ಕ್ಯಾನ್ಸರ್ ಜೊತೆಗಿನ ನನ್ನ ಹೋರಾಟದ ಮಹತ್ವದ ಘಟ್ಟ ಚಿಕಿತ್ಸೆಯ ಪ್ಲಾನ್. ಅದರಲ್ಲಿ 8 ಕಿಮೊ, ಸರ್ಜರಿ, 33 ರೆಡಿಯೇಷನ್ ಮುಗಿದ ಮೇಲೆ ಮತ್ತೆ 18 ಇಂಜೆಕ್ಷನ್ ಇದ್ದವು. ಚೊಚ್ಚಲ ಕಿಮೊ ಇಂಜೆಕ್ಷನ್ ಬಾಟಲಿ ಸ್ಟ್ಯಾಂಡ್ ಏರಿತ್ತು. 2 ಸೆಕೆಂಡ್‌ಗೆ ಒಂದು ಹನಿಯಂತೆ ನಿಧಾನವಾಗಿ ಹನಿಹನಿ ಕಿಮೊ ಇಂಜೆಕ್ಷನ್ ನನ್ನ ದೇಹ ಸೇರಿದ ರೀತಿಯನ್ನು ಹಿಂದಿನ ವಾರ ಇಲ್ಲಿ ಹಂಚಿಕೊಂಡಿದ್ದೆ. ಮೊದಲ ಕಿಮೊ ಇಂಜೆಕ್ಷನ್ ಪಡೆದ ನಂತರದ ಅನುಭವ ಹೇಗಿತ್ತು ಅನ್ನೋದನ್ನ ಈಗ ಓದಿ.
***
ಕಿಮೊ ಇಂಜೆಕ್ಷನ್ ದೇಹ ಸೇರಿದ ನಂತರ ಅದರ ಅಡ್ಡಪರಿಣಾಮ (ಸೈಡ್ ಇಫೆಕ್ಟ್ ) ಬೀರಲು ಶುರುವಾಗುತ್ತೆ. ಕೂದಲು ಉದುರುತ್ತೆ, ತಲೆ ಸುತ್ತುತ್ತೆ, ವಾಂತಿ ಆಗುತ್ತೆ, ಊಟ ಸೇರಲ್ಲ. ನಿದ್ದೆ ಮಂಪರು ಆವರಿಸುತ್ತೆ, ತಡೆಯಲಾರದಂಥ ಯಾತನೆ....ಅವರಿವರು ಹೀಗೆಲ್ಲ ಹೇಳಿದ್ದು ಕೇಳಿ ತಲೆಯಲ್ಲಿ ಏನೇನೋ ವಿಚಾರಗಳು ಗಿರಿಕಿ ಹೊಡೆಯುತ್ತ ಇದ್ವು. ಇದಕ್ಕೆಲ್ಲ ನಾನು ಮಾನಸಿಕವಾಗಿ ಸಿದ್ಧಳಾಗಿದ್ದೆ. ಪರಿಸ್ಥಿತಿ ಯಾವುದೇ ಇರಲಿ. ಅದನ್ನು ಒಪ್ಪಿಕೊಂಡು ಮಾನಸಿಕವಾಗಿ ಸಿದ್ಧರಾದಲ್ಲಿ ಸವಾಲನ್ನು ಸರಳವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ. ಇದು ನಾನು ಕಂಡುಕೊಂಡ ತಂತ್ರ. ಕ್ಯಾನ್ಸರ್ ಅನ್ನೇ ಪಾಸಿಟಿವ್ ಆಗಿ ಒಪ್ಪಿಕೊಂಡ ನಾನು ಅದರ ಅಡ್ಡಪರಿಣಾಮ ಅದೆಷ್ಟೇ ಕಠೋರವಾಗಿರಲಿ, ಕಷ್ಟವಾಗಿರಲಿ, ಎಲ್ಲವನ್ನೂ ಧೈರ್ಯದಿಂದಲೇ ಸ್ವೀಕರಿಸಲು ರೆಡಿಯಾದೆ. ಆದರೆ ಫಸ್ಟ್ ಕಿಮೊ ತಗೊಂಡ ನಂತರ ನನ್ನ ದೇಹದಲ್ಲಿ ಇಂಥ ಯಾವ ಬದಲಾವಣೆ ಆಗಲೇ ಇಲ್ವಲ್ಲ ಅನ್ನಿಸೋಕೆ ಶುರುವಾಯ್ತು. ವಾಂತಿನೂ ಆಗ್ಲಿಲ್ಲ. ತಲೆನೂ ಸುತ್ಲಿಲ್ಲ. ಆರಾಮಾಗೆ ಇದ್ದೀನಲ್ಲ. ಹಾಗಾದ್ರೆ ಇಂಜೆಕ್ಷನ್ ನನ್ನ ದೇಹದ ಮೇಲೆ ಪರಿಣಾಮವನ್ನು ಬೀರಲೇ ಇಲ್ವೆ ಅನ್ನೋ ಸಂದೇಹ ಶುರುವಾಯ್ತು.
