ADVERTISEMENT

ಜಗಳದಲ್ಲಿ ಮೌನದ ಮಾತು

ರಮ್ಯಾ ಶ್ರೀಹರಿ
Published 24 ಅಕ್ಟೋಬರ್ 2022, 20:00 IST
Last Updated 24 ಅಕ್ಟೋಬರ್ 2022, 20:00 IST
   

ನಮ್ಮೆಲ್ಲಾ ಜಗಳಗಳು, ಮನಸ್ತಾಪ, ವಾದ-ವಿವಾದಗಳು ಹೇಗೆ ಹುಟ್ಟುತ್ತವೆ, ಹೇಗೆ ಬೆಳೆಯುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜಗಳಗಳನ್ನು ಕೊನೆಗಾಣಿಸುವ ಬಗೆಯೂ ಸುಲಭವಾಗಿ ಗೋಚರಿಸುತ್ತದೆ. ಜಗಳ ಎಂಬುದು ಕೇವಲ ಮಾತಿನ ಚಕಮಕಿ ಅಷ್ಟೇನಾ? ಜಗಳ ಎನ್ನುವುದು ಬರೀ ಮಾತಿನಿಂದಲೇ ಹುಟ್ಟಿ, ಮಾತಿನಿಂದಲೇ ಬೆಳೆಯುವುದೇ? ಮಾತಿನ ಮೂಲಕವೇ ಎಲ್ಲ ಜಗಳಗಳನ್ನು ಬಗೆಹರಿಸಬಹುದೇ? ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುತ್ತಾರೆ. ಎಂದರೆ ಯಾವಾಗಲೂ ಉಪಾಯವಾಗಿ ಜಗಳಗಳನ್ನು ನಿವಾರಿಸುವುದು ಸಾಧ್ಯವಿದೆಯೇ? ಹಾಗೆ ‘ಮಾತು ಬಲ್ಲವರು’ ಎಂದೂ ಜಗಳವನ್ನೇ ಆಡುವುದಿಲ್ಲವೇ?

ನಾವೆಷ್ಟೇ ಒಳ್ಳೆಯ ಮಾತುಗಳನ್ನಾಡಿದರೂ ಕ್ರಿಯೆಯ ಮೂಲಕ ಅದನ್ನು ಅಭಿವ್ಯಕ್ತಿಸುವುದರಲ್ಲಿ ಸೋತಾಗ ಮಾತು ಅರ್ಥಹೀನವಾಗುತ್ತದೆ. ಹಾಗೆಯೇ ನಮಗೆ ಯಾರಲ್ಲಿ ನಂಬಿಕೆ, ಪ್ರೀತಿ ಇಲ್ಲವೋ ಅವರ ಎಲ್ಲಾ ಮಾತುಗಳಲ್ಲೂ ನಮಗೇನೋ ಕೊಂಕು ಕಾಣಿಸುತ್ತದೆ. ಯಾರ ಅಂತರಂಗವನ್ನು ನಾವು ಬಲ್ಲೆವೋ, ಎಲ್ಲಿ ವಿಶ್ವಾಸವಿದೆಯೋ ಅಂತಹವರು ಆಡುವ ಕಹಿಯಾದ ಮಾತೂ ನಮ್ಮನ್ನೇನೂ ಅಷ್ಟು ಬಾಧಿಸುವುದಿಲ್ಲ. ಒಟ್ಟಿನಲ್ಲಿ ಜಗಳ ಎನ್ನುವುದು ಮಾತಿನ ಮೂಲಕ ತೋರ್ಪಡಿಸಿಕೊಳ್ಳುತ್ತದೆಯಾದರೂ, ಅದಕ್ಕೆ ಮನಸ್ಸು ಮತ್ತು ಕ್ರಿಯೆಗಳ ಜೊತೆ ನೆಂಟಸ್ತಿಕೆಯಿದೆ. ಹಾಗಾಗಿಯೇ ಜಗಳಗಳನ್ನು ಉಪಶಮನಗೊಳಿಸುವಲ್ಲಿ ಮಾತಿಗಿಂತ ಪ್ರಭಾವಶಾಲಿಯಾದ್ದು ಇನ್ನೇನೋ ಇದೆ ಎಂಬುದು ಅರಿವಾದಾಗ ನಾವು ಮೌನಕ್ಕೆ ಶರಣಾಗುತ್ತೇವೆ. ಜಾಣತನದಿಂದ ಮಾತನ್ನು ಪೋಣಿಸುವುದು ಬಿಟ್ಟು ನಿಷ್ಕಲ್ಮಶ ಭಾವನೆಗಳನ್ನು ಹೊಂದುವುದರ ಕಡೆಗೆ, ಎಲ್ಲರಿಗೂ ಹಿತವಾದಂತಹ ಕ್ರಿಯೆಗಳ ಕಡೆಗೆ ಗಮನ ಹರಿಸುತ್ತೇವೆ. ಆಗಷ್ಟೇ ಜಗಳಗಳು ನಿಜವಾಗಿಯೂ ಮುಗಿದು ಶಾಂತಿ ನೆಲೆಸುತ್ತದೆ. ಅದಲ್ಲದೆ ಕೇವಲ ಮಾತಿನ ಜಾಣ್ಮೆಯಿಂದ ಇನ್ನೊಬ್ಬರ ಬಾಯಿ ಮುಚ್ಚಿಸಬಹುದು ಹೊರತು, ಅದರಿಂದ ಯಾರ ಹೃದಯವನ್ನೂ ಅರಳಿಸಲಾಗುವುದಿಲ್ಲ.

