ADVERTISEMENT

ಜಿಮ್‌ ಸಂಕಲ್ಪಕ್ಕೆ ಮುನ್ನ...

ಪ್ರಜಾವಾಣಿ ವಿಶೇಷ
Published 25 ಡಿಸೆಂಬರ್ 2023, 23:52 IST
Last Updated 25 ಡಿಸೆಂಬರ್ 2023, 23:52 IST
   
ಹೊಸ ವರ್ಷ ಬಂತೆಂದರೆ ವ್ಯಾಯಾಮ ಶುರುಮಾಡುವ ಸಂಕಲ್ಪ ಮಾಡುವವರು ಹೆಚ್ಚು. ಸೀದಾ ಜಿಮ್‌ಗೆ ಹೋಗುವ ಮೊದಲು ಒಂದಿಷ್ಟು ಸಿದ್ಧರಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ರಾತ್ರಿ 3.30ರ ಹೊತ್ತಿಗೆ ಮೊಬೈಲ್‌ಗೆ ಕರೆ ಬಂದೊಡನೆ ನಟ ರಣಬೀರ್‌ ಕಪೂರ್‌ ಧಿಗ್ಗನೆದ್ದು ಕೂರಬೇಕಿತ್ತು. ಪ್ರೊಟೀನ್ ಶೇಕ್ ಒಂದನ್ನು ಸೇವಿಸಿದರೆ, ಅಲ್ಲಿಂದ ಕೆಲವು ನಿಮಿಷಗಳ ನಂತರ ವರ್ಕ್‌ಔಟ್‌ ಶುರುಮಾಡಬೇಕೆನ್ನುವುದು ಅವರ ವ್ಯಾಯಾಮದ ಟೈಮ್‌ ಟೇಬಲ್‌ನ ಭಾಗವಾಗಿತ್ತು. ‘ಸಂಜು’ ಹಿಂದಿ ಸಿನಿಮಾಗೆ ದೇಹಾಕಾರದಲ್ಲಿ ಅವರು ಮಾಡಿಕೊಂಡಿದ್ದ ಮಾರ್ಪಾಟಿಗೆ ಅನಿವಾರ್ಯವೆನಿಸಿದ್ದ ವ್ಯಾಯಾಮ ಅದು. ಅದು ಬಹುಸಂಖ್ಯಾತರಿಗೆ ಅಸಹಜ ಎನ್ನಿಸುವ ರೀತಿಯಲ್ಲಿ ಇತ್ತು. ಬೆಳಗಿನ ಜಾವಕ್ಕೂ ಮೊದಲು ಎದ್ದು, ಯಾರುತಾನೆ ಪ್ರೊಟೀನ್ ಶೇಕ್ ಕುಡಿಯುತ್ತಾರೆ ಎಂದು ಬಹುತೇಕರು ಕೇಳಬಹುದು. ಆದರೆ, ಫಿಟ್‌ನೆಸ್‌ ತರಬೇತಿ ನೀಡುವ ಪರಿಣತರಿಗೆ ಯಾವ ದೇಹಾಕಾರವನ್ನು ಆರೋಗ್ಯಕರ ರೀತಿಯಲ್ಲಿ ಹೇಗೆ ರೂಪಿಸಬೇಕು ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ.

ಹೊಸ ವರ್ಷದ ಬೆಳಕಿಗೆ ಇದಿರಾಗಿ ನಿಲ್ಲುತ್ತಿರುವ ಅನೇಕ ಯುವಕ–ಯುವತಿಯರು ವ್ಯಾಯಾಮ–ಡಯೆಟ್‌ನ ಸಂಕಲ್ಪ ಮಾಡುವುದೀಗ ಸಾಮಾನ್ಯ. ‘ಹೊಸ ವರ್ಷದ ರೆಸಲ್ಯೂಷನ್’ ಎಂಬ ಹೆಸರಿನಲ್ಲಿ ನಡೆಯುವ ಈ ಸಂಕಲ್ಪವೇನೋ ಒಳ್ಳೆಯದೆ. ಆದರೆ, ಅನುಷ್ಠಾನಕ್ಕೆ ತರಲು ಹೊರಟಾಗ ಅನೇಕ ಎಡವಟ್ಟುಗಳು ಆಗುವ ಸಾಧ್ಯತೆ ಇರುತ್ತದೆ. ಅದು ಆಗದಂತೆ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದು ತುಂಬಾ ಮುಖ್ಯ.

