ADVERTISEMENT

PV Web Exclusive: ಕತ್ತರಿಸಿದ್ದ ಜಾಗ ಮುಚ್ಚಿದ್ದವು 80 ಪಿನ್‌ಗಳು!

ಕೈ ಹಿಡಿದಳು ಗಾಯತ್ರಿ –14(ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)

ಕೃಷ್ಣಿ ಶಿರೂರ
Published 28 ಫೆಬ್ರುವರಿ 2021, 10:27 IST
Last Updated 28 ಫೆಬ್ರುವರಿ 2021, 10:27 IST
ಸರ್ಜರಿ ಸಮಯ ಹೊಲಿಗೆ ಬದಲು ಸ್ಟೆಪ್ಲರ್‌ ಪಿನ್‌ಗಳು (ಪ್ರಾತಿನಿಧಿಕ ಚಿತ್ರ)
ಸರ್ಜರಿ ಸಮಯ ಹೊಲಿಗೆ ಬದಲು ಸ್ಟೆಪ್ಲರ್‌ ಪಿನ್‌ಗಳು (ಪ್ರಾತಿನಿಧಿಕ ಚಿತ್ರ)   

ಆಪರೇಷನ್‌ ಥಿಯೇಟರ್‌ ಒಳಗೆ ನಾನು ಧೈರ್ಯದಿಂದಲೇ ಹೋದೆ. ಅಲ್ಲಿ ಅರಿವಳಿಕೆ ಮದ್ದು ಚುಚ್ಚುತ್ತಲೇ ಯಾವುದೋ ಟನಲ್‌ ಒಳಗೆ ಸೊಯ್ಯನೆ ಜಾರಿ ವೇಗವಾಗಿ ಹೋದ ಅನುಭವ. ಅಷ್ಟೆ; ಕಡೆಗೆ ಎಲ್ಲವೂ ನಿಶ್ಶಬ್ಧ.ಎಚ್ಚರ ಬಂದಾಗ ಅದೇ ಅನುಭವ ವಾಪಸ್‌ ನನ್ನ ಕರೆತಂದಿತು. ಕತ್ತಲ ಟನೆಲ್‌ ಒಳಗಿಂದ ಸೊಯ್ಯನೆ ವಾಪಸ್‌ ಬಂದು ದೊಪ್ಪನೆ ಬಿದ್ದ ಅನುಭವ. ಅರೆಬರೆ ಎಚ್ಚರ. ನಾನು ಇದ್ದದ್ದು ಐಸಿಯುವಿನಲ್ಲಿ. ಬೆಡ್‌ ಮೇಲೆ ನಿಶ್ಚಲವಾಗಿ ಬಿದ್ದುಕೊಂಡಿದ್ದೆ.ಐಸಿಯುನಲ್ಲಿ ಕಳೆದ ರಾತ್ರಿಯಂತೂ ನನ್ನ ಪಾಲಿಗೆ ಘನಘೋರವೆನಿಸಿತು ಅನ್ನೋದನ್ನ ಹಿಂದಿನ ವಾರ ವಿವರಿಸಿದ್ದೆ. ಈ ವಾರ ಸ್ವಲ್ಪ ತಮಾಷೆಯನ್ನೂ ಬೆರೆಸಿದ್ದೆನೆ...ಓದಿ ನೋಡಿ..