ಜಗಳದಲ್ಲಿ ಮೌನವಾಗಿರುವುದೆಂದರೆ ಅದು ಮೌನವಾಗಿದ್ದುಕೊಂಡು ಎದುರಿನವರನ್ನು ನಿರ್ಲಕ್ಷಿಸುವುದರ ಮೂಲಕ ಅವರಿಗೆ ‘ಪಾಠ ಕಲಿಸುವ’ ಕ್ರಮವಲ್ಲ. ಆ ಬಗೆಯ ಮೌನ ಅಥವಾ silent treatment ಸಂವಹನವನ್ನೇ ತಿರಸ್ಕರಿಸುವುದರ ಮೂಲಕ ಜಗಳಕ್ಕಲ್ಲ, ಬಾಂಧವ್ಯಕ್ಕೇ ಅಂತ್ಯ ಹಾಡುತ್ತದೆ. ಅಲ್ಲಿ ಸಿಟ್ಟು, ಪ್ರತಿರೋಧ, ಸೇಡು ಇರುತ್ತದೆ. ನಾವೀಗ ಅಂತಹ ಮೌನದ ಬಗ್ಗೆಯಲ್ಲ ಮಾತನಾಡುತ್ತಿರುವುದು.

ADVERTISEMENT

ಜಗಳದಲ್ಲಿ ಕಪಟತನವಿಲ್ಲದ ಮೌನವನ್ನು ಹೊಂದುವುದೆಂದರೆ ಅದು ಎದುರಿನವರಿಗೆ ಗೌರವವನ್ನೂ ಸಹಾನುಭೂತಿಯನ್ನೂ ತೋರಿಸಿದಂತೆ. ಅದು ನಮಗೆ ನಾವೇ ತೋರಿಸಿಕೊಳ್ಳುವ ಕಾಳಜಿಯೂ ಹೌದು. ಜಗಳದಲ್ಲಿ ಮಾತಿಗೆ ಮಾತು ಸೇರಿಸಿ ಆಯಾಸಗೊಂಡಿರುವ ಎರಡು ಮನಸ್ಸುಗಳಿಗೆ, ದೇಹಗಳಿಗೆ ವಿಶ್ರಾಂತಿಯನ್ನು ನೀಡುವ ಬಗೆಯೂ ಹೌದು. ಇಂತಹ ಮೌನವು ಕರುಣೆಯ ಅಭಿವ್ಯಕ್ತಿಯಾಗಿರುತ್ತದೆ. ಅದು ನಮ್ಮನ್ನೂ ಇತರರನ್ನೂ ಅರಿತುಕೊಳ್ಳಲು ಬೇಕಾದ ಸಮಯವನ್ನೂ ಅವಕಾಶವನ್ನೂ ನೀಡುತ್ತದೆ. ಎರಡೂ ಕಡೆಯವರ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುತ್ತದೆ. ಪರಸ್ಪರರ ನಂಬುಗೆಗಳಿಗೆ, ದೃಷ್ಟಿಕೋನಗಳಿಗೆ, ಅವಶ್ಯಕತೆಗಳಿಗೆ ಮತ್ತೊಬ್ಬರು ಸ್ಪಂದಿಸುವಂತಹ ಸ್ನೇಹಮಯ ವಾತಾವರಣವನ್ನು ನಿರ್ಮಿಸುತ್ತದೆ.

