ಎಲ್ಲ ಋತುಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಚರ್ಮಕ್ಕೆ ಸಂಬಂಧಪಟ್ಟ ರೋಗಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಬಾರದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು.
ಯಾವುದೇ ರೋಗನಿವಾರಣೆಗೆ ಮೂರು ಉಪಾಯಗಳು. 1. ರೋಗ ಬಾರದಂತೆ ದೇಹದ ರೋಗಕ್ಷಮತೆಯನ್ನು ಕಾಪಾಡಿಕೊಳ್ಳುವುದು 2. ರೋಗಕಾರಣಗಳಿಂದ ದೂರವಿರುವುದು 3. ಸೂಕ್ತವಾದ ಚಿಕಿತ್ಸೆ ಪಡೆಯುವುದು.
ನಮ್ಮ ದೇಹದ ಅತಿ ವಿಸ್ತಾರವಾದ ಅಂಗ ಎಂದರೆ ಅದು ಚರ್ಮ. ಎಲ್ಲ ಋತುಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಚರ್ಮಕ್ಕೆ ಸಂಬಂಧಪಟ್ಟ ರೋಗಗಳು ಕಾಣಿಸಿಕೊಳ್ಳುತ್ತವೆ. ಚರ್ಮರೋಗ ಎಂದಾಗ ಮೈ ತುರಿಸುವುದು, ಗಂದೆ ಬರುವುದು, ಹುಣ್ಣಾಗುವುದು, ಚರ್ಮ ಒಡೆಯುವುದು, ಗಾಯಗಳಾಗಿ ರಕ್ತ ಬರುವುದು, ಮೈಯಲ್ಲಿ ಸಣ್ಣ ಸಣ್ಣ ಗುಳ್ಳೆಗಳಾಗುವುದು, ಹೀಗೆ ಅನೇಕ ವಿಧ. ಇದು ತೊಂದರೆ ಕೊಡಲು ಅನೇಕ ಕಾರಣಗಳುಂಟು.
1. ಆಹಾರಜನ್ಯ
2. ವಿಹಾರಜನ್ಯ
3. ವಿಚಾರಜನ್ಯ
ಆಹಾರ ಜನ್ಯ ಕಾರಣಗಳಲ್ಲಿ ಮುಖ್ಯವಾದದ್ದು:
ಅತಿಯಾಗಿ ನಿರಂತರವಾಗಿ ಆರೋಗ್ಯಕ್ಕೆ ಒಳ್ಳೆಯದು ಎಂದು ಕಾಲ-ಅಕಾಲ, ತೆಗೆದುಕೊಳ್ಳುವ ಕ್ರಮಾಕ್ರಮಗಳ ವಿವೇಚನೆ ಇಲ್ಲದೆ ಜೇನುತುಪ್ಪವನ್ನು ನಿರಂತರವಾಗಿ ನಿತ್ಯವೂ ಸೇವಿಸುವುದು. ಬಿಸಿನೀರು ಅಥವಾ ಬಿಸಿ ಪದಾರ್ಥದೊಂದಿಗೆ, ಬೇಸಿಗೆ ಕಾಲದಲ್ಲಿ ನಿರಂತರವಾಗಿ ಜೇನುತುಪ್ಪ ಸೇವನೆ.
ಅತಿಯಾಗಿ ಜಿಡ್ಡು ಹೆಚ್ಚಿರುವ ಪದಾರ್ಥಗಳು, ಕರಿದ ಪದಾರ್ಥಗಳ ಸೇವನೆ. ಇವುಗಳ ಜೊತೆಗೆ ಅತಿ ತಣ್ಣಗಿರುವ ಪದಾರ್ಥಗಳಾದ ಐಸ್ ಕ್ರೀಂ, ತಣ್ಣಗಿರುವ ಹಣ್ಣಿನ ರಸ, ಅತಿ ತಂಪಾದ ಪಾನೀಯ /ನೀರು ಸೇವಿಸುವುದು.