ಕಿಮೊ ಕೊಟ್ಟ ಎರಡು ದಿನಗಳ ನಂತರವೇ ಅದರ ಪರಿಣಾಮ ಗೊತ್ತಾಗೋದು. ಕಿಮೊ ಔಷಧ ಒಮ್ಮೆ ದೇಹಕ್ಕೆ ಸೇರಿತೆಂದರೆ ಅದು ಕ್ಯಾನ್ಸರ್ ಕೋಶಗಳ ಜೊತೆಗೆ ಒಳ್ಳೆಯ ಕೋಶಗಳನ್ನೂ ಕೊಲ್ಲುತ್ತ ಬರಲಿದೆ. ಅದರಿಂದ ಕೆಂಪು ರಕ್ತಕಣಗಳ ಕೌಂಟ್ಸ್ ಕುಂಠಿತವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಏಕಾಏಕಿ ಕುಂದಿ ಬಿಡುತ್ತದೆ. 21 ದಿನಗಳ ಅಂತರದಲ್ಲಿ ಮತ್ತೊಂದು ಕಿಮೊ ಕೊಡುವ ಮೊದಲು ರಕ್ತದ ಕೌಂಟ್ಸ್ ನೋಡುವುದು ಇದೇ ಕಾರಣಕ್ಕೆ. ಒಂದು ವೇಳೆ ಕೌಂಟ್ಸ್ ತುಂಬಾ ಕಮ್ಮಿ ಇದ್ದರೆ ಕಿಮೊವನ್ನು ಮುಂದೂಡುತ್ತಾರೆ. ಇಂಜೆಕ್ಷನ್ ನನ್ನ ದೇಹ ಸೇರಿ ದಿನ ಕಳೆದರೂ ಅಂಥ ಯಾವುದೇ ಬದಲಾವಣೆ ಕಾಣಲಿಲ್ಲ.
ಟ್ರೀಟ್‌ಮೆಂಟ್ ವೇಳೆ ಕುಂಠಿತಗೊಳ್ಳುವ ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳಲು ಡ್ರೈ ಫ್ರುಟ್ಸ್ ಜಾಸ್ತಿ ತಿನ್ನಬೇಕು. ಹಣ್ಣು, ತರಕಾರಿ ಹೆಚ್ಚು ತಿನ್ನಬೇಕು ಎನ್ನೋ ನನ್ನ ಹಿತೈಷಿಗಳ ಸಲಹೆ ಹಿನ್ನೆಲೆ ಮೇರೆಗೆ ಡ್ರೈ ಫ್ರುಟ್ಸ್ ತರೋಣ ಅಂತ ಸಂಜೆ 5 ಗಂಟೆಗೆ ಬಿಗ್ ಬಜಾರ್‌ಗೆ ಹೊರಟೆ. ಬದಾಮ್, ಕ್ಯಾಶ್ಯೂ, ದ್ರಾಕ್ಷಿ ತಗೊಂಡು ಬಂದೆ. ಕಿಮೊ ಟ್ರೀಟ್‌ಮೆಂಟ್ ವೇಳೆ ದೇಹ ತುಂಬ ಸೂಕ್ಷ್ಮವಾಗಿರುತ್ತೆ. ದೇಹದಲ್ಲಿ ಇಮ್ಯುನಿಟಿ ಪವರ್ ಇರೋದಿಲ್ಲ. ಅದಕ್ಕೆ ಇನ್ಫೆಕ್ಷನ್ ಆಗೋ ಸಂಭವ ಹೆಚ್ಚು ಅನ್ನೋ ಕಾರಣಕ್ಕೆ ಹೊರಗೆಲ್ಲ ಓಡಾಡಬಾರದು. ಜನಸಂದಣಿ ಇದ್ದಲ್ಲಿ ಹೋಗಬಾರದು. ನೆಗಡಿ, ಜ್ವರ ಆದರೆ ಕಷ್ಟ ಅನ್ನೋದು ಬಿಗ್ ಬಜಾರ್‌ಗೆ ಹೋಗಿ ಬಂದ ನಂತರ ಗೊತ್ತಾಗಿ, ‘ಅಯ್ಯೋ ನಾನು ಹೋಗಿ ಬಂದಾಯ್ತಲ್ಲ. ಆಯ್ತು ಇನ್ಮುಂದೆ ಹೋಗದಿದ್ದರಾಯ್ತು’ ಅಂಥ ನನಗೆ ನಾನೇ ಸಮಾಧಾನ ಹೇಳ್ಕೊಂಡೆ. ಆದ್ರೆ ಎರಡನೇ ದಿನವೂ ನನಗೆ ಸುಸ್ತಾಗಲಿ, ಬಳಲಿಕೆಯಾಗಲಿ ಆಗಲಿಲ್ಲ. ರಾತ್ರಿ ನಿದ್ದೆನೂ ಚೆನ್ನಾಗಿ ಬಂತು.
ಬೆಳಿಗ್ಗೆ ಎದ್ದು ಮಾಮೂಲಿಯಂತೆ ಬೆಳಗಿನ ತಿಂಡಿ ತಿಂದು ಸ್ನಾನ ಮಾಡಿದೆ. ಮಧ್ಯಾಹ್ನ ಅಮ್ಮ ಮಾಡಿದ ಮೊಟ್ಟೆ ಸಾರು ಹಾಕ್ಕೊಂಡು ಊಟಾ ಮಾಡಿ, ಮಧ್ಯಾಹ್ನ ಮಲಗಿದ್ದೆ. ಕೈ–ಕಾಲು ನೋವು ಶುರುವಾಯ್ತು ನೋಡಿ. ಅಯ್ಯಪ್ಪ.... ಕಿಬ್ಬೊಟ್ಟೆಯಲ್ಲೂ ವೇದನೆ, ಒದ್ದಾಟ. ರಾತ್ರಿ ಊಟಾನು ಸೇರಲಿಲ್ಲ. ಒತ್ತಾಯಕ್ಕೆ ಸ್ವಲ್ಪ ಮೊಸರನ್ನ ಉಂಡ ಶಾಸ್ತ್ರ ಮಾಡಿದೆ. ಅದರ ಮರುದಿನ ಮತ್ತೆ ಕಾಲು ನೋವು ಜೋರಾಯ್ತು. ಜೋಮು ಹಿಡಿದ ಅನುಭವ. ಹೊಟ್ಟೆಯಲ್ಲಿನ ನೋವು ಸಂಕಟವೆನೋ ಕಮ್ಮಿಯಾಗಿತ್ತು. ಆದರೆ ಐದು ಬಾರಿ ಟಾಯ್ಲೆಟ್ ಹೋಗಿ ಬಂದೆ. ಅದರ ನಂತರದ ದಿನವೂ ಅಂದ್ರೆ ನಾಲ್ಕನೇ ದಿನ ಟಾಯ್ಲೆಟ್ ಹೋಗೋದು ಬಿಟ್ಟರೆ ಉಳಿದಂತೆ ತೊಂದರೆ ಆಗಲಿಲ್ಲ. ಆದರೆ ನೆಗಡಿ ಎಂಟ್ರಿ ಪಡೆದಿತ್ತು. ಕಮ್ಮಿನೇ ಆಗ್ಲಿಲ್ಲ. ಕಿಮೊ ಆಗಿ ಏಳನೇ ದಿನಕ್ಕೆ ಡಿ–10 ಬ್ಲಡ್ ಟೆಸ್ಟ್ ಮಾಡಿಸೋದಿತ್ತು. ಹೋಗಿ ಟೆಸ್ಟ್ ಮಾಡಿಸಿದ್ರೆ ಎಲ್ಲ ನಾರ್ಮಲ್ ಅಂತ ರಿಪೋರ್ಟ್ ಬಂತು. 8ನೇ ದಿನವೂ ನೆಗಡಿ ಕಮ್ಮಿ ಆಗ್ಲಿಲ್ಲ. ನೆಗಡಿಗೆ ಬೇರೆ ಔಷಧ ತಗೋಳೊ ಹಾಗೂ ಇರ್ಲಿಲ್ಲ. ಒಟ್ನಲ್ಲಿ ನೆಗಡಿ ಬಿಟ್ರೆ ಮತ್ತೆನೂ ಸಮಸ್ಯೆ ಇರ್ಲಿಲ್ಲ. ಆದ್ರೂ ಕೂದಲು ಉದರಲಿಲ್ವಲ್ಲ ಅನ್ನೋದು ಪ್ರಶ್ನಾರ್ಥಕವಾಗಿ ತಲೆಯಲ್ಲಿ ಕೊರಿತಿತ್ತು. ಮತ್ತೇನಕ್ಕಲ್ಲ; ಕಿಮೊ ಪರಿಣಾಮ ಬೀರಿದೆಯೋ ಇಲ್ವೊ ಅನ್ನೋ ಸಂದೇಹ ಅಷ್ಟೆ.
ಆಫೀಸ್‌ಗೆ ಹೋಗ್ಬಹುದು. ಆದರೆ ಟ್ರಾವೆಲ್ ಮಾಡ್ಬೇಡಿ, ದೂಳು, ಪೊಲ್ಯೂಷನ್ ಇದ್ದಲ್ಲಿ ಹೋಗ್ಬೇಡಿ ಅನ್ನೋದು ನಮ್ಮ ಡಾಕ್ಟರ್ ನೀಡಿದ ಸಲಹೆಯಾಗಿತ್ತು. ಆಫೀಸ್ ಹಿಂದೆಯೇ ಮನೆ. ಟ್ರಾವೆಲ್ ಮಾಡೋ ಉಸಾಬರಿಯೇ ಇಲ್ಲ ಅಂದಿದ್ದಕ್ಕೆ, ಹಾಗಾದ್ರೆ ಆಫೀಸ್‌ಗೆ ಹೋಗಿ ಅಂತ ಹೇಳಿದ್ರು. ಮನಸ್ಸಿಗೆ ಖುಷಿಯಾಯ್ತು. ಯಾಕಂದ್ರೆ ಆ ಟೆಸ್ಟು, ಈ ಟೆಸ್ಟು, ಸ್ಕ್ಯಾನಿಂಗ್ ಅದೂ ಇದು ಅಂತ ಆಫೀಸ್ ಕೆಲಸಕ್ಕೆ ರಜೆ ಹಾಕಿ ಒಂದು ತಿಂಗಳೇ ಆಗಿತ್ತು. ಡಿ.12ರಂದು ಸೋಮವಾರ ಆಫೀಸ್‌ಗೆ ಹೋಗಲು ತಯಾರಾದೆ. ಆಫೀಸ್‌ನಲ್ಲಿ ಎಸಿ ಇರೋದ್ರಿಂದ ಪ್ರಾಬ್ಲೆಮ್ ಆಗುತ್ತೆ. ಮನೆಯಲ್ಲೇ ಇರಿ ಎಂದು ಕೆಲವು ಸಹೋದ್ಯೋಗಿಗಳು ಸಲಹೆ ನೀಡಿದರು.