
* ವಿ.ಶಕುಂತಲಾ: ಮೊ- 96770 17593, ಭಾಷೆ- ಇಂಗ್ಲಿಷ್ ಮತ್ತು ತಮಿಳು, ಪ್ರತಿದಿನ ಬೆಳಿಗ್ಗೆ 10ರಿಂದ 12.30, ಮಧ್ಯಾಹ್ನ 2ರಿಂದ ಸಂಜೆ 6.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.