*****

ರೂಮಿಗೆ ಶಿಫ್ಟ್‌ ಆಗುತ್ತಿದ್ದಂತೆ ಸಿಸ್ಟರ್‌ ಒಬ್ಬರು ಬಿಪಿ ಚೆಕ್‌ ಮಾಡಲು ಬಂದರು. ದೇಹಕ್ಕೆ ಬಲಗೈ ಬಲುಭಾರವೆನಿಸಿತು. ತುಸು ಎತ್ತಲೂ, ಆಡಿಸಲು ಆಗದಷ್ಟು, ತುಸು ಅಲುಗಾಡಿದರೂ ಜೀವವೇ ಹೋಗುವಷ್ಟು ವೇದನೆ ಆಗುತ್ತಿತ್ತು. ಅಂಗಾತವೇ ಮಲಗುವುದು ಅನಿವಾರ್ಯವಾಗಿತ್ತು. ಬಲಸ್ತನವನ್ನು ಸರ್ಜರಿ ಮಾಡಿ ತೆಗೆದುಹಾಕಿದ್ದರಿಂದ ಆ ಜಾಗವನ್ನು ತುಂಬಲು ಬೆನ್ನಿನ ಮಾಂಸವನ್ನು ಕತ್ತರಿಸಿ ಎದೆಯ ಭಾಗಕ್ಕೆ ಇಟ್ಟು ಸ್ಟೆಪ್ಲರ್‌ ಪಿನ್‌ ಹೊಡೆಯಲಾಗಿತ್ತು. ಬೆನ್ನಿನ ಮೇಲೆ ಪಿನ್‌ ಹೊಡೆದಿದ್ದರೂ ಅದರ ಮೇಲೆ ಮಲಗಿದೆ. ಇತ್ತ ಎಡಗೈಯಲ್ಲಿ ಲಾಸ್ಟ್‌ ಕಿಮೊ ತೆಗೆದುಕೊಂಡಿದ್ದ ಜಾಗ ಸಮೇತ ಪೂರ್ತಿ ಕೈ ಊದಿಕೊಂಡೇ ಇತ್ತು. ಅದರ ನೋವು ಕಮ್ಮಿಯಾಗಿರಲಿಲ್ಲ. ಮತ್ತದೇ ಕೈಗೆ ಕ್ಯಾನುಲಾ ಚುಚ್ಚಿದ್ದು ಮತ್ತಷ್ಟು ನೋವು ಪ್ಲಸ್‌ ಆಗಿತ್ತು. ಒಂಥರಾ ಅರ್ಧ ದೇಹ ನೋವಿನಲ್ಲೇ ಮುಳುಗಿ ಹೋಗಿತ್ತು. ಅಬ್ಬಾ; ಯಾರಿಗೂ ಬೇಡ ಇಂಥ ಜೀವನ ವೆನಿಸಿತು. ಎಡಕ್ಕೆ ಹೊರಳಿ ಮಲಗುವ ಅಂದರೆ ಎಡಭಾಗದಲ್ಲಿ ಅಳವಡಿಸಲಾದ ಪೋರ್ಟ್‌ ಇನ್ನಿಲ್ಲವೆಂಬಷ್ಟು ನೋವು ಕೊಡುತ್ತಿತ್ತು. ಪೋರ್ಟ್‌ಅನ್ನು ದೇಹದ ಒಳಗೊತ್ತಿ ಮೇಲೆ ಹೊಲಿಗೆ ಹಾಕಿದ್ದರಿಂದ ಆ ಹೊಲಿಗೆ ದಾರಕ್ಕೆ ಧರಿಸಿದ ಬಟ್ಟೆ ತಾಗಿದರೂ ಇನ್ನಿಲ್ಲವೆಂಬಷ್ಟು ನೋವಾಗುತ್ತಿತ್ತು. ನಿಜ ಹೇಳಬೇಕಂದ್ರೆ ಕ್ಯಾನ್ಸರ್‌ ಸರ್ಜರಿಗಿಂತಲೂ ಪೋರ್ಟ್‌ ಅಳವಡಿಸಲು ಮಾಡಿದ ಸರ್ಜರಿಯೇ ಹೆಚ್ಚು ನೋವು ಕೊಟ್ಟಂತಿತ್ತು. ಬಲಭಾಗದಲ್ಲಿ ಮಗ್ಗಲು ಮಲಗಲು ಸಾಧ್ಯವೇ ಇರಲಿಲ್ಲ. ಒಟ್ಟು ಮೂರು ಭಾಗದಲ್ಲಿ ಸೀಳಿ, ಕೂಡಿಸಲು ಹೊಲಿಗೆ ಜೊತೆಗೆ ಸ್ಟೆಪ್ಲರ್‌ ಹೊಡೆದಿದ್ದರಿಂದ ಆ ಸ್ಥಿತಿ ಆ ದೇವರಿಗೇ ಪ್ರೀತಿ. ನನ್ನ ಶತ್ರುವಿಗೂ ಬೇಡಪ್ಪ ಅನ್ನಿಸಿತು. ಬಲಗೈ ತೋಳು ದೇಹದ ಜೊತೆ ಸಂಬಂಧವಿಟ್ಟುಕೊಂಡಿದೆಯೋ ಇಲ್ಲವೋ ಎಂಬಂತ ಭಾವನೆ. ಏಕೆಂದರೆ ಕಂಕುಳವರೆಗೂ ಸೀಳಿ ಅಲ್ಲಿ ನೋಡ್ಸ್‌ಗಳನ್ನು ತೆಗೆದು ಹಾಕಿದ್ದರಿಂದ ಬಲ ತೋಳಿಗೆ ಜೀವವೇ ಇಲ್ಲವೆಂಬತಾಯಿತು. ಮರಗಟ್ಟಿದ್ದರಿಂದ ಮುಟ್ಟಿದರೂ ತಿಳಿಯದ ಸ್ಥಿತಿ. ಡ್ರೈನ್‌ ಪೈಪ್‌ನಲ್ಲಿ ರಕ್ತ, ನೀರು ಒಸರುತ್ತಲೇ ಇತ್ತು. 10 ಮಿಲಿಗೆ ಬರುವರೆಗೂ ಅದು ನನ್ನ ದೇಹದೊಂದಿಗೆ ಸಂಪರ್ಕಹೊಂದಿರಲೇಬೇಕು. ಮಲಗಿದಾಗಲೂ ಪಕ್ಕದಲ್ಲಿ ಹಸುಗೂಸನ್ನು ಮಲಗಿಸಿಕೊಂಡಂತೆ ಅದನ್ನು ನಾಜೂಕಾಗಿ ಇಟ್ಟುಕೊಳ್ಳಬೇಕಿತ್ತು. ಏಕೆಂದರೆ ಡ್ರೈನ್‌ ಪೈಪ್‌ಅನ್ನು ಆಪರೇಷನ್‌ ಮಾಡಿದ ಜಾಗಕ್ಕೆ ಒಳಸೇರಿಸಿ, ಹೊಲಿಗೆ ಹಾಕಿ ಫಿಕ್ಸ್‌ ಮಾಡಲಾಗಿತ್ತು. ಎಲ್ಲಿಯಾದರೂ ಎಳೆದುಕೊಂಡರೆ ಅದನ್ನು ಅನುಭವಿಸೋದು ಇನ್ನೂ ಕಷ್ಟ. ಮತ್ತೊಬ್ಬ ಸಿಸ್ಟರ್‌ ಬಂದು ಡ್ರೈನ್‌ ಬಾಕ್ಸ್‌ ಚೆಕ್‌ ಮಾಡಿ, ಅದರಲ್ಲಿ ಸಂಗ್ರವಾಗಿದ್ದ ಡಿಸ್ಚಾರ್ಜ್‌ ರಕ್ತವನ್ನು ಅಳೆದು ಅದನ್ನು ಎಂಟ್ರಿ ಮಾಡಿಕೊಂಡು ಹೋದರು.