ಜಗಳದಲ್ಲಿ ಎದುರಿನವರು ಆಡಿದ ಮಾತಿಗೆ ಪ್ರತಿಕ್ರಿಯೆ ನೀಡದಿರುವುದು ನಿಜವಾಗಲೂ ತುಂಬಾ ಕಷ್ಟದ ಕೆಲಸ. ಅದಕ್ಕೆ ಸಂಯಮವೂ ಅಭ್ಯಾಸವೂ ಬೇಕು. ಆಡಿದ ಮಾತಿಗೆ ಪ್ರತಿಕ್ರಿಯೆ ನೀಡುವುದರ ಹಿಂದೆ ‘ನಿನಗೆ ಹೇಗೆ ಉತ್ತರಿಸಬೇಕೆಂಬುದು ನನಗೆ ಗೊತ್ತು’ ಎನ್ನುವ ಧೋರಣೆಯಿರುತ್ತದೆ. ಆದರೆ ನಾವು ಈ ಸಮಯದಲ್ಲಿ ಒಂದು ವಿಷಯವನ್ನು ಮರೆಯುತ್ತೇವೆ. ಎಲ್ಲರಿಗೂ ಅವರವರ ಪ್ರಪಂಚದಿಂದ ಹೊರಬಂದು ಬೇರೆಯವರು ಏನು ಹೇಳುತ್ತಿದ್ದಾರೆ, ಏನು ಕೇಳುತ್ತಿದ್ದಾರೆ ಎಂದು ತಿಳಿಯಲು ಸಾಕಷ್ಟು ಸಮಯ, ತಾಳ್ಮೆ ಮತ್ತು ಆತ್ಮಾವಲೋಕನವೂ ಬೇಕು. ಜಗಳದಲ್ಲಿ ಯಾರೂ ಯಾರ ಉತ್ತರವನ್ನೂ ಸಾವಧಾನದಿಂದ ಕೇಳಿಸಿಕೊಂಡು ಅವರ ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳುವುದಿಲ್ಲ. ಏಕೆಂದರೆ ಜಗಳವೆಂದರೆ ಅದು ‘ವಸ್ತುನಿಷ್ಠ ವಿಷಯ ಪ್ರಸ್ತುತಿ’ಯಲ್ಲ. ಜಗಳದಲ್ಲಿ ತರ್ಕಬದ್ಧವಾಗಿ ಮಾತನಾಡುವ ಇಬ್ಬರು ವ್ಯಕ್ತಿಗಳಿರುವುದಿಲ್ಲ; ಬದಲಾಗಿ ಪೆಟ್ಟು ತಿಂದು ಘಾಸಿಗೊಂಡು, ಸ್ವಲ್ಪ ಸಹಾನುಭೂತಿಗಾಗಿ, ಮಾನಸಿಕ ಬೆಂಬಲಕ್ಕಾಗಿ ಹಪಹಪಿಸುವ, ಭಯದಿಂದ, ಅಭದ್ರತೆಯಿಂದ ಕಂಪಿಸುವ ಎರಡು ಜೀವಿಗಳಿರುತ್ತವೆ. ಇಲ್ಲಿ ಆಡುವ ಮಾತಿಗಿಂತ ಮುಖಚರ್ಯೆ, ದೇಹಭಾಷೆ, ಧ್ವನಿಯ ಏರಿಳಿತಗಳು, ಕಣ್ಣ ಸನ್ನೆಯೇ ಹೆಚ್ಚು ಹೇಳುತ್ತವೆ. ಪರಿಸ್ಥಿತಿ ಹೀಗಿರುವಾಗ ಮಾತಿನಿಂದ ಪ್ರಯೋಜನವೇನು? ಇಲ್ಲಿ ಮೌನವೇ ಬಲಶಾಲಿ, ಮೌನವೇ ಔಷಧಿ.

