ADVERTISEMENT

ದೊಡ್ಡ ನಾಲಿಗೆಗೆ ಹೆಚ್ಚು ರುಚಿ ಸಿಗಬಹುದೇ?

ಏನಾದ್ರೂ ಕೇಳ್ಬೋದು

ನಡಹಳ್ಳಿ ವಂಸತ್‌
Published 24 ಜೂನ್ 2022, 19:30 IST
Last Updated 24 ಜೂನ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

* 21ವರ್ಷದ ಯುವಕ. ಶಿಶ್ನ ಚಿಕ್ಕದಿದೆ. ಅದನ್ನು ವೃದ್ಧಿಮಾಡಲು ಉಪಾಯವೇನಿದೆ?

ಹೆಸರು, ಊರು ತಿಳಿಸಿಲ್ಲ

ನಿಮ್ಮ ಕೈಬೆರಳುಗಳನ್ನು ಉದ್ದಮಾಡಲು ಏನಾದರೂ ಉಪಾಯವಿರುವ ಸಾಧ್ಯತೆಗಳಿವೆಯೇ? ಸಾಧ್ಯವಿಲ್ಲ ಎಂದಾದರೆ ಇದೇ ತರ್ಕ ಶಿಶ್ನದ ಅಳತೆ ಆಕಾರಗಳಿಗೂ ಹೊಂದುತ್ತದೆ. ದೇಹದ ರಚನೆ ಸಂಪೂರ್ಣ ಅನುವಂಶಿಕವಾದದ್ದು. ಇದನ್ನು ಬದಲಾಯಿಸಬಹುದು ಎಂದು ನಿಮಗೆ ಯಾರಾದರೂ ಹೇಳಿದರೆ ಅವರು ನಿಮ್ಮನ್ನು ದಾರಿತಪ್ಪಿಸಿ ಹಣಮಾಡುವ ಉದ್ದೇಶ ಹೊಂದಿರುತ್ತಾರೆ. ಹೆಚ್ಚಿನ ಲೈಂಗಿಕ ಸುಖಕ್ಕೆ ಅಂಗಾಂಗಗಳು ದೊಡ್ಡದಿರಬೇಕು ಎನ್ನುವುದಾದರೆ ದೊಡ್ಡ ನಾಲಿಗೆ ಇರುವವನಿಗೆ ಮೈಸೂರ್‌ಪಾಕ್‌ ಹೆಚ್ಚು ರುಚಿಯಾಗಿ ಕಾಣಿಸಬೇಕು! ಇವೆಲ್ಲಾ ದಾರಿತಪ್ಪಿಸುವ ಮಾರುಕಟ್ಟೆಯ ತಂತ್ರಗಳು. ಸಂಪೂರ್ಣ ಲೈಂಗಿಕ ಸುಖ ಹೊಂದಲು ಬೇಕಾದಷ್ಟು ದೈಹಿಕ ಕ್ಷಮತೆಯನ್ನು ಪ್ರಕೃತಿ ಎಲ್ಲರಿಗೂ ನೀಡಿರುತ್ತದೆ. ಸಂಗಾತಿಯ ಜೊತೆಗೆ ಇರುವ ಆತ್ಮೀಯ ಸಂಬಂಧ ಮಾತ್ರ ನಿಮ್ಮ ಲೈಂಗಿಕ ಸುಖದ ಗುಣಮಟ್ಟವನ್ನು ನಿರ್ಧರಿಸುತ್ತದೆ. ನಿಶ್ಚಿಂತರಾಗಿ ಓದು ಉದ್ಯೋಗಗಳ ಕಡೆ ಗಮನಹರಿಸಿ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ವಸ್ತುಗಳಿಂದ ಮೋಸಹೋಗಬೇಡಿ.

ADVERTISEMENT

* 25 ವರ್ಷದ ಯುವಕ. ಶಾಲಾ ದಿನಗಳಿಂದಲೂ ನನಗೆ ಸ್ಖಲನವಾಗುತ್ತಿದೆ. ನಾನು ಮದುವೆ ಮಾಡಿಕೊಳ್ಳಬಹುದೋ ಇಲ್ಲವೋ, ನನಗೆ ಮಕ್ಕಳಾಗುತ್ತದೆಯೇ ಎನ್ನುವ ಆತಂಕ ಶುರುವಾಗಿದೆ. ಸಲಹೆನೀಡಿ.