ಹಸಿವಿಲ್ಲದಿರುವಾಗಲೂ ಪದೇ ಪದೇ ಆಹಾರ ಸೇವಿಸುವುದು.
ಚಳಿಗಾಲದಲ್ಲಿ ಅತಿಯಾಗಿ ಬಿಸಿನೀರಿನ ಉಪಯೋಗ ಮಾಡುತ್ತಿದ್ದು, ವಸಂತದ ಪ್ರವೇಶವಾದೊಡನೆ ಅತಿ ತಣ್ಣಗಿನ ಆಹಾರ ಸೇವನೆ.
ಮೀನು, ಮಾಂಸಗಳ ಜೊತೆ, ಹಾಲು ಮತ್ತು ಹಾಲಿನಿಂದ ತಯಾರಿಸಿದ ಪದಾರ್ಥಗಳ ಸೇವನೆ.
ತೂಕ ಕಡಿಮೆ ಆಗಬೇಕೆಂದು ಅತಿಯಾಗಿ ಪಥ್ಯ ಮಾಡುತಿದ್ದವರು ತೂಕ ಕಡಿಮೆಯಾಯಿತೆಂದು ತಕ್ಷಣ ಅಪಥ್ಯ ಸೇವನೆ ಮಾಡುವುದು
ಹಾಲಿನ ಜೊತೆಗೆ ಮೊಸರು, ಮಜ್ಜಿಗೆ /ಉಪ್ಪು / ಹಣ್ಣು / ಮಾಂಸ/ ಮೀನು ಇವುಗಳನ್ನು ಬೆರೆಸುವುದು ಮತ್ತು ಬೆರೆಸಿ ಆಹಾರ ತಯಾರಿಸಿ ಸೇವಿಸುವುದು.
ಬದನೆಕಾಯಿ, ದಪ್ಪ ಮೆಣಸಿನಕಾಯಿ, ಟೊಮೆಟೊ, ಹಸಿಮೆಣಸಿನಕಾಯಿ, ಅಣಬೆ, ಅತಿಯಾದ ಮಸಾಲೆ ಪದಾರ್ಥಗಳ ಅತಿಸೇವನೆ.
ವಿಹಾರಕ್ಕೆ ಸಂಬಂಧಿಸಿದ ಕಾರಣಗಳು:
ಹೊಟ್ಟೆ ತುಂಬಾ ಆಹಾರ ಸೇವಿಸಿ, ಆಹಾರ ಜೀರ್ಣವಾಗುವ ಮೊದಲೇ ಅತಿಯಾದ ದೈಹಿಕ ಶ್ರಮ, ವ್ಯಾಯಾಮ ಮಾಡುವುದು, ಬಿಸಿಲಿನಲ್ಲಿ ತಿರುಗಾಡುವುದು, ಸ್ನಾನ ಮಾಡುವುದು, ಮೈಥುನಕ್ರಿಯೆ ನಡೆಸುವುದು.
ಹಸಿವೆ, ಬಾಯಾರಿಕೆ, ಮಲ ಮೂತ್ರವಿಸರ್ಜನೆ, ವಾಂತಿ ಬರುವಿಕೆಗಳನ್ನು ತಡೆಯುವುದು.
ಕೆಲವೊಮ್ಮೆ ತಣ್ಣೀರಿನ ಸ್ನಾನ ಕೆಲವು ದಿನ ಅತಿ ಬಿಸಿನೀರಿನ ಸ್ನಾನ ಮಾಡುವುದು.
ನಿರಂತರವಾಗಿ ತಂಪು ಮತ್ತು ಬಿಸಿ ವಾತಾವರಣಗಳ ಬದಲಾವಣೆ (ಎಸಿ ಯಿಂದ ಬಿಸಿಲಿಗೆ ಮತ್ತೆ ಎಸಿ ವಾತಾವರಣಕ್ಕೆ ಬದಲಾವಣೆ)
ಬಿಸಿಲಿನಿಂದ ಬಂದ ನಂತರ, ವ್ಯಾಯಾಮದ ನಂತರ, ಅತಿ ಶ್ರಮ, ಭಯ, ಸಿಟ್ಟು, ಶೋಕದಿಂದ ಪೀಡಿತರಾದವರು ತಕ್ಷಣ ಅತಿ ತಂಪಾದ ನೀರಿನಲ್ಲಿ ಸ್ನಾನ ಮಾಡುವುದು.