ಮೌನಕ್ಕೆ ಶರಣಾಗುವುದೆಂದರೆ ಸಂವಹನದ ಪ್ರಾಮುಖ್ಯವನ್ನು ಶಂಕಿಸುವುದಲ್ಲ. ಬದಲಾಗಿ ಸಂವಹನಕ್ಕೂ ಮೌನದ ಶಾಂತಿಯನ್ನು ತಂದುಕೊಡುವುದು ಎಂದರ್ಥ. ಯಾವುದನ್ನು ಹೇಗೆ ಹೇಳಬೇಕೋ ಹಾಗೆ ಹೇಳಲು ಬೇಕಾದ ಮಾನಸಿಕ ಸಿದ್ಧತೆ ನಮಗೆ ಮೌನದಿಂದ ದೊರೆಯುತ್ತದೆ. ಜಗಳವಾಡುವ ಮನಃಸ್ಥಿತಿಯಲ್ಲಿದ್ದಾಗ ನಮ್ಮ ಮನಸ್ಸಿನ ಮಾತುಗಳನ್ನು ಸ್ಪಷ್ಟವಾಗಿ, ಸಮಂಜಸವಾಗಿ ಪ್ರಸ್ತುತಪಡಿಸುವುದು ಸಾಧ್ಯವಾಗುವುದಿಲ್ಲ. ಏನೋ ಹೇಳಲು ಹೋಗಿ ಇನ್ನೇನೋ ಅರ್ಥ ಬರುವಂತೆ ಮಾತನಾಡುವುದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಅದರ ಬದಲು ನಾವು ಸಮಾಧಾನದಿಂದ ಇರುವಾಗ ‘ನಾನು ನಿಜವಾಗಿಯೂ ಹೇಳಬೇಕೆಂದಿರುವುದೇನು’, ‘ನನ್ನ ಮಾತುಗಳು ನನ್ನ ಅನುಭವಕ್ಕೆ ನಿಷ್ಠವಾಗಿ ನನ್ನ ಭಾವನೆಗಳನ್ನು ಸರಿಯಾಗಿ ಅಭಿವ್ಯಕ್ತಿಸುತ್ತಿದೆಯೇ’ ಎಂದು ಆಲೋಚಿಸಿ ನಾವು ಹೇಳಬೇಕಾಗಿರುವುದನ್ನು ಮೆಲುದನಿಯಲ್ಲಿ ಧೈರ್ಯವಾಗಿ ಹೇಳಬಹುದು. ಜಗಳದ ಸಮಯದಲ್ಲಿ ರೋಷಾವೇಶದ ಅಬ್ಬರದಲ್ಲಿ ಸರಿಯಾದ ಮಾತುಗಳನ್ನಾಡುವುದೂ, ಕೇಳಿಸಿಕೊಂಡು ಅಪಾರ್ಥಮಾಡಿಕೊಳ್ಳದೆ ಸರಿಯಾಗಿ ಗ್ರಹಿಸುವುದೂ ಸಾಧ್ಯವಿಲ್ಲ. ಹಾಗಾಗಿ ಜಗಳದಲ್ಲಿ ಸುಮ್ಮನಿದ್ದು ನಂತರ ಎಲ್ಲ ತಿಳಿಯಾದ ಮೇಲೆ ನಮ್ಮ ನಿಲುವನ್ನು ದಿಟ್ಟತನದಿಂದ ತಿಳಿಸಿಕೊಡಬಹುದು.

