ಕೆಲಸದ ಒತ್ತಡದಿಂದಾಗಿ ದೇಹ ದಣಿಯುತ್ತದೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇವುಗಳ ಪೈಕಿ ಭುಜದ ನೋವು ಒಂದು. ರೋಟೇಟರ್ ಕಫ್ ಹಾನಿಯಾದರೆ ಭುಜದ ನೋವು ಕಾಣಿಸಿಕೊಳ್ಳಬಹುದು.
ಭುಜದ ಜಂಟಿಯಲ್ಲಿ ತೋಳನ್ನು ರೂಪಿಸಿರುವ ಸ್ನಾಯುರಜ್ಜುಗಳು ಮತ್ತು ಅಸ್ಥಿರಜ್ಜುಗಳಿಂದ ಕೂಡಿದ ಬಲವಾದ ಪೊರೆಯನ್ನು ರೊಟೇಟರ್ ಕಫ್ ಎಂದು ಕರೆಯಲಾಗುತ್ತದೆ. ಈ ಸ್ನಾಯುಗಳು ತೋಳನ್ನು ಎತ್ತುವ ಮತ್ತು ತಿರುಗಿಸುವ ವೇಳೆ ಶಕ್ತಿಯನ್ನು ಒದಗಿಸುತ್ತವೆ. ವಯಸ್ಸಾದಂತೆ ಈ ಸ್ನಾಯುಗಳು ತೆಳುವಾಗುವುದರ ಜೊತೆಗೆ ಗಾಸಿಗೊಳಗಾಗುತ್ತವೆ. ಹೀಗಾಗಿ ಆಗಾಗ್ಗೆ ಹಾನಿಗೊಳ್ಳಬಹುದು.
ಗಾಸಿಯಾಗಲು ಕಾರಣವೇನು?
ರೋಟೇಟರ್ ಕಫ್ ಹಾನಿಯಾಗಲು ಎರಡು ಪ್ರಾಥಮಿಕ ಕಾರಣಗಳಿವೆ. ತೀವ್ರವಾದ ಗಾಯವಾದಾಗ ಅಂದರೆ ಕೈಯ ಮೇಲೆ ಏನಾದರೂ ವಸ್ತು ಬಿದ್ದಾಗ ಅಥವಾ ಭಾರವಾದದ್ದನ್ನು ಎತ್ತಿದಾಗ ಪೊರೆ ಹರಿಯಬಹುದು. ಈ ರೀತಿಯ ಹರಿತಕ್ಕೊಳಗಾದ ವೇಳೆ ಮೂಳೆ ಮುರಿತದಂತಹ ಶಬ್ಧ ಕೇಳಿಬರುತ್ತದೆ. ಎರಡನೇ ಕಾರಣವೆಂದರೆ ಭುಜದ ಮೇಲೆ ಹೆಚ್ಚು ಒತ್ತಡ ಹೇರಿದಂತೆ ಕಾಲಕ್ರಮೇಣ ಪೊರೆ ದುರ್ಬಲಗೊಳ್ಳುತ್ತಾ ಹೋಗುತ್ತದೆ.
ಸಮಸ್ಯೆಯ ಲಕ್ಷಣಗಳೇನು?
ರಾತ್ರಿ ಮಲಗಿದ ವೇಳ ಹಾಗೂ ಭುಜದ ಮೇಲೆ ಒರಗಿ ಮಲಗಿದಾಗ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಯಾವುದೇ ವಸ್ತುವನ್ನು ಎತ್ತಿದಾಗ ಮತ್ತು ಕೈಯಿಂದ ಇಳಿಸುವಾಗ ಅಥವಾ ಇನ್ಯಾವುದೇ ರೀತಿಯ ಚಲನೆ ಮಾಡುವಾಗ ಕಷ್ಟಪಡುತ್ತಾರೆ.ಇದಕ್ಕೆ ಸೂಕ್ತ ಚಿಕಿತ್ಸೆ ನೀಡದೇ ಹೋದರೆ ಕಫ್ ಹಾನಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಭುಜದ ಚಲನೆಗೆ ತೊಂದರೆಯಾಗುತ್ತದೆ.