ಉದ್ದೇಶ ಸ್ಪಷ್ಟವಾಗಲಿ

ಜಿಮ್‌ ಸೇರುವ ಮೊದಲು ವ್ಯಾಯಾಮಕ್ಕೆ ಸಂಕಲ್ಪ ಮಾಡಿದವರ ಉದ್ದೇಶ ಸ್ಪಷ್ಟವಾಗಬೇಕು. ದೇಹತೂಕ ಇಳಿಸಲು/ಹೆಚ್ಚಿಸಲು, ದೇಹಾಕಾರ ಕಟೆಯಲು ಅಥವಾ ಹೃದಯದ ಆರೋಗ್ಯ ಚೆನ್ನಾಗಿ ಇರುವಂತೆ ನೋಡಿಕೊಳ್ಳಲು– ಈ ಪೈಕಿ ಯಾವ ಉದ್ದೇಶಕ್ಕೆ ಜಿಮ್‌ಗೆ ಸೇರುತ್ತಿರುವುದು ಎನ್ನುವುದನ್ನು ಪಕ್ಕಾ ಮಾಡಿಕೊಳ್ಳಬೇಕು.

ADVERTISEMENT

ರಕ್ತದೊತ್ತಡದಲ್ಲಿ ಏರುಪೇರು ಇರುವವರು ಭಾರ ಎತ್ತಕೂಡದು ಎಂದೇ ವೈದ್ಯರು ಸೂಚಿಸುತ್ತಾರೆ ಅಥವಾ ಎಷ್ಟು ಕೆ.ಜಿ.ವರೆಗೆ ಭಾರವನ್ನು ಎತ್ತಬಹುದು ಎಂದು ಸಲಹೆ ಕೊಡುತ್ತಾರೆ. ಹೀಗಾಗಿ ಜಿಮ್‌ಗೆ ಸೇರುವ ಮೊದಲು ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಪಡಬೇಕು. ಫಿಸಿಷಿಯನ್ ಒಬ್ಬರಿಂದ ಏನೆಲ್ಲ ವ್ಯಾಯಾಮ ಮಾಡಬಹುದು ಎನ್ನುವ ಸಲಹೆ ಪಡೆದ ಮೇಲಷ್ಟೇ ಜಿಮ್‌ಗೆ ಪ್ರವೇಶ ಪಡೆಯುವುದು ಉತ್ತಮ.

ವ್ಯಾಯಾಮ ಶುರುಮಾಡಿದ ನಂತರ ಅದಕ್ಕೆ ತಕ್ಕಂತಹ ಪಥ್ಯಾಹಾರ ಸೇವಿಸುವುದು ಅನಿವಾರ್ಯ. ಎಷ್ಟೋ ಜನರು ಗೂಗಲ್‌ ಮಾಡಿಯೋ ಅಥವಾ ಯವುದೋ ವಿಡಿಯೊ ನೋಡಿಯೋ ಈ ವಿಷಯದಲ್ಲಿ ಸ್ವಯಂ ತೀರ್ಮಾನ ತೆಗೆದುಕೊಳ್ಳುವುದನ್ನು ನೋಡುತ್ತೇವೆ. ಹೀಗೆ ಮಾಡಕೂಡದು. ದಿನಕ್ಕೆ ಒಬ್ಬ ವ್ಯಕ್ತಿಯು ಇಂತಿಷ್ಟು ಮೊಟ್ಟೆಯ ಬಿಳಿಭಾಗ ಸೇವಿಸಬೇಕು ಎಂದು ಸಾಮಾನ್ಯೀಕರಿಸಿ ಹೇಳುವುದು ಸಾಧ್ಯವಿಲ್ಲ. ಅದು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ, ಜೀರ್ಣಶಕ್ತಿಗೆ ತಕ್ಕಂತೆ ಬೇರೆಯೇ ಆಗಿರುತ್ತದೆ. ವ್ಯಾಯಾಮ ಯಾವ ರೀತಿಯಲ್ಲಿ ಮಾಡುತ್ತಿರುವಿರಿ ಎನ್ನುವುದನ್ನು ಆಧರಿಸಿ, ದೇಹಪ್ರಕೃತಿಗೆ ತಕ್ಕಂತಹ ಪಥ್ಯಾಹಾರವನ್ನು ಡಯಟಿಷಿಯನ್‌ಗಳು ಸೂಚಿಸುತ್ತಾರೆ.

