ಜೀವವೈವಿಧ್ಯದಲ್ಲಿ ದಾಖಲೆಗೆ ಸಿಗದ ಜೀವಿಗಳೆಂದರೆ ಸೂಕ್ಷ್ಮಜೀವಿಗಳು. ಪರಿಸರದಲ್ಲಿ ಇವುಗಳದ್ದು ಉತ್ಕೃಷ್ಟ ಕೆಲಸವಾದರೂ ಕಣ್ಣಿಗೆ ಕಾಣದಿರುವುದರಿಂದ ನಿಕೃಷ್ಟ ಜೀವಿಗಳೆಂದು ಕಾಣಲಾಗುತ್ತದೆ. ಆಹಾರ ಸರಪಳಿಯಲ್ಲಿ ಅವುಗಳು ವಿಶೇಷ ಮಹತ್ವ ಪಡೆದಿವೆ. ಜೈವಿಕಭೂರಸಾಯನ ಚಕ್ರದಲ್ಲಿ ಪೂತಿಜೀವಿಗಳಾಗಿ (Saprotrophs) ತಮ್ಮ ಅಗಾಧ ಕ್ಷಮತೆಯಿಂದ ಸಾವಯವ ಪದಾರ್ಥಗಳನ್ನು ಜೀರ್ಣಿಸಿ ಎಲ್ಲಾ ಸಸ್ಯಗಳಿಗೆ ಲಭ್ಯವಾಗುವ ಧಾತುಗಳಾಗಿ ಮಾರ್ಪಡಿಸುತ್ತವೆ. ಕಣ್ಣಿಗೆ ಕಾಣುವ ಪ್ರತಿಯೊಂದು ಸಸ್ಯ ಮತ್ತು ಪ್ರಾಣಿಗಳಲ್ಲಿ ಸೂಕ್ಷ್ಮಜೀವಿಗಳು ಹರಡಿವೆಯೆಂದರೆ ಆಶ್ಚರ್ಯವಾಗಬಹುದಲ್ಲವೇ?
ಭೂಮಿಯಲ್ಲಿನ ಮಣ್ಣು, ನೀರು, ಗಾಳಿ ಎಲ್ಲದರಲ್ಲಿಯೂ ಸೂಕ್ಷಜೀವಿಗಳು ನೆಲೆಸಿವೆ. ಅವುಗಳನ್ನು ಸರ್ವಾಂತರಯಾಮಿಗಳು ಎನ್ನಬಹುದು. ಮಣ್ಣಿನ ಮೇಲ್ಪದರ, ಸಾಗರದ ತಳ, ಧ್ರುವ ಪ್ರದೇಶದ ಮಂಜುಗಡ್ಡೆ, ಮುಂತಾದ ಕಡೆ ಇವುಗಳ ಇರುವಿಕೆಯನ್ನು ಪತ್ತೆ ಹಚ್ಚಲಾಗಿದೆ. ಸಕಲ ಚರಾಚರವಸ್ತುಗಳಲ್ಲಿ ಅಣು-ರೇಣು ತೃಣಕಾಷ್ಟಗಳಲ್ಲಿಯೂ ಇವೆ.
ಒಂದು ಜೀವಿಯ ಅಥವಾ ಸ್ಥಳದಲ್ಲಿ ಇರುವ ಒಟ್ಟಾರೆ ಸೂಕ್ಷ್ಮಜೀವಿಗಳನ್ನು ಸೂಕ್ಷ್ಮಜೀವಿ ಸಮೂಹ (Microbiome) ಎನ್ನುವರು. ನಮ್ಮಲ್ಲಿರುವ ಒಟ್ಟು ಸೂಕ್ಷ್ಮಜೀವಿಗಳನ್ನು ಮನುಷ್ಯ ಸೂಕ್ಷ್ಮಜೀವಿ ಸಮೂಹ (Human microbiome) ಎನ್ನುತ್ತಾರೆ.
