ADVERTISEMENT

ಕ್ಷೇಮ–ಕುಶಲ | ‘ಸ್ಯಾಂಡ್‌ವಿಚ್‌’ ಮಾತು

ಡಾ.ಕೆ.ಎಸ್ ಶುಭ್ರತಾ
Published 19 ಆಗಸ್ಟ್ 2024, 23:30 IST
Last Updated 19 ಆಗಸ್ಟ್ 2024, 23:30 IST
<div class="paragraphs"><p>ಪಾತ್ರಿನಿಧಿಕ ಚಿತ್ರ</p></div>

ಪಾತ್ರಿನಿಧಿಕ ಚಿತ್ರ

   

ವಿದ್ವಾಂಸರೇ ಇರುವ ವಾಟ್ಸ್‌ಆ್ಯಪ್ ಗುಂಪದು. ಅಲ್ಲಿ ಒಬ್ಬರು ವರ್ತಮಾನದ ವಿಷಯದ ಬಗ್ಗೆ ಬರೆಹವನ್ನು ಕಳಿಸಿದರು. ಒಬ್ಬರಿಗೆ ಇವರ ಬರೆಹ ಇಷ್ಟವಾಗಲಿಲ್ಲವೇನೋ! ನೇರವಾಗಿ, ‘ನೀವು ಬರೆದದ್ದು ಸರಿಯಾಗಿಲ್ಲ, ಇದು ಹೀಗೆ, ಹಾಗೆ ....’ ಎಂದು ಕಠೋರವಾಗಿ ಮೆಸೇಜ್ ಮಾಡಿದರು. ಗುಂಪಿನ ಇತರ ಸದಸ್ಯರಿಗೂ ಇದು ಸ್ವಲ್ಪ ಜಾಸ್ತಿಯೇ ನಿಷ್ಠುರವಾಗಿದೆ ಎನಿಸಿತು. ಬರೆದ ವ್ಯಕ್ತಿಯಂತೂ ಇದನ್ನು ಅವಮಾನವೆಂದು ಭಾವಿಸಿ ಗುಂಪಿನಿಂದ ಹೊರನಡೆದೇಬಿಟ್ಟರು.

ಪ್ರತಿಕ್ರಿಯಿಸುವವರು ತಮ್ಮ ಅಭಿಪ್ರಾಯ ಹೇಳಿದ್ದೇನೋ ಸರಿ. ಆದರೆ ಹೇಳುವ ರೀತಿಯನನ್ಉ ಬದಲಿಸಿದರೆ, ಕೇಳುವವರಿಗೆ ಸಹ್ಯವಾಗುತಿತ್ತೇನೋ? ಆದರೆ ಬದಲಿಸುವುದಾದರೂ ಹೇಗೆ?

ADVERTISEMENT

ಸ್ಯಾಂಡ್‍ವಿಚ್ ವಿಧಾನ

ಬ್ರೆಡ್ ಸ್ಯಾಂಡ್‍ವಿಚ್ ಅನ್ನು ತಿನ್ನದವರಾರು? ಸ್ಯಾಂಡ್‍ವಿಚ್ ಹೇಗಿರುತ್ತದೆ ಎಂದು ಒಮ್ಮೆ ನೆನಪಿಸಿಕೊಳ್ಳಿ. ಮೇಲೆ ಮತ್ತು ಕೆಳಗೆ ಬ್ರೆಡ್ ಸ್ಲೈಸಸ್ ಇದ್ದು, ಮಧ್ಯದಲ್ಲಿ ಚೀಸ್ ಮತ್ತು ವೈವಿಧ್ಯಮಯ ಫಿಲ್ಲಿಂಗ್ ಇರುತ್ತದೆ. ಅಂತೆಯೇ ಪ್ರತಿಕ್ರಿಯಿಸುವಾಗ ಮೊದಲು ಸಕಾರಾತ್ಮಕ ವಿಷಯ, ನಂತರದಲ್ಲಿ ಸರಿಪಡಿಸಬೇಕಾದ ತಪ್ಪುಗಳು ಮತ್ತು ಕಡೆಯಲ್ಲಿ ಮತ್ತೊಂದು ಸಕಾರಾತ್ಮಕ ವಿಷಯವನ್ನು ಹೇಳುವುದೇ ‘ಸ್ಯಾಂಡ್‍ವಿಚ್ ಕ್ರಮ’. ಹೀಗೆ ಹೇಳಿದಾಗ ನಕಾರಾತ್ಮಕ ಟೀಕೆಯೂ ಸಹ್ಯವಾಗುತ್ತದೆ ಎಂದು ಹಲವರ ಅಭಿಪ್ರಾಯ.

ಎಲ್ಲೆಲ್ಲಿ ಬಳಸಬಹುದು?

