ಮಳೆಗಾಲ ಎಂದರೆ ಮನಸ್ಸಿಗೆ ಏನೋ ಆಹ್ಲಾದ ಭಾವ. ಬಿರುಬೇಸಿಗೆಯಿಂದ ಬೇಸತ್ತ ಮನಸ್ಸಿಗೆ ಹಾಯ್ ಎನ್ನಿಸುವ ಈ ಕಾಲ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿ–ಪಕ್ಷಿಗಳಿಗೂ ಅಚ್ಚುಮೆಚ್ಚು. ಮಳೆಗಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆ ಅಷ್ಟೇ ಅಲ್ಲ ಸಾಕುಪ್ರಾಣಿಗಳ ಆರೋಗ್ಯದ ಬಗ್ಗೆಯೂ ಗಮನ ವಹಿಸುವುದು ಅಗತ್ಯ. ಮನೆಯ ಮುದ್ದಿನ ನಾಯಿ ಹಾಗೂ ಬೆಕ್ಕಿನ ಮೇಲೆ ವಿಶೇಷ ಕಾಳಜಿ ಅವಶ್ಯ.
ಮಳೆನೀರು ತಾಕದಂತೆ ಎಚ್ಚರ ವಹಿಸಿ: ಸಾಕುಪ್ರಾಣಿಗಳಾದ ನಾಯಿ ಹಾಗೂ ಬೆಕ್ಕು ಮಳೆಯಲ್ಲಿ ನೆನೆಯದಂತೆ ನೋಡಿಕೊಳ್ಳಿ. ಮಳೆಯಲ್ಲಿ ನೆನೆಯುವುದರಿಂದ ಸೋಂಕು, ಅಲರ್ಜಿ, ದದ್ದಿನಂತಹ ಸಮಸ್ಯೆಗಳು ಅವುಗಳನ್ನು ಕಾಡಬಹುದು. ಅಲ್ಲದೇ ಕೆಮ್ಮು, ನೆಗಡಿ ಹಾಗೂ ಮಲೇರಿಯದಂತಹ ಕಾಯಿಲೆಗಳಿಗೆ ತುತ್ತಾಗಬಹುದು. ಆ ಕಾರಣಕ್ಕೆ ಟಿಶ್ಯೂ ಪೇಪರ್ ಅಥವಾ ಒಣಗಿದ ಬಟ್ಟೆಯಿಂದ ರೋಮವನ್ನು ಪ್ರತಿದಿನ ಒರೆಸುತ್ತಿರಿ. ಸಾಧ್ಯವಾದರೆ ವಾರಕೊಮ್ಮೆ ಶುದ್ಧ ನೀರಿನಿಂದ ತುಪ್ಪಳಗಳನ್ನು ತೊಳೆಯಿರಿ. ನಂತರ ತೇವಾಂಶ ಉಳಿಯದಂತೆ ನೀಟಾಗಿ ಒರೆಸಿ. ಸೋಂಕು ತಗುಲದಂತೆ ಶೀಲಿಂಧ್ರರಹಿತ ಪೌಡರ್ ಅನ್ನು ದಿನಕೊಮ್ಮೆ ಸಿಂಪಡಿಸಬಹುದು.
ರೋಮಗಳಿಗೆ ಕತ್ತರಿ ಹಾಕಿ: ಮಳೆಗಾಲದಲ್ಲಿ ನಿಮ್ಮ ಮುದ್ದಿನ ಪ್ರಾಣಿಯ ರೋಮಗಳಿಗೆ ಕತ್ತರಿ ಹಾಕುತ್ತಿರಿ. ಕೂದಲು ದಟ್ಟವಾಗಿ ಬೆಳೆದರೆ ತುರಿಕೆ ಉಂಟಾಗಬಹುದು. ಉಗುರುಗಳನ್ನು ಕತ್ತರಿಸಿ. ಆದರೆ ಚರ್ಮಕ್ಕೆ ತಾಗುವಷ್ಟು ಚಿಕ್ಕದಾಗಿ ಕತ್ತರಿಸಬೇಡಿ.
