ADVERTISEMENT

ಇದು ಶ್ರಮಿಕರ ವ್ಯಾಯಾಮ ಶಾಲೆ

-

ಸಿದ್ದು ಆರ್.ಜಿ.ಹಳ್ಳಿ
Published 24 ಫೆಬ್ರುವರಿ 2019, 19:45 IST
Last Updated 24 ಫೆಬ್ರುವರಿ 2019, 19:45 IST
ಹುಬ್ಬಳ್ಳಿಯ ಮರಾಠಾಗಲ್ಲಿಯಲ್ಲಿರುವ ‘ರೆಡ್ ಫ್ಲೇಮ್‌ ಜಿಮ್‌’ನಲ್ಲಿ ದೈಹಿಕ ಕಸರತ್ತು ಮಾಡುತ್ತಿರುವ ದೃಶ್ಯ
ಹುಬ್ಬಳ್ಳಿಯ ಮರಾಠಾಗಲ್ಲಿಯಲ್ಲಿರುವ ‘ರೆಡ್ ಫ್ಲೇಮ್‌ ಜಿಮ್‌’ನಲ್ಲಿ ದೈಹಿಕ ಕಸರತ್ತು ಮಾಡುತ್ತಿರುವ ದೃಶ್ಯ   

ಸುಣ್ಣ– ಬಣ್ಣ ಕಾಣದ ಹಳೇ ಕಟ್ಟಡ, ಜೋರಾಗಿ ತಳ್ಳಿದರೆ ಮುರಿದೇ ಹೋಗುವಂಥ ಬಾಗಿಲು, ಬಾಗಿಲಿಗೆ ಬಿಟ್ಟಿರುವ ಪರದೆ ಸರಿಸಿ ಒಳಗೆ ಕಾಲಿಟ್ಟರೆ, ಮಂದ ಬೆಳಕಿನಲ್ಲಿ ಬೆವರು ಸುರಿಸಿ, ದೇಹವನ್ನು ಹುರಿಗೊಳಿಸುತ್ತಿದ್ದ ಫಿಟ್‌ನೆಸ್‌ ಪ್ರಿಯರು, 20x20 ಸುತ್ತಳತೆಯ ಪುಟ್ಟ ಕೋಣೆಯಲ್ಲಿ ಒತ್ತೊತ್ತಾಗಿ ಜೋಡಿಸಿದ್ದ ಹಳೇ ಮಾದರಿಯ ಜಿಮ್ ಉಪಕರಣಗಳು..

ಇದು, ಹುಬ್ಬಳ್ಳಿಯ ‘ರೆಡ್‌ ಫ್ಲೇಮ್‌ ಜಿಮ್‌’ ಚಿತ್ರಣ. ಈ ವ್ಯಾಯಾಮ ಶಾಲೆಯಲ್ಲಿ ತಾಲೀಮು ಮಾಡಿದ 15ಕ್ಕೂ ಹೆಚ್ಚು ಮಂದಿ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದಾರೆ. 30ಕ್ಕೂ ಹೆಚ್ಚು ಮಂದಿ ‘ಸ್ಟೇಟ್‌ ಚಾಂಪಿಯನ್‌ಷಿಪ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾವಿರಕ್ಕೂ ಅಧಿಕ ಜನರು ‘ದೇಹಸಿರಿ’ ಬೆಳೆಸಿಕೊಂಡಿದ್ದಾರೆ. ಇನ್ನೂ ವಿಶೇಷವೆಂದರೆ, ಇವರಲ್ಲಿ
ಬಹುತೇಕರು ಇಲ್ಲಿ ‘ಸಂಪೂರ್ಣ ಉಚಿತ’ ತರಬೇತಿ ಪಡೆದಿದ್ದಾರೆ!

ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ಅಯೂಬ್‌ಖಾನ್‌ ‘ಭಾರತ್‌ ಉದಯ್‌’ ಪ್ರಶಸ್ತಿ ಗಳಿಸಿದ್ದಾರೆ. ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಯಾನಿಕ್‌ ರಿಚರ್ಡ್ ಮುರ್ಥೋಟಿ ‘ಮಿ.ಇಂಡಿಯಾ’ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಆಟೊ ಚಾಲಕ ದಾವುಲ್‌ಸಾಬ್‌ ಅಂಗವಿಕಲರ ವಿಭಾಗದಲ್ಲಿ ‘ಮಿ.ಇಂಡಿಯಾ’ ಆಗಿ ಹೊರಹೊಮ್ಮಿದ್ದಾರೆ. ಪೇಂಟರ್‌ ಆಗಿದ್ದ ಅಬ್ದುಲ್‌ ಶಕೂರ್‌ ಬಿದರಿ ಅವರು ‘ಭಾರತ್‌ ಕಿಶೋರ್‌’ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಶ್ರಮಿಕರ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಹುಬ್ಬಳ್ಳಿಯ ಶಿವಕುಮಾರ ತಾನಾಜಿರಾವ್ ಶಿಂಧೆ.

‘ಜಿಮ್‌ ಸೆಂಟರ್’ ಆದ ಗರಡಿ ಮನೆ

ADVERTISEMENT

ಕುಸ್ತಿ ಪೈಲ್ವಾನರು ಕಸರತ್ತು ಮಾಡುತ್ತಿದ್ದ ಗರಡಿ ಮನೆ ಕಾಲಾನಂತರ ಶಿಥಿಲಾವಸ್ಥೆ ತಲುಪಿತು. ಕುಸ್ತಿ ಚಟುವಟಿಕೆಯೂ ಸ್ಥಗಿತಗೊಂಡಿತು. ಶಿವಕುಮಾರ ಶಿಂಧೆ ಅವರು, ಮರಾಠ ಸಮಾಜಕ್ಕೆ ಸೇರಿದ್ದ ಈ ಪಾಳುಬಿದ್ದ ಕಟ್ಟಡವನ್ನು ದುರಸ್ತಿಗೊಳಿಸಿ, ‘ರೆಡ್ ಫ್ಲೇಮ್ ಜಿಮ್‌’ ಅನ್ನು 1998ರಲ್ಲಿ ಆರಂಭಿಸಿದರು. ಹುಬ್ಬಳ್ಳಿಯ ಕೊಯಿನ್‌ ರಸ್ತೆಯಲ್ಲಿರುವ ತಮ್ಮದೇ ಕಾರ್ಖಾನೆ ‘ಶಿವಕುಮಾರ್‌ ಪವರ್ ಎಂಜಿನಿಯರಿಂಗ್’ನಲ್ಲಿ ಡಂಬೆಲ್ಸ್, ಬಾರ್ಸ್‌. ಲೆಗ್ ಪ್ರೆಸ್‌, ಬೆಂಚ್ ಪ್ರೆಸ್‌ ಮುಂತಾದ ಉಪಕರಣಗಳನ್ನು ತಯಾರಿಸಿ, ‘ರೆಡ್‌ ಫ್ಲೇಮ್‌’ ನಲ್ಲಿ ಅಳವಡಿಸಿದರು. ಹೀಗೆ, ಕಟ್ಟಡ ದುರಸ್ತಿ ಮತ್ತು ಉಪಕರಣಗಳಿಗಾಗಿ ₹ 50 ಸಾವಿರ ವೆಚ್ಚ ಮಾಡಿದರು.

