ADVERTISEMENT

ಸ್ಪಂದನ ಅಂಕಣ: ನಿಮಿರು ದೌರ್ಬಲ್ಯಕ್ಕೂ ಹೃದ್ರೋಗಕ್ಕೂ ಸಂಬಂಧವಿದೆ

ಡಾ.ವೀಣಾ ಎಸ್‌ ಭಟ್ಟ‌
Published 6 ಜನವರಿ 2024, 0:08 IST
Last Updated 6 ಜನವರಿ 2024, 0:08 IST
   

ನನಗೆ 40ವರ್ಷ– ಹೆಂಡತಿಗೆ 36 ವರ್ಷ. ಕಳೆದ ವರ್ಷವಷ್ಟೆ ಮದುವೆಯಾಗಿದೆ. ನನಗೆ ನಿಮಿರು ದೌರ್ಬಲ್ಯ ಸಮಸ್ಯೆಯಿದೆ. ಹತ್ತು ವರ್ಷಗಳಿಂದ ಮಧುಮೇಹದಿಂದಲೂ ಬಳಲುತ್ತಿದ್ದೇನೆ. ಹೆಂಡತಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಆದರೆ ಈವರೆಗೆ ಒಂದು ಬಾರಿಯೂ ಲೈಂಗಿಕ ಸಂಪರ್ಕ ಏರ್ಪಟ್ಟಿಲ್ಲ. 

ಹತ್ತು ವರ್ಷಗಳಿಂದ ಮಧುಮೇಹ ಇರುವುದರಿಂದ ನಿಮಿರು ದೌರ್ಬಲ್ಯ ಉಂಟಾಗಿರಬಹುದು. ನಿಮಿರುವಿಕೆಗೆ ಅಗತ್ಯವಿರುವಷ್ಟು ರಕ್ತಸಂಚಾರ ಆಗದೇ ನರಗಳು ಸಂಕುಚಿತಗೊಳ್ಳುವುದರಿಂದ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಶಿಶ್ನದ ರಕ್ತನಾಳಗಳ ಎಂಡೋಥಿಲಿಯಂನಲ್ಲಿ ಬಿಡುಗಡೆಯಾಗುವ ನೈಟ್ರಿಕ್‌ ಆಕ್ಸೈಡ್‌ ಹೆಚ್ಚು ರಕ್ತ ಸರಬರಾಜನ್ನು ಉಂಟುಮಾಡಿ, ಲೈಂಗಿಕ ಉದ್ರೇಕಕ್ಕೆ ಕಾರಣವಾಗುತ್ತದೆ. ಎಂಡೋಥೀಲಿಯಂ ಹಾನಿಗೆ ಒಳಗಾದರೆ ನಿಮಿರು ದೌರ್ಬಲ್ಯದ  ಜತೆಗೆ ಹೃದ್ರೋಗವು ಕಾಣಿಸಿಕೊಳ್ಳಬಹುದು. ಹೃದಯದ ಆರೋಗ್ಯವೂ ಎಂಡೋಥಿಲಿಯಂನ ಕಾರ್ಯವೈಖರಿಯನ್ನು ಅವಲಂಬಿಸಿದೆ. ನಿಮಿರು ದೌರ್ಬಲ್ಯ ಹೃದ್ರೋಗದ ಮುನ್ಸೂಚನೆಯೂ ಆಗಿರಬಹುದು. ಹಾಗಾಗಿ ನಿರ್ಲಕ್ಷ್ಯ ಮಾಡದೇ ತಜ್ಞವೈದ್ಯರನ್ನು ನೋಡಿ.