ADVERTISEMENT

ಅವರು ಹೊರಡುತ್ತಲೇ ಮತ್ತೊಬ್ಬ ಸಿಸ್ಟರ್‌ ವೀಲ್‌ಚೇರ್‌ ಜೊತೆ ಬಂದು, ‘ಮೆಡಂ,ಈಗೊಂದು ಎಕ್ಸರೇ ಇದೆ’ ಎಂದವಳೇ ವೀಲ್‌ಚೇರ್‌ಅನ್ನು ಬೆಡ್‌ ಪಕ್ಕಕ್ಕೆ ಆನಿಸಿ ಇಟ್ಟಳು. ಬೆಡ್‌ ಮೇಲಿನಿಂದ ತಕ್ಷಣಕ್ಕೆ ಏಳೋದು ಕಷ್ಟವೆನಿಸಿತು. ನನ್ನ ಬೆಡ್‌ ಕಿಟಕಿ ಪಕ್ಕದಲ್ಲೇ ಇದ್ದುದ್ದರಿಂದ ಏಳುವಾಗ ಎಡಗೈಯಿಂದ ಕಿಟಕಿಯ ಸರಳು ಹಿಡಿದು ಪ್ರಯಾಸವಾಗಿ ಎದ್ದೆ. ಸಿಸ್ಟರ್‌ ಬಲಗೈ ಹಿಡಿದರು. ಅಬ್ಬಾ ಎಂದು ಎದ್ದು ಕುಳಿತೆ. ನಿಧಾನವಾಗಿ ವೀಲ್‌ಚೇರ್‌ ಮೇಲೆ ಡ್ರೈನ್‌ ಬಾಕ್ಸ್‌ ಸಮೇತ ಕುಳಿತೆ. ಸಿಸ್ಟರ್‌ ದೂಡಿಕೊಂಡು ಲಿಫ್ಟ್‌ ಕಡೆ ಸಾಗಿದರು. ಎಕ್ಸರೇ ರೂಮಿನ ಹೊರಗೆ ಒಂದೈದು ನಿಮಿಷ ಕಾಯೋದು ತುಸು ಹಿಂಸೆ ಎನಿಸಿತು.ಎಕ್ಸರೇ ಮಾಡೋ ಬ್ರದರ್‌ ಬಂದವರೇ, ಗೋಡೆಗೆ ತಾಗಿ ನಿಲ್ಲಲು ಹೇಳಿದರು. ಅಲುಗಾಡಬೇಡಿ ಎಂದು ಸೂಚನೆ ನೀಡಿ ಎಕ್ಸರೇ ಮಾಡಿದರು. ಅಲ್ಲಿಂದ ಮತ್ತೆ ರೂಮಿಗೆ ಬರೋವುದರೊಳಗೆ ತ್ರಾಣವೇ ಇಲ್ಲದಂತಾಯಿತು.ಎಡ ಮತ್ತು ಬಲಭಾಗದ ಎದೆ ಭಾಗ, ಬಲಭಾಗದ ಬೆನ್ನಿನಲ್ಲಿ ಕತ್ತರಿ ಪ್ರಯೋಗಗಳು ನಡೆದಿದ್ದರಿಂದ ಆ ನೋವನ್ನು ಮರೆಯಲು ಯಥೇಚ್ಛವಾಗಿ ನೀಡಲಾದ ಪೇನ್‌ಕಿಲ್ಲರ್‌ ನನ್ನ ನೋವನ್ನು ತಾತ್ಕಾಲಿಕವಾಗಿ ಮರೆಸಿದ್ದವು.