ಚಿಗಟಗಳನ್ನು ಹೆಕ್ಕಿ ತೆಗೆಯಿರಿ: ಮಳೆಗಾಲದಲ್ಲಿ ಸಾಕುಪ್ರಾಣಿಗಳ ರೋಮದ ಮೇಲೆ ಉಣ್ಣಿ ಹಾಗೂ ಚಿಗಟಗಳಾಗುವುದು ಸಾಮಾನ್ಯ. ಹಾಗಾಗಿ ಆಗಾಗ ಪರಿಶೀಲಿಸುತ್ತಿರಬೇಕು. ಚಿಗಟ ಸ್ವಚ್ಛ ಮಾಡಲೆಂದೇ ಇರುವ ಶ್ಯಾಂಪೂವಿನಿಂದ ರೋಮಗಳನ್ನು ತೊಳೆಯುತ್ತಿರಬೇಕು. ಜೊತೆಗೆ ಪಶುವೈದ್ಯರನ್ನು ಸಂಪರ್ಕಿಸಿ ಚಿಗಟಗಳನ್ನು ಕೊಲ್ಲುವ ಕ್ರೀಮ್ ತಂದು ಹಚ್ಚಿ. ಆಗಾಗ ಅವುಗಳ ಕಿವಿಗಳನ್ನು ಗಮನಿಸುತ್ತಿರಿ. ಅಲ್ಲಿ ಸೋಂಕಿನ ಲಕ್ಷಣಗಳು ಕಾಣುತ್ತಿವೆಯೇ ಗಮನಿಸಿ.
ವಾಕಿಂಗ್ ಮಾಡಿಸುವ ಮುನ್ನ: ವಾಕಿಂಗ್ ಮಾಡಿಸುವ ಮುನ್ನ ಸಂಪೂರ್ಣವಾಗಿ ಮಳೆ ನಿಂತಿದೆಯೇ ಎಂಬುದನ್ನು ಗಮನಿಸಿ. ನಿಮ್ಮ ಸಾಕುಪ್ರಾಣಿ ಮಳೆಯಲ್ಲಿ ನೆನೆಯುತ್ತದೆ ಎಂಬ ಭಯವಿದ್ದರೆ ರೈನ್‌ಕೋಟ್ ತೊಡಿಸಿ ವಾಕಿಂಗ್ ಮಾಡಿಸುವುದು ಉತ್ತಮ. ಮಳೆಗಾಲದಲ್ಲಿ ಹಾವು, ಕಪ್ಪೆ, ಚೇಳಿನಂತಹ ವಿಷಪೂರಿತ ಕ್ರಿಮಿಗಳು ನಿಮ್ಮ ನಾಯಿಮರಿಯ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕೆ ಹೊರಗೆ ಬಿಡುವಾಗ ಎಲ್ಲ ಕಡೆ ಗಮನಿಸಿ ಸುರಕ್ಷಿತ ಎನ್ನಿಸಿದರೆ ಮಾತ್ರ ಬಿಡಿ.
ಸಾಕುಪ್ರಾಣಿಗಳು ಆತಂಕಕೊಳಗಾಗದಂತೆ ನೋಡಿಕೊಳ್ಳಿ: ಮಳೆಗಾಲದಲ್ಲಿ ಜೋರಾಗಿ ಬೀಸುವ ಗಾಳಿ, ಸಿಡಿಲು ಮಿಂಚಿನಿಂದಾಗಿ ಪ್ರಾಣಿಗಳು ಹೆಚ್ಚು ಆತಂಕಕೊಳಗಾಗುತ್ತವೆ. ಆ ಕಾರಣಕ್ಕೆ ನಾಯಿ ಮಲಗುವ ಜಾಗವನ್ನು ಆಗಾಗ ಗಮನಿಸುತ್ತಿರಿ. ನಾಯಿ ಮಲಗುವ ಸ್ಥಳದಲ್ಲಿ ನೇರವಾಗಿ ಗಾಳಿ ತಾಕದಂತೆ ಎಚ್ಚರ ವಹಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.