ಮನುಷ್ಯನ ದೇಹದಲ್ಲಿರಬಹುದಾದ ಸೂಕ್ಷ್ಮಜೀವಿಗಳ ಬಗ್ಗೆ ತಿಳಿಯಲು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳು ಮನುಷ್ಯ ಸೂಕ್ಷ್ಮಜೀವಿ ಸಮೂಹ ಅಧ್ಯಯನವೆಂಬ ಬೃಹತ್ ಸಂಶೋಧನಾ ಯೋಜನೆಯನ್ನು ಕೈಗೆತ್ತಿಕೊಂಡರು. ದೇಹವು ಮೂಳೆ-ಮಾಂಸದ ತಡಿಕೆ ಇದರ ಮೇಲಿದೆ ತೊಗಲಿನ ಹೊದಿಕೆ ಎಂದಷ್ಟೇ ತಿಳಿದಿದ್ದ ನಮಗೆ ಮಾನವನ ಶರೀರದಲ್ಲಿನ ಬ್ರಹ್ಮಾಂಡವನ್ನೇ ತಿಳಿಯುವಂತೆ ಈ ಯೋಜನೆಯ ಮಾಡಿವೆ.
ತಾಯಿಯ ಗರ್ಭಕೋಶವು ಸೂಕ್ಷ್ಮಜೀವಿ-ರಹಿತವಾಗಿರುತ್ತದೆ. ಮಗು ಹುಟ್ಟುವಾಗ ತಾಯಿಯ ಜನನೇಂದ್ರಿಯದಲ್ಲಿರುವ ಲಕ್ಷಾಂತರ ಸೂಕ್ಷ್ಮಜೀವಿಗಳು ಮಗುವಿನ ದೇಹವನ್ನು ಪ್ರವೇಶಿಸುತ್ತವೆ. ಮಗು ಉಸಿರಾಡಿದಂತೆ ಗಾಳಿಯಲ್ಲಿನ ಸೂಕ್ಷ್ಮಜೀವಿಗಳು ದೇಹವನ್ನು ಸೇರುತ್ತವೆ. ಮಗುವನ್ನು ಮೊದಲು ಮುಟ್ಟುವ ಸಂಬಂಧಿಗಳು, ಆಯಾ, ನರ್ಸ್, ಡಾಕ್ಟರ್ ಮತ್ತಿತರರು ಮಗುವಿಗೆ ತಮ್ಮಲ್ಲಿರುವ ಸೂಕ್ಷ್ಮಜೀವಿಗಳ ಉಡುಗೊರೆ ನೀಡುವರು. ಮಗುವಿಗೆ ಎದೆ ಹಾಲುಣಿಸುವಾಗ ತಾಯಿಯ ದೇಹದಿಂದ ಮಗುವಿನ ದೇಹಕ್ಕೆ ಸೂಕ್ಷ್ಮಜೀವಿಗಳು ಸೇರುತ್ತವೆ. ಮಗು ಬೆಳೆದಂತೆ ಉಸಿರಾಡುವ ಗಾಳಿ, ಸೇವಿಸುವ ಆಹಾರ, ಜೀವನಶೈಲಿ ಮತ್ತು ವಾಸಿಸುವ ಪರಿಸರಕ್ಕೆ ಅನುಗುಣವಾಗಿ ಈ ಜೀವಿಯ ಸಮೂಹ ಬದಲಾಗುವುದು. ಮಗುವಿನ ಒಂದು, ಎರಡರಿಂದ ಮೂರು ವರ್ಷಗಳಲ್ಲಿ ಸೂಕ್ಷ್ಮಜೀವಿಗಳೊಂದಿಗೆ ಅನ್ಯೋನತೆ ಬೆಳೆಯುತ್ತದೆ.
ಒಬ್ಬ ಆರೋಗ್ಯವಂತ ಮಾನವನ ದೇಹವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಕಂಡುಬಂದ ವಿಶೇಷವೇನೆಂದರೆ ನಮ್ಮಲ್ಲಿನ ಶೇ 75 ರಷ್ಟು ಜೀವಕೋಶಗಳು ಸೂಕ್ಷ್ಮಜೀವಿಗಳು (ಚಿತ್ರ -1). ದೇಹದ ಪ್ರತಿಯೊಂದು ಭಾಗವು ಈ ಜೀವಿಗಳಿಂದ ಆವೃತವಾಗಿದೆ (ಚಿತ್ರ -2). ನಮ್ಮ ದೇಹದಲ್ಲಿರುವ ಸೂಕ್ಷ್ಮಜೀವಿಗಳ ವಂಶವಾಹಿಗಳನ್ನು ವಿಶ್ಲೇಷಿಸಿದ್ದು ವಿವಿಧ ಪ್ರಭೇದಗಳನ್ನು ಗುರುತಿಸಲಾಗಿದೆ. ನಮ್ಮ ಚಯಾಪಚಯ ಕ್ರಿಯೆಗಳಲ್ಲಿ ಮತ್ತು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸುತ್ತವೆ. ಪ್ರಮುಖವಾಗಿ ದಂಡಾಣುಗಳಲ್ಲಿ ಆಕ್ಟಿನೊಬ್ಯಾಕ್ಟಿರಿಯಾ, ಬ್ಯಾಕ್ಟಿರಿಯೊಡೆಟಿಸ್, ಫರ‍್ಮಿಕ್ಯೂಟ್ಸ್, ಪ್ರೊಟಿಯೋಬ್ಯಾಕ್ಟಿರಿಯಾ, ಸಯನೋಬ್ಯಾಕ್ಟಿರಿಯಾ ಗುಂಪುಗಳಲ್ಲಿ ವರ್ಗಿಕರಿಸಲಾಗಿದೆ. ನಾವು ಆರೋಗ್ಯಪೂರ್ಣವಾಗಿರಲು ಸೂಕ್ಷ್ಮಜೀವಿಗಳೇ ಕಾರಣ.