ಪ್ರತಿನಿತ್ಯ ನಾಲ್ಕು ತಾಸಿಗೊಮ್ಮೆ ಪೇನ್‌ಕಿಲ್ಲರ್‌, ಆ್ಯಂಟಿಬಯಾಟಿಕ್‌ ಅದು ಇದು ಅಂತ ಒಟ್ಟೊಟ್ಟಿಗೇ ಮೂರ್ನಾಲ್ಕು ಗುಳಿಗೆ ನುಂಗಬೇಕಿತ್ತು. ಅದು ಕೂಡ ಒಂದೊಂದು 500, 600 ಎಂ.ಜಿ ಗುಳಿಗೆ. ಅಂಥವು ದಿನಕ್ಕೆ 15ರಷ್ಟು ಗುಳಿಗೆ ನುಂಗುತ್ತಿದ್ದೆ. ಅದರಿಂದ ದೇಹದ ಉಷ್ಣಾಂಶ ಏರುತ್ತಲೇ ಇತ್ತು. ಗುಳಿಗೆ ಪವರ್‌ ಇರುವಷ್ಟು ಹೊತ್ತು ನೋವು ಕುಗ್ಗಿದರೂ ಪವರ್‌ ಕಡಿಮೆಯಾಗುತ್ತಲೇ ನೋವು ತಾಂಡವವಾಡುತ್ತಿತ್ತು.

ನನ್ನ ನೆಗೆಣ್ಣಿ (ಕೋ ಸಿಸ್ಟರ್‌) ನಾಗರತ್ನಾ ಆಸ್ಪತ್ರೆಯಲ್ಲಿ ನನ್ನ ಜೊತೆಗಿದ್ದಳು. ವಾಷ್‌ರೂಮ್‌ಗೆ ಕರೆದೊಯ್ಯುವುದು, ತಡರಾತ್ರಿ ಔಷಧ, ಗುಳಿಗೆ ಎಲ್ಲವನ್ನೂ ಅವಳೇ ನೋಡಿಕೊಂಡಳು. ಅವಳಿಗೂ ಅಶಕ್ತತೆ ಇದ್ದಿದ್ದರಿಂದ ನಿದ್ದೆ ಸ್ವಲ್ಪ ಜಾಸ್ತಿ; ಎಷ್ಟೆಂದರೆ ಕುಳಿತಲ್ಲೇ ಜಾರಿ ಬೀಳುವಷ್ಟು. ಹಾಗೇ ನಿದ್ದೆಗೆ ಜಾರಿದ ಅವಳನ್ನು ಎಬ್ಬಿಸಲು ಮನಸ್ಸಾಗುತ್ತಿರಲಿಲ್ಲ. ಎರಡನೇ ದಿನದಿಂದ ನಾನೇ ಶ್ರಮ ಹಾಕಿ ವಾಷ್‌ರೂಂಗೆ ಹೋಗಿ ಬಂದೆ. ಆಸ್ಪತ್ರೆಯ ಗೌನ್‌ ಬದಲಾಯಿಸಲಾಯಿತು. ಸರ್ಜರಿ ಮಾಡಿದ್ದರಿಂದ ಚೆಕ್‌ಅಪ್‌ಗೆ ಅನುಕೂಲವಾಗುವ ಗೌನ್‌ ತಂದು ತೊಡಿಸುವಂತೆ ಡಾ.ಕೋರಿ ಅವರು ನನ್ನ ಚಿಕ್ಕಮ್ಮ, ಮಾಮಿಗೆ ಹೇಳಿದ್ದರಿಂದ ಅವರು ಸರ್ಜರಿ ದಿನ ಹುಬ್ಬಳ್ಳಿಯ ಕೊಪ್ಪಿಕರ್‌ ರಸ್ತೆಗೆ ಹೋಗಿ ಎರಡು ಗೌನ್‌ ತಂದಿದ್ದರು. ಅದೆನಾಗಿತ್ತೆಂದರೆ ನನಗೆ ದೊಗಳೆಯಾಗಿತ್ತು. ಚೆಂದ ಅಂದ ಯಾರಿಗೆ ಬೇಕಿತ್ತು. ಮೈಮುಚ್ಚಲು ಬಟ್ಟೆ ಇದ್ದರೆ ಸಾಕು ಅನ್ನುವಂತ ಮನಸ್ಥಿತಿಯದು.