ಕೆಲವೊಮ್ಮೆ ಯಾವುದೋ ಮಾತು ಗುರಿ ತಪ್ಪಿ ಯಾರನ್ನೋ ಘಾಸಿಗೊಳಿಸಿರುತ್ತದೆ. ಅಂತಹ ಸಮಯದಲ್ಲಿ ನ್ಯಾಯತೀರ್ಮಾನ ಮಾಡುತ್ತಾ ಕಾಲಹರಣ ಮಾಡಿ ಪ್ರಯೋಜನವಿಲ್ಲ. ಕೆಲವು ಮಾತುಗಳು ವಿನಾ ಕಾರಣ ಪ್ರಚೋದಿಸುವಂತಿರುತ್ತದೆ. ಮನೆಯಲ್ಲಾಗಲಿ, ಕಚೇರಿಯಲ್ಲಾಗಲಿ, ಸ್ನೇಹಿತರ, ಸಂಬಂಧಿಕರ ವಲಯದಲ್ಲಿ ಆಗಲಿ ಇಂತಹ ಅನೇಕ ಮಾತುಗಳು ಬಂದು ಹೋಗುತ್ತಲಿರುತ್ತವೆ. ಅವುಗಳನ್ನೆಲ್ಲಾ ವೈಯಕ್ತಿಕವಾಗಿ ತೆಗೆದುಕೊಂಡು ಪ್ರತಿಕ್ರಿಯಿಸಿ ನಮಗೂ ನೋವು ಕೊಟ್ಟುಕೊಂಡು, ಇತರರಿಗೂ ನೋವು ಕೊಡುವುದರ ಅವಶ್ಯಕತೆಯಿಲ್ಲ. ನಮ್ಮನ್ನು ಎಲ್ಲರೂ ಒಪ್ಪಬೇಕು, ಮೆಚ್ಚಬೇಕು ಎನ್ನುವ ಹಠ ಬಿಟ್ಟುಬಿಟ್ಟರೆ ಎಲ್ಲಿ ಉತ್ತರ ಕೊಡಬೇಕು, ಎಲ್ಲಿ ಮೌನವಾಗಿರಬೇಕು ಎಂದು ಗೊತ್ತಾಗುತ್ತದೆ. ನಮ್ಮ ನೆಮ್ಮದಿಗಾಗಿ ಕೆಲವು ಅರ್ಥಹೀನ ಮಾತುಗಳನ್ನು ನಿರ್ಲಕ್ಷಿಸುವುದನ್ನು ಕಲಿಯಬೇಕು.

ಎಲ್ಲ ಭಿನ್ನಾಭಿಪ್ರಾಯಗಳೂ ಜಗಳದಲ್ಲೇ ಪರ್ಯವಸಾನಗೊಳ್ಳಬೇಕೆಂಬುದಿಲ್ಲ. ಮುಕ್ತವಾಗಿ ಮಾತಾಡಿ ನಾವೆಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇವೆ ಎಂಬುದನ್ನು ರಾಗ-ದ್ವೇಷಗಳಿಲ್ಲದೆ ಒಪ್ಪಿಕೊಳ್ಳುವಷ್ಟು ಪ್ರೌಢತೆ ಇದ್ದರೆ ಮಾತಿನಷ್ಟು ಜನರನ್ನು ಬೆಸೆಯುವ ಮತ್ತೊಂದು ಸಾಧನವಿಲ್ಲ. ಅಷ್ಟು ಪ್ರೌಢತೆಯನ್ನು ಸಾಧಿಸುವ ದಾರಿಯಲ್ಲಿ ಆಗಾಗ ಜಗಳದಲ್ಲಿ ಮೌನಯೋಗವನ್ನು ಅಭ್ಯಾಸ ಮಾಡುತ್ತಲಿರೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.