* ಸಾಮಾನ್ಯವಾಗಿ ಕಾರ್ಪೊರೇಟ್ ಉದ್ಯೋಗಿಗಳಲ್ಲಿ, ನಿಯಮಿತವಾಗಿ, ಅವರ ಸಾಧನೆಯ ಬಗ್ಗೆ ಫೀಡ್‍ಬ್ಯಾಕ್ ನೀಡುವಾಗ ಈ ವಿಧಾನವನ್ನು ಬಳಸುತ್ತಾರೆ. ವ್ಯಕ್ತಿಯು ನಕಾರಾತ್ಮಕ ಟೀಕೆಯಿಂದ ಗಾಸಿಗೊಳ್ಳದೆ, ಮುಂದೆ ತಿದ್ದಿಕೊಂಡು ಚೆನ್ನಾಗಿ ಕೆಲಸ ಮಾಡಲಿ ಎಂಬ ಉದ್ದೇಶ.

* ವೃತ್ತಿಪರ ಕಾಲೇಜುಗಳಲ್ಲಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳು/ ಸೆಮಿನಾರ್‌ಗಳನ್ನು ಮಾಡುವಾಗ ಈ ವಿಧಾನವನ್ನು ಅನುಸರಿಸಬಹುದು.

* ಒಂದು ಸಹೃದಯಿಯಾಗಿ /ಸಭಿಕನಾಗಿ, ಸೆಮಿನಾರ್/ಸಂವಾದಗಳಲ್ಲಿ ಭಾಗವಹಿಸಿ, ಅಭಿಪ್ರಾಯ ವ್ಯಕ್ತಪಡಿಸುವಾಗ ಕೂಡ ಈ  ವಿಧಾನವನ್ನು ಬಳಸಬಹುದು.

*ದಿನನಿತ್ಯದ ಜೀವನದಲ್ಲಿ ಕುಟುಂಬದವರಿಗೆ /ಸಂಬಂಧಿಕರಿಗೆ, ಸ್ನೇಹಿತರಿಗೆ ಅವರಿಗೆ ಇಷ್ಟವಿಲ್ಲದ್ದು ಹೇಳುವಾಗ ಈ ಮಾದರಿ ಉಪಯೋಗವಾಗಬಹುದು.

* ವ್ಯಾಪಾರಿಗಳು ಈ ವಿಧಾನವನ್ನು ಬಳಸಿ, ಗ್ರಾಹಕರನ್ನು ಸೆಳೆದುಕೊಳ್ಳಲು ಕಲಿತಿರುತ್ತಾರೆ, ತಮ್ಮ ಸಿಬ್ಬಂದಿಗಳಿಗೂ ಕಲಿಸಿರುತ್ತಾರೆ.

ಶಾಲಿನಿ ಮೂವತ್ತೈದು ವರ್ಷದ ವೈದ್ಯೆ. ಸುಮಾರು 18 ವರ್ಷಗಳ ನಂತರ, ಅವಳ ಸೀನಿಯರ್ ಪ್ರೊಫೆಸರ್ ಒಬ್ಬರನ್ನು ಭೇಟಿಯಾದಳು. ಶಾಲಿನಿ ಈಗ ಸಾಕಷ್ಟು ಬದಲಾವಣೆಯಾಗಿದ್ದಳು. ಚೆನ್ನಾಗಿ ವರ್ಕೌಟ್ ಮಾಡಿ, ಆರೋಗ್ಯಕರ ಆಹಾರ ತಿಂದು ತೆಳ್ಳಗಾಗಿದ್ದಳು. ಆ ಪ್ರೊಫೆಸರ್ ಇವಳನ್ನು ನೋಡಿದ್ದೇ ಅಚ್ಚರಿಯಾದರು. ಅವರು, ಇವಳ ಕೆನ್ನೆಗಳಲ್ಲಿ ಬೇಬಿ ಫ್ಯಾಟ್ ಇದ್ದಿದ್ದನ್ನು ಯಾವಾಗಲೂ ಮೆಚ್ಚುತ್ತಿದ್ದರು. ಅಚ್ಚರಿಯಾದರೂ, ಅವರು ಇವಳ ಹತ್ತಿರ ಅದನ್ನು ವ್ಯಕ್ತಪಡಿಸಿದ ರೀತಿ, ಶಾಲಿನಿಗೆ ನೋವಾಗಲಿಲ್ಲ. ‘ಶಾಲಿನಿ, ನನಗೆ ಗುರುತು ಸಿಗಲಿಲ್ಲ. ಆಗಿನ ಹಾಗೇ ಈಗಲೂ ಮಾಡಿದ್ದೀಯೆ. ಆದರೂ ನನಗೆ ನಿನ್ನ ಮುಗ್ಧವಾದ ಆ ಬೇಬಿ ಫ್ಯಾಟ್ ಇದ್ದ ಮುಖ ತುಂಬಾ ಇಷ್ಟವಾಗಿತ್ತು. ಹೇಗಿದ್ದರೂ ಸುಂದರವಾಗಿಯೇ ಕಾಣಿಸುತ್ತಿದ್ದೀಯೆ’ ಎಂದರು. ಅವರು ಪ್ರತಿಕ್ರಿಯಿಸಿದ ರೀತಿಯಿಂದ ಶಾಲಿನಿಗೆ ಕಸಿವಿಸಿ ಆಗದೆ, ಅವರ ಬಗೆಗಿನ ಗೌರವ ಹೆಚ್ಚಾಯಿತು.