ಗಿರೀಶ ನನಗೆ ಹಾಗೂ ನಾಗರತ್ನಾಳಿಗೂ ತಿಂಡಿ, ಊಟ ತಂದುಕೊಟ್ಟರು. ಮನೆಗೆ ನೆಂಟರಿಸ್ಟರು ಬಂದು ಹೋಗುತ್ತಿದ್ದರಿಂದ ಅವರಿಗೆಲ್ಲ ಅಡುಗೆ ಮಾಡಿ, ನಮಗೆ ಊಟ ಕಟ್ಟಿ ಕೊಡುವುದರಲ್ಲೇ ಅಮ್ಮ ಸುಸ್ತಾಗಿ ಹೋಗಿದ್ದಳು. ನನಗೋ ಬೆಡ್‌ ಬಿಟ್ಟು ಏಳಲು ಕಷ್ಟಪಡಬೇಕಾಯಿತು. ಇದ್ದಿದ್ದರಲ್ಲಿ ಬೆಡ್‌ ಪಕ್ಕ ಕಿಟಕಿ ಬಂದಿದ್ದರಿಂದ ಆ ಕಿಟಕಿಯ ಸರಳುಗಳನ್ನು ಹಿಡಿದು ಪ್ರಯಾಸಪಟ್ಟಾದರೂ ಏಳುವುದನ್ನು ರೂಢಿಸಿಕೊಂಡೆ. ಬೆನ್ನಿನ ಮೇಲೆ ಹೊಡೆದ ಪಿನ್‌ಗಳ ಮೇಲೆ ಮಲಗಿದ್ದು ನನಗೆ ಮಹಾಭಾರತದಲ್ಲಿ ಬಾಣಗಳ ಮೇಲೆ ಮಲಗಿದ್ದ ಭೀಷ್ಮನನ್ನು ನೆನಪಿಸಿತು. ದೇಹದ ಎಲ್ಲೆಲ್ಲಿ ಕತ್ತರಿ ಪ್ರಯೋಗ ಆಗಿದೆಯೋ ಅನ್ನೋ ಅರಿವು ನಿಧಾನವಾಗಿ ಆಗ್ತಿತ್ತು. ಮಲಗಿದಾಗ ಬೆನ್ನಿಗೆ ಏನೋ ಒತ್ತಿದ ಅನುಭವವಾಗಿ ಎಡಗೈಯನ್ನು ಹಾಗೇ ಬೆನ್ನಿಗೆ ಒಯ್ದು ಸವರಿದೆ. ಮಧ್ಯಭಾಗದಲ್ಲಿ ಊದಿಕೊಂಡಂತಿತ್ತು. ಒಂಥರಾ ಸ್ವಲ್ಪ ಹವಾ ಇಳಿದ ಬಲೂನು ಮುಟ್ಟಿದಂತೆ. ಅಲ್ಲಿವರೆಗೂ ಸ್ಟೆಪ್ಲರ್‌ ಪಿನ್‌ ಹೊಡೆಯಲಾಗಿತ್ತು. ನನಗೆ ಅದೆನೆಂದು ಅರ್ಥವಾಗಲಿಲ್ಲ. ಡಾ.ಕೋರಿ ರೌಂಡ್ಸ್‌ಗೆ ಬಂದರು. ನಾನು ಎದ್ದು ಕೂರಲು ಪಟ್ಟ ಪ್ರಯತ್ನ ಕಂಡು ಅವರೇ ಓಡಿ ಬಂದು, ಕೂರಿಸಿದರು.

ಹೇಗಿದ್ದಿ....? ಎಂದು ಕೇಳಿದರು. ಅವರು ಕೇಳೊದೆ ಹಾಗೆ. ಅವರ ಮಾತಿನಲ್ಲಿ ತುಂಬಾ ಆತ್ಮೀಯತೆ ಇತ್ತು. ರೋಗಿಗೆ ಚಿಕಿತ್ಸೆ ಜೊತೆಗೆ ಅವರ ಡಾಕ್ಟರ್‌ ಕಡೆಯಿಂದ ಬೇಕಿರುವ ಅಗತ್ಯ ಈ ಆತ್ಮೀಯ ಭಾವವೆಂಬ ಟ್ಯಾಬ್ಲೆಟ್‌. ಡಾ.ಕೋರಿ ಡಾಕ್ಟರ್‌ ಹತ್ತಿರವಿತ್ತು. ಅದಕ್ಕೆ ಅಲ್ಲಿ ಸರ್ಜರಿಗೊಳಗಾದ ಎಲ್ಲ ರೋಗಿಗಳಿಗೂ ಕೋರಿ ಡಾಕ್ಟರ್‌ ಎಂದರೆ ಗೌರವ. ಅಷ್ಟೇ ಅಚ್ಚು ಮೆಚ್ಚು. ಎಷ್ಟೋ ಹಿರಿಯ ರೋಗಿಗಳು ಕೂಡ ಆಸ್ಪತ್ರೆಯಿಂದ ಬಿಡುಗಡೆಯಾಗಿ ಹೋಗುವಾಗ ಅವರ ಕಾಲಿಗೆ ಬಿದ್ದು ಹೋಗಿದ್ದನ್ನು ನಾನು ಗಮನಿಸಿದ್ದೆ. ನಿಜ ಅವರಲ್ಲಿ ಅಂಥ ದೊಡ್ಡಗುಣವಿತ್ತು.