ಎಕ್ಸ್ ರೇ ಅಥವಾ ಎಂಆರ್‌ಐ ಸ್ಕ್ಯಾನ್‌ಗಳಂಥ ಪರೀಕ್ಷೆಯಿಂದ ಇದನ್ನು ಪತ್ತೆಹಚ್ಚಬಹುದು. ಎಂಆರ್‌ಐ ಸ್ಕ್ಯಾನ್‌ಗಳ ಮೂಲಕ ತೊಂದರೆಗೊಳಗಾದ ಸ್ಥಳದ ಗಾತ್ರ ಮತ್ತು ದಪ್ಪವನ್ನು ತಿಳಿಯಬಹುದು. ಅಲ್ಲದೆ ಸುತ್ತಮುತ್ತಲಿನ ಸ್ನಾಯುವಿನ ಸ್ಥಿತಿಯ ಬಗ್ಗೆಯೂ ಅರಿಯಬಹುದು.
ಚಿಕಿತ್ಸೆಗಳೇನು ?
ರೊಟೇಟರ್ ಕಫ್ ಹರಿತಕ್ಕೆ ಒಳಗಾದಾಗ ನೋವು ನಿವಾರಿಸುವುದು ಮತ್ತು ಭುಜದ ಚಲನೆ ಮೊದಲಿನಂತಾಗಲು ಮಾಡುವುದು ಚಿಕಿತ್ಸೆಯ ಪ್ರಾಥಮಿಕ ಉದ್ದೇಶವಾಗಿರುತ್ತದೆ. ಚಿಕಿತ್ಸೆಯು ಹರಿತಕ್ಕೊಳಗಾದ ಜಾಗದ ಅಳತೆ, ರೋಗಿಯ ವಯಸ್ಸು, ಚಟುವಟಿಕೆಯ ಮಟ್ಟ ಮತ್ತು ಒಟ್ಟಾರೆ ಆರೋಗ್ಯದ ಅಂಶಗಳ ಮೇಲೆ ಅವಲಂಬಿಸಿರುತ್ತದೆ.
ಸಣ್ಣ ಅಥವಾ ಭಾಗಶ ಹಾನಿಯಾದರೆ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿ ದೈಹಿಕ ಚಿಕಿತ್ಸೆ, ಔಷಧಿಗಳು, ಕೆಲವೊಮ್ಮೆ ನೋವು ನಿರ್ವಹಿಸಲು ಮತ್ತು ಚಲನಶೀಲತೆಯನ್ನು ಸುಧಾರಿಸಲು ಚುಚ್ಚುಮದ್ದುಗಳನ್ನು ಒಳಗೊಂಡಿರುತ್ತವೆ. ನೋವಿನ ಲಕ್ಷಣಗಳು 6 ರಿಂದ 12 ತಿಂಗಳಿಗಿಂತ ಹೆಚ್ಚು ಕಾಲ ಇದ್ದರೆ ಮತ್ತು ತೀವ್ರ ಗಾಯಕ್ಕೆ ಒಳಗಾಗಿದ್ದರೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.
ಗುಣಮುಖರಾಗಲು ಕೀ ಹೋಲ್ ಸರ್ಜರಿ ಎಂದೂ ಕರೆಯಲ್ಪಡುವ ಆರ್ಥೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಹರಿತಗೊಂಡ ಅಂಗಾಂಶದ ಗುಣಮಟ್ಟ ಕ್ಷೀಣಿಸಿದ್ದರೆ ಅಥವಾ ದೀರ್ಘಕಾಲದ ಹಾನಿಗೊಳಗಾಗಿದ್ದರೆ ಅಂತಹ ಸಂದರ್ಭದಲ್ಲಿ ಗಾಯಗೊಂಡ ಭಾಗಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದಾಗ ತಾತ್ಕಾಲಿಕವಾಗಿ ಗಾಯವನ್ನು ಮುಚ್ಚಲಾಗುತ್ತದೆ. ಮುಖ್ಯವಾಗಿ ಭುಜದ ಸಂಧಿವಾತಕ್ಕೆ ಒಳಪಟ್ಟವರಿಗೆ ಭುಜದ ಬದಲಿ ಶಸ್ತ್ರಚಿಕಿತ್ಸೆ ಮಾಡುವುದೇ ಪರಿಹಾರ. ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ.
ಲೇಖಕರು: ಡಾ. ಶ್ರೀವತ್ಸ ಸುಬ್ರಮಣ್ಯ, ಮೂಳೆ ಶಸ್ತ್ರಚಿಕಿತ್ಸಕ , ಬೆಂಗಳೂರಿನ ವಾಸವಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.