ಮೇಡಂ, ನನ್ನದೊಂದು ವಿಚಿತ್ರ ಸಮಸ್ಯೆ. ನನಗೆ ಚಿಕ್ಕದಿನಿಂದಲೂ ಮೈ ತುರಿಸಿಕೊಳ್ಳುವ ಅಭ್ಯಾಸ. ಆಗೆಲ್ಲಾ ಅಲರ್ಜಿ ಕಾರಣದಿಂದ ಮೈ ತುರಿಸುತ್ತಿತ್ತು. ಆದರೆ ಈಗ ಆ ಅಭ್ಯಾಸ ಮುಂದುವರಿದಿದೆ. ಈಗ ಹೇಗೆಂದರೆ, ಎಲ್ಲೋ ಒಂದು ಕಡೆ ಮೈ ತುರಿಸಿದ ಹಾಗೆ ಅನ್ನಿಸುತ್ತದೆ. ಆಮೇಲೆ ಸುಮ್ಮನೆ ಎಲ್ಲಾ ಕಡೆ ತುರಿಸಲು ಆರಂಭವಾಗುತ್ತದೆ. ವಾರದಲ್ಲಿ 2–3 ದಿನ ಹೀಗೆ ಇರುತ್ತದೆ. ಅಲ್ಲದೇ ಪದೇ ಪದೇ ಸ್ನಾನ ಮಾಡಬೇಕು ಎನ್ನಿಸುತ್ತದೆ. ಸ್ನಾನ ಮಾಡಿದ ಮೇಲೆ ಹೆಚ್ಚು ತುರಿಸಲು ಆರಂಭವಾಗುತ್ತದೆ. ನನಗಿರುವ ಸಮಸ್ಯೆ ಏನು?
ವಸುಧಾ, ಮಂಗಳೂರು
ತುರಿಕೆಗೆ ಕಾರಣಗಳು ಹಲವಿರುತ್ತವೆ. ನಿಮಗೆ ಯಾವ ಕಾರಣಕ್ಕೆ ತುರಿಸುತ್ತಿದೆ ಎಂಬುದನ್ನು ನೀವು ಕಂಡುಕೊಳ್ಳಬೇಕು. ಹಾಗಾಗಿ ನಾನು ಸಲಹೆ ನೀಡುವುದೇನೆಂದರೆ ನೀವು ಒಬ್ಬ ಉತ್ತಮ ಚರ್ಮವೈದ್ಯರನ್ನು ಕಂಡು ತುರಿಕೆಗೆ ಪ್ರಚೋದಕ ಅಂಶ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಇದು ಅಲರ್ಜಿಯಿಂದ ಇರಬಹುದು ಇಲ್ಲವೇ ಏಕ್ಸಿಮಾದಂತಹ ಚರ್ಮರೋಗದಿಂದಲೂ ಇರಬಹುದು. ಹಾಗಾಗಿ ಇನ್ನೂ ತಡಮಾಡಬೇಡಿ. ಒಳ್ಳೆಯ ಡಾಕ್ಟರ್ ಅನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ನನ್ನ ಸ್ನೇಹಿತನಿಗೆ 27 ವರ್ಷ. ಅವನಿಗೆ ವಿಪರೀತ ನಿದ್ದೆಯ ಸಮಸ್ಯೆ. ಅದರಲ್ಲೂ ಹಗಲು ಹೊತ್ತಿನಲ್ಲಿ ನಿದ್ದೆ ಮಾಡುತ್ತಾನೆ. ರಾತ್ರಿ 9ಕ್ಕೆ ಮಲಗಿ ಬೆಳಿಗ್ಗೆ 9ಕ್ಕೆ ಎದ್ದರೂ ನಿದ್ದೆ ಸಾಲುವುದಿಲ್ಲ. ಇತ್ತೀಚೆಗೆ ತಿನ್ನುವುದು ಜಾಸ್ತಿ ಆಗಿದೆ. ಪದೇ ಪದೇ ಹಸಿವು ಎನ್ನುತ್ತಾನೆ. ಕೆಲವೊಮ್ಮೆ ಮಧ್ಯರಾತ್ರಿ ಎದ್ದು ತಿನ್ನುತ್ತಾನೆ. ಒಂದು ದಿನ ನಿದ್ದೆ ಬಿಟ್ಟರೂ ತಲೆನೋವು ಎನ್ನುತ್ತಿರುತ್ತಾನೆ. ಅವನ ಸಮಸ್ಯೆಗೆ ಪರಿಹಾರ ಏನು?
