ಇಲ್ಲಿಯವರೆಗೆ...
ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದಂತೆ ರೆಡಿಯಾಲಜಿಸ್ಟ್ ಅಂಕಾಲೋಜಿ ರೆಡಿಯೇಷನ್‌ಗೆ ಮುನ್ನುಡಿ ಬರೆದರು. ರೆಡಿಯೇಷನ್‌ಗೆ ಮೊದಲು ಎದೆಭಾಗದ ರೆಡಿಯೇಷನ್ ಮಾಸ್ಕ್ ಸಿದ್ಧಪಡಿಸಲಾಯಿತು. ಎಂಆರ್‌ಐ ಸ್ಕ್ಯಾನ್ ಮಾಡಿದ ಡಾ.ಸಂಜಯ ಮಿಶ್ರಾ, 33 ರೆಡಿಯೇಷನ್‌ಗೆ ಅಂಕಿತ ಬರೆದರು. ಮುಂದೆ ಓದಿ...
****
ಜೂನ್ 12ರಂದು ಡಾ.ಮಿಶ್ರಾ ಸಲಹೆಯಂತೆ 11 ಗಂಟೆಗೆ ಅಡ್ಮಿಟ್ ಆದೆ. ವಾರದಲ್ಲಿ ಐದು ದಿನ ರೆಡಿಯೇಷನ್ ನೀಡುತ್ತಿದ್ದರು. ಅವರ ಪ್ರಕಾರ ನಾನು ನನ್ನ ರೆಡಿಯೋಥೆರಫಿಯ 33 ಸಿಟ್ಟಿಂಗ್ ಮುಗಿಯುವವರೆಗೂ ಆಸ್ಪತ್ರೆಯಲ್ಲೇ ಅಡ್ಮಿಟ್ ಇರಬೇಕು. ಈ ಮಾತು ಕೇಳಿದ ತಕ್ಷಣ ನಾನು ಯೋಚನೆಗೆ ಬಿದ್ದೆ. 33 ರೆಡಿಯೇಷನ್ ಅಂದರೆ ಏನಿಲ್ಲವೆಂದರೂ ಒಂದೂವರೆ ತಿಂಗಳು ಆಸ್ಪತ್ರೆಯಲ್ಲೇ ಇರಬೇಕಾ? ಸಾಧ್ಯವೇ ಇಲ್ಲ ಎಂದೆ. ನನ್ನ ಪ್ಲಾನ್ ಏನಿತ್ತು ಅಂದರೆ ಪ್ರತಿನಿತ್ಯ ಬೆಳಿಗ್ಗೆ ರೆಡಿಯೇಷನ್‌ಗೆ ಮುಗಿಸಿಕೊಂಡು ನಂತರ ಕಚೇರಿಗೆ ಹೋಗುವುದು ಎಂದಿತ್ತು.
ಇದೇ ಕಾರಣ ಮುಂದಿಟ್ಟು ಡಾ.ಮಿಶ್ರಾ ಅವರಿಗೆ ಹೇಳಿದೆ– ‘ನಾನು ಮನೆಯಿಂದಲೇ ಬಂದು ಹೋಗುವೆ. ಆಡ್ಮಿಟ್ ಇರಲು ಆಗದು‘ ಎಂದು. ಅದಕ್ಕವರು ಹೇಳಿದ್ದೇನೆಂದರೆ, ‘ರೆಡಿಯೇಷನ್ ತೆಗೆದುಕೊಳ್ಳುವಾಗ ಸಾಕಷ್ಟು ಅಡ್ಡಪರಿಣಾಮಗಳು ಆಗುತ್ತಿರುತ್ತವೆ. ಆ ಅಡ್ಡ ಪರಿಣಾಮಕ್ಕೆ ಮೂರ್ನಾಲ್ಕು ಬಗೆಯ ಗುಳಿಗೆಗಳನ್ನು ನೀಡಲಾಗುವುದು. ಅವು ತುಂಬಾ ದರದ ( ಒಂದೊಂದು ಟ್ಯಾಬ್ಲೆಟ್ 500–600 ರೂಪಾಯಿ) ಗುಳಿಗೆಗಳು. ದಿನಕ್ಕೆ ಒಂದೊಂದು ಟ್ಯಾಬ್ಲೆಟ್ ಮೂರು ಹೊತ್ತು/ಎರಡು ಹೊತ್ತು ತೆಗೆದುಕೊಳ್ಳಬೇಕು. ನೀವು ಇಎಸ್‌ಐ ಪೇಷಂಟ್ ಆಗಿರೋದ್ರಿಂದ ಆಸ್ಪತ್ರೆಯಲ್ಲಿ ಎಡ್ಮಿಟ್ ಇದ್ದರೆ ಮಾತ್ರ ಅದು ನಿಮಗೆ ಉಚಿತವಾಗಿ ಸಿಗುತ್ತದೆ. ಇಲ್ಲವೆಂದರೆ ಗುಳಿಗೆಗಳನ್ನು ನೀವೇ ಹಣ ಕೊಟ್ಟು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಅನುಕೂಲಕ್ಕೆ ಹೇಳಿದ್ದು. ನೋಡಿ ಯೋಚನೆ ಮಾಡಿ’ ಎಂದರು. ‘ಸರಿ, ಇವತ್ತು ಒಂದು ದಿನ ಎಡ್ಮಿಟ್ ಇದ್ದು, ನಾಳೆಯಿಂದ ಮನೆಯಿಂದಲೇ ಓಡಾಡುವೆ. ನಾನು ಜುಲೈ 1ರಿಂದ ಕಚೇರಿ ಕೆಲಸಕ್ಕೆ ಹೋಗಬೇಕು. ಆದ್ದರಿಂದ ಇಲ್ಲಂತು ಎಡ್ಮಿಟ್ ಇರಲು ಸಾಧ್ಯವಿಲ್ಲ. ಬೆಳಿಗ್ಗೆ 6 ಗಂಟೆಗೆ ನನಗೆ ರೆಡಿಯೇಷನ್ ಪಡೆಯಲು ಟೈಮ್ ಫಿಕ್ಸ್ ಮಾಡಿ’ ಎಂದೆ. ಅದಕ್ಕೆ, ಆಯ್ತು ನಿಮ್ಮಷ್ಟ ಎಂದರು ಡಾ.ಮಿಶ್ರಾ.