ಪಂಚಕರ್ಮ ಚಿಕಿತ್ಸೆ ಮಾಡಿಸಿಕೊಂಡು ನಂತರ ತಂಪಾದ ವಾತಾವರಣದಲ್ಲಿ ತಿರುಗಾಡುವುದು, ಅಪಥ್ಯಕರ ಭೋಜನ ಸೇವಿಸುವುದು.
ವಿಚಾರಜನ್ಯ ಕಾರಣಗಳು
ಅತಿಯಾದ ದ್ವೇಷಭಾವ, ವಿನಾಕಾರಣ ಸಿಟ್ಟಾಗುವುದು, ಸಿಟ್ಟಿನಿಂದ ವಿವೇಚನೆ ಇಲ್ಲದೆ ಕೂಗಾಡುವುದು, ಇತರರನ್ನು ಹಂಗಿಸಿ ಮಾತನಾಡುವುದು, ಆ ಭಾವನೆಗಳಿರುವಾಗ ತಂಪಾದ ಪಾನೀಯ, ಮದ್ಯ, ಅತಿ ಖಾರವಾದ ಕರಿದ ಪದಾರ್ಥಗಳ ಸೇವನೆ .
ಇಂತಹ ಹಲವಾರು ಕಾರಣಗಳು ಚರ್ಮದಲ್ಲಿ ವಿಕೃತಿಯನ್ನು ಉತ್ಪತ್ತಿ ಮಾಡುತ್ತವೆ. ಇವುಗಳನ್ನು ಗಮನಿಸಿ ದೂರವಿರುವುದೇ ಆರ್ಧಭಾಗ ಚಿಕಿತ್ಸೆಯನ್ನು ಪೂರೈಸುತ್ತದೆ ಮತ್ತು ಚರ್ಮರೋಗ ಬಾರದಂತೆ ತಡೆಗಟ್ಟುತ್ತದೆ.
ಇದರ ಜೊತೆಗೆ ನಿತ್ಯವೂ ಅಲ್ಪಪ್ರಮಾಣದ ಎಣ್ಣೆ ಹಚ್ಚಿ ಸ್ನಾನ ಮಾಡುವುದು, ತ್ರಿಫಲಾ, ನೆಲ್ಲಿ, ಲಾವಂಚ, ಕೆಂಪು ಚಂದನ, ಅಗುರು ಚೂರ್ಣ, ಬೇವು, ಹೊಂಗೆ, ಆಲ, ಅಶ್ವತ್ಥ ಇವುಗಳ ತೊಗಟೆ ಚೂರ್ಣದಿಂದ ಮೈ ಕೈ ಕಾಲುಗಳನ್ನು ತಿಕ್ಕಿ ಕೊಳ್ಳುವುದು, ಇವುಗಳನ್ನು ಹಾಕಿ ನೀರು ಕಾಯಿಸಿ ಸ್ನಾನ ಮಾಡುವುದು, ಸಕಾಲದಲ್ಲಿ, ಹಿತಕರವಾದ ವಾತಾವರಣದಲ್ಲಿ, ಹಿತಕರವಾದ ಆಹಾರವನ್ನು ಮಿತವಾಗಿ ಸೇವಿಸುವುದು – ಇವು ಬಂದಂತಹ ಚರ್ಮರೋಗಗಳನ್ನು ನಿವಾರಿಸುತ್ತದೆ.
ಇನ್ನೂ ಹೆಚ್ಚಿಗೆ ತೊಂದರೆ ಇದ್ದಲ್ಲಿ ತಜ್ಞವೈದ್ಯರಿಂದ ಸಲಹೆ ಪಡೆದು ಚಿಕಿತ್ಸೆ ಮಾಡಿಕೊಳ್ಳುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.