ಮನೆಯಲ್ಲಿದ್ದು ಬೇಜಾರು ಬೆನ್ನು ಹತ್ತಿತ್ತು. ಅದಕ್ಕೆ ಅವರ ಸಲಹೆಗೆ ಮನಸ್ಸು ಸಮ್ಮತಿಸಲಿಲ್ಲ. ಫುಲ್ ಪ್ಯಾಕಿಂಗ್. ಕಿವಿ, ಮೂಗಿಗೂ ರಕ್ಷಾಕವಚ ತೊಟ್ಟೆ. ಸ್ವೆಟರ್ ಹಾಕಿದೆ. ಕಾಲಿಗೆಲ್ಲಾದರೂ ಸೊಳ್ಳೆ ಕಚ್ಚಿದರೆ ಎಂಬ ಭಯಕ್ಕೆ ಕಾಲಿಗೂ ಸಾಕ್ಸ್ ಹಾಕಿದೆ. ಇನ್ನೂರಡಿ ಅಂತರದಲ್ಲಿರುವ ಕಚೇರಿಗೆ ನಡೆದು ಹೋಗುವಾಗ ನನ್ನ ವೇಷ ನೋಡಿ ಕೆಲವರು ದಿಟ್ಟಿಸಿ ನೋಡಿದರು. ನಾನು ಮುಜುಗರಕ್ಕೊಳಗಾಗದೆ ನನ್ನ ಪಾಡಿಗೆ ನಡೆದು ಹೋದೆ. ನೆಗಡಿ ಕಮ್ಮಿ ಆಗದಿದ್ದಕ್ಕೆ ಕಷ್ಟವೇ ಎನಿಸಿತು. ಅದರ ಜೊತೆಗೆ ತಿಂಗಳ ಮುಟ್ಟು ಇವತ್ತೇ ಒಕ್ಕರಿಸಬೇಕೆ? ಮನಸ್ಸಿಗೇಕೊ ಕಿರಿಕಿರಿ. ಅದೇ ಪರಿಸ್ಥಿತಿಯಲ್ಲಿ ಆಫೀಸ್‌ಗೆ ಬಂದರೆ ಅಲ್ಲಿನ ಎಸಿ ಹೊಡೆತಕ್ಕೆ ನೆಗಡಿ ಮತ್ತಷ್ಟು ಹೆಚ್ಚಬೇಕೆ? ಕೆಮ್ಮು ಬೇರೆ ಶುರುವಾಯ್ತು. ಒಂದೆರಡು ದಿನ ಬಿಟ್ಟು ಕಾಲುಗಳೂ ಊದಿಕೊಂಡವು. ನಡೆಯುವಾಗ ಕಾಲುಗಳೇ ಭಾರವೆನಿಸಿದವು. ಧರಿಸಿದ ಚಪ್ಪಲಿ ಬಿಗಿಯಾಗಿ ಕಿರಿಕಿರಿಯೆನಿಸಿತು. ಖರೇ ಹೇಳ್ಬೇಕಂದ್ರೆ ಆಫೀಸ್‌ನಲ್ಲಿ ಕೆಲಸ ಯಾಕೋ ಸವಾಲೆನಿಸಿತು. ಹಿಂಸೆ ಎನಿಸಿತು.