ಹೆಸರು, ಊರು ತಿಳಿಸಿಲ್ಲ

ಸ್ಖಲನವಾಗದೇ ಶೇಖರಣೆಯಾದ ವೀರ್ಯ ಮದುವೆಯಾದ ಮೇಲೆ ಮಕ್ಕಳಾಗಲು ಉಪಯೋಗಕ್ಕೆ ಬರುತ್ತದೆ ಎಂದುಕೊಂಡಿದ್ದೀರಾ? 10-15 ವರ್ಷಗಳ ಹಳೆಯ ಬೀಜದಿಂದ ಹೊಸಪೈರು ಹುಟ್ಟಬಹುದೇ? ಪ್ರತಿ ತಿಂಗಳು ಹೊಸ ಅಂಡಾಣುವನ್ನು ಮಹಿಳೆಯರ ದೇಹ ಸೃಷ್ಟಿಸುವ ಉದ್ದೇಶವೇನಿರಬಹುದು? ದೇಹದ ಎಲ್ಲಾ ಜೀವಕೋಶಗಳೂ ಆಗಾಗ ಸತ್ತು ಹೊಸದು ಹುಟ್ಟುತ್ತಲೇ ಇರುತ್ತದೆ. ಹಾಗೆಯೇ ವೀರ್ಯಾಣುಗಳು ಕೂಡ ಸುಮಾರು 74 ದಿನಗಳವರೆಗೆ ಮಾತ್ರ ಜೀವಂತವಾಗಿರುತ್ತವೆ. ದೇಹದಲ್ಲಿ ಹಾರ್ಮೋನ್‌ಗಳು ಸೃಜನೆಯಾಗುವವರೆಗೆ ಹಳೆಯ ವೀರ್ಯಾಣುಗಳು ನಾಶವಾಗಿ ಹೊಸದು ಹುಟ್ಟುತ್ತಲೇ ಇರುತ್ತದೆ. ಸ್ಖಲನವಾಗದಿದ್ದರೂ ಹೊಸದಕ್ಕೆ ಅವಕಾಶ ಮಾಡಿಕೊಡಲು ಅವು ದೇಹದೊಳಗೇ ನಾಶಹೊಂದುತ್ತವೆ. ಹಾಗಾಗಿ ಯಾವುದೇ ಆತಂಕಕ್ಕೆ ಕಾರಣವಿಲ್ಲ. ದುಡಿಮೆ ಉದ್ಯೋಗಗಳ ಕಡೆ ಗಮನಹರಿಸಿ ಆದಷ್ಟು ಬೇಗ ಸಂಗಾತಿಯನ್ನು ಹುಡುಕಿಕೊಳ್ಳಿ. ಶುಭವಾಗಲಿ.

* 30ವರ್ಷದ ಯುವಕ. ಕಳೆದ 10ವರ್ಷದಿಂದ ಹಸ್ತಮೈಥುನ ಅಭ್ಯಾಸವಿದೆ. ನನಗೆ ಶೀಘ್ರಸ್ಖಲನವಾಗುತ್ತದೆ. ಸದ್ಯದಲ್ಲೇ ಮದುವೆ ಇದೆ. ಶೀಘ್ರಸ್ಖಲನವನ್ನು ನೈಸರ್ಗಿಕವಾಗಿ ನಿವಾರಿಸಿಕೊಳ್ಳಲು ಆಹಾರಪದ್ಧತಿ ಮತ್ತು ಆಹಾರ ಪದಾರ್ಥಗಳ ಬಗೆಗೆ ತಿಳಿಸಿಕೊಡಿ.

ಹೆಸರು, ಊರು ತಿಳಿಸಿಲ್ಲ

ಶೀಘ್ರಸ್ಖಲನ ಎಂದರೆ ಎಷ್ಟು ಸಮಯ? ಅದನ್ನು ನಿರ್ಧರಿಸುವವರು ಯಾರು? ಅದಕ್ಕೆ ಏನಾದರೂ ವೈಜ್ಞಾನಿಕ ಆಧಾರಗಳಿವೆಯೇ? ಇವೆಲ್ಲಾ ಉತ್ತರವಿಲ್ಲದ ಪ್ರಶ್ನೆಗಳು. ಶೀಘ್ರಸ್ಖಲನ ಎನ್ನುವುದು ನಕಲಿ ಔಷಧಿ ಮಾರಿ ಹಣ ಮಾಡುವವರು ಹುಟ್ಟುಹಾಕಿರುವ ತಪ್ಪುಕಲ್ಪನೆ. ದೀರ್ಘಸಂಭೋಗದಿಂದ ಹೆಚ್ಚಿನ ಸುಖ ಸಿಗುತ್ತದೆ ಎನ್ನುವುದು ತಪ್ಪುಕಲ್ಪನೆ. ಲೈಂಗಿಕತೆಯಲ್ಲಿ ಪ್ರಮುಖವಾಗುವುದು ಇಬ್ಬರಿಗೂ ತೃಪ್ತಿಯಾಗಿದೆಯೇ ಎನ್ನುವುದು ಮಾತ್ರ. ಸಂಭೋಗ ಮಾಡಿದಷ್ಟೇ ಸುಖ ಸಂಭೂಗಪೂರ್ವ ಕ್ರಿಯೆಗಳಲ್ಲಿಯೂ ಇರುತ್ತದೆ. ಸಂಗಾತಿಗಳಿಬ್ಬರೂ ಹೆಚ್ಚು ಹೊತ್ತು ಒಡನಾಡಲು ಸಾಧ್ಯವಾದರೆ ಸಂಪೂರ್ಣ ತೃಪ್ತಿ ಸಿಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಆತಂಕ ತಪ್ಪುತಿಳಿವಳಿಕೆಗಳು ಶೀಘ್ರಸ್ಖಲನಕ್ಕೆ ಕಾರಣವಾಗುತ್ತದೆ. ಹಾಗಾಗಿ ಯಾವುದೇ ಹಿಂಜರಿಕೆಯಿಲ್ಲದೆ ಮದುವೆಯಾಗಿ. ನಂತರ ಸಮಸ್ಯೆಗಳು ಬಂದರೆ ಇಬ್ಬರೂ ಸೇರಿ ತಜ್ಞ ಲೈಂಗಿಕ ಮನೋಚಿಕಿತ್ಸಕರನ್ನು ಭೇಟಿಯಾಗಿ.

*ಶೀಘ್ರಸ್ಖಲನದ ಸಮಸ್ಯೆಯಿದೆ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ

ಯಾವುದೇ ವೈಯಕ್ತಿಕ ವಿವರಗಳಿಲ್ಲದ ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವುದು ಉಚಿತವಲ್ಲ. ಮೇಲಿನ ಪ್ರಶ್ನೆಗೆ ನೀಡಿರುವ ಉತ್ತರವನ್ನು ಗಮನಿಸಿ. ಅಗತ್ಯವಿದ್ದರೆ ತಜ್ಞ ಮನೋಚಿಕಿತ್ಸಕರನ್ನು ಭೇಟಿಯಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.