‘ದೇಹದಾರ್ಢ್ಯ ಪಟು’ ಆಗಬೇಕು, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಯಿಂದ ಅನೇಕ ಯುವಕರು ಶಿಂಧೆ ಅವರ ಬಳಿ ಬಂದರು. ಬಂದವರಲ್ಲಿ ಬಹುತೇಕರು ಬಡವರು ಮತ್ತು ಶ್ರಮಿಕ ವರ್ಗದವರಾಗಿದ್ದರು. ಅವರಿಂದ ಹಣ ಪಡೆದು, ಜಿಮ್‌ ತರಬೇತಿ ನೀಡಲು ಶಿಂಧೆ ಅವರ ಮನಸು ಒಪ್ಪಲಿಲ್ಲ. ಹಾಗಾಗಿಯೇ ಬಡ ವರ್ಗದವರಿಗೆ ಉಚಿತವಾಗಿ ಪ್ರವೇಶ ಕಲ್ಪಿಸಿ, ತರಬೇತಿ ನೀಡಿದರು. ಹಣ ಗಳಿಕೆಯೇ ಜಿಮ್‌ ಸೆಂಟರ್‌ನ ಉದ್ದೇಶವಾಗಬಾರದು ಎಂಬ ಉದಾತ್ತ ನಿಲುವು ತಳೆದರು. ‘ಬಾಡಿ ಬಿಲ್ಡರ್‌’ ಆಗಬೇಕು ಎಂದು ಕನವರಿಸಿದ ಹಮಾಲಿ, ಪೇಂಟರ್‌, ಕೂಲಿ ಕಾರ್ಮಿಕ, ಆಟೊ ಚಾಲಕ, ತರಕಾರಿ ವ್ಯಾಪಾರಿ ಮತ್ತು ಬಡ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿದರು. ಇವರಲ್ಲಿ ಕೆಲವರು ಸ್ವಂತ ಜಿಮ್‌ ಸೆಂಟರ್‌ ತೆರೆದಿದ್ದರೆ, ಇನ್ನು ಕೆಲವರು ತರಬೇತುದಾರರಾಗಿ ಬದುಕು ಕಟ್ಟಿಕೊಂಡಿದ್ದಾರೆ.

20 ವರ್ಷಗಳಿಂದ ನಡೆಯುತ್ತಿರುವ ‘ರೆಡ್‌ ಫ್ಲೇಮ್‌’ ಜಿಮ್‌ನಲ್ಲಿ ಪ್ರಸ್ತುತ 50ರಿಂದ 60 ಮಂದಿ ಫಿಟ್‌ನೆಸ್‌ ತರಬೇತಿ ಪಡೆಯುತ್ತಿದ್ದು, 10 ಮಂದಿದೇಹದಾರ್ಢ್ಯ ಸ್ಪರ್ಧೆಗೆ ಹೋಗಲು ಅಣಿಯಾಗುತ್ತಿದ್ದಾರೆ. ಇಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್‌ ಅಯೂಬ್‌ ಖಾನ್‌ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಪ್ಪು ನಿರ್ಣಯ ತೀರ್ಪುಗಾರರನ್ನಾಗಿಸಿತು!

ಹುಬ್ಬಳ್ಳಿಯ ಮರಾಠಾ ಗಲ್ಲಿಯ ನಿವಾಸಿ ಶಿವಕುಮಾರ ಶಿಂಧೆ ಅವರ ತಂದೆ ತಾನಾಜಿರಾವ್ ಶಿಂಧೆ ಕುಸ್ತಿಪಟುವಾಗಿದ್ದರು. ತಾಯಿ ತಾರಾಬಾಯಿ ಶಿಂಧೆ ಗೃಹಿಣಿ. ತಂದೆಯ ಕುಸ್ತಿ ಪಟ್ಟುಗಳನ್ನು ನೋಡುತ್ತಾ ಬೆಳೆದ ಶಿವಕುಮಾರ ಅವರು, ಮನೆಯಲ್ಲೇ ಡಂಬಲ್ಸ್‌, ಬಾರ್ಸ್‌ ಮೂಲಕ ಕಸರತ್ತು ಆರಂಭಿಸಿದರು. ಬಿ.ಕಾಂ. ಮುಗಿಸಿದ ನಂತರ, ಜಿಲ್ಲಾಮಟ್ಟದ ಬಾಡಿ ಬಿಲ್ಡಿಂಗ್‌ ಸ್ಪರ್ಧೆ ಆಯೋಜಿಸಿ, ಸ್ಥಳೀಯ ಸ್ಪರ್ಧಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿದರು. ಆದರೆ, ಆ ಸ್ಪರ್ಧೆಯಲ್ಲಿ ತೀರ್ಪುಗಾರರು ಕೊಟ್ಟ ತೀರ್ಪು, ಶಿಂಧೆ ಅವರಿಗೆ ಸರಿ ಕಾಣಲಿಲ್ಲ. ತಮಗೆ ಬೇಕಾದವರಿಗೆ ಬಹುಮಾನ ಕೊಟ್ಟರು ಎಂಬ ಕೊರಗು ಕಾಡಿತು.