ಕಿಮೊ ಆದ 12ನೇ ದಿನಕ್ಕೆ ಕೂದಲು ಉದುರಲು ನಾಂದಿಹಾಡಿತು. ಸ್ನಾನಕ್ಕೆ ನಿಂತಾಗ ತಲೆಗೆ ನೀರು ಹಾಕಿ, ಶಾಂಪು ಹಾಕಿ ಉಜ್ಜುತ್ತಲೇ ಕೈಯಲ್ಲಿ ಒಂದಷ್ಟು ಕೂದಲುಗಳು ಕಿತ್ತು ಬಂದವು. ಅಬ್ಬಾ ಅಂತೂ ಔಷಧ ಪವರ್‌ಫುಲ್ ಆಗೇ ಪರಿಣಾಮ ಬೀರ್ತಿದೆ ಅಂದುಕೊಂಡೆ. ಸ್ನಾನ ಮುಗಿಸಿ ತಲೆ ಬಾಚಿದರೆ ಜೊಂಪೆಜೊಂಪೆಯಾಗಿ ಕೂದಲು ಕಿತ್ತು ಬಿದ್ದವು. ಹೊಟ್ಟೆಯಲ್ಲೊಮ್ಮೆ ಸಂಕಟವಾಯ್ತು. ಯಾರಿಗೇ ಆಗಲಿ ತಲೆಯಲ್ಲಿ ಕೂದಲೇ ಶೋಭೆ. ಸೌಂದರ್ಯಕ್ಕೊಂದು ಮುಕುಟವೇ ಸರಿ. ಅಂಥ ಕೂದಲುಗಳೇ ಜೊಂಪೆಜೊಂಪೆಯಾಗಿ ಉದುರಿದರೆ ಅದನ್ನು ತಡೆದುಕೊಳ್ಳುವ ಮನಃಸ್ಥಿತಿ ಅಷ್ಟೇ ಗಟ್ಟಿಯಿರಬೇಕು. ಹಾಗಂತ ನಾನೇನು ಅಧೀರಳಾಗಲಿಲ್ಲ. ಹೆಚ್ಚಿನ ಕ್ಯಾನ್ಸರ್ ರೋಗಿಗಳಲ್ಲಿ ಕಿಮೊ ನಂತರ ಕೂದಲುದುರುವಿಕೆಗೆ ಕುಗ್ಗಿ ಹೋಗುವವರೇ ಹೆಚ್ಚು. ಬಾತ್‌ರೂಂನಲ್ಲೇ ಕುಳಿತು ಶವರ್ ಕೆಳಗೆ ಕಣ್ಣೀರು ಹಾಕುವವರೇ ಹೆಚ್ಚು. ಆದರೆ ಮಾನಸಿಕವಾಗಿ ಸಿದ್ಧರಾಗಿದ್ದರೆ ಇವೆಲ್ಲ ಘಟ್ಟಗಳು ಯಾವ ಲೆಕ್ಕವೂ ಅಲ್ಲ.
ನಾನು ಹೈಸ್ಕೂಲ್‌ನಲ್ಲಿದ್ದಾಗ ನನ್ನ ಸಿನಿಯರ್ಸ್ ಕೇಳೋರು..‘ಕೂದಲಿಗೆ ಏನು ಹಾಕ್ತಿರಿ?’ ಎಂದು. ಅಷ್ಟು ಉದ್ದ, ಅಷ್ಟೇ ಒತ್ತಾಗಿ ಇತ್ತು ನನ್ನ ಕೂದಲು. ಒಂದು ತುರುಬು ಹಾಕಿದರೆ ತಲೆಗಿಂತಲೂ ತುರುಬೇ ದೊಡ್ಡದಾಗೋದು. ಯಾರದ್ದಾದರೂ ದೃಷ್ಟಿ ತಾಗೀತು ಎಂದು ನನ್ನಜ್ಜಿ ಯಾವಾಗಲೂ ತುರುಬು ಹಾಕಲು ಬಿಡ್ತಿರಲಿಲ್ಲ. ನನ್ನ ಸಮೃದ್ಧ, ಉದ್ದನೇ ಕೂದಲು ನೋಡಿಯೇ ಶಾಲಾ ವಾರ್ಷಿಕೋತ್ಸವದಲ್ಲಿ ಪೌರಾಣಿಕ ನಾಟಕದಲ್ಲಿ ಭದ್ರಕಾಳಿಯ ಪಾತ್ರವನ್ನು