ಧೂಮಪಾನ, ಮದ್ಯಪಾನದಂಥ ಚಟಗಳಿದ್ದರೆ ಸಂಪೂರ್ಣ ತ್ಯಜಿಸಿ. ಆಹಾರ ತಜ್ಞರ ಸಲಹೆ ಪಡೆದು ಮಧುಮೇಹ ನಿಯಂತ್ರಣದಲ್ಲಿಡಿ. ಎಂಡೋಥಿಲಿಯಂ ಆರೋಗ್ಯ ಪತ್ತೆಮಾಡಲು ಈಗ ಹಲವಾರು ವಿಧಾನಗಳಿವೆ. ನಿಮಿರು ದೌರ್ಬಲ್ಯ ನಿವಾರಣೆಗೆ ‌ಮಾತ್ರೆಗಳ ಚಿಕಿತ್ಸೆ, ಶಾಕ್‌ವೇವ್ ಚಿಕಿತ್ಸೆಗಳಿವೆ.ತೂಕ ಹಾಗೂ ಮಧುಮೇಹ ನಿಯಂತ್ರಣದಲ್ಲಿದ್ದರೆ ಎಂಡೋಥಿಲಿಯಂ  ಆರೋಗ್ಯದ ಜತೆಗೆ ಹೃದಯದ ಆರೋಗ್ಯವೂ ಸುಧಾರಿಸುತ್ತದೆ. ಈ ಸಮಸ್ಯೆಗಳಿಂದ ಹೊರಬಂದರೆ ಆರೋಗ್ಯವಂತ ಮಗುವನ್ನು ಪಡೆಯಲು ಸಾಧ್ಯವಿದೆ.  ಪ್ರೊಟೀನ್‌ಯುಕ್ತ ಆಹಾರ ಸೇವಿಸಿ. ಸಕ್ಕರೆ, ಸಿಹಿಪದಾರ್ಥಗಳನ್ನು ತ್ಯಜಿಸಿ. ಒಂದು ಗಂಟೆಯಾದರೂ ನಿತ್ಯ ಬಿರುಸಿನ ನಡಿಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗಲಿದೆ. 

ADVERTISEMENT

ನನ್ನ ವಯಸ್ಸು 29. ಭಾವಿ ಪತ್ನಿ ಜತೆ ವಿಡಿಯೊಕಾಲ್‌ನಲ್ಲಿ ಮಾತನಾಡುವಾಗ ಸ್ವಲ್ಪಮಟ್ಟಿಗೆ ವೀರ್ಯಸ್ಖಲನವಾಗುತ್ತಿದೆ. ಇದು ಸಹಜಕ್ರಿಯೆನಾ? 

ಇದು ಸಹಜಕ್ರಿಯೆ. ಭಾವಿಪತ್ನಿಯ ಧ್ವನಿ, ಮಾತುಗಳನ್ನು ಕೇಳುವಾಗ ಲೈಂಗಿಕವಾಗಿ ಉದ್ರೇಕಗೊಂಡು ಹೀಗಾಗುತ್ತಿದೆ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. 

ಸ್ವಪ್ನದಲ್ಲಿ ವೀರ್ಯಸ್ಖಲನವಾಗುತ್ತಿದೆ. ಇದಕ್ಕೆ ಪರಿಹಾರವೇನು?

ಇದು ಕೂಡ ಸಹಜವಾದ ಕ್ರಿಯೆ. ಅದರಲ್ಲಿಯೂ ಹದಿಹರೆಯದಲ್ಲಿ ಇವೆಲ್ಲ ಸಾಮಾನ್ಯ. ಹಸ್ತಮೈಥುನದ ಬಗ್ಗೆ ಭಯ ಇದ್ದಾಗಲೂ ಈ ರೀತಿ ಉಂಟಾಗಬಹುದು. ಅತಿಯಾದ ವೀರ್ಯ ಸಂಗ್ರಹಗೊಂಡಾಗ ಹೀಗಾಗಬಹುದು. ಕನಸುಗಳು ಸುಪ್ತಭಾವನೆಗಳ ಮೂರ್ತರೂಪ. ಮಲಬದ್ಧತೆಯಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಧೈರ್ಯವಾಗಿರಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.