ಡಾಕ್ಟರ್‌ ಅವರ ಪ್ರೀತಿಯ ಮಾತಿಗೆ ‘ಸ್ವಲ್ಪ ಬೆಟರ್‌. ನಿನ್ನೆಗಿಂಥ ಓಕೆ’ ಅಂದೆ. ‘ಕೈಗೆ ವ್ಯಾಯಾಮ ಮಾಡಬೇಕು. ಮೇಲಕ್ಕೆ ಎತ್ತಲು ಪ್ರಯತ್ನಿಸಬೇಕು, ತಲೆ ಮೇಲೆ ಬಲಗೈಯಿಂದ ದೀರ್ಘ ಸುತ್ತ ಹಾಕಬೇಕು. ಬೆನ್ನ ಹಿಂದೆ ಕೈ ಮುಗಿಯುವುದನ್ನು ರೂಢಿಸಿಕೊಳ್ಳಲೇ ಬೇಕು’ ಎಂದು ಸಲಹೆ ನೀಡಿದರು. ಈ ಪರಿಸ್ಥಿತಿಯಲ್ಲಿ ಇದೆಲ್ಲ ಸುಲಭವೆನಿಸಿರಲಿಲ್ಲ. ಏಕೆಂದರೆ ಕೈಯನ್ನು ತುಸು ಅಲ್ಲಾಡಿಸಲು ಆಗದ ಸ್ಥಿತಿಯದು. ಆಯ್ತು ಡಾಕ್ಟರ್‌ ಟ್ರೈ ಮಾಡ್ತೇನೆ ಎಂದೆ. ಬೆನ್ನಿನ ಮೇಲಿನ ಊತದ ಬಗ್ಗೆ ಡಾಕ್ಟರ್‌ಅನ್ನೇ ಕೇಳಿದೆ. ಅದುಹಾಗೇ ಇರೋದು ಎಂದು ಸಣ್ಣಗೆ ನಕ್ಕರು. ಡಾ.ಕೋರಿ ಅವರ ಕಣ್ಣು ನನ್ನ ದೊಗಳೆ ಗೌನ್‌ ಮೇಲೆ ಬಿತ್ತು. ನನ್ನನ್ನು ನೋಡಿ, ಹಾಗೇ ನನ್ನ ನೆಗೆಣ್ಣಿ (ನಾಗರತ್ನ)ಯನ್ನು ನೋಡಿ, ‘ಗೌನ್‌ ಸ್ಲೀವ್‌ ಒಳಗೆ ನೀನು ಹೋಗ್ತಿಯಾ’ ಅಂಥ ಕೀಚಾಯಿಸಿದ್ರು. ನಗೋದು ಅವಳಿಗೆ ಹೇಳೋದೆ ಬೇಡ. ನನಗೂ ನಗು ತಡೆಯಲಾಗಲಿಲ್ಲ. ನಕ್ಕಿದ್ದಕ್ಕೆ ದೇಹದ ಕೆಲವು ಭಾಗಗಳು ಸಡಿಲಗೊಂಡ ಅನುಭವವಾಯಿತು.

ಅಂತೂ ಸರ್ಜರಿ ಆಗಿ ಮೂರನೇ ದಿನಕ್ಕೆ ನಾನೊಬ್ಬಳೇ ವಾಶರೂಮ್‌ಗೆ ಹೋಗಿಬರುವಷ್ಟು ಗಟ್ಟಿಯಾದೆ. ಬಲಗೈ ಎತ್ತುವುದು ಕಷ್ಟವೆನಿಸಿದ್ದರಿಂದ ಎಡಗೈಯಲ್ಲೇ ಹಲ್ಲುಜ್ಜಿ, ಮುಖಕ್ಕೆ ಸ್ಪಲ್ವ ನೀರು ಸವರಿಕೊಂಡೆ. ಮಲಗಿ ಬೇಜಾರಾದಾಗ ರೂಮಿನಲ್ಲೇ ವಾಕ್‌ ಮಾಡುತ್ತಿದ್ದೆ.