ನನಗೆ ಕೊಟ್ಟಿದ್ದರು. ಅವೆಲ್ಲ ನೆನಪುಗಳು ಮನದಲ್ಲಿ ಹಾದು ಹೋದವು. ಉದುರಿದ ಕೂದಲ ರಾಶಿ ನಮ್ಮನೆ ಬಿಳಿ ಟೈಲ್ಸ್ ಮೇಲೆ ಎದ್ದು ಕಂಡವು. ಅಮ್ಮಾ... ಕೂದಲು ಉದುರಲು ಶುರುವಾಯ್ತು ಅಂದೆ. ಅಮ್ಮಾ ಓಡೋಡಿ ಬಂದರು. ರಾಶಿರಾಶಿ ಕೂದಲು ಉದುರಿದ್ದನ್ನು ಕಂಡ ಅಮ್ಮ ನೊಂದುಕೊಂಡಿದ್ದನ್ನು ಅವರ ಕಣ್ಣುಗಳೇ ಹೇಳುತ್ತಿದ್ದವು. ಆ ಸಂಕಟವೆಂಬುದು ಕಣ್ಣೀರಾಗಿ ಚೆಲ್ಲಿತು. ‘ಅಯ್ಯೋ ಹೋಗ್ಲಿ ಅಮ್ಮಾ, ಪರ್ಮನೆಂಟ್ ಆಗಿ ಏನು ಹೋಗೋದಿಲ್ವಲ್ಲ; ಮತ್ತೆ ಬರುತ್ತೆ ಬಿಡು...’ ಅಂತ ಅಮ್ಮನಿಗೆ ನಾನೇ ಸಮಾಧಾನಪಡಿಸಿದೆ. ಹೆತ್ತ ಕರುಳಿಗೆ ಇದು ಸಹಜ.
ಈ ನಡುವೆ ಆಫೀಸ್‌ನಲ್ಲಿ ವಾರದ ರಜೆ ಜೊತೆಯಾಯ್ತು. ಒಂದಿನ ರಿಲ್ಯಾಕ್ಸ್ ಅಂತ ಖುಷಿಯಾಯ್ತು. ನೆಗಡಿ ಏನು ಕಮ್ಮಿ ಆಗಿರ್ಲಿಲ್ಲ. ಬೆಂಗಳೂರಿನಿಂದ ಮಾಮ ಸುರೇಶ ಮತ್ತವನ ಫ್ಯಾಮಿಲಿ ನನ್ನ ನೋಡಲೆಂದು ಬಂದರು. ತಲೆಯ ಮೇಲಿದ್ದ ಅರ್ಧದಷ್ಟು ಕೂದಲು ಉದುರಿ, ಬಾಲ್ಡಿಯಾಗಲು ಶುರುವಿಟ್ಟಿತ್ತು. ನೆತ್ತಿ ಕಾಣುತ್ತಿತ್ತು.
ಇತ್ತ ನೆಗಡಿ ಯಾಕೊ ನಿಲ್ಲೋ ಹಾಗೆ ಕಾಣ್ತಿರಲಿಲ್ಲ. ಅಷ್ಟೇ ಕೆಮ್ಮು ಕೂಡ ನನ್ನ ಹೈರಾಣಾಗಿಸಿತ್ತು. ಆಫೀಸ್‌ನಲ್ಲಿ ನಾನು ಕೂರುವ ಜಾಗದಲ್ಲಿ ಎಸಿ ಪ್ರಭಾವ ಅಷ್ಟೊಂದಿರಲಿಲ್ಲ. ಸ್ವಲ್ಪ ಸೆಕೆ ಎಂದೇ ಹೇಳಬಹುದು. ಆದರೂ ನೆಗಡಿ ಮಾತ್ರ ಹೆಚ್ಚುತ್ತಲೇ ಇತ್ತು. ಮುಖಕ್ಕೆ ಮಾಸ್ಕ್, ಸ್ವೆಟರ್, ಕಾಲಿಗೆ ಸಾಕ್ಸ್, ತಲೆಗೆ ಕಟ್ಟಿದ ಮಫ್ಲರ್ ಕೂಡ ನನಗೆ ಹಿಂಸೆ ನೀಡಲು ಶುರುವಿಟ್ಟವು. ನಿರಂತರವಾಗಿ ಬರುತ್ತಿದ್ದ ಕೆಮ್ಮು ಒಂದ್ಕಡೆ, ಮೂಗಿನಿಂದ ಇಳಿಯುವ ನೆಗಡಿ ನೀರು ಇನ್ನೊಂದ್ಕಡೆ. ಕೆಲಸ ಮಾಡೋದಿರಲಿ... ಕೂರಲು ಕಷ್ಟವೆನಿಸಿತು. ರಾತ್ರಿ 11 ಒಮ್ಮೊಮ್ಮೆ 12ರ ತನಕವೂ ಡ್ಯೂಟಿ. ಅಲ್ಲಿ ತನಕ ಕೂರಲು ಕಷ್ಟವೆನಿಸಿತು. ನನ್ನ ಫಜೀತಿಯನ್ನು ನೋಡುತ್ತಿದ್ದ ನನ್ನ ಸಹೋದ್ಯೋಗಿ ಶಿವಕುಮಾರ ಕಣಸೋಗಿ ಸರ್, ‘ಸುಮ್ನೆ ತ್ರಾಸ್ ಪಡೋಕೆ ಯಾಕೆ ಬರ್ತಿರಿ? ಮನೆಯಲ್ಲಿ ರೆಸ್ಟ್ ತಗೋಬಾರ್ದಾ’ ಅಂತ ಹೇಳಲು ಶುರುವಿಟ್ಟರು. ಜ್ವರ ಬಂದ್ರೆ ಇನ್ನು ಕಷ್ಟ ಅನ್ನೋ ಭಯವನ್ನೂ ತುಂಬಿದರು.
’ಏ ಕೃಷ್ಣಿ, ನಿಂಗೆ ಇಂಥ ಪರಿಸ್ಥಿತಿಯಲ್ಲೂ ಆಫೀಸ್ ಡ್ಯೂಟಿ ಬೇಕಿತ್ತಾ’ ಅಂತ ಮನಸ್ಸು ಹೇಳಿ ನಕ್ಕಿತು. ನಮ್ಮ ಬ್ಯೂರೊ ಚೀಫ್ ಆಗಿದ್ದ ನಾಗರಾಜ ಸರ್ ಹತ್ತಿರ ಹೇಳಿದೆ, ‘ನೆಗಡಿ ಯಾಕೋ ನನ್ನ ಬಿಡ್ತಿಲ್ಲ ಸರ್. ನಾಳೆಯಿಂದ ಆಫೀಸ್‌ಗೆ ಬರಲ್ಲ. ಪೂರ್ತಿ ವಾಸಿ ಆದ್ಮೇಲೆ ಬರ್ತೆನೆ’ ಅಂದೆ. ಅದಕ್ಕವರು ಆಯ್ತು ಹಾಗೇ ಮಾಡಿ ಅಂತ ಹೇಳಿದ್ರು. ಫಸ್ಟ್ ಕಿಮೊ ತಗೊಂಡ ಮೇಲೆ ಆರು ದಿನ ಡ್ಯೂಟಿ ಮಾಡಿದ್ದೇ (ಡಿ.12–17) ಸಾಹಸವೆನಿಸಿತು. ಮಾರನೇ ದಿನದಿಂದ (ಡಿ.18ರಿಂದ) ಮನೆಯಲ್ಲೇ ರೆಸ್ಟ್. ನೆಗಡಿ ನನ್ನ ಬಿಟ್ಟುಹೋಗಲು ಒಲ್ಲೆ ಅನ್ನುತ್ತಿತ್ತು. ನೆಗಡಿ ಕಮ್ಮಿ ಆಗಲಿ ಅಂತ ಬೇರೆ ಔಷಧ ತಿನ್ನೋ ಹಾಗೂ ಇರ್ಲಿಲ್ಲ. ನನ್ನ ಕಷ್ಟ ನೋಡಿ ಅಮ್ಮನಿಗೆ ಸಂಕಟ. ಅಮ್ಮನ ನೋಡಿ ನನಗೆ ಪಾಪ ಅನ್ನಿಸ್ತು. ಡಿ.22ರ ತನಕವೂ ನೆಗಡಿ ತನ್ನ ದರ್ಪ ತೋರಿತ್ತು.
(ಮುಂದಿನ ವಾರ: ಎರಡನೇ ಕಿಮೊ ಪುರಾಣ)
ಇವುಗಳನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.