ಸಂಭ್ರಮಿಸುವುದೆಂದರೆ, ಬೊಚ್ಚುಬಾಯಿ ತೆಗೆದು ನಗು ಅರಳಿಸುವ ಮಗುವಿನ ಚಿತ್ರ ನೋಡುತ್ತಲೇ ಹವಳದ ತುಟಿಗಳ ನೋಡುತ್ತ ಆನಂದಿಸುವುದು. ಸಂಭ್ರಮಿಸುವುದೆಂದರೆ ಈ ಬೆಳಗು ನನಗಾಗಿ, ಈ ಗಾಳಿ, ಈ ಕತ್ತಲೆ, ಈ ಚಂದ್ರ, ತಾರೆಯರೆಲ್ಲ ನನಗಾಗಿ ಎಂದುಕೊಂಡು ಅವುಗಳಿಗೆ ಕೃತಜ್ಞರಾಗಿರಲೆಂದೇ ನಗುನಗುತ್ತ ಜೀವಿಸುವುದು. ಸಂಭ್ರಮಿಸುವುದೆಂದರೆ ಎಲ್ಲವೂ ನನಗಾಗಿ ಎಂದುಕೊಳ್ಳುವುದು. ನನಗಾಗಿಯೇ ಎಂಬ ಅಹಮಿಕೆಯ ಪರದೆಯನ್ನೂ ದಾಟುವುದು.
ಸಂಭ್ರಮಿಸುವುದು ಕೇವಲ ಹಿಗ್ಗಿನ ವಿಷಯಕ್ಕಲ್ಲ. ದೂರುಗಳಿಗೂ, ದುಮ್ಮಾನಗಳಿಗೂ. ಅವಮಾನಗಳಿಗೂ, ಅನುಮಾನಗಳಿಗೂ, ನಮ್ಮ ಮೇಲೆ ಇನ್ನೊಬ್ಬರು ಸಾಧಿಸುವ ಹಟಕ್ಕೂ, ರೋಷಕ್ಕೂ, ದ್ವೇಷಕ್ಕೂ ಎಲ್ಲವನ್ನೂ ಸಂಭ್ರಮಿಸುವ ಮನಃಸ್ಥಿತಿ ನಮಗಿದೆಯೇ? ಸ್ವೀಕರಿಸುವ ಮನಃಸ್ಥಿತಿಯನ್ನು ಸ್ಥಾಪಿಸಿಕೊಳ್ಳುವುದೇ ಸವಾಲು. ಇನ್ನು ಸಂಭ್ರಮಿಸುವ ಸ್ಥಿತಿ ಹೇಗೆ ಎಂಬ ಪ್ರಶ್ನೆ ಬಂದೇ ಬರುತ್ತದೆ.
ನಮ್ಮ ಜೀವನದಲ್ಲಿ ನಾವೆಲ್ಲ ಮೂರು ಮಜಲುಗಳಲ್ಲಿರುತ್ತೇವೆ. ಒಂದು ನಮ್ಮದೇ ನಿಜ. ನಾವೇ ಸತ್ಯ ಎಂದು ಸತ್ಯವನ್ನು ಸಾಧಿಸುವ, ಸಾಬೀತುಪಡಿಸುವ ಮಜಲು. ಇಲ್ಲಿ ಎಲ್ಲ ಪರಿಸ್ಥಿತಿಗಳನ್ನೂ, ಸನ್ನಿವೇಶಗಳನ್ನೂ ಕಡೆಗಣಿಸಿ ನಾವು, ನಮ್ಮತನವನ್ನು ಸಾಧಿಸುವ ಭರದಲ್ಲಿ ಸತ್ಯದ ಇತರ ಮುಖಗಳನ್ನು ಅರಿಯುವಲ್ಲಿ ವಿಫಲರಾಗುತ್ತೇವೆ.