ಸುರೇಶ್, ಹಾವೇರಿ
ಈ ವಯಸ್ಸಿನಲ್ಲಿ ಕ್ರಿಯಾಶೀಲರಾಗಿ, ಸದಾ ಎಚ್ಚರದಿಂದ ಹಾಗೂ ಕೆಲವು ಉತ್ತಮ ಕೆಲಸಗಳಲ್ಲಿ ಉತ್ಸಾಹದಿಂದ ತೊಡಗಿಕೊಳ್ಳಬೇಕು. ನಿಮ್ಮ ಸ್ನೇಹಿತ ನಿಜವಾಗಿಯೂ ಸೋಮಾರಿಯಾಗಿದ್ದಾನೆ. ಮೊದಲು ನೀವು ನಿಮ್ಮ ಸ್ನೇಹಿತನ ಆಹಾರಕ್ರಮ ಹಾಗೂ ಡಯೆಟ್ ಅನ್ನು ಪರಿಶೀಲಿಸಿ. ಪೌಷ್ಟಿಕತಜ್ಞರನ್ನು ಭೇಟಿ ಮಾಡಿ ಅವರು ಹೇಳಿದ ಆಹಾರಕ್ರಮವನ್ನು ಪಾಲಿಸಿ. ಎರಡನೆಯದಾಗಿ ನಿಮ್ಮ ಸ್ನೇಹಿತನಿಗೆ ದೈಹಿಕ ಚಟುವಟಿಕೆ ಬೇಕು. ಅದಕ್ಕಾಗಿ ಅವರನ್ನು ಒಂದು ಒಳ್ಳೆಯ ಜಿಮ್‌ಗೆ ಸೇರಿಸಿ. ಅಲ್ಲಿ ಅವರು ಬೆವರಿಳಿಸಬೇಕು. ಅತಿಯಾಗಿ ತಿನ್ನುವುದರಿಂದಲೂ ಕೂಡ ಅತಿ ನಿದ್ದೆ ಕಾಡುತ್ತದೆ. ಜೊತೆಗೆ ಇದರಿಂದ ತಲೆನೋವು ಕಾಣಿಸಿಕೊಳ್ಳಬಹುದು. ಇದೇ ಮುಂದುವರಿದರೆ ಅವರು ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇದೆ. ಹಾಗಾಗಿ ತಡ ಮಾಡದೇ ಒಳ್ಳೆಯ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಅವರ ಆರೋಗ್ಯ ಪರೀಕ್ಷೆ ಮಾಡಿಸಿ. ಯಾವುದಾದರೂ ರಾಸಾಯನಿಕ ಅಸಮತೋಲನದ ಕಾರಣದಿಂದ ಅತಿ ನಿದ್ದೆ ಅವರನ್ನು ಕಾಡುತ್ತಿದೆಯೇ ತಿಳಿದುಕೊಳ್ಳಿ. ಇದರೊಂದಿಗೆ ಒಬ್ಬ ಆಪ್ತಸಮಾಲೋಚಕರನ್ನು ಭೇಟಿ ಮಾಡಿ. ಇದರಿಂದ ಅವರಿಗೆ ಪ್ರೇರೇಪಣೆ ಸಿಗುತ್ತದೆ ಜೊತೆಗೆ ಮಾನಸಿಕವಾಗಿಯೂ ಆರೋಗ್ಯದಿಂದಿರಬಹುದು.
ನನಗೆ 25 ವರ್ಷ. ನನಗೆ ಕೆಲವೊಮ್ಮೆ ತಲೆನೋವು ಶುರುವಾಗುತ್ತದೆ. ಆ ಸಮಯದಲ್ಲಿ ಕೆಲವು ನೋವುಂಟು ಮಾಡುವ ವೈಯಕ್ತಿಕ ವಿಚಾರಗಳು ನೆನಪಿಗೆ ಬರುತ್ತವೆ. ಇದರಿಂದ ಕುಗ್ಗಿ ಹೋಗುತ್ತಿದ್ದೇನೆ.
ರಾಜ್, ಕಲಬುರ್ಗಿ
ಇಂತಹ ಎಳೆಯ ವಯಸ್ಸಿನಲ್ಲಿ ನಿಮಗೆ ಪದೇ ಪದೇ ತಲೆನೋವು ಕಾಣಿಸಿಕೊಳ್ಳುವುದು ಸರಿಯಲ್ಲ. ನಿಮ್ಮನ್ನು ಯಾವ ಅಂಶ ಪ‍್ರಚೋದಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವ ರೀತಿಯ ಯೋಚನೆಗಳು ನಿಮ್ಮನ್ನು ಬಾಧಿಸುತ್ತಿವೆ ಮತ್ತು ನಿಮಲ್ಲಿ ಒತ್ತಡದಿಂದ ತಲೆನೋವು ತರುವ ಅಂಶ ಯಾವವು ಎಂಬುದನ್ನು ತಿಳಿದುಕೊಳ್ಳಿ. ಯಾವಾಗ ಅಂತಹ ಯೋಚನೆಗಳು ನಿಮ್ಮ ತಲೆಯಲ್ಲಿ ಬರುತ್ತವೋ ಆಗ ಅದನ್ನು ನಿರ್ಲಕ್ಷ್ಯ ಮಾಡಲು ಪ್ರಯತ್ನಿಸಿ. ಹೊರಗಡೆ ಸಣ್ಣ ವಾಕ್ ಹೋಗುವುದು ಅಥವಾ ಒಳ್ಳೆಯ ಹಾಡು ಕೇಳುವುದನ್ನು ಮಾಡಬಹುದು. ನೀವು ಇದನ್ನು ನಿರಂತರವಾಗಿ ಎಚ್ಚರದಿಂದ ಮಾಡಬೇಕು. ಇದರಿಂದ ನೀವು ಋಣಾತ್ಮಕ ಯೋಚನೆಗಳಿಂದ ಹೊರ ಬರಬಹುದು ಅಥವಾ ನಿಮ್ಮ ಮನಸ್ಸಿಗೆ ನೋವು ಕೊಡುವ ನೆನಪುಗಳಿಂದಲೂ ಹೊರಬರಬಹುದು. ನಿಮ್ಮನ್ನು ಕೆಲವು ಕ್ರೀಡೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಇದರಿಂದ ನೀವು ಸಾಮಾಜಿಕವಾಗಿ ಕ್ರಿಯಾಶೀಲರಾಗಿರಬಹುದು ಜೊತೆಗೆ ಬೇರೆ ಬೇರೆ ಜನರನ್ನು ಭೇಟಿ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.