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ: ಮಿಥ್ಯೆ

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕು ಎನ್ನುವುದೇ ಅನೇಕರ ತಲೆಯಲ್ಲಿ ಇದೆ. ಡಯಟಿಷಿಯನ್‌ಗಳು ಇದನ್ನು ಒಪ್ಪುವುದಿಲ್ಲ. ವ್ಯಾಯಾಮ ಮಾಡುವ ಒಂದು ತಾಸಿನ ಮೊದಲು ಏನು ಸೇವನೆ ಮಾಡಬೇಕು ಎನ್ನುವುದರಿಂದ ಹಿಡಿದು ಮೂರೂ ಹೊತ್ತಿನ ಊಟ ಹಾಗೂ ನಡುವಿನ ಸ್ಯ್ನಾಕ್‌ಗಳು ಯಾವ ಸ್ವರೂಪದ್ದಾಗಿರಬೇಕು ಎಂದು ಚಾರ್ಟ್‌ ಕೊಡುತ್ತಾರೆ. ಇದು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಒಂದು ವೇಳೆ ವಂಶಾವಳಿಯಲ್ಲಿ ಹಿಂದೆ ಹೃದ್ರೋಗಕ್ಕೆ ಒಳಗಾದವರು ಇದ್ದಲ್ಲಿ ಹೃದ್ರೋಗ ತಜ್ಞರನ್ನು ಭೇಟಿ ಮಾಡಬೇಕು. ಜಿಮ್‌ಗಳಲ್ಲಿ

ಸೊಂಟದ ಮೇಲಿನ ಭಾಗದ ಸ್ನಾಯುಗಳಿಗೆ ಹೆಚ್ಚಾಗಿ ವ್ಯಾಯಾಮ ಮಾಡುತ್ತಾರೆ. ಕಾಲಿನ ಸ್ನಾಯುಗಳನ್ನು ಅಥ್ಲೀಟ್‌ಗಳು ಹುರಿಗೊಳಿಸುತ್ತಾರೆ. ಸ್ನಾಯುಗಳನ್ನು, ಮೂಳೆಗಳನ್ನು ಗಟ್ಟಿ ಮಾಡಿಕೊಳ್ಳುವ ವ್ಯಾಯಾಮ ಮಾಡುವುದರಿಂದ ರಕ್ತಪರಿಚಲನೆ ಉತ್ತಮವಾಗದು. ಅದಕ್ಕೆ ವಾಕಿಂಗ್‌, ಜಾಗಿಂಗ್‌ ಅಥವಾ ಟ್ರೆಡ್‌ಮಿಲ್‌ ಮಾಡುವುದು ತುಂಬಾ ಮುಖ್ಯ. ಇದನ್ನೂ ಹೃದ್ರೋಗ ತಜ್ಞರು ಸೂಚಿಸುತ್ತಾರೆ. ‘ವೆರಿಕೋಸ್‌ ವೇಯ್ನ್‌’ ಸಮಸ್ಯೆ ಇರುವವರಂತೂ ವಾಕಿಂಗ್‌ ಮಾಡುವ ವಿಷಯದಲ್ಲಿಯೂ ಪರಿಣತ ವೈದ್ಯರ ಸಲಹೆ ಪಡೆಯಬೇಕು.

ಡಯೆಟ್‌ನಲ್ಲೂ ವೈವಿಧ್ಯ

ವ್ಯಾಯಾಮ ಮಾಡಬೇಕೆನ್ನುವ ಹೊಸ ವರ್ಷದ ಸಂಕಲ್ಪ ಒಳ್ಳೆಯದೇನೋ ಹೌದು. ಅದು ಆರಂಭಶೂರತ್ವ ಅಷ್ಟೇ ಆದರೆ ಇನ್ನಷ್ಟು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾದೀತು.

ವರ್ಷಗಳ ಹಿಂದೆ ಆದ ಅಪಘಾತದಿಂದ ಹಳೆಯ ನೋವು ಇರುವವರು, ಕುತ್ತಿಗೆ–ಬೆನ್ನುನೋವನ್ನು ಆಗಾಗ ಅನುಭವಿಸುವವರು, ಬದುಕಿನುದ್ದಕ್ಕೂ ಎಂದೂ ಸರಳ ವ್ಯಾಯಾಮವನ್ನೂ ಮಾಡದವರು– ಹೀಗೆ ಯಾರೇ ಆದರೂ ಜಿಮ್‌ಗೆ ಕಾಲಿಡುವ ಮುನ್ನ ವೈದ್ಯಕೀಯ ತಪಾಸಣೆಗೆ ಒಳಪಡಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.