ನಾನಿದ್ದ ರೂಮ್‌ ಸೆಮಿ ಡಿಲಕ್ಸ್‌ ಆಗಿದ್ದರಿಂದ ಇನ್ನೊಂದು ಬೆಡ್‌ ಮೇಲೆ ಆಂಟಿ ಒಬ್ಬರು ಕಿಮೊ ತೆಗೆದುಕೊಳ್ಳುತ್ತಿದ್ದರು. ಅವರಿಗೆ 20 ವರ್ಷ ವರ್ಷಗಳ ಹಿಂದೆ ಅಂದರೆ ಅವರಿಗೆ 40 ವರ್ಷವಾದಾಗ ಸ್ತನ ಕ್ಯಾನ್ಸರ್‌ ಆಗಿ ಕ್ಯೂರ್‌ ಆಗಿದ್ದರು. ಈಗ 60ರಲ್ಲಿ ಮತ್ತೆ ಒಕ್ಕರಿಸಿದೆ. ಪಾಪಾ ಕಿಮೊ ಇಂಜೆಕ್ಷನ್‌ ಚುಚ್ಚುವಾಗ ಅಯ್ಯೋ ಅಂತ ನರಳುವಾಗ ನನ್ನ ಮೈಮನ ಕೂಡ ಆ ಕ್ಷಣ ಸೆಟೆದುಕೊಳ್ಳುತ್ತಿತ್ತು. ಅವರು ನರಳುವಾಗ ಅವರ ಪತಿ ಎಷ್ಟು ಚಡಪಡಿಸುತ್ತಿದ್ದರೆಂದರೆ ಪತಿಯಾದವರು ಹೀಗೂ ಇರುತ್ತಾರಾ ಎಂದೆನಿಸಿತು. ಆ ವ್ಯಕ್ತಿ ಸಂಗಾತಿಯ ನೋವಿಗೆ ಜೊತೆಯಾಗುತ್ತಿದ್ದರೆಂದರೆ ಇಂಜೆಕ್ಷನ್‌ ಹನಿ ಹಾದು ಹೋಗುವಾಗ ಕ್ಯಾನುಲಾ ಚುಚ್ಚಿದ ಕೈಯನ್ನು ನೇವರಿಸುತ್ತ ಸಮಾಧಾನ ಹೇಳುತ್ತಿದ್ದರು. ಆ ಆಂಟಿ ನೋವು ತಡೆಯಲಾರದೆ ಅಳಲು ಶುರು ಮಾಡುತ್ತಿದ್ದರು. ಅವರನ್ನು ಸಂತೈಸುತ್ತ ಇವರೂ ಕಣ್ಣೀರಾಗುತ್ತಿದ್ದರು. ಅಷ್ಟೊಷ್ಟು ಹೊತ್ತಿಗೆ ಅಂಕಲ್‌ ಏನಾದರೂ ತಿನ್ನಿಸಲು ಒತ್ತಾಯಿಸುತ್ತಿದ್ದರು. ಆಂಟಿ ಬೇಡ ಅಂದರೂ ಇವರು ಕೇಳುತ್ತಿರಲಿಲ್ಲ. ಆಂಟಿಗೆ ಇಂಜೆಕ್ಷನ್‌ ಪೂರ್ತಿ ಮುಗಿಯಲು ಐದಾರು ತಾಸು ಬೇಕಾಗುತ್ತಿತ್ತು. ಅಷ್ಟೂ ಹೊತ್ತು ಅಂಕಲ್‌, ಆಂಟಿಯನ್ನು ಬಿಟ್ಟೇಳುತ್ತಿರಲಿಲ್ಲ. ನನಗೆ ಅವರಿಬ್ಬರನ್ನು ನೋಡಿ ಮನತುಂಬಿ ಬಂತು. ಸಂಗಾತಿ ಇದ್ದರೆ ಇಂಥ ಸಂಗಾತಿಯೇ ಇರಬೇಕು. ಇಂಥ ಸಂಗಾತಿಯ ಸಂತೈಸುವಿಕೆ ಇದ್ದರೆ ನೋವಿನಲ್ಲಿ 50% ರಿಯಾಯಿತಿ ಸಿಗೋದು ಗ್ಯಾರಂಟಿ. ಇದೆಲ್ಲ ಯೋಚಿಸುತ್ತ ನನ್ನ ಕಣ್ಣಂಚಿನಿಂದ ನನಗರಿವಿಲ್ಲದೆ ನೀರು ಜಾರಿತ್ತು.