ಇನ್ನೊಂದು ಸತ್ಯ ಶೋಧನೆ. ಇಲ್ಲಿಯೂ ಅಷ್ಟೇ, ನಮಗೆ ಅನುಕೂಲಕರವೆನಿಸುವ, ನಾವು ಈಗಾಗಲೇ ನಂಬಿರುವ ವಿಚಾರಗಳನ್ನೇ ಸಮರ್ಥಿಸುವಂಥ ಸತ್ಯಶೋಧನೆಗೆ ಇಳಿಯುತ್ತೇವೆ. ನಾವೆಂದುಕೊಂಡಿರುವುದಕ್ಕೆಲ್ಲ ಪುರಾವೆಗಳನ್ನು ಹುಡುಕುತ್ತ, ಎದುರಾಳಿ ಅಥವಾ ನಾವೆದುರಿಸುತ್ತಿರುವ ಎಲ್ಲ ಸಂದರ್ಭಗಳಿಗೂ ಪೂರಕ ಮಾಹಿತಿಗಳನ್ನು ಕಲೆಹಾಕಲಾರಂಭಿಸುತ್ತೇವೆ. ಈ ದಾರಿಯಲ್ಲಿಯೂ ಆ ಕ್ಷಣದ, ಆ ಸಮಯದಲ್ಲಿ ಆಗಬೇಕಿರುವ ಇತರ ಸಕಾರಾತ್ಮಕ ಚಿಂತನೆ, ಕಾರ್ಯಗಳನ್ನು ಕಡೆಗಣಿಸುತ್ತೇವೆ. ನಮಗೆ, ನಾವು ಅಂದುಕೊಂಡ ಸತ್ಯ ಬೇಕಾಗಿರುತ್ತದೆ.
ಮೂರನೆಯದ್ದು ಸತ್ಯವನ್ನು ಸ್ವೀಕರಿಸುವುದು. ಇದು ಸಮಚಿತ್ತದ ಸ್ಥಿತಿ. ಹಿಂದೆ ಆಗಿದ್ದಕ್ಕೆ ಪಶ್ಚಾತ್ತಾಪ ಪಡುತ್ತ, ಅಪರಾಧಿ ಮನೋಭಾವ ಬೆಳೆಸಿಕೊಳ್ಳುವುದಾಗಲೀ, ಮುಂದೆ ನಮಗಿಷ್ಟವಿಲ್ಲದ್ದು ನಡೆಯಲಿದೆ ಎಂದೆಣಿಸಿ ಕೊರಗುತ್ತ, ಕರುಬುವುದಾಗಲಿ ಈ ಸ್ಥಿತಿಯಲ್ಲಿರುವುದಿಲ್ಲ. ಇಂಥ ಮನಃಸ್ಥಿತಿ ನಿರ್ಮಾಣವಾಗುವುದು ನಮ್ಮ ನಂಬಿಕೆಯ ಆಧಾರದ ಮೇಲೆ. ನಮ್ಮ ಆತ್ಮಗೌರವ ಹಾಗೂ ಆತ್ಮಸಾಕ್ಷಿಯ ಆಧಾರದ ಮೇಲೆ.
ಹೀಗಿದ್ದಾಗ ಮಾತ್ರ ಭೂತದ ತಪ್ಪುಗಳಲ್ಲಿ ತೊಳಲಾಡುವುದಿಲ್ಲ. ಭವಿಷ್ಯದ ಚಿಂತೆಯಲ್ಲಿ ಆತಂಕಪಡುವುದಿಲ್ಲ. ಎಲ್ಲದಕ್ಕೂ ಬಾರದು ಬಪ್ಪದು, ಬಪ್ಪದು ತಪ್ಪದು ಎಂಬ ಮನಃಸ್ಥಿತಿ ನಿರ್ಮಾಣವಾಗುತ್ತದೆ. ಇಂಥ ಸ್ಥಿತಿಯಲ್ಲಿಯೇ ಪ್ರತಿಯೊಂದನ್ನೂ ಸಂಭ್ರಮಿಸಲು ಸಾಧ್ಯ.
ಈ ಕ್ಷಣ, ಈ ಕ್ಷಣದ ಸೌಂದರ್ಯ, ಈ ಕ್ಷಣದ ಸುಖ, ಈ ಕ್ಷಣದ ಸತ್ಯ ಇವೆಲ್ಲವೂ ಇನ್ನಾರಿಗೂ ತೊಂದರೆ ಕೊಡದಂತಿದ್ದಲ್ಲಿ, ಇನ್ನೊಬ್ಬರಿಗೆ ಮೋಸ ಮಾಡದಂತಿದ್ದಲ್ಲಿ ಆ ಎಲ್ಲ ಕ್ಷಣಗಳನ್ನೂ ಆನಂದಿಸಬಹುದು.
