ADVERTISEMENT

ಸೊಂಟ ನೋವು ನಿಯಂತ್ರಣಕ್ಕೆ ಸೇತುಬಂಧ ಸರ್ವಾಂಗಾಸನ

ಗೋಪಾಲಕೃಷ್ಣ ದೇಲಂಪಾಡಿ
Published 24 ನವೆಂಬರ್ 2019, 19:30 IST
Last Updated 24 ನವೆಂಬರ್ 2019, 19:30 IST
ಸೇತುಬಂಧ ಸರ್ವಾಂಗಾಸನ
ಸೇತುಬಂಧ ಸರ್ವಾಂಗಾಸನ   

ಅಭ್ಯಾಸ ಕ್ರಮ: ಜಮಾಖಾನ ಹಾಸಿದ ನೆಲದ ಮೇಲೆ ಅಂಗಾತ ಮಲಗಬೇಕು. ಆಮೇಲೆ ಕಾಲುಗಳು ಜೋಡಣೆ, ಕೈಗಳು ತೊಡೆಯ ಪಕ್ಕದಲ್ಲಿರಿಸಿ. ಅನಂತರ ಎರಡು ಕೈಗಳ ಸಹಾಯದಿಂದ ಎರಡು ಕಾಲುಗಳನ್ನು ಮಡಿಸಿ ನೆಲಕ್ಕೆ ಪಾದಗಳು ಊರಬೇಕು. ಮೊಣಕಾಲುಗಳು ಮೇಲ್ಮುಖವಾಗಿ ಬಾಗಿಸಿರಬೇಕು. ಕಾಲಿಗಳಲ್ಲಿ ಅಂತರವಿರಿಸಿ. ಕೈಗಳು ಕಾಲುಗಳ ಹಿಮ್ಮಡಿಗೆ ತಾಗುವಂತಿರಲಿ. ಆ ಮೇಲೆ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೃಷ್ಠದ ಭಾಗ ಸಾಧ್ಯವಾಗುವಷ್ಟು ಮೇಲಕ್ಕೆತ್ತಿ. ಬೆನ್ನು ಮೇಲ್ಮುಖವಾಗಿ ಕಮಾನಿನಂತೆ ಭಾಗಿಸಿ. ಆದಷ್ಟು ಹೊಟ್ಟೆ, ನಾಬಿ, ಎದೆ ಭಾಗ ಸಾಧ್ಯವಾಗುವಷ್ಟು ಮೇಲಕ್ಕೆ ಎತ್ತಿ. ಗಲ್ಲವು ಕಾಲರ್ ಬೋನಿಗೆ ತಾಗುವಂತಿರಲಿ. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ಸ್ವಲ್ಪ ಹೊತ್ತು ನಡೆಸುತ್ತಾ ವಿಶ್ರಮಿಸಬೇಕು. ಈ ರೀತಿ ಎರಡು ಅಥವಾ ಮೂರು ಬಾರಿ ಅಭ್ಯಾಸ ಮಾಡಬೇಕು.

ಉಪಯೋಗಗಳು: ಸೊಂಟ ಮತ್ತು ಎದೆಗೂಡಿನ ಪ್ರದೇಶದ ಸ್ನಾಯುಗಳನ್ನು ಹೆಚ್ಚಿಸಲು ಈ ಆಸನ ಅತ್ಯುತ್ತಮವಾಗಿದೆ. ಕೆಳಗಿನ ಮತ್ತು ಮಧ್ಯದ ಬೆನ್ನು, ಭುಜಗಳು, ಮೇಲಿನ ಮತ್ತು ಕೆಳಗಿನ ತೊಡೆಯ ಸ್ನಾಯುಗಳು ಹಾಗೂ ಸೊಂಟದ ಎಲ್ಲಾ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನು ನೋವು ನಿಯಂತ್ರಣವಾಗುತ್ತದೆ. ಮುಟ್ಟಿನ ಸಮಸ್ಯೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಸ್ತ್ರೀಯರ ಸಂತಾನೋತ್ಪತ್ತಿ ಭಾಗವು ಪುನಶ್ಚೇತನಗೊಳ್ಳುತ್ತದೆ. ಪೀನಿಯಲ್, ಪಿಟ್ಯುಟರಿ, ಥೈರಾಯ್ಡ್ ಮತ್ತು ಮೂತ್ರ ಜನಕಾಂಗದ ಗ್ರಂಥಿಗಳು ಪರಿಣಾಮಕಾರಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಮೆದುಳನ್ನು ಶಾಂತಗೊಳಿಸುತ್ತದೆ. ಒತ್ತಡ ಮತ್ತು ಸೌಮ್ಯ, ಖನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ದಣಿದ ಕಾಲುಗಳನ್ನು ಪುನಶ್ಚೇತನಗೊಳಿಸುತ್ತದೆ. ಈ ಆಸನದಲ್ಲಿ ಶಿರಸ್ಸಿಗೆ ರಕ್ತ ಪರಿಚಲನೆ ಜರುಗಿ ಆತಂಕ, ಮನಸ್ಸಿಗೆ ಆಯಾಸ, ತಲೆನೋವು ಇತ್ಯಾದಿ ಕಡಿಮೆಯಾಗುತ್ತದೆ.

ವಿ.ಸೂ.: ಋತುಸ್ರಾವ ಅಥವಾ ಗರ್ಭಾವಸ್ಥೆಯಲ್ಲಿ ಈ ಆಸನ ಅಭ್ಯಾಸ ಬೇಡ. ತೀವ್ರ ಬೆನ್ನು, ಸೊಂಟ ನೋವು ಇದ್ದವರು ವೈದ್ಯರ ತಪಾಸಣೆ, ಚಿಕಿತ್ಸೆ ಪಡೆದು, ಸರಳ ಯೋಗವನ್ನು ಅಳವಡಿಸಬೇಕು. ಕರಿದ ಮಸಾಲೆ ಆಹಾರ ಸೇವನೆ ಬೇಡ. ಸತ್ವಯುತವಾದ ಸಾತ್ವಿಕ ಆಹಾರ ಸೇವಿಸಬೇಕು. ಯೋಗಾಸನಗಳನ್ನು ಗುರುಮುಖೇನನೆ ಕಲಿತು ಅಭ್ಯಾಸ ಮಾಡಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.