ಮೇ 27ರಂದು (ಶನಿವಾರ) ಡಿಸ್‌ಚಾರ್ಜ್‌ ಮಾಡಿದ್ರು. ಊರಿನಿಂದ ಬಲುಮಾವ ಬಂದಿದ್ದ. ಡಿಸ್‌ಚಾರ್ಜ್‌ ಪ್ರಕ್ರಿಯೆ ಮುಗಿಯಲು ಮಧ್ಯಾಹ್ನವೇ ಸಮೀಪಿಸಿತು. ಗಿರೀಶನ ಇಎಸ್‌ಐ ಇದ್ದುದ್ದರಿಂದ ಬಿಲ್‌ ಹೊರೆಯಾಗಲಿಲ್ಲ. ರೂಮ್‌ ಬಿಲ್‌, ಮೆಡಿಸಿನ್‌ ಬಿಲ್‌ ಅಷ್ಟೇ ಬರಿಸಬೇಕಾಯಿತು. 8 ಕಿಮೊ ಕೂಡ ಇಎಸ್‌ಐನಲ್ಲೇ ಆಗಿದ್ದು ನನಗೆ ಅನುಕೂಲವಾಯಿತು. ಡಿಸ್‌ಚಾರ್ಜ್‌ ದಿನ ಡ್ರೈನ್‌ನ ಎರಡರಲ್ಲಿ ಒಂದು ಪೈಪ್‌ ತೆಗೆದರು. ಒಂದನ್ನಷ್ಟೆ ಇಟ್ಟು ಕಳುಹಿಸಿದರು. ಮತ್ತೆ ಬುಧವಾರ ಬನ್ನಿ. ಮತ್ತೊಂದು ಡ್ರೈನ್‌ ಪೈಪ್‌ ತೆಗೆಯುತ್ತೇವೆ ಎಂದರು. ಆಸ್ಪತ್ರೆಯಿಂದ ಮನೆಗೆ ಬರಲು ಆಂಬುಲೆನ್ಸ್‌ಗೆ ಕಾದು ಕುಳಿತೆವು. ಎಷ್ಟು ಹೊತ್ತಾದರೂ ಆಂಬುಲೆನ್ಸ್‌ ಬರಲೇ ಇಲ್ಲ. ನಂತರ ಒಂದು ಆಟೊ ಹತ್ತಿಯಾಯಿತು. ಅಬ್ಬಾ... ಆ ಆಟೊ ದ ಚಕ್ರಗಳು ರಸ್ತೆ ಮೇಲಿನ ಹೊಂಡದಲ್ಲಿ ಇಳಿದು ಎದ್ದಾಗ ಜೀವವೇ ಹೋದಂತಾಗುತ್ತಿತ್ತು. ಅಂತೂ ಮನೆಗೆ ಬರುವಾಗ ಮಧ್ಯಾಹ್ನ 3 ಗಂಟೆ. ಬಂದವಳೇ ನಾಗರತ್ನನ ಸಹಾಯ ಪಡೆದು ಸ್ನಾನ ಮಾಡಿದೆ. ನಾಗರತ್ನ ನಾಜೂಕಾಗಿ ಸ್ನಾನ ಮಾಡಿಸಿದಳು. ಸರ್ಜರಿ ಜಾಗದಲ್ಲಿ ಸೋಪು ಹಚ್ಚಿ, ಅಲ್ಲಿನ ಕೊಳೆಯನ್ನೆಲ್ಲ ನಿಧಾನವಾಗಿ ತೆಗೆದಳು. ಒಂದಿಷ್ಟು ನೀರಿನ ಪಸೆ ಇಲ್ಲದಂತೆ ಒರೆಸಿದಳು. ನನಗೆ ಎದೆ ಮೇಲಿನ ಸರ್ಜರಿ ಕಂಡಿತ್ತು. ಬೆನ್ನ ಹಿಂದೆ ಏನೆಲ್ಲ ಆಗಿದೆ ಅನ್ನೋ ಕುತೂಹಲವಿತ್ತು. ನಾಗರತ್ನಾಳ ಕೈಗೆ ಮೊಬೈಲ್‌ ಕೊಟ್ಟು, ಒಂದು ಫೋಟೊ ತೆಗೆದುಕೊಡು ಎಂದೆ. ‘ಬೇಡ್ವೆ ಅಕ್ಕ. ನೋಡೊಕಾಗಲ್ಲ..ಬ್ಯಾಡ ಬಿಡು’ ಅಂದಳು. ನೀನು ತೆಕ್ಕೊಡು ಅಂಥ ಹಟ ಹಿಡಿದೆ. ನನ್ನ ಹಟಕ್ಕೆ ಮಣಿದ ಅವಳು ಫೋಟೊ ತೆಗೆದು ಕೊಟ್ಟಳು. ಫೋಟೊ ನೋಡಿದರೆ ಏನು ಕೇಳ್ತಿರಿ... ಸರ್ಜರಿ ಜಾಗದಲ್ಲಿ ಹೊಡೆದ ಪಿನ್‌ಗಳ ಲೆಕ್ಕ ಹಾಕಿದೆ. ಮುಂದೆ 58, ಹಿಂದೆ 22 ಸೇರಿ ಬರೋಬ್ಬರಿ 80 ಪಿನ್‌ಗಳು ಇದ್ದವು.

ಸ್ನಾನ ಆದ ಮೇಲೆ ಮನಸ್ಸಿಗೆಲ್ಲ ಸ್ವಲ್ಪ ಹಾಯ್‌ ಎನಿಸಿತು. ಮನೆಯಲ್ಲಿ ಓಡಾಡುವಾಗ ಡ್ರೈನ್‌ ಹಿಡಿದು ಓಡಾಡುವ ಪರಿಸ್ಥಿತಿ. ಅಮ್ಮ ಹಾಸಿಗೆಯನ್ನು ನನಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಿಟ್ಟಿದ್ದರು. ಏಳಲು ಕಷ್ಟವಾಗುವ ಕಾರಣಕ್ಕೆ ಮಂಚದ ಕಾಲುಗಳಿಗೆ ನನ್ನ ಎರಡು ದುಪ್ಪಟ್ಟಾವನ್ನು ಕಟ್ಟಿ ಅದನ್ನು ಹಿಡಿದು ಏಳುವಂತೆ ಮಾಡಿದ್ದರು. ಇದರಿಂದ ನನಗೆ ಸಾಕಷ್ಟು ಅನುಕೂಲವಾಯಿತು.

(ಮುಂದಿನ ವಾರ: ನನಗೆ ಸೆಕ್ಯೂರಿಟಿ ಆದ ನನ್ನ ಮಗ!)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.