ನಂತರ, ಕರ್ನಾಟಕ ಬಾಡಿ ಬಿಲ್ಡಿಂಗ್‌ ಅಸೋಸಿಯೇಷನ್‌ ಉಪಾಧ್ಯಕ್ಷರಾಗಿದ್ದ ಶಿವಾಜಿ ದೇಸಾಯಿ ಅವರ ಸಲಹೆ ಮೇರೆಗೆ
ಜಿಲ್ಲಾ ಮಟ್ಟದ ತೀರ್ಪುಗಾರರ ಪರೀಕ್ಷೆ ತೆಗೆದುಕೊಂಡು, ಮೊದಲ ಯತ್ನದಲ್ಲೇ ಶಿಂಧೆ ಉತ್ತೀರ್ಣರಾದರು. ಎರಡು ವರ್ಷಗಳ ನಂತರ ರಾಜ್ಯಮಟ್ಟದ ತೀರ್ಪುಗಾರರ ಪರೀಕ್ಷೆ, ತದನಂತರ ರಾಷ್ಟ್ರೀಯ ಮಟ್ಟದ ತೀರ್ಪುಗಾರರ ಪರೀಕ್ಷೆಯಲ್ಲೂ ಉತ್ತೀರ್ಣ
ರಾದರು. ದಹೆಲಿ, ಮುಂಬೈ, ಚೆನ್ನೈ, ಹೈದರಾಬಾದ್‌, ವಿಶಾಖಪಟ್ಟಣಂ, ಗೋವಾ, ವಾರಾಣಸಿ ಸೇರಿದಂತೆ ಹಲವಾರು ಕಡೆ ನಡೆದ 200ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ಮಿಸ್ಟರ್‌ ವರ್ಲ್ಡ್’ ಸ್ಪರ್ಧೆಯ ನಿರ್ಣಾಯಕ
ರಾಗಿಯೂ ಗುರುತಿಸಿಕೊಂಡಿದ್ದಾರೆ. 2011ರಲ್ಲಿ ಹುಬ್ಬಳ್ಳಿಯ ರವಿನಗರದಲ್ಲಿ ’ರೆಡ್‌ ಫ್ಲೇಮ್‌ ಜಿಮ್‌‘ನ ಮತ್ತೊಂದು ಶಾಖೆ
ತೆರೆದು, ಫಿಟ್‌ನೆಸ್‌ ಪಾಠ ಹೇಳಿ ಕೊಡುತ್ತಿದ್ದಾರೆ.