ಸಮಸ್ಯೆಗಳು

ಇಷ್ಟಾಗಿಯೂ ಫೀಡ್‍ಬ್ಯಾಕ್ ಕೊಡುವಾಗಿನ ಸ್ಯಾಂಡ್‍ವಿಚ್ ವಿಧಾನದ ಬಗ್ಗೆ ಟೀಕಿಸುವವರೂ ಇದ್ದಾರೆ. ಪ್ರಾಯಶಃ ಹೀಗೆ ಹೇಳಿದಾಗ, ನಾವು ಸರಿಪಡಿಸಬೇಕೆಂಬ ತಪ್ಪು, ಆಚೆಯವರಿಗೆ ಸರಿಯಾಗಿ ತಿಳಿಯುವುದೇ ಇಲ್ಲ ಎಂಬುದು ಅವರ ಆಕ್ಷೇಪ. ಅಂದರೆ ಎರಡು ಬ್ರೆಡ್ ಸ್ಲೈಸ್‍ಗಳ ಮಧ್ಯದ ಚೀಸ್ ರುಚಿಗೇ ಸಿಗದೇ, ಕೇವಲ ಬ್ರೆಡ್ ತಿಂದಂತೆ ಆಗುತ್ತದೆ ಎನ್ನಬಹುದು. ಮತ್ತೊಂದು ಸಮಸ್ಯೆ ಎಂದರೆ ಒಳ್ಳೆಯದನ್ನು ಹೇಳಲೇಬೇಕು ಎಂಬ ದೃಷ್ಟಿಯಿಂದ ಹೇಳಲು ಹೋದರೆ, ಒಳ್ಳೆಯದನ್ನು ಕಲ್ಪಿಸಿಕೊಂಡು ಹೇಳಬೇಕಾಗುತ್ತದೆ. ಆಗ ಆ ವ್ಯಕ್ತಿಯಲ್ಲಿ ಇತರರಿಗೆ ನಂಬಿಕೆಯೇ ಹೋದಂತಾಗುತ್ತದೆ. ಅವರ ವಿಮರ್ಶೆಗೆ ಬೆಲೆಯೇ ಇಲ್ಲದಂತಾಗಬಹುದು.

ಜನರು ದೊಡ್ಡ ಕಂಪನಿಯ ತಂಡಗಳ ನಾಯಕರಾಗಿ ತಮ್ಮ ತಂಡದ ಸದಸ್ಯರಿಗೆ ಫೀಡ್‍ಬ್ಯಾಕ್ ಕೊಡುವಾಗ, ಈ ಸ್ಯಾಂಡ್‍ವಿಚ್ ವಿಧಾನವನ್ನು ಬಳಸುತ್ತಾರೋ ಇಲ್ಲವೋ, ಆ ಕಂಪನಿಯ ನಿಯಮಗಳಿಗೆ ಬಿಟ್ಟಿದ್ದು. ಆದರೆ ಸಮಾಜದಲ್ಲಿ ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ ಮಾತನಾಡುವಾಗ, ಸಾಮಾಜಿಕ ಜಾಲತಾಣಗಳಲ್ಲಿ ‘ಕಮೆಂಟು’ಗಳನ್ನು ಹಾಕುವಾಗ, ತುಂಬಿದ ಸಭೆಯಲ್ಲಿ ನಮ್ಮ ಅಭಿಪ್ರಾಯವನ್ನು ದಾಖಲಿಸುವಾಗ ನಾವು ಈ ವಿಧಾನಗಳನ್ನು ಬಳಸಿದರೆ ಖಂಡಿತ ಇತರರೊಂದಿಗಿನ ನಮ್ಮ ಬಾಂಧವ್ಯ ಹೆಚ್ಚುತ್ತದೆ. ಎಷ್ಟೋ ಮನಸ್ತಾಪಗಳನ್ನೂ ಈ ವಿಧಾನದಿಂದ ತಡೆಯಬಹುದು. ಯಾರಾದಾರೂ ನಿಮ್ಮನ್ನು ತಮ್ಮ ಕೆಲಸ ಅಥವಾ ಕಾರ್ಯಕ್ರಮಗಳ ಬಗ್ಗೆ ಅಭಿಪ್ರಾಯ ಕೇಳಿದರೆ ಆಗ ‘ಸ್ಯಾಂಡ್‍ವಿಚ್’ ಅನ್ನು ನೆನಪಿಸಿಕೊಳ್ಳುವಿರಿ ತಾನೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.