ಆ ಆನಂದ ನಮ್ಮೊಳಗೆ ಸಂಭ್ರಮದ ಅಲೆಗಳನ್ನೇ ಉಕ್ಕಿಸುತ್ತದೆ. ಸಾಗರದಂತಲ್ಲ. ಶಾಂತ ಸರೋವರದ ಕೇಂದ್ರದಲ್ಲಿ ಎಸೆದ ಕಲ್ಲೊಂದು ಇಡೀ ಸರೋವರದ ಸುತ್ತ ಅಲೆಗಳನ್ನೆಬ್ಬಿಸುವಂತೆ! ಈ ಸಂಭ್ರಮ ನಮ್ಮದಾಗುತ್ತದೆ. ಇಂಥ ಸಂಭ್ರಮಕ್ಕೆ ಕಾರಣಗಳೇ ಬೇಕಿಲ್ಲ. ಎಲ್ಲವೂ ಸಂತೋಷಿಸುವ ಮೂಲಗಳಾಗಿಯೇ ಕಾಣಿಸುತ್ತವೆ.
ಸಾವು, ನೋವು, ರೋಗ, ಕಾಯಿಲೆ, ಅನುಮಾನ, ಅವಮಾನ ಇಂಥ ಎಲ್ಲ ಭಾವಗಳಿಗೂ ಅವುಗಳನ್ನರಿಯುವ ಅವಕಾಶವೆಂದುಕೊಂಡಾಗ ಅವು ನಮ್ಮನ್ನು ಬಾಧಿಸಲಾರವು. ಪ್ರತಿ ನೋವಿಗೂ, ಪ್ರತಿ ನಲಿವಿಗೂ ನಾವೇ ಹಕ್ಕುದಾರರು. ನಾವೇ ಉತ್ತರದಾಯಿಗಳು. ಹಾಗಿದ್ದಾಗ ನಾವು ಮಗುವಿನಂತಾದರೆ ಸಾಕಲ್ಲ. ಕೆಸರಾಟವನ್ನೂ ಸಂಭ್ರಮಿಸಬಹುದು. ಮೇಲೆತ್ತಿ ಎಸೆದಾಗ, ಕೆಳಗೆ ಹಿಡಿಯಲೊಬ್ಬರು ಇದ್ದಾರೆಂದು ಹಗುರವಾದ ಆ ಕ್ಷಣಗಳನ್ನೂ ಸಂಭ್ರಮಿಸಬಹುದು.
ವಿಶ್ವದ ಪ್ರತಿ ಆಗುಹೋಗುಗಳೂ ನಮ್ಮೊಂದಿಗೆ ನೇರವಾಗಿ ಬೆಸೆದಿವೆ. ಪ್ರತಿಯೊಂದು ನಮ್ಮನ್ನು ಬೆಳೆಸಲು, ನಮ್ಮತನವನ್ನು ಪ್ರತ್ಯೇಕವಾಗಿಸಲು ಎಂದುಕೊಂಡಾಗ ಎಲ್ಲವನ್ನೂ ಆನಂದಿಸಬಹುದು. ನಮ್ಮೊಳಗೆ ಆ ಆನಂದವನ್ನೇ ಆಹ್ವಾನಿಸಿಕೊಂಡು, ಉಸಿರಾಡಬೇಕು. ನಿಃಶ್ವಾಸದಲ್ಲಿ ನಮ್ಮೆಲ್ಲ ಚಿಂತೆಯನ್ನು ಬಿಡಬೇಕು. ಹೀಗೆ ಮಾಡುವ ಪ್ರಕ್ರಿಯೆಯಲ್ಲಿ ಆ ಆನಂದವೇ ನಾವಾಗುತ್ತೇವೆ. ನಾವೇ ಆನಂದವಾಗುತ್ತೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.