ಅಡ್ಡದಾರಿ ಆರೋಗ್ಯಕ್ಕೆ ಆಪತ್ತು

‘ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ, ಕಠಿಣ ಪರಿಶ್ರಮದಿಂದ ವರ್ಷಗಟ್ಟಲೆ ಕಸರತ್ತು ಮಾಡಿ, ದೇಹದಾರ್ಢ್ಯ ಪಟುವಾಗಿ ರೂಪುಗೊಳ್ಳುತ್ತಿದ್ದರು. ಈಗಿನ ‘ಜಿಮ್‌ ಕಲ್ಚರ್‌’ ಪರಿಕಲ್ಪನೆಯೇ ಬದಲಾಗಿದೆ. ಹೆಚ್ಚು ಕಷ್ಟಪಡದೆ, ಅಲ್ಪ ಅವಧಿಯಲ್ಲೇ ‘ಬಾಡಿ ಬಿಲ್ಡರ್‌’ ಆಗಬೇಕು ಎಂದು ಯುವಜನರು ಬಯಸುತ್ತಿದ್ದಾರೆ. ಕೆಲವು ಜಿಮ್‌ ಸೆಂಟರ್‌ಗಳಂತೂ ಹಣ ಗಳಿಕೆಯನ್ನೇ ಪ್ರಮುಖ ಉದ್ದೇಶವನ್ನಾಗಿಸಿಕೊಂಡಿವೆ. ಬಂದ ಗ್ರಾಹಕರಿಗೆ ಅನಗತ್ಯವಾಗಿ ‘ಪರ್ಸನಲ್‌ ಟ್ರೇನರ್‌’ ತೆಗೆದುಕೊಳ್ಳಿ ಎಂದು ತರಬೇತುದಾರರು ದುಂಬಾಲು ಬೀಳುತ್ತಾರೆ. ನಂತರ, ಪ್ರೊಟೀನ್‌ ಡ್ರಿಂಕ್ಸ್‌, ಸ್ಟಿರಾಯಿಡ್‌ ಬಳಸಲು ಪ್ರೇರೇಪಿಸುತ್ತಾರೆ. ಇದರಿಂದ ತಕ್ಷಣಕ್ಕೆ ಪರಿಣಾಮ ಸಿಗಬಹುದು, ಆದರೆ, ಕೆಲವು ತಿಂಗಳ ನಂತರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ’ ಎನ್ನುತ್ತಾರೆ ಶಿವಕುಮಾರ ಶಿಂಧೆ.

‘ಶಕ್ತಿ ಮತ್ತು ವೇಗದ ಬಗ್ಗೆ ಮಾತನಾಡುವಾಗ ‘ಹಾರ್ಸ್ ಪವರ್‌’ ಎಂದು ಬಳಸುತ್ತೇವೆ. ಅಂತಹ ಕುದುರೆ ಕೂಡ ತಿನ್ನುವುದು ಹುಲ್ಲು, ಹುರುಳಿಯನ್ನು. ಆನೆಗಿಂತ ಬಲಿಷ್ಠ ಪ್ರಾಣಿ ಮತ್ತೊಂದು ಇದೆಯಾ..? ಆನೆ ತಿನ್ನುವುದು ಬಿದಿರು, ಕಬ್ಬನ್ನು ಅಲ್ಲವೇ... ಅಂದರೆ, ಪ್ರತಿಯೊಂದು ಜೀವಿಯೂ ನೈಸರ್ಗಿಕ ಆಹಾರಾಭ್ಯಾಸವನ್ನೇ ಪಾಲಿಸುತ್ತದೆ. ಅಂದರೆ, ನಮ್ಮ ದೇಹಕ್ಕೆ ಅನುಗುಣವಾಗಿ, ಮೊದಲಿನಿಂದಲೂ ರೂಢಿಸಿಕೊಂಡು ಬಂದ ಆಹಾರವನ್ನೇ ಸೇವಿಸಬೇಕು. ಬಾಡಿ ಬಿಲ್ಡರ್‌ಗಳು ಹಸಿರು ತರಕಾರಿ, ಹಣ್ಣು, ಮೊಳಕೆ ಕಾಳು, ಮೊಟ್ಟೆ, ಹಾಲು, ಜೋಳದ ರೊಟ್ಟಿ, ನುಗ್ಗೇಕಾಯಿ ಜ್ಯೂಸ್‌ (ಅಭ್ಯಾಸ ಇದ್ದವರು ಚಿಕನ್‌) ಸೇವಿಸಿದರೆ ಸಾಕು ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ಸಿಗುತ್ತದೆ’ ಎಂಬುದು ಶಿಂಧೆ ಅವರ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.