ನಾವು ತಿಂದಂತಹ ಆಹಾರದಲ್ಲಿನ ಹಲವಾರು ಸಂಕೀರ್ಣ ವಸ್ತುಗಳನ್ನು ಜೀರ್ಣಿಸಲು ಸಹಾಯಮಾಡುತ್ತವೆ. ನಮಗೆ ಅಗತ್ಯವಿರುವ ಹಲವಾರು ವಿಟಮಿನ್‌ಗಳನ್ನು ಉತ್ಪಾದಿಸುತ್ತವೆ. ಮನುಷ್ಯ ರೋಗಾಣುಗಳಿಗೆ ಮತ್ತು ಔಷಧಿಗಳಿಗೆ ಸ್ಪಂದಿಸುವ ರೀತಿ ಸೂಕ್ಷ್ಮಜೀವಿಗಳ ಮೇಲೆ ಅವಲಂಬಿತ ಪ್ರಕ್ರಿಯೆಗಳು. ಕರುಳಿನಲ್ಲಿರುವ ಸೂಕ್ಷ್ಮಜೀವಿ ಸಮೂಹಕ್ಕೆ ಧಕ್ಕೆ ಬಂದಾಗ ಹೊಟ್ಟೆನೋವು, ಅಜೀರ್ಣ, ಮಲಬದ್ಧತೆ, ಭೇದಿ, ಆಸ್ತಮಾ ಮತ್ತು ಸ್ಥೂಲಕಾಯ ದಂತಹ ರೋಗಗಳು ಕಾಣಿಸಿಕೊಳ್ಳುತ್ತವೆ. ನಮಗೆ ಬರುವ ರೋಗ-ರುಜಿನ ಮತ್ತು ಸಾವು ಸೂಕ್ಷ್ಮಜೀವಿಗಳೊಂದಿಲೇ ನಿರ್ಧರಿಸಲ್ಪಡುತ್ತವೆ. ಅವೇ ನಮ್ಮ ಪೂರ್ವಜರಾಗಿದ್ದು ಭವಿಷ್ಯವನ್ನು ನಿರ್ಧರಿಸುವುವು. ವಿಶ್ವದಲ್ಲಿನ ಸಕಲ ಪ್ರಾಣಿ-ಸಸ್ಯಗಳು ನಾಶವಾದರೂ ಸೂಕ್ಷ್ಮಜೀವಿಗಳು ಮಾತ್ರ ಸುಲಭವಾಗಿ ನಾಶವಾಗದೇ ಮುಂದಿನ ಜೀವವಿಕಾಸಕ್ಕೆ ಅನುವು ಮಾಡಿಕೊಡುತ್ತವೆ. ಹೆಚ್ಚಿನವು ಮಿತ್ರರರೇ ಆಗಿದ್ದು ಕೆಲವು ಮಾತ್ರ ಮಾನವನ ಶತ್ರುಗಳೆನಿಸಿಕೊಂಡಿವೆ.
(ಚಿತ್ರ -2 ಕೃಪೆ: ಸೈಂಟಿಫಿಕ್ ಅಮೇರಿಕನ್)
(ಲೇಖಕರು: ಪ್ರಾಧ್ಯಾಪಕರು, ಸೂಕ್ಷ್ಮಜೀವಿಶಾಸ್ತ್ರ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.