ನಾನು ಜನರಲ್ ವಾರ್ಡ್‌ನಲ್ಲಿ ಎಡ್ಮಿಟ್ ಆದೆ. ನನ್ನ ಜೊತೆ ಚಿಕ್ಕಮ್ಮ ಉಳಿದರು. ನನ್ನ ಹಾಗೇ 12 ಮಂದಿ ಆ ವಾರ್ಡ್‌ನಲ್ಲಿ ಎಡ್ಮಿಟ್ ಇದ್ದಿದ್ದರು. ಹೆಚ್ಚಿನವರೆಲ್ಲ ಇಎಸ್‌ಐ ಪೇಷಂಟ್‌ಗಳೇ ಆಗಿದ್ದರು. ಎಲ್ಲರೂ ಹುಬ್ಬಳ್ಳಿಯಿಂದ ಹೊರ ಊರಿನವರೇ ಆಗಿದ್ದರು. ಒಬ್ಬ ಮಹಿಳೆಯ ಎಡ ಕೈ ತೊಡೆಯಷ್ಟು ದಪ್ಪವಾಗಿತ್ತು. ಸಲೈನ್ ಏರಿಸಿ ಮಲಗಿಸಿದ್ದರು. ಅದೇನಾಗಿದೆ ಎಂದು ಆಯಮ್ಮಗೆ ಕೇಳಿದೆ. ‘ಎಡಭಾಗದಲ್ಲಿ ಕ್ಯಾನ್ಸರ್ ಬಂದು ಎದಿ ತೆಗೆದಾರ. ಅದರ ನಂತ್ರ ಹಿಂಗ್ ದಪ್ಪ ಆತ್ ನೋಡ್ರಿ’ ಎಂದರು. ಅವರ ಮಾತನ್ನು ಕೇಳಿ ನನ್ನ ಚಿಕ್ಕಮ್ಮ ‘ಅಯ್ಯೋ ಹೀಗೆಲ್ಲ ಆಗುತ್ತ... ’ಎಂದು ಯೋಚನೆಗೆ ಬಿದ್ದರು. ಅಷ್ಟೇ ಹೊತ್ತಿಗೆ ಡಾ. ಮಿಶ್ರಾ ವಾರ್ಡ್ ವಿಸಿಟ್‌ಗೆ ಬಂದರು. ಅಲ್ಲಿದ್ದ ಸ್ತನ ಕ್ಯಾನ್ಸರ್ ರೋಗಿಗಳನ್ನು ಉದ್ದೇಶಿಸಿ ಹೇಳಿದರು. ‘ಸ್ತನ ಕ್ಯಾನ್ಸರ್ ಸರ್ಜರಿಗೆ ವೇಳೆ ಸ್ತನಭಾಗದ ನೋಡ್ಸ್ ತೆಗೆದುಹಾಕುವುದರಿಂದ ಆ ಭಾಗದ ಕೈಗೆ ವ್ಯಾಯಾಮ ಮಾಡಿಸದಿದ್ದರೆ ಕೈ ದಪ್ಪವಾಗುತ್ತದೆ. ಏನಿಲ್ಲವೆಂದರೂ ದಿನಕ್ಕೆ ನಾಲ್ಕೈದು ಬಾರಿ ವ್ಯಾಯಾಮ ಮಾಡಲೇಬೇಕು. ಇಲ್ಲವಾದರೆ ಹೀಗೆ ಆಗುತ್ತೆ’ ಎಂದು ಆ ಮಹಿಳೆಯನ್ನು ತೋರಿಸಿ ಹೋದರು. ಅದನ್ನು ನೋಡಿದ್ದೇ ನಮ್ಮ ಚಿಕ್ಕಮ್ಮನಿಗೆ ತಲೆಬಿಸಿಯಾಗಿದ್ದು ಅವರ ಮೊಗದಲ್ಲೇ ಕಾಣಿಸಿತು.
ಮಧ್ಯಾಹ್ನವಾಯಿತು. ರೆಡಿಯೇಷನ್‌ಗೆ ಕರಿಲೇ ಇಲ್ಲ. 5 ಗಂಟೆಗೆ ನನ್ನ ಪಾಳಿ ಬಂದಿತು. ಎಚ್‌ಸಿಜಿಯ ರೆಡಿಯೇಷನ್ ವಿಭಾಗಕ್ಕೆ ಅಲ್ಲಿಯವರು ಮಾತ್ರವಲ್ಲ; ಬೇರೆ ಬೇರೆ ಕಡೆಗಳಿಂದ ರೋಗಿಗಳು ಬರುತ್ತಿದ್ದರು. ಅವರಿಗೆಲ್ಲ ಒಂದು ಟೈಮ್ ಫಿಕ್ಸ್ ಮಾಡಿದ್ದರಿಂದ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೂ ನಿರಂತರವಾಗಿ ರೆಡಿಯೇಷನ್ ಪ್ರಕ್ರಿಯೆ ನಡೆಯುತ್ತಲೇ ಇತ್ತು.
ರೆಡಿಯೇಷನ್ ಅನ್ನೋದು ನನಗೆ ತಲೆಬುಡ ಗೊತ್ತಿಲ್ಲ. ಹೇಗೋ ಏನೋ. ಕೆಲವರು ಶಾಕ್ ಟ್ರೀಟ್‌ಮೆಂಟ್ ಅಂತಿದ್ರು. ನನಗೆ ಮನದೊಳಗೆ ಗೊಂದಲ, ಕುತೂಹಲ. ಅದು ಏನು ಅನ್ನೋದು ರೆಡಿಯೇಷನ್ ರೂಮಿನೊಳಗೆ ವಿಧ್ಯುಕ್ತವಾಗಿ ಪ್ರವೇಶಿಸಿದಾಗಲೇ ಗೊತ್ತಾಗಿದ್ದು. ವಿಕಿರಣ ವಲಯ; ಅಪಾಯ, ಪ್ರವೇಶ ನಿಷೇಧ ಎಂಬ ಎಚ್ಚರಿಕೆಯ ಫಲಕ ನನಗಲ್ಲಿ ಅಪ್ಲೈ ಆಗಲಿಲ್ಲ. ಏಕೆಂದರೆ ನನಗೆ ವಿಕಿರಣವೇ ಮದ್ದಾಗಿತ್ತು.
ರೆಡಿಯೇಷನ್ ರೂಮಿನೊಳಗೆ ತಲೆ ಎತ್ತಿ ನೋಡೋವಂಥ ದೊಡ್ಡ ದೊಡ್ಡ ಯಂತ್ರಗಳನ್ನು ಪೇರಿಸಿಟ್ಟಿದ್ದರು. ಅಬ್ಬಾ ಅನಿಸಿತು. ಬೆಡ್ ಮೇಲೆ ಬ್ರೆಸ್ಟ್ ಬೋರ್ಡ್ ಇಟ್ಟು ಅದರ ಮೇಲೆ ನನ್ನ ಮಲಗಿಸಿ, ಕೈಗಳನ್ನು ತಲೆಯ ಮೇಲ್ಭಾಗಕ್ಕೆ ತಂದು ಗಟ್ಟಿಯಾಗಿ ಹಿಡಿಯಲು ಹೇಳಿದರು. ಅದನ್ನು ಮಾಡೋಡು ಅಷ್ಟು ಸುಲಭವೆನಿಸಲಿಲ್ಲ. ಆದರೂ ನಾನದಕ್ಕೆ ಮಾನಸಿಕವಾಗಿ ಸಿದ್ಧಳಾಗೇ ಬಂದಿದ್ದೆ. ಮನದೊಳಗಿನ ಕಸುವನ್ನೆಲ್ಲ ಒಟ್ಟು ಮಾಡಿ ನೋವು ತಡೆದು ಕೈ ಕಟ್ಟಿದೆ. ಎದೆ ಭಾಗಕ್ಕೆ ಈ ಮೊದಲು ತಯಾರಿಸಿದ್ದ ಚೆಸ್ಟ್ ಮಾಸ್ಕ್ ಫಿಕ್ಸ್ ಮಾಡಿದರು. ನಾನು ಮಲಗಿದ್ದ ಬೆಡ್ ಮೇಲಮೇಲಕ್ಕೆ ಏರಿತು. ರೂಮಿನಲ್ಲಿ ಲೈಟ್ ತೆಗೆದರು. ಕೆಂಪು ಮಾರ್ಕರ್ ಪಾಯಿಂಟ್‌ಗಳನ್ನು ಆಧರಿಸಿ ವಿಕಿರಣ ಎಲ್ಲೆಲ್ಲಿ ತೂರಬೇಕು ಅಲ್ಲೆಲ್ಲ ರೆಡಿಯೇಷನ್ ಮಷಿನ್ ಚಲಿಸುವಂತೆ ಅಡ್ಜಸ್ಟ್ ಮಾಡಿದರು. ಮತ್ತೆ ಲೈಟ್ ಹಾಕಿ ಮಷಿನ್‌ಗಳನ್ನು ಚೆಕ್ ಮಾಡಿದರು. ಅದಕ್ಕೆ ಇಬ್ಬಿಬ್ಬರಿಗೆ 10 ನಿಮಿಷವೇ ಬೇಕಾಯ್ತು. ಅದಾದ ನಂತರ ಲೈಟ್ ಆಫ್ ಮಾಡಿ ರೂಮಿನ ಬಾಗಿಲು ಎಳೆದುಕೊಂಡು ಹೊರಟು ಹೋದರು. ಎಸಿ ಇರೋದ್ರಿಂದ ಅಲ್ಲಿನ ವಾತಾವರಣಕ್ಕೆ ಮೈ ಕೊರೆಯುವಂತಿತ್ತು. ಯಾರೊಬ್ಬರೂ ಇಲ್ಲ; ಕೊರೆಯುವ ಕತ್ತಲ ಕೋಣೆಯೊಳಗೆ ನಾನೊಬ್ಬಳೇ ಮಲಗಿದ್ದೆ. ಆಗ ಅನ್ನಿಸಿದ್ದು ಏನಂದ್ರೆ, ‘ನಾವಾದ್ರೆ ದೊಡ್ಡವರು. ಎಲ್ಲಿಯಾದರೂ ಮಕ್ಕಳಿಗೆ ರೆಡಿಯೇಷನ್ ನೀಡಬೇಕಾದ ಸಂದರ್ಭದಲ್ಲಿ ಹೇಗಪ್ಪಾ’ ಅಂತ. ಇವೆಲ್ಲ ಯೋಚನೆಗಳ ಹೊದ್ದು ಮಲಗಿದೆ. ರೆಡಿಯೇಷನ್ ಪ್ರಕ್ರಿಯೆಯನ್ನು ಪಕ್ಕದ ರೂಮಿನಲ್ಲಿ ಕಂಪ್ಯೂಟರ್ ಸ್ಕ್ರೀನ್ ಮೇಲೆ ಪರಿಶೀಲಿಸುವರು ಎಂಬುದನ್ನು ಮೊದಲೇ ಗಮನಿಸಿದ್ದೆ.
