ADVERTISEMENT

PV Web Exclusive: ಕ್ಯಾನ್ಸರ್‌ ಜೊತೆಗೆ ಆತ್ಮವಿಶ್ವಾಸದ ನಡೆ

ಕೈ ಹಿಡಿದಳು ಗಾಯತ್ರಿ –15

ಕೃಷ್ಣಿ ಶಿರೂರ
Published 28 ಫೆಬ್ರುವರಿ 2021, 10:27 IST
Last Updated 28 ಫೆಬ್ರುವರಿ 2021, 10:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸರ್ಜರಿ ನಂತರ ಬೆಡ್‌ ಬಿಟ್ಟು ಏಳಲು ಕಷ್ಟಪಡಬೇಕಾಯಿತು. ಇದ್ದಿದ್ದರಲ್ಲಿ ಬೆಡ್‌ ಪಕ್ಕ ಕಿಟಕಿ ಬಂದಿದ್ದರಿಂದ ಆ ಕಿಟಕಿಯ ಸರಳುಗಳನ್ನು ಹಿಡಿದು ಪ್ರಯಾಸಪಟ್ಟಾದರೂ ಏಳುವುದನ್ನು ರೂಢಿಸಿಕೊಂಡೆ. ಬೆನ್ನಿನ ಮೇಲೆ ಹೊಡೆದ ಪಿನ್‌ಗಳ ಮೇಲೆ ಮಲಗಿದ್ದು ನನಗೆ ಮಹಾಭಾರತದಲ್ಲಿ ಬಾಣಗಳ ಮೇಲೆ ಮಲಗಿದ್ದ ಭೀಷ್ಮನನ್ನು ನೆನಪಿಸಿತು. ಇಷ್ಟೆಲ್ಲವನ್ನು ಹಿಂದಿನ ವಾರ ಓದಿದ್ದಿರಿ. ಮುಂದೇನಾಯ್ತು...

ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದ ಮಾರನೇ ದಿನ ಎದ್ದು ಸ್ನಾನ ಮಾಡಿ ಬರುತ್ತಿದ್ದಂತೆ, ಬೆಡ್‌ರೂಂ ಬಾಗಿಲಲ್ಲಿ ನಮ್ಮನೆಯ ಬಿಳಿ ನೀಲ್‌ಕಮಲ್‌ ಕುರ್ಚಿ ಇತ್ತು. ಇದ್ಯಾರಿಲ್ಲಿ ಚೇರ್‌ ಇಟ್ಟಿದ್ದು ಎಂದು ಕೇಳಿದೆ. ನಾನೇ ಇಟ್ಟಿದ್ದು... ಎಂದ ಮಗ. ಯಾಕೋ ಇಲ್ಲಿಟ್ಟಿದ್ದಿ ಎಂದರೆ, ನಿನ್ನ ರೂಮ್‌ಗೆ ನಾನು ಸೆಕ್ಯುರಿಟಿ ಗಾರ್ಡ್‌ ಎಂದವನೆ, ಕೈಯಲ್ಲೊಂದು ಲಾಠಿ ಹಿಡಿದು, ಖುರ್ಚಿ ಮೇಲೆ ಕುಳಿತುಬಿಟ್ಟ. ಯಾರಿಗೂ ನನ್ನ ರೂಮಿನ ಒಳಗೆ ಬಿಡುತ್ತಿರಲಿಲ್ಲ. ’ಯಾಕೋ ಹೀಗ್‌ ಮಾಡ್ತಿದ್ದಿಯಾ‘ ಅಂತ ಕೇಳಿದೆ. ’ಮತ್ತೆ, ನಿಂಗೆ ಇನ್‌ಫೆಕ್ಷನ್‌ ಆದ್ರೆ... ಅದಕ್ಕೆ ಯಾರನ್ನೂ ಬಿಡಲ್ಲ. ನೀನು ಆಸ್ಪತ್ರೆಯಲ್ಲಿದ್ದಾಗ, ಅಲ್ಲಿದ್ದ ಸೆಕ್ಯುರಿಟಿ, ನಿನ್ನ ಹತ್ತಿರ ಹೋಗ್ತೇನೆ ಅಂದ್ರೂ ನನಗೆ ಬಿಟ್ಟಿರಲಿಲ್ಲ. ಅಲ್ಲೆಲ್ಲ ಹೋಗ್ಬಾರದು, ಪೇಷಂಟ್‌ಗೆ ಇನ್‌ಫೆಕ್ಷನ್‌ ಆಗುತ್ತೆ ಅಂತೆಲ್ಲ ಹೇಳಿದ್ದ. ಮಕ್ಕಳೆಲ್ಲ ಹೀಗೆಲ್ಲ ಬರಬಾರ್ದು ಅಂತಾನೂ ಬೈದಿದ್ದ..’ ಎಂದು ಬೆಪ್ಪು ಮೊರೆ ಮಾಡಿ ಖುರ್ಚಿ ಮೇಲೆ ಕುಳಿತ. ಮನೆಯಲ್ಲಿ ನನಗೆ ಸೆಕ್ಯುರಿಟಿ ಗಾರ್ಡ್‌ ಆದ ಮಗನ ಮಾತು, ವರ್ತನೆ ನೋಡಿ ಎಲ್ಲರಿಗೂ ನಗುವೋ ನಗು. ಅಮ್ಮನ ಮೇಲೆ ಎಷ್ಟೊಂದು ಕಾಳಜಿ ಮಗನಿಗೆ ಅಂತ ಮನತುಂಬಿ ಬಂತು.

ಆಸ್ಪತ್ರೆಯಲ್ಲಿ ಸರ್ಜರಿ ಆದ ಮೇಲೆ ನನ್ನ ನೋಡಲೆಂದು ನನ್ನ ಅಮ್ಮನ ಜೊತೆ ಬರ್ತಿದ್ದ. ಪಾಪ, ಅಲ್ಲಿ ಸೆಕ್ಯುರಿಟಿ ಗಾರ್ಡ್‌ ಅವನನ್ನು ತಡೆದು, ಮಕ್ಕಳನ್ನೆಲ್ಲ ಕರ್ಕೊಂಡು ಬರಬ್ಯಾಡ್ರಿ ಎಂದು ಗದರಿಸುತ್ತಿದ್ದರಂತೆ. ಹೀಗೆ ಮೂರ್ನಾಲ್ಕು ಬಾರಿ ಅವನನ್ನು ಸೆಕ್ಯುರಿಟಿ ತಡೆದಿದ್ದ. ಅವನು ಹೇಳೋದ್ರಲ್ಲೂ ತಪ್ಪಿಲ್ಲ. ಸದಾ ರೆಡಿಯೇಷನ್‌, ಕಿಮೊ ಔಷಧದ ಘಾಟೇ ಮೂಗಿಗೆ ಅಡರುವ ಜಾಗದಲ್ಲಿ ಮಕ್ಕಳಿಗೆ ಪ್ರವೇಶ ನಿಷಿದ್ಧ ಒಳ್ಳೆಯದೇ. ಆದರೆ ನನ್ನ ಐದೂವರೆ ವರ್ಷದ ಮಗನಿಗೆ ಅಷ್ಟೆಲ್ಲ ತಿಳಿವಳಿಕೆ ಇರಬೇಕಲ್ಲ. ಗಣಪತಿ ಮಾವನ ಜೊತೆಗೆ ಸೆಕ್ಯುರಿಟಿ ಕಣ್ತಪ್ಪಿಸಿ ರೂಮೊಳಗೆ ಬಂದಿದ್ದ. ‘ಯಾಕೋ ಬಂದೆ; ಸೆಕ್ಯುರಿಟಿ ನೋಡಿದ್ರೆ ಬೈಯ್ತಾರೆ ಕಣೋ‘ ಅಂದ್ರೆ, ಅವರು ಬಂದ್ರೆ ನಿನ್ನ ಕಾಟ್‌ ಅಡಿ ಅಡ್ಕೊತ್ತಿನಿ ಬಿಡು ಅಂತ ಹೇಳಿ ನನ್ನ ಬಾಯಿ ಮುಚ್ಚಿಸಿದ್ದ. ಮಕ್ಕಳ ಮನಸ್ಸು ಎಷ್ಟು ಮುಗ್ಧವೋ ಅಷ್ಟೇ ಚಾಲಾಕಿತನವೂ ಅವರಲ್ಲಿ ಇರುತ್ತದೆ ಅನ್ನೋದು ನನಗೆ ಗೊತ್ತಾಯ್ತು.

ADVERTISEMENT

ಮೇ 29; ಸರ್ಜರಿ ಮಾಡಿ ಏಳು ದಿನಗಳ ನಂತರ ಮೊದಲ ಬಾರಿಗೆ ಎಡಕ್ಕೆ ಹೊರಳಿ ಮಲಗಿದೆ. ಅಲ್ಲಿವರೆಗೂ ಬೆನ್ನ ಮೇಲೆ ಮಲಗಿ ಮಲಗಿ ಮಲಗುವುದೇ ಅಸಹನೀಯವೆನಿಸಿತ್ತು. ಪ್ರತಿಬಾರಿ ಮಲಗುವಾಗ ಬೆನ್ನಿನ ಬಲಮಗ್ಗುಲಲ್ಲಿ ಹೊಡೆದ ಸ್ಟೆಪ್ಲರ್‌ ಪಿನ್‌ ಒತ್ತುತ್ತಿದ್ದರಿಂದ ಅವುಗಳ ಮೇಲೆ ಬ್ಯಾಲೆನ್ಸ್‌ ಮಾಡಿ ಮಲಗುತ್ತಿದ್ದೆ. ಮಗ್ಗಲು ಬದಲಿಸಲು ಸಾಧ್ಯವೇ ಇರಲಿಲ್ಲ. ಎಡಮಗ್ಗುಲು ಮಲಗೋಣ ಎಂದರೆ ಪೋರ್ಟ್‌ ಹಾಕಿದ ಜಾಗದಲ್ಲಿ ಪೋರ್ಟ್‌ ಒತ್ತುತ್ತಿತ್ತು. ಪೋರ್ಟ್‌ ಮುಚ್ಚಿ ಮೇಲಿಂದ ಹಾಕಿದ ಹೊಲಿಗೆ ಜಗ್ಗುತ್ತಿತ್ತು. ಅದು ಇನ್ನಿಲ್ಲವೆಂಬಷ್ಟು ಯಾತನೆ ನೀಡುತ್ತಿತ್ತು. ನಿತ್ಯವೂ ಸ್ನಾನ ಮಾಡುವಾಗ ನಾನೇ ಡ್ರೈನ್‌ ಬಾಕ್ಸ್‌ ಕ್ಲೀನ್‌ ಮಾಡುತ್ತಿದ್ದೆ. ಬರಬರುತ್ತ ಡ್ರೈನ್‌ ಬಾಕ್ಸ್‌ನಲ್ಲಿ ಸೇರುವ ರಕ್ತದ ಸಂಗ್ರಹ ಕಮ್ಮಿಯಾಯಿತು. ಪೂರ್ತಿಯಾಗಿ ನಿಂತಿರಲಿಲ್ಲ. ಮೇ 31ರಂದು ಡ್ರೈನ್‌ ಪೈಪ್‌ ರಿಮೂವ್‌ ಮಾಡೋಣ ಎಂದು ಡಾ.ಕೋರಿ ಹೇಳಿದರು.

ಆದರೆ ನನಗೊಂದು ಆತಂಕವಿತ್ತು. ಡ್ರೈನ್‌ ಮೂಲಕ ಹೊರಹೋಗುತ್ತಿದ್ದ ಕೆಟ್ಟ ರಕ್ತ, ಒಸರುವ ನೀರಿನ ಕಥೆ ಏನು? ಅದಿನ್ನು ಪೂರ್ತಿ ನಿಂತಿಲ್ಲ. ಮತ್ತೆ ಅದು ಹೊರಹೋಗುವುದು ಹೇಗೆ?. ಸರ್ಜರಿ ಮಾಡಿದ್ದಲ್ಲೇ ಸಂಗ್ರಹವಾಗಿ ಮತ್ತೆ ನೋವು ಶುರುವಾದರೆ ಹೇಗೆ ಎಂಬ ಚಿಂತೆ ಕಾಡಿತು. ಈ ಎಲ್ಲ ಆತಂಕದ ನಡುವೆಯೂ ವೈದ್ಯರು ನೀಡಿದ ದಿನದಂದು ಅವರ ಕ್ಯಾಬಿನ್‌ ಎದುರು ಹಾಜರಾದೆ. ನನ್ನ ಪಕ್ಕದಲ್ಲಿ ಲಂಬಾಣಿ ಮಹಿಳೆಯೊಬ್ಬರು ಕೂತಿದ್ದರು. ಅವರಿಗೂ ಸರ್ಜರಿ ಆಗಿತ್ತು. ನನಗೂ ಸರ್ಜರಿಯಾಗಿತ್ತು. ವ್ಯತ್ಯಾಸವೆಂದರೆ ನಾನು ಹಗುರ ಗೌನ್‌ ತೊಟ್ಟಿದ್ದೆ. ಆ ಲಂಬಾಣಿ ಮಹಿಳೆ ಅಂಥ ಪರಿಸ್ಥಿತಿಯಲ್ಲೂ ಅವರ ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದರು. ಅವರ ಉಡುಗೆ ಹೇಗಿರುತ್ತದೆ ಎಂದು ನಾನು ಹೇಳಬೇಕಿಲ್ಲ. ನಾನು ನನ್ನನ್ನ ಮರೆತು ಆಯಮ್ಮನನ್ನು ನೋಡುತ್ತ ಕುಳಿತೆ. ಡಾಕ್ಟರ್‌ ಚೆಕ್‌ಅಪ್‌ ಮಾಡುವಾಗ ಅವರು ತೊಟ್ಟಿದ್ದ ಉಡುಗೆಗಳನ್ನು ಎತ್ತಿಡಲು ಎಷ್ಟು ಸಮಯ ಬೇಕಾಗಬಹುದು ಎಂದು ಲೆಕ್ಕಹಾಕತೊಡಗಿದೆ. ಅನಾರೋಗ್ಯ ಪರಿಸ್ಥಿತಿಯಲ್ಲೂ ಅವರು ತಮ್ಮ ಆಚಾರ, ಸಂಪ್ರದಾಯ ಬಿಟ್ಟುಕೊಡದೆ ಅದನ್ನು ಚಾಚೂತಪ್ಪದೆ ಪಾಲಿಸುತ್ತಿರುವುದು ಹೆಮ್ಮೆಭಾವ ಮೂಡಿಸಿತು. ಅಂತೂ ಆಯಮ್ಮ ಚೆಕ್‌ಅಪ್‌ ಮುಗಿಸಿಕೊಂಡು ಬಂದರು. ನಂತರ ನನ್ನ ಸರದಿ. ಒಮ್ಮೆ ಸರ್ಜರಿ ಮಾಡಲಾದ ಜಾಗವನ್ನು ತಪಾಸಿಸಿದರು. ಡ್ರೈನ್‌ ಪೈಪ್‌ ರಿಮೂವ್‌ ಮಾಡಿ, ಆ ಬಾಕ್ಸ್‌ನಿಂದ ಮುಕ್ತಿಕೊಟ್ಟು ಕಳುಹಿಸಿದರು. ಅಂದುಕೊಂಡಂತೆ ಸರ್ಜರಿ ಮಾಡಿದ ಜಾಗದಲ್ಲೆಲ್ಲ ರಕ್ತ ಸಂಗ್ರಹವಾಗತೊಡಗಿತು. ಅದು ಕೂಡ ಭಾರವೆನಿಸಲು ಶುರುವಾಯಿತು. ಕಂಕುಳ ಕೆಳಭಾಗ, ಸರ್ಜರಿ ಮಾಡಿದ ಭಾಗವೆಲ್ಲ ಬಲೂನಿನಂತೆ ಊದಿಕೊಂಡಿತು. ಮಲಗುವಾಗ ತ್ರಾಸೆನಿಸಿತು. ಅರ್ಧ ಗಾಳಿ ಹೊರಹೋದ ಬಲೂನಿನ ಮೇಲೆ ಮಲಗಿದಂತೆನಿಸಿತು. ಅದನ್ನು ಹೇಗೆ ತೆಗಿತಾರೆ ಎನ್ನುವುದೇ ನನಗೆ ಯೋಚನೆಯಾಯಿತು. ಡಾಕ್ಟರ್‌ ನೋಡಿದ್ರೆ ಸೋಮವಾರ ಬನ್ನಿ ಎಂದಿದ್ದರು. ಅಲ್ಲಿ ತನಕ ಕಾಯಲೇ ಬೇಕು. ಒಳಗೊಳಗೆ ಅಸಹನೀಯ ನೋವು. ಒಂದೊಂದು ಕ್ಷಣವೂ ಒಂದೊಂದು ಯುಗವೆನಿಸಿತು.

ಕ್ಯಾನ್ಸರ್‌ ಅಂದರೆ ಸಾವು ಎಂಬ ಅನ್ವರ್ಥಕ ಅಂಟಿಕೊಳ್ಳಲು ಕಾರಣವೆಂದರೆ ಅದರ ಚಿಕಿತ್ಸಾ ಕ್ರಮ. ಎಂಥವರು ಚಿಕಿತ್ಸೆಗೆ ಮಗ್ಗಲಾಗಲೇಬೇಕು. ಈಗಾಗಲೇ ನನ್ನ ಎಡಗೈಯ ನರಗಳೆಲ್ಲ ಕಿಮೊ ಇಂಜೆಕ್ಷನ್‌ನಿಂದ ಒಳಗೊಳಗೆ ಬೆಂದು, ಸುಟ್ಟು, ಮುರುಟಿದಂತಾಗಿದ್ದವು. ಈಗ ಸರ್ಜರಿ ಹೆಸರಲ್ಲಿ ಮೂರು ಕಡೆ ಕತ್ತರಿ ಪ್ರಯೋಗ. ಸರ್ಜರಿ ನಂತರದ್ದೂ ಅದೊಂದು ಭಯಂಕರ ಅನುಭವ. ಮುಂದೆ ಮತ್ತೆ ರೆಡಿಯೇಷನ್‌ ಅನ್ನು ಎದುರಿಸಬೇಕು. ಇವೆಲ್ಲ ಒಂದೆರಡು ತಿಂಗಳಲ್ಲಿ ಮುಗಿಯುವುದಲ್ಲ. ಕಡಿಮೆಯೆಂದರೂ ಒಂಬತ್ತು ತಿಂಗಳನ್ನು ತಾಳ್ಮೆಯಿಂದ ಕಾಯಲೇಬೇಕು. ಅಷ್ಟೇ ನನ್ನ ಚಿಕಿತ್ಸೆ ಈ ಒಂಬತ್ತು ತಿಂಗಳ ನಂತರ ಮತ್ತೆ ಒಂದು ವರ್ಷ ವಿವಿಟ್ರಾ ಇಂಜೆಕ್ಷನ್‌ ತೆಗೆದುಕೊಳ್ಳಬೇಕಿತ್ತು. ಕ್ಯಾನ್ಸರ್‌ನ ಒಂದೊಂದು ಹಂತ ದಾಟಲು ತಾಳ್ಮೆ ಜೊತೆಗೆ ಆತ್ಮಸ್ಥೈರ್ಯವೂ ಬೇಕು. ಮನಸ್ಸನ್ನು ನಿಗ್ರಹಿಸುವ ಕುಶಲತೆ ಬೇಕು. ನನ್ನೊಳಗಿನ ಆತ್ಮವಿಶ್ವಾಸವೇ ಕ್ಯಾನ್ಸರ್‌ ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲಿ ಗೆಲುವು ತಂದುಕೊಡುತ್ತ ಸಾಗಿತು. ಮಾನಸಿಕವಾಗಿ ಇಷ್ಟೆಲ್ಲ ಗಟ್ಟಿತನ ತಂದುಕೊಂಡಿದ್ದರೂ ಒಮ್ಮೊಮ್ಮೆ ಮನಸ್ಸು ಮರಗುತ್ತಿರುತ್ತಿತ್ತು.

ಯಪ್ಪಾ.... ಈ ಟ್ರೀಟ್‌ಮೆಂಟ್‌ ಬೇಗ ಮುಗಿಲಪ್ಪ ಅಂತ ಮನಸ್ಸು ಬಯಸಿದರೂ, ಒಂದೊಂದೇ ದಿನವನ್ನ ದಾಟಿಯೇ ಹೋಗಬೇಕಲ್ಲ. ಅಬ್ಬಾ ಇಷ್ಟೆಲ್ಲ ಯೋಚನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದರೆ ಮತ್ತೆ ಜೀವನ ಜುಗುಪ್ಸೆಯ ಮೂಟೆಯಾಗುತ್ತಿತ್ತು. ಮೈಮೇಲಿನ ಗಾಯದ ನೋವಿನ ಜೊತೆಗೆ ಆಗಾಗ ಮನಸ್ಸನ್ನು ಘಾಸಿಗೊಳಿಸುವಂತ ಮಾತುಗಳು ಇನ್ನಷ್ಟು ವೇದನೆ ಕೊಟ್ಟವು.

ಅಂತೂ ಸೋಮವಾರ (ಜೂನ್‌ 5) ಬಂದೇ ಬಿಟ್ಟಿತು. ಸ್ಟಿಚ್‌ಗೆ ಮುಕ್ತಿಕೊಡುವ ದಿನ. ಸ್ಟಿಚ್‌ ಅಂದರೆ ಅದೇ ಸ್ಟೆಪ್ಲರ್‌ ಪಿನ್‌ಗಳು. ಕೋರಿ ಡಾಕ್ಟರ್‌ ಒಂದೊಂದೇ ಪಿನ್‌ ತೆಗೆಯುತ್ತಿದ್ದರೆ ನೋವು ಒತ್ತರಸಿ ಬರುತ್ತಿತ್ತು. ಒಮ್ಮೊಮ್ಮೆ ಅಯ್ಯೋ ಎಂದಿತು. ಜೊತೆಗೆ ಅಲ್ಲಿ ಸಂಗ್ರಹವಾಗಿದ್ದ ರಕ್ತವನ್ನು ಸಿರಿಂಜ್‌ ಮೂಲಕ ತೆಗೆಯುವಾಗ ಅಯ್ಯೋ ಅನ್ನಿಸುತ್ತಿತ್ತು. ದಿನ ಕಳೆದಂತೆ ಗಾಯ ನಿಧಾನವಾಗಿ ಮಾಯುತ್ತಿತ್ತು. ಇಲ್ಲಿಗೆ 2ನೇ ಮಹತ್ವದ ಘಟ್ಟ ಅಂತ್ಯಗೊಂಡು ಮೂರನೇ ಘಟ್ಟವಾದ ರೇಡಿಯೊಥೆರಪಿಗೆ ಖೋ ಕೊಟ್ಟಿತು.

ಮನಸ್ಸು ಆಫೀಸಿಗೆ ಹೊರಡಲು ಅಣಿಯಾಗತೊಡಗಿತು. ಮನೆಯಲ್ಲಿ ಎಲ್ಲ ಬೈಯ್ದರು. ಗಾಯವಿನ್ನು ಒಣಗಿಲ್ಲ. ಆಗಲೇ ಆಫೀಸಾ ಎಂದು ಗದರಿದರು ಅಮ್ಮ. ನನಗೋ ಮೂರು ತಿಂಗಳಿಂದ ಸಂಬಳ ರಹಿತ ರಜೆ. ಕೈಯಲ್ಲಿ ದುಡ್ಡಿರಲಿಲ್ಲ. ಎರಡು ವರ್ಷಗಳ ಹಿಂದಿನಿಂದ ಮನೆ ಸಾಲದ ಶೂಲಕ್ಕೆ ಸಿಲುಕಿದ್ದೆ. ಅದರ ಜೊತೆಜೊತೆಗೇ ಒತ್ತರಿಸಿ ಬಂದಿದ್ದು ಕ್ಯಾನ್ಸರ್‌. ಕಿಮೊ, ಸರ್ಜರಿಗೆ ಗಿರೀಶನ ಎಎಸ್‌ಐ ಬಂದರೂ ಮತ್ತುಳಿದ ಖರ್ಚಿಗೆ ಅಂದು ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಮನೆ ಸಾಲದ ಕಂತು ಡ್ಯೂ ಆಗಬಾರದು ಎಂಬ ಉದ್ದೇಶ ನನ್ನದು. ಅದಕ್ಕಾಗಿ ಏಷ್ಟೇ ಕಷ್ಟವಾದರೂ ಸರಿ ಆಫೀಸಿಗೆ ಹೊರಡೋದೆ ಎಂದು ಗಟ್ಟಿ ಮಾಡಿದೆ. ಆದರೆ ಅಮ್ಮ ಬಿಡಲೇ ಇಲ್ಲ. ಆಯ್ತು, ನಾನು ಜುಲೈ 1ರಿಂದ ಆಫೀಸ್‌ಗೆ ಹೋಗ್ತೇನೆ ಎಂದೆ.

ಸರ್ಜರಿ ಆಗಿ 17 ದಿನಗಳು ಕಳೆದು ಹೋಗಿದ್ದವು. ಆದರೆ ಸರ್ಜರಿ ವೇಳೆ ಮಾಡಿದ್ದ ಗಾಯಗಳು ಇನ್ನೂ ಒಣಗಿರಲಿಲ್ಲ. ಕೆಲವು ಕಡೆ ಇನ್ನೂ ಹಸಿಯಾಗೇ ಉಳಿದಿದ್ದವು. ಜೂನ್‌ 8ರಂದು ಅಂಕಾಲಾಜಿ ರೇಡಿಯಾಲಾಜಿಸ್ಟ್‌ ಡಾ.ಸಂಜಯ ಮಿಶ್ರಾ ಅವರನ್ನು ಭೇಟಿ ಮಾಡಿದೆ. ಜೂನ್‌ 12ಕ್ಕೆ ರೇಡಿಯೇಷನ್‌ ಆರಂಭಿಸುವ, ಅಂದು ಅಡ್ಮಿಟ್‌ ಆಗಿ ಎಂದರು. ಅದಕ್ಕೆ ಪೂರ್ವಭಾವಿಯಾಗಿ ಸ್ಕ್ಯಾನಿಂಗ್‌ಗೆ ರೆಫರ್‌ ಮಾಡಿದ್ರು. ಆ ಸ್ಕ್ಯಾನಿಂಗ್‌ ಮಾಡುವ ಮೊದಲು ಎದೆ ಭಾಗಕ್ಕೆ ಮಾಸ್ಕ್‌ (ಕವಚ) ತಯಾರಿಸಬೇಕಿತ್ತು. ರೇಡಿಯೇಷನ್‌ ರೂಮ್‌ನ ಪಕ್ಕದಲ್ಲಿ ಅದಕ್ಕೆಂದೇ ಒಂದು ಕೊಠಡಿಯಿತ್ತು. ಅಲ್ಲಿದ್ದ ಬೆಡ್‌ ಮೇಲೆ ಅಂಗಾತ ಮಲಗಿಸಿ ಕೈ ತಲೆಯ ಮೇಲ್ಭಾಗದಲ್ಲಿ ಹಿಡಿದುಕೊಳ್ಳಿ ಎಂದರು. ಮೊದಲೇ ಭುಜದಿಂದ ಮೇಲಕ್ಕೆ ಎತ್ತಲಾಗದ ಕೈ. ಈಗ ತಲೆಯ ಹಿಂದೆ ಒಂದು ಕೈಯಿಂದ ಇನ್ನೊಂದು ಕೈಯ ತೋಳನ್ನು ಹಿಡಿಯುವುದು ಎಂದರೆ ಜೀವ ಹೋಯಿತೆಂಬಷ್ಟು ನೋವು. ಎಷ್ಟೇ ಪ್ರಯತ್ನ ಪಟ್ಟರೂ ಬಲಗೈ ಮೇಲಕ್ಕೆ ಹೋಗ್ತಾನೆ ಇಲ್ಲ. ಇನ್ನೂ ಮೇಲೆ ಕೈ ಕಟ್ಟಿ ಎಂದು ಹೇಳಿದ ಮೇಲೆ ಹೇಗೂ ಪ್ರಯತ್ನ ಪಟ್ಟು ತಲೆಹಿಂದೆ ಕೈಗಳನ್ನು ತಂದು ಕಟ್ಟಿ ಹಿಡಿದೆ. ಒಂದೆರಡು ನಿಮಿಷವಲ್ಲ; ಮಾಸ್ಕ್‌ ತಯಾರಿ ಕೆಲಸ ಪೂರ್ತಿ ಆಗೋವರೆಗೂ ಅದೇ ಸ್ಥಿತಿಯಲ್ಲಿ, ಅಲುಗಾಡದಂತಿರಬೇಕು. ನನ್ನೊಳಗಿನ ಶಕ್ತಿ, ಸಂಯಮ, ಪ್ರಯತ್ನ ಎಲ್ಲವನ್ನೂ ಒಟ್ಟುಗೂಡಿಸಿ ಕೈಕಟ್ಟಿ ಧ್ಯಾನಸ್ಥ ಸ್ಥಿತಿಯಲ್ಲಿ ಮಲಗಿದೆ. ಮನಸ್ಸಿದ್ದರೆ ಮಾರ್ಗವೆಂಬುದು ಸುಳ್ಳಲ್ಲ. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಈ ಧ್ಯಾನಸ್ಥ ಸ್ಥಿತಿ ನನ್ನೊಳಗಿನ ಅಸಾಧ್ಯ ನೋವನ್ನು ಮರೆಮಾಚಿತ್ತು. ಅಂತೂ ಅರ್ಧ ತಾಸಿನ ನಂತರ ಮಾಸ್ಕ್‌ ತಯಾರಿ ಮುಗಿಯಿತು.

ನಂತರದ್ದು ಪೆಟ್‌ ಸ್ಕ್ಯಾನಿಂಗ್‌. ಎಷ್ಟು ಸಿಟ್ಟಿಂಗ್‌ನಲ್ಲಿ ರೆಡಿಯೇಷನ್‌ ಕೊಡಬೇಕು, ಯಾವ ಮಟ್ಟದಲ್ಲಿ ಕೊಡಬೇಕು ಎಂಬುದು ಈ ಸ್ಕ್ಯಾನಿಂಗ್‌ ವರದಿ ಆಧರಿಸಿಯೇ ನಿರ್ಧಾರವಾಗುತ್ತದೆ. ಅದೇ ಪೆಟ್‌ ಸ್ಕ್ಯಾನ್‌ ಮಷಿನ್‌ ಬೆಡ್‌ ಮೇಲೆ ತಂದು ಮಲಗಿಸಿದರು. ಸ್ಕ್ಯಾನಿಂಗ್‌ ಪ್ರಕ್ರಿಯೆಯಲ್ಲಿ ಇಂಜೆಕ್ಷನ್‌ ಇತ್ತು. ಕ್ಯಾನುಲಾ ಮಾದರಿಯ ಚಿಕ್ಕ ಉಪಕರಣ ಕೈಗೆ ಅಳವಡಿಸಬೇಕಿತ್ತು. ಬಲಗೈಗೆ ಕೊಡುವಂತಿಲ್ಲ. ಎಡಗೈಯಲ್ಲಿ ನರವೇ ಸಿಗದ ಪರಿಸ್ಥಿತಿ. ಆದರೂ ಎಡಗೈಯಲ್ಲಿ ಆರು ಕಡೆ ಸೂಜಿ ಚುಚ್ಚಿದರು. ಒಂದೊಂದು ಕಡೆ ಚುಚ್ಚುವಾಗಲೂ ಜೀವ ಹೋದಂತಾಗುತ್ತಿತ್ತು. ಕಣ್ಮುಚ್ಚಿ ಮನಸ್ಸನ್ನು ಕಲ್ಲು ಮಾಡಿ ತಡೆದುಕೊಂಡೆ. ಕಣ್ಣಂಚಿನಲ್ಲಿ ನೀರು ಜಾರಿತು. ಆದರೆ ನರ ಸಿಗಲೇ ಇಲ್ಲ. ಇಷ್ಟಾದ ನಂತರ ಕಾಲಿಗೆ ಕೊಡ್ತೀವಿ ಅಂದ್ರು. ಆಯ್ತು ಅಂದೆ. ಬ್ರದರ್‌ ಸಿಸ್ಟರ್‌ ಇಬ್ರು ಸೇರಿ ಕಾಲಿನ ಪಾದದ ಮೇಲ್ಭಾಗದಲ್ಲಿ ನರ ಹುಡುಕಲು ಶುರುವಿಟ್ಟರು. ಅಲ್ಲಿಯೂ ಚುಚ್ಚಿದ್ದು ಒಂದೆರಡು ಕಡೆಗಳಲ್ಲಿ ಅಲ್ಲ; ಸಾಕಷ್ಟು ನೋವನ್ನು ತಡೆದುಕೊಂಡೆ. ಆದರೆ ಅವರು ಆರೇಳು ಕಡೆ ಚುಚ್ಚುತ್ತಲೇ ಇದ್ದಾಗ ತಡೆಯಲಾಗಲಿಲ್ಲ. ಅಯ್ಯೋ ಅನ್ನೋ ಪದ ನನ್ನ ಬಾಯಿಂದ ಬೇಡಾ ಅಂದರೂ ಹೊರಬಿತ್ತು. ನನ್ನ ಆರ್ತನಾದ ಆ ದೇವರಿಗೂ ನೋಡಲಾಗಲಿಲ್ಲವೆನೋ? ಅಂತೂ ಒಂದು ಕಡೆ ನರ ಸಿಕ್ಕಿತು. ಆದರೆ ಇಂಜೆಕ್ಷನ್‌ ಅಂದ್ರೆ ಇನ್ನೂ ಭಯಬೀಳುವಂತಾಯಿತು. ಆ ಮಾಸ್ಕನ್ನು ತೊಡಿಸಿ ಸ್ಕ್ಯಾನಿಂಗ್‌ ಮಾಡಿದರು. ಅಲ್ಲಿ ಕೂಡ 30 ನಿಮಿಷ ಅಲುಗಾಡದೇ ಮಲಗಿರಬೇಕು. ಕೈಗಳನ್ನು ಮೇಲೆ ಕಟ್ಟಿ. ಅಬ್ಬಾ... ಯಾರಿಗೂ ಬೇಡ ಅಂಥ ಸ್ಥಿತಿ. ಅಂತೂ ಸ್ಕ್ಯಾನಿಂಗ್‌ ಮುಗಿಯಿತು. ಆ ಸ್ಕ್ಯಾನಿಂಗ್‌ ರಿಪೋರ್ಟ್‌ ಆಧರಿಸಿ 33 ರೆಡಿಯೇಷನ್‌ ನೀಡಬೇಕು ಎಂಬುದನ್ನು ರೆಡಿಯಾಲಜಿಸ್ಟ್‌ ಅಂಕಾಲೊಜಿ ತಜ್ಞ ಡಾ.ಸಂಜಯ ಮಿಶ್ರಾ ಅಂಕಿತ ಬರೆದರು.

ರೆಡಿಯೇಷನ್‌ ಪ್ರಕ್ರಿಯೆ ನಡೆಯುವಾಗ ಮತ್ತೆ ಕೈಗಳನ್ನು ಮೇಲೆ ಕಟ್ಟಿ ಮಲಗಬೇಕು. ಅದಕ್ಕಾಗಿ ಕೈಗಳನ್ನು ಅನಾಯಾಸವಾಗಿ ಎತ್ತಬೇಕಿರುವುದು ಅನಿವಾರ್ಯ. ಅದಕ್ಕಾಗಿ ಕೈಗಳ ವ್ಯಾಯಾಮ ಮಾಡಲು ಶುರುಮಾಡಿದೆ. ತಲೆಯ ಸುತ್ತ ಕೈಗಳನ್ನು ತಿರುಗಿಸಲು, ಕೈಗಳನ್ನು ಗೋಡೆ ಮೇಲೆ ಇಟ್ಟು ಇನ್ನೂ ಮೇಲಕ್ಕೆ ಜಾರಿಸುತ್ತ ಕೈಗಳನ್ನು ನೇರವಾಗಿಸೋದು ಮಾಡಿದೆ. ಸರ್ಜರಿ ನಂತರ ಗೌನ್‌ ಬಿಟ್ಟರೆ ಬೇರೆ ಯಾವ ಬಟ್ಟೆ ಧರಿಸಲು ಆಗಿರಲಿಲ್ಲ. ಒಂದು ತಿಂಗಳ ನಂತರ ಜೂನ್‌ 10ರಂದು ಗೌನ್‌ ಬಿಟ್ಟು ದೊಡ್ಡ ಅಳತೆಯ ಚೂಡಿದಾರವೊಂದನ್ನು ಧರಿಸಿದೆ.

(ಮುಂದಿನ ವಾರ: ರೆಡಿಯೇಷನ್‌ ರೂಮೊಳಗೆ ಪುಂಗಿನಾದ!)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.