ಆ ರೆಡಿಯೇಷನ್ ಒಂಥರಾ ಮಜಾ ಅನಿಸಿತು. ಒಂದಷ್ಟು ಹೊತ್ತು ಟ್ಯೂಂ ಟ್ಯೂಂ ಎಂಬ ಶಬ್ದ, ನಂತರ ಪುಂಗಿಯ ನಾದದ ಶಬ್ದ, ನಂತರ ಹಾವು ಬುಸುಗುಟ್ಟಂತೆ ಶಬ್ದ ಮಾಡುತ್ತ, ಆರು ಕೋನಗಳಲ್ಲಿ ವಿಕಿರಣ ಸೂಸುತ್ತ 15 ನಿಮಿಷದವರೆಗೆ ತನ್ನ ಕೆಲಸ ಮಾಡಿ ಸುಮ್ಮನಾಯಿತು. ಅರೇ ಶಾಕು ಹೊಡಿಲಿಲ್ಲ. ಬಿಸಿಯೂ ತಾಗಲಿಲ್ಲ. ಐದು ನಿಮಿಷ ಬಿಟ್ಟು ಬಾಗಿಲು ತೆರೆದ ಸದ್ದು ಕೇಳಿತು. ಆ ಇಬ್ಬರು ಸಿಸ್ಟರ್, ಬ್ರದರ್ ಬಂದು ನನ್ನನ್ನು ರೆಡಿಯೇಷನ್ ಬೆಡ್‌ನಿಂದ ಎಬ್ಬಿಸಿ, ನಾಳೆ ಇದೇ ಸಮಯಕ್ಕೆ ಬನ್ನಿ ಎಂದು ಹೇಳಿ ಕಳುಹಿಸಿದರು. ಇಂಥ ಒಟ್ಟೂ 33 ರೆಡಿಯೇಷನ್ ನನ್ನ ದೇಹವನ್ನು ಹಾಯಬೇಕು. ವಾರಕ್ಕೆ ಐದು ದಿನಗಳಂತೆ ಒಟ್ಟ 33 ರೆಡಿಯೇಷನ್ ಆಗಬೇಕಿತ್ತು.
ರೆಡಿಯೋಥೆರಪಿ ವೇಳೆ ಸೇವಿಸಲು ಗುಳಿಗೆಗಳನ್ನು ನೀಡಿದರು. ಒಂದು ಬಗೆಯ 30 ಗುಳಿಗೆಗೆ 15,000 ರೂಪಾಯಿ, ಮತ್ತೊಂದು ಬಗೆಯ ಗುಳಿಗೆಗೆ 10ಕ್ಕೆ 650 ರೂಪಾಯಿ. ನಂತರ ಒಂದು ಐಡಿ ಕಾರ್ಡ್ ಹಾಗೂ 33 ರೆಡಿಯೇಷನ್ ದಾಖಲಿಸುವ ಒಂದು ಚಾರ್ಟ್ ಕೊಟ್ಟು, ಇದನ್ನು ನಿತ್ಯವೂ ಬರುವಾಗ ತರಬೇಕು ಎಂದರು. ಇದಕ್ಕೆ ನಿಮ್ಮದೊಂದು ಫೋಟೊ ಬೇಕು, ಕೊಡಿ ಎಂದರು. ನಿತ್ಯವೂ ಬೆಳಿಗ್ಗೆ 6.30ಕ್ಕೆ ಬನ್ನಿ ಎಂದು ರೆಡಿಯೇಷನ್ ವಿಭಾಗದವರು ಟೈಮ್ ಫಿಕ್ಸ್ ಮಾಡಿದರು. ರಾತ್ರಿ ಅದೇ ಜನರಲ್ ವಾರ್ಡ್‌ನಲ್ಲಿ ಕಳೆದದ್ದಾಯ್ತು. ನನ್ನ ಚಿಕ್ಕಮ್ಮಗೆ ನಿದ್ದೆಯೇ ಬರಲಿಲ್ಲ. ಹೇಗೋ ಇರುಳು ಹರಿದು ಬೆಳಗಾಯಿತು. ಬೆಳಿಗ್ಗೆ 6.30ಕ್ಕೆ ರೆಡಿಯೇಷನ್‌ಗೆ ಬುಲಾವ್ ಬಂತು. ಹೋಗುವಾಗ ನನ್ನ ಹತ್ತಿರವಿದ್ದ ಮೊದಲಿನ ಪಾಸ್‌ಪೋರ್ಟ್ ಸೈಜ್ ಫೋಟೊ ನೀಡಿದೆ. ಇದಲ್ಲರಿ ಎಂದರು. ಆ ಫೋಟೊ ಕಿಮೊಥೆರಪಿಗೆ ಮುಂಚಿನದ್ದಾಗಿದ್ದರಿಂದ ಕೂದಲಿತ್ತು. ಆದರೆ ಈಗ ಫುಲ್ ಬಾಲ್ಡಿಯಾಗಿತ್ತು. ಅದಕ್ಕೆ ಕನ್‌ಫ್ಯೂಸ್ ಆಗಿ ಹೇಳಿದ್ರೆನೋ ಎಂದು ತಿಳಿದು ‘ಇದು ನನ್ನದೇ ಫೋಟೊ’ ಅಂದೆ. ‘ಇರ್ಬಹುದು; ನಮಗೆ ನಿಮ್ಮ ಈಗಿನ ಫೋಟೊ ಬೇಕು’ ಅಂದರು. ಅರ್ಥವಾಯ್ತು. ನನ್ನ ಬೋಳು ತಲೆಯ ಫೋಟೊ ಬೇಕಿತ್ತು. ನಾಳೆ ಬರುವಾಗ ಫೋಟೊ ತರ್ತೇನೆ ಎಂದು ಹೇಳಿದೆ. ಎರಡನೇ ರೆಡಿಯೇಷನ್ ಮುಗಿಸಿಕೊಂಡು ಹೊರಡುವಾಗ ಅಲ್ಲಿದ್ದವರನ್ನು ಕೇಳಿದೆ. ‘ರೆಡಿಯೇಷನ್ ನಂತರ ಸ್ನಾನ ಮಾಡಬಹುದಾ’ ಎಂದು. ಮಾಡಿ ತೊಂದರೆ ಇಲ್ಲ ಎಂದರು. ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬರುವಾಗ ಮಧ್ಯಾಹ್ನವಾಗಿತ್ತು. ಬಂದವಳೇ ಸ್ವಲ್ಪ ಬಿಸಿಬಿಸಿ ನೀರು ಮೈಗೆ ಸುರಿವಿಕೊಂಡೆ. ರೆಡಿಯೇಷನ್ ಮಾಡಿದ ಭಾಗದಲ್ಲೆಲ್ಲ ಉರಿಯಲು ಶುರುವಿಟ್ಟಿತು. ಬಿಸಿ ನೀರು ಹಾಕಿದ್ದಕ್ಕೆ ಉರಿಯುತ್ತಿದೆಯೆನೋ ಎಂದು ಸುಮ್ಮನಾದೆ.
ನನ್ನ ಮೊಬೈಲ್‌ನಲ್ಲಿ ನಾನೇ ಸೆಲ್ಪಿ ಹೊಡೆದು ನನಗೆ ಪರಿಚಯವಿರುವ ಆನಂದ ಸ್ಟುಡಿಯೋ ಅವರ ವಾಟ್ಸ್‌ಆ್ಯಪ್‌ಗೆ ಸೆಂಡ್ ಮಾಡಿದೆ. ಅವರಿಗೆ ಫೋಟೊ ಯಾರದ್ದು ಅಂತ ಗೊತ್ತಾಗತ್ತೋ ಇಲ್ಲವೋ ಎಂದು ಮತ್ತೆ ಫೋನ್ ಮಾಡಿದೆ. ‘ಆನಂದ್. ನಿಮಗೆ ಕಳಿಸಿದ್ದು ನನ್ನದೇ ಫೋಟೊ. ಅರ್ಜೆಂಟ್ ಪ್ರಿಂಟ್ ಹಾಕಿಸಿ. ನಮ್ಮನೆಯವರು ಬಂದು ಕಲೆಕ್ಟ್ ಮಾಡ್ತಾರೆ’ ಎಂದೆ. ಅರ್ಧ ತಾಸಿನಲ್ಲೇ ಫೋಟೊ ನನ್ನ ಕೈಸೇರಿತು.
ಬೆಳಿಗ್ಗೆ 5.30ಕ್ಕೆ ಎದ್ದು, ನಿತ್ಯಕರ್ಮ ಪೂರೈಸಿ, ಆಸ್ಪತ್ರೆಗೆ ಹೊರಟೆ. ಮನೆಯಿಂದ ಆಸ್ಪತ್ರೆಗೆ ಒಂದೂವರೆ ಕಿ.ಮೀ ಅಂತರವಷ್ಟೆ. ಗಿರೀಶ ಸ್ಕೂಟರ್ ಮೇಲೆ ಕರ್ಕೊಂಡು ಹೋಗುತ್ತಿದ್ದರು. ಆ ರಸ್ತೆಯಲ್ಲೋ ಹೊಂಡಗಳದ್ದೇ ರಾಶಿ. ಸ್ಕೂಟರ್ ಹೊಂಡದಲ್ಲಿಳಿದಾಗ ಅಸಾಧ್ಯ ನೋವು. ಸರ್ಜರಿ ಮಾಡಿದ ಜಾಗದಲ್ಲಿ ಗಾಯ ಬಾಯಿತೆರೆದುಕೊಂಡಿತೆನೋ ಅನ್ನುವಷ್ಟು ವೇದನೆ. ಅದರಲ್ಲೂ ಸಣ್ಣನೆಯ ಮಳೆ. ಲೆಕ್ಕವಿಲ್ಲದಷ್ಟು ಹೊಂಡದಲ್ಲಿಳಿದು ಎದ್ದು ಹೋಗುವ ಸ್ಕೂಟರ್‌ನಲ್ಲಿ ನನ್ನ ನಿತ್ಯದ ರೆಡಿಯೇಷನ್ ಪಯಣ ಸಾಗಿತ್ತು. 6ಕ್ಕೆ ಮನೆ ಬಿಟ್ಟರೆ ವಾಪಸ್ ಬರುವಾಗ 8 ಗಂಟೆಯಾಗುತ್ತಿತ್ತು. ಬಂದ ತಕ್ಷಣ ಸ್ನಾನಕ್ಕೆ ಬಂದೆ. ರೆಡಿಯೇಷನ್ ಮಾಡಿದ ಜಾಗದಲ್ಲಿ ಕೆಲವು ಕಡೆ ಸಣ್ಣ ಸಣ್ಣ ಬೊಕ್ಕೆಗಳು ಎದ್ದಿದ್ದವು. ಬಿಸಿನೀರು ಸುರಿದುಕೊಳ್ಳುತ್ತಲೇ ಉರಿಯಲು ಶುರುವಾಯಿತು. ಇದೇ ರೆಡಿಯೇಷನ್‌ನ ನಿಜವಾದ ರೂಪ ಅನ್ನೋದು ಆಗ ಗಮನಕ್ಕೆ ಬಂದಿತು.
ಜೂನ್ 19ರಂದು ಡಾ.ಪ್ರಸಾದ ಹಾಗೂ ಡಾ.ಸಂಜಯ ಮಿಶ್ರಾ ಅವರನ್ನು ಭೇಟಿಯಾದೆ. ಡಾ.ಪ್ರಸಾದ ಹೇಳಿದ್ರು, ಪ್ಲಾನ್ ಪ್ರಕಾರ ರೆಡಿಯೇಷನ್ ಜೊತೆ ಜೊತೆಗೆ ವಿವಿಟ್ರಾ ಇಂಜೆಕ್ಷನ್ ಶುರುಮಾಡೋಣ. 21 ದಿನಗಳಿಗೊಂದರಂತೆ ಒಂದು ವರ್ಷದವರೆಗೆ ಈ ಇಂಜೆಕ್ಷನ್ ತಗೋಬೇಕು ಅಂದ್ರು. ಒಂದೊಂದು ಇಂಜೆಕ್ಷನ್‌ಗೆ 60,000 ರೂಪಾಯಿ ಆಗುತ್ತೆ ಅಂದ್ರು. ಈಗಾಗಲೇ ಆ ಇಂಜೆಕ್ಷನ್‌ಗಾಗಿಯೇ ಪೋರ್ಟ್ ಅಳವಡಿಸಲಾಗಿತ್ತು.
ನಾನು ಮನಸ್ಸಲ್ಲೇ ಲೆಕ್ಕಾ ಹಾಕಿದೆ. 21 ದಿನಕ್ಕೆ ಒಂದೊಂದು ಇಂಜೆಕ್ಷನ್ ಅಂದ್ರೂ 18 ಇಂಜೆಕ್ಷನ್. ಒಂದಕ್ಕೆ 60ಸಾವಿರ ಅಂದ್ರೆ 10.80 ಲಕ್ಷವಂತೂ ಬೇಕೆಬೇಕು. ಈಗಾಗಲೇ ಸಾಕಷ್ಟು ಸಾಲ ಆಗಿದೆ. ಇನ್ನೂ 10 ಲಕ್ಷ ಅಂದ್ರೆ ಕಷ್ಟವೇ ಎಂದಿತು ಮನಸ್ಸು.
ಡಾಕ್ಟರ್ ಮುಂದೆ ನನ್ನ ಪ್ರಶ್ನೆ ಇಟ್ಟೆ. ‘ಈ ಇಂಜೆಕ್ಷನ್ ತಗೊಂಡರೆ ಕ್ಯಾನ್ಸರ್ ಮತ್ತೆ ಬರೋದೇ ಇಲ್ವಾ. ಅಷ್ಟು ಗ್ಯಾರಂಟಿ ಕೊಡ್ತಿರಾ’ ಎಂದು ಕೇಳಿದೆ. ಅದಕ್ಕವರು, ‘ಹಾಗೆ ಗ್ಯಾರಂಟಿ ಕೊಡೊಕಾಗಲ್ಲ. ಬರೋದೆ ಇಲ್ಲ ಅಂತಾ ಖಚಿತವಾಗಿ ಹೇಳೋಕಾಗಲ್ಲ. ಮತ್ತೆ ಬರಲೂ ಬಹುದು’ ಎಂದರು. ನಿಮ್ಗೆ ಇಎಸ್‌ಐ ಇದ್ರೆ ತಗೊಳ್ಳಿ, ಇಲ್ಲಾಂದ್ರೆ ಬಿಡಿ ಎಂದರು.
‘ಅದ್ರಿಂದ ಸೈಡ್ ಇಫೆಕ್ಟ್ ಇದ್ಯಾ’ ಎಂದು ಕೇಳಿದೆ. ‘ಹಾರ್ಟ್ ಮೇಲೆ ಅಡ್ಡಪರಿಣಾಮ ಬೀರಬಹುದು’ ಎಂದರು.
ನನಗೋ ಮನಸ್ಸಿಗೆ ಕಸಿವಿಸಿಯಾಯಿತು. ಡಾಕ್ಟರ್ ಯಾಕೆ ಹೀಗೆಂದ್ರು. ಇಎಸ್‌ಐ ಇದ್ರೆ ತಗೊಳ್ಳಿ, ಬೇಡ ಅಂದ್ರೆ ಬಿಡಿ ಅಂದ್ರಲ್ಲ. ಅದರಲ್ಲೂ ಹಾರ್ಟ್‌ಗೆ ತೊಂದರೆ ಅಂದ ಮೇಲೆ ಊದೋದು ಹೋಗಿ ಬಾರ್ಸೋದು ತಂದಂಗೆ ಅಂತಾರಲ್ಲ; ಹಾಗಾದ್ರೆ... ಅಂತ ಮನಸ್ಸು ಯೋಚಿಸಿತು. ಯಾವುದನ್ನು ಯೋಚಿಸಿ ಹೇಳ್ತೇನೆ ಡಾಕ್ಟರ್ ಎಂದು ಅವರ ಚೇಂಬರ್‌ನಿಂದ ಹೊರಬಿದ್ದೆ. ಅಲ್ಲೇ ಪಕ್ಕದ ಡಾ.ಮಿಶ್ರಾ ಅವರ ಚೇಂಬರ್‌ಗೆ ಹೋದೆ. ಅವರಿಗೆ ರೆಡಿಯೇಷನ್ ಜಾಗದಲ್ಲಿ ಗುಳ್ಳೆ ಬಂದಿರುವುದನ್ನು ತೋರಿಸಿದೆ. ‘ಇದೆಲ್ಲ ರೆಡಿಯೇಷನ್ ಸೈಡ್ ಇಫೆಕ್ಟ್’ ಎಂದವರೇ, ಮತ್ತಷ್ಟು ಮಾತ್ರೆ ಬರೆದುಕೊಟ್ರು. ಅವೆಲ್ಲ ದುಬಾರಿ ಗುಳಿಗೆಗಳು. ಜೊತೆಜೊತೆಗೆ ಈ ಟ್ಯಾಬ್ಲೆಟ್ಸ್ ನಾಟ್ ಮಸ್ಟ್ ಅಂತಾನೂ ಹೇಳಿದ್ರು.
ಈ ಆಸ್ಪತ್ರೆಗಳೆಲ್ಲ ಯಾಕಿಷ್ಟು ಕಮರ್ಷಿಯಲ್ ಆಗ್ತಿವೆ ಅನ್ನಿಸಿತು. ಡ್ರಗ್ ಮಾಫಿಯಾ ಎದ್ದು ತೋರಿತು. ಮನೆಗೆ ಬರುವವರೆಗೂ ತಲೆಯಲ್ಲಿ ಇವೇ ಎಲ್ಲ ಗಿರಕಿ ಹೊಡೆಯುತ್ತಿದ್ದವು. ವಿವಿಟ್ರಾ ಇಂಜೆಕ್ಷನ್ ತಗೊಳ್ಳಲೋ ಬೇಡ್ವೋ ಎಂದು.
ಅಂತೂ ಸಂಜೆ ವೇಳೆ ಒಂದು ನಿರ್ಧಾರಕ್ಕೆ ಬಂದೆ. ಅದೆಂದರೆ ಒಂದು ವರ್ಷದ ಇಂಜೆಕ್ಷನ್ ಡ್ರಾಪ್ ಮಾಡೋದು. ಒಂದು ಹಂತದ ಚಿಕಿತ್ಸೆಯಂತೂ ಮುಗಿತಲ್ಲ. ಇನ್ನು ಕ್ಯಾನ್ಸರ್ ಮತ್ತೆ ನನ್ನತ್ತ ಸುಳಿಯದಂತೆ ಮಾಡಲು ಆಯುರ್ವೇದದ ಮೊರೆ ಹೋದರಾಯಿತು ಎಂದು ನಿರ್ಧರಿಸಿದೆ. ನನ್ನ ನಿರ್ಧಾರಕ್ಕೆ ಅಮ್ಮ, ಚಿಕ್ಕಮ್ಮ ಸಮ್ಮತಿ ಸೂಚಿಸಿದರು. ಇಲ್ಲಿ ಇಂಜೆಕ್ಷನ್ ಅನ್ನು ಡ್ರಾಫ್ ಮಾಡಿದ್ದು ನನ್ನ ಸ್ವಂತ ನಿರ್ಧಾರದ ಮೇಲಾಗಿತ್ತು. ಕ್ಯಾನ್ಸರ್ ಎಂಬ ಹೆಸರಿಗೇ ಜನರು ಯಾಕೆ ಹೆದರಿ ಸಾಯ್ತಾರೆ ಅನ್ನೋದಕ್ಕೆ ನನಗೆ ಇಲ್ಲಿ ಉತ್ತರ ಸಿಕ್ಕಿತ್ತು. ಕ್ಯಾನ್ಸರ್‌ಗೆ ದುಬಾರಿ ಚಿಕಿತ್ಸೆ ಪಡೆಯೋದು ಬಡವರಿಂದ ಹೇಗೆ ಸಾಧ್ಯ? ನನ್ನಂತ ಮಿಡ್ಲ್ ಕ್ಲಾಸ್‌ನವರಿಗೆ ಹೀಗೆ. ಪಾಪ ಬಡವರಿಗೆ ಈ ಕಾಯಿಲೆ ಬಂದರೆ ದೇವರೇ ಗತಿ ಎಂದೆನಿಸಿತು. ಕ್ಯಾನ್ಸರ್ ಟ್ರೀಟ್‌ಮೆಂಟ್, ಟ್ಯಾಬ್ಲೆಟ್ ಎಲ್ಲದರ ಹಿಂದೆಯೂ ಡ್ರಗ್ ಮಾಫಿಯಾದ ಕರಾಳ ಛಾಯೆ ಎದ್ದು ತೋರಿತು.
ಜೂನ್ 24ರಂದು 10 ರೆಡಿಯೇಷನ್ ಮುಗಿಯಿತು. ಎದೆಭಾಗದಲ್ಲಿ ಒಂಥರಾ ಜಗ್ಗಿದ ಅನುಭವ. ಸರ್ಜರಿ ಮಾಡಿದ ಭಾಗವೆಲ್ಲ ಎಳೆದು ಹಿಡಿದ ಹಾಗಿತ್ತು. ವ್ಯಾಯಾಮ ಮಾಡಲೂ ಕಷ್ಟವೆನಿಸಿತು. ರೆಡಿಯೇಷನ್ ಹಾಯಿಸಿದ ಭಾಗದ ಚರ್ಮವೆಲ್ಲ ಕಪ್ಪಿಟ್ಟಿತು. ಬಿಸಿನೀರು ಸ್ನಾನ ಮಾಡುವಾಗ ಉರಿಉರಿ. ಜುಲೈ 1ಕ್ಕೆ ಆಫೀಸ್‌ಗೆ ಹೋಗಬೇಕಿತ್ತು. ಜೂನ್ 27ಕ್ಕೆ ಮತ್ತೆ ಆಸ್ಪತ್ರೆಗೆ ಹೋದೆ. ಡಾ. ಪ್ರಸಾದ ಅವರ ಹತ್ತಿರ ನಾನು ವಿವಿಟ್ರಾ ಇಂಜೆಕ್ಷನ್ ತಗೊಳೋದಿಲ್ಲ ಅಂದೆ. ಹೂಂ ಅಂದ್ರು. ಹಾಗಾದ್ರೆ, ಎಡಭಾಗದ ಎದೆ ಮೇಲೆ ಅಳವಡಿಸಿದ ಪೋರ್ಟ್ ರಿಮೂವ್ ಮಾಡಬೇಕು ಎಂದು ಹೇಳಿದರು. ‘ಅದನ್ನು ಈಗ್ಲೆ ತೆಗಿಬೇಕಾ. ನಂತ್ರ ರಿಮೂವ್ ಮಾಡಬಹುದಲ್ಲ’ ಎಂದೆ. ಅದು ಇದ್ದರೆ ತಿಂಗಳಿಗೊಮ್ಮೆ ಪುಶ್‌ಅಪ್ ಮಾಡಿಸಬೇಕು. ಇಲ್ಲಾಂದ್ರೆ ಅದು ಬ್ಲಾಕ್ ಆಗಿ ಸಮಸ್ಯೆ ತೋರಬಹುದು. ಅದರ ಸುತ್ತ ದುರ್ಮಾಂಸ ಬೆಳೆಯಬಹುದು’ ಎಂದವರೇ, ಡಾ.ಕೋರಿ ಅವರಿಗೆ ರೆಫರ್ ಮಾಡಿದ್ರು. ಜೂನ್ 28ರಿಂದ ಹಾರ್ಮೋನ್ ಥೆರಫಿ ಆರಂಭಿಸೋಣ. ದಿನಕ್ಕೆ ಒಂದು ಗುಳಿಗೆಯಂತೆ ಐದು ವರ್ಷ ನಿತ್ಯವೂ ತಿನ್ನಬೇಕು ಎಂದರು ಡಾ.ಪ್ರಸಾದ. ನಾನು ಹೂಂ ಎಂದೆ. ಅಲ್ಲಿಂದ ಬಂದು ಡಾ.ಕೋರಿ ಅವರ ಚೇಂಬರ್ ಎದುರು ಕಾದು ಕುಳಿತೆ.
(ಮುಂದಿನ ವಾರ: ಪೋರ್ಟ್ ರಿಮೂವ್ ಸರ್ಜರಿಗೆ